More

    ಜಲಜೀವನ್ ಮಿಷನ್ ಕಾಮಗಾರಿ ಕಳಪೆ

    ಹಾಸನ: ಮನೆ ಮನೆಗೆ ಶುದ್ಧ ಕುಡಿಯುವ ನೀರು ಪೂರೈಸುವ ಜಲಜೀವನ್ ಮಿಷನ್ ಯೋಜನೆ ಕಾಮಗಾರಿ ಕಳಪೆಯಾಗಿದೆ ಎಂದು ಆರೋಪಿಸಿ ತಾಲೂಕಿನ ತಾತನಹಳ್ಳಿ ಗ್ರಾಮ ಪಂಚಾಯಿತಿ ಎದುರು ಸೋಮವಾರ ಗ್ರಾಪಂ ಸದಸ್ಯ ಹೇಮಂತ್‌ಗೌಡ ಪ್ರತಿಭಟನೆ ನಡೆಸಿದರು.


    ಹೊಳೆನರಸೀಪುರ ಗ್ರಾಪಂ ವ್ಯಾಪ್ತಿಯಲ್ಲಿ ಜೆಜೆಎಂ ಯೋಜನೆಯಡಿ ಶುದ್ಧ ಕುಡಿಯುವ ನೀರು ಪೂರೈಸಲು 2020-21ನೇ ಸಾಲಿನಲ್ಲಿ 270.86 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕಾಮಗಾರಿ ನಡೆಸಲಾಗಿದೆ. ಆದರೆ ಗುತ್ತಿಗೆದಾರರು ಮತ್ತು ಅಧಿಕಾರಿಗಳು ಕಳಪೆ ಕಾಮಗಾರಿ ನಡೆಸಿರುವುದರಿಂದ ಮನೆ ಮನೆಗೆ ಶುದ್ಧ ನೀರು ದೊರೆಯುತ್ತಿಲ್ಲ ಎಂದು ಆರೋಪಿಸಿದರು.


    ನೀರು ಪೂರೈಕೆ ಮಾಡಲು ಅಳವಡಿಸಿರುವ ಪೈಪ್‌ಗಳು ಹಾಗೂ ಇತರ ಸಾಮಗ್ರಿಗಳು ಕಳಪೆಯಿಂದ ಕೂಡಿದ್ದು, ಸಂಪೂರ್ಣ ಶಿಥಿಲಗೊಂಡಿವೆ. ಅಸಮರ್ಪಕ ನಿರ್ವಹಣೆಯಿಂದ ಬೀದಿ ಬೀದಿಗಳಲ್ಲಿ ಶುದ್ಧ ನೀರು ಪೋಲಾಗುತ್ತಿದೆ. ಪೈಪ್‌ಗಳು ಹಾಳಾಗಿ ನೀರು ಪೋಲಾಗಿದ್ದರೂ ಗ್ರಾಪಂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಕಾಮಗಾರಿಯಲ್ಲಿ ಬಹುಕೋಟಿ ರೂ.ಗಳ ಅವ್ಯವಹಾರ ನಡೆದಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.


    ತಾತನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿರುವ ತಾತನಹಳ್ಳಿ, ಲಕ್ಕೂರು, ಶೆಟ್ರುಕೊಪ್ಪಲು, ಟಿ.ಮಾಯಿಗೋಡನಹಳ್ಳಿ, ಮಹದೇಶ್ವರ ಕಾಲನಿ, ತೇಜೂರು, ದೇವಿಪುರ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಹಾಗೂ ಕಾಮಗಾರಿ ಅವ್ಯವಸ್ಥೆ ಸರಿಪಡಿಸಬೇಕು. ಅಲ್ಲಿವರೆಗೂ ಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ಪಟ್ಟುಹಿಡಿದರು.


    ವಿಷಯ ತಿಳಿದ ತಾಪಂ ಇಒ ಕುಸುಮಾಧರ್ ಹಾಗೂ ಜಿಪಂ ಪ್ರಭಾರ ಎಇಇ ಪ್ರಶಾಂತ್ ಸ್ಥಳಕ್ಕೆ ಭೇಟಿ ನೀಡಿ, ಕಾಮಗಾರಿ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಕುಡಿಯುವ ನೀರಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು. ಪಿಡಿಒ ಸವಿತಾ, ಅಧ್ಯಕ್ಷ ವಿಶ್ವನಾಥ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts