More

    ಕೇಂದ್ರದಿಂದ ಬಿಎಸ್‌ಎನ್‌ಎಲ್ ಪುನರುಜ್ಜೀವನ  -ಸಂಸದ ಜಿ.ಎಂ.ಸಿದ್ದೇಶ್ವರ ಮಾಹಿತಿ

    ದಾವಣಗೆರೆ: ನಷ್ಟದಲ್ಲಿರುವ ಬಿಎಸ್‌ಎನ್‌ಎಲ್ ಕಂಪನಿ ಪುನರುಜ್ಜೀವನಕ್ಕೆ ಕೇಂದ್ರ ಸರ್ಕಾರ 89,047 ಕೋಟಿ ರೂ.ಗಳ ಮೂರನೇ ಪ್ಯಾಕೇಜನ್ನು ಘೋಷಣೆ ಮಾಡಿದೆ ಎಂದು ಸಂಸದ ಜಿ.ಎಂ. ಸಿದೇಶ್ವರ ತಿಳಿಸಿದರು.
    ನಗರದಲ್ಲಿ ಹಮ್ಮಿಕೊಂಡಿದ್ದ ದೂರವಾಣಿ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿದರು.
    ಕಂಪನಿಯು ಗಡಿ ಮತ್ತು ಸೂಕ್ಷ್ಮ ವಲಯದ ಸೇವೆಗೆ ಹಾಗೂ ಗ್ರಾಮೀಣ ಭಾರತಕ್ಕೆ ಡಿಜಿಟಲ್ ಸೇವೆಗಳನ್ನು ಒದಗಿಸಲು ಅನಿವಾರ್ಯವಾಗಿದೆ ಹಾಗೂ ಖಾಸಗಿ ಕಂಪನಿಗಳು ಏಕಪಕ್ಷೀಯವಾಗಿ ದರ ಏರಿಕೆ ಮಾಡದಂತೆ ತಡೆಯಲು ಮಾರುಕಟ್ಟೆಯಲ್ಲಿ ಜೀವಂತ ಇರಬೇಕಾಗಿದೆ ಎಂದು ಹೇಳಿದರು.
    ಸರ್ಕಾರ ಹಿಂದೆ ಘೋಷಿಸಿದ ಎರಡು ಪ್ಯಾಕೇಜ್‌ಗಳಿಂದ ಕಂಪನಿಯಲ್ಲಿ ಸ್ಥಿರತೆ ಮೂಡಿದೆ. 2021-22ರ ಹಣಕಾಸು ವರ್ಷದಿಂದ ಸ್ವಲ್ಪಮಟ್ಟಿಗೆ ಚೇತರಿಕೆ ಕಂಡಿದೆ. ಆದಾಯವು 19,053 ಕೋಟಿಯಿಂದ 20,944 ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಸಾಲವೂ ಕೂಡ 32,944 ಕೋಟಿಯಿಂದ 22,289 ಕೋಟಿ ರೂ.ಗಳಿಗೆ ಕುಸಿದಿದೆ ಎಂದರು.
    ಬಿ.ಎಸ್.ಎನ್.ಎಲ್. ಪುನರುಜ್ಜೀವನಕ್ಕೆ ಸರ್ಕಾರ ಹಲವಾರು ಪ್ರಯತ್ನ ಮಾಡಿದೆ. ಹಿಂದೆ ಸ್ಯಾಮ್ ಪಿತ್ರೋಡ ನೇತೃತ್ವದ ಸಮಿತಿ ಕಂಪನಿಯನ್ನು ಲಾಭದಾಯಕವಾಗಿಸಲು ಖಾಸಗಿ ವೃತ್ತಿಪರರನ್ನು ನೇಮಿಸಿಕೊಳ್ಳುವುದರಿಂದ ಆರಂಭಿಸಿ ಟವರ್ ನಿರ್ವಹಣೆಗೆ ಪ್ರತ್ಯೇಕ ಅಂಗಸಂಸ್ಥೆ ಸ್ಥಾಪಿಸುವವರೆಗೆ ಹಲವಾರು ಶಿಫಾರಸು ಮಾಡಿತ್ತು. ಇವೆಲ್ಲವೂ ಕೇವಲ ಸಲಹೆಗಳಾಗಿಯೇ ಉಳಿದುಕೊಂಡವೇ ಹೊರತು ಜಾರಿಯಾಗಿರಲಿಲ್ಲ ಎಂದು ತಿಳಿಸಿದರು.
    ದಾವಣಗೆರೆ ಟೆಲಿಕಾಂ ಜಿಲ್ಲೆ ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ನಷ್ಟದ ಪ್ರಮಾಣ ಕಡಿಮೆಗೊಳಿಸಿಕೊಂಡಿದೆ. ಒಟ್ಟಾರೆ ಜಿಲ್ಲೆಯನ್ನೊಳಗೊಂಡಂತೆ ಬಿ.ಎಸ್.ಎನ್.ಎಲ್. ಹುಬ್ಬಳ್ಳಿ ಬ್ಯುಸಿನೆಸ್ ಏರಿಯಾ ಸಾಕಷ್ಟು ನಷ್ಟದಲ್ಲಿ ನಡೆಯುತ್ತಿರುವುದು ಬೇಸರದ ಸಂಗತಿ ಎಂದು ಹೇಳಿದರು.
    ಜಿಲ್ಲೆಯ ಹೊನ್ನಾಳಿ ತಾಲೂಕಿನ ಎಂ. ಹನುಮನಹಳ್ಳಿ, ಕೆಂಗಲಹಳ್ಳಿ, ಫಲವನಹಳ್ಳಿ, ಚನ್ನಗಿರಿ ತಾಲೂಕಿನ ಮುಗಳಿಹಳ್ಳಿ, ಗುಡ್ಡದ ಕೊಮಾರನಹಳ್ಳಿ, ರಾಜಗೊಂಡನಹಳ್ಳಿ ತಾಂಡ, ಬುಸ್ಸೇನಹಳ್ಳಿ, ನೆಲ್ಲಿಹಂಕ್ಲು, ಹೆಬ್ಬಳಗೆರೆ, ಅಗರಬನ್ನಿಹಟ್ಟಿ, ಜಮ್ಮಾಪುರ ಹಾಗೂ ಹರಪನಹಳ್ಳಿ ತಾಲೂಕಿನ ಒಳತಾಂಡ ಹಾಗೂ ಜಿಟ್ಟಿನಕಟ್ಟೆ ಗ್ರಾಮಗಳಲ್ಲಿ ಬಿ.ಎಸ್.ಎನ್.ಎಲ್. ಸಿಗ್ನಲ್ ಅಲಭ್ಯತೆಯ ಕುರಿತು ಸಚಿವರ ಗಮನ ಸೆಳೆದ ಪರಿಣಾಮ ಈ ಗ್ರಾಮಗಳಲ್ಲಿ ಟವರ್ ಅಳವಡಿಸಲು ಸರ್ವೇ ನಡೆಸುತ್ತಿರುವುದಾಗಿ ಹಾಗೂ ಬರುವ ಡಿಸೆಂಬರ್ ವೇಳೆಗೆ 4 ಜಿ ಸೇವೆ ಒದಗಿಸುವುದಾಗಿ ಜನರಲ್ ಮ್ಯಾನೇಜರ್ ತ್ರಿಪಾಠಿ ತಿಳಿಸಿದರು.
    ಬಿ.ಎಸ್.ಎನ್.ಎಲ್. ನ್ಯೂನತೆಗಳ ಬಗ್ಗೆ ಸಭೆಯಲ್ಲಿ ಹಾಜರಿದ್ದ ದೂರವಾಣಿ ಸಲಹಾ ಸಮಿತಿ ಸದಸ್ಯರು ಸಂಸದರ ಗಮನಕ್ಕೆ ತಂದರು. ಗ್ರಾಮ ಪಂಚಾಯಿತಿಗಳಿಗೆ ಒದಗಿಸಿರುವ ಬ್ರ್ಯಾಡ್‌ಬ್ಯಾಂಡ್ ಸಂಪರ್ಕ ಸಮರ್ಪಕವಾಗಿಲ್ಲ. ಇದರಿಂದಾಗಿ ಗ್ರಾಮಪಂಚಾಯಿತಿಗಳಲ್ಲಿ ಕೆಲಸ ಮಾಡುವುದು ಕಷ್ಟವಾಗಿದೆ ಎಂದು ಸದಸ್ಯರು ದೂರಿದರು. ಎಲ್ಲ ನ್ಯೂನತೆಗಳನ್ನು 3 ತಿಂಗಳೊಳಗೆ ಸರಿಪಡಿಸುವುದಾಗಿ ಅಧಿಕಾರಿಗಳು ತಿಳಿಸಿದರು.
    ದೂರವಾಣಿ ಸಲಹಾ ಸಮಿತಿ ಸದಸ್ಯರಾದ ಕಂದನಕೋವಿ ಹನುಮಂತಪ್ಪ, ರಾಜೇಶ್ ಕುರುಗೋಡ, ಗುಡ್ಡಪ್ಪ, ಅಸಗೋಡು ಸುರೇಶಗೌಡ್ರು, ಸಬ್ ಡಿವಿಜನಲ್ ಇಂಜಿನಿಯರ್ ಗುರುಪ್ರಸಾದ್ ಮತ್ತು ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts