More

    ಜೈಲು ಭೇಟಿ ಮುಂದುವರಿದ ನಿರ್ಬಂಧ, ಕೈದಿಗಳ ಕಾನೂನು ಪ್ರಕ್ರಿಯೆಗೆ ಅಡ್ಡಿ

    – ಹರೀಶ್ ಮೋಟುಕಾನ ಮಂಗಳೂರು
    ರಾಜ್ಯದ ಕಾರಾಗೃಹಗಳಲ್ಲಿ ಸಾವಿರಾರು ವಿಚಾರಣಾಧೀನ ಕೈದಿಗಳಿದ್ದು, ಅವರನ್ನು ಭೇಟಿಯಾಗಲು ಬರುವ ಕುಟುಂಬಸ್ಥರು, ಸ್ನೇಹಿತರಿಗೆ ಕರೊನಾ ನಿರ್ಬಂಧ ಇನ್ನೂ ತೆರವಾಗಿಲ್ಲ.

    ಇದರಿಂದಾಗಿ ನ್ಯಾಯಾಲಯದಲ್ಲಿ ಕಾನೂನು ಪ್ರಕ್ರಿಯೆ ಮುಂದುವರಿಸಲು ಅಡ್ಡಿಯಾಗಿದೆ. ತಮ್ಮ ಮೇಲೆ ದಾಖಲಾದ ಐಪಿಸಿ ಸೆಕ್ಷನ್ ಪ್ರಕಾರ ಶೀಘ್ರ ಜಾಮೀನು ಸಿಗುವ ಸಾಧ್ಯತೆ ಇದ್ದರೂ, ಬಿಡುಗಡೆಯಾಗದೆ ಹಲವು ತಿಂಗಳಿಂದ ಜೈಲುಗಳಲ್ಲಿ ಉಳಿಯುವಂತಾಗಿದೆ.

    ಸರ್ಕಾರ ಲಾಕ್‌ಡೌನ್ ನಿಯಮಾವಳಿ 5ನೇ ಬಾರಿಗೆ ಸಡಿಲಿಕೆ ಮಾಡಿದೆ. ಬಾರ್, ಚಿತ್ರಮಂದಿರ, ದೇವಸ್ಥಾನ, ಉದ್ಯಾನವನ ಸೇರಿದಂತೆ ಪ್ರತಿಯೊಂದಕ್ಕೂ ನಿಯಮ ರೂಪಿಸಿ ಅವಕಾಶ ನೀಡಿದೆ. ಅದೇ ಮಾದರಿಯಲ್ಲಿ ಕೈದಿಗಳ ನೇರ ಭೇಟಿಗೂ ಅವರ ಹತ್ತಿರದ ಸಂಬಂಧಿಗಳಿಗೆ ಅವಕಾಶ ನೀಡಬೇಕು ಎಂಬುದು ವಿಚಾರಣಾಧೀನ ಕೈದಿಗಳ ಮನೆಯವರ ಒತ್ತಾಯ. ಕುಟುಂಬಸ್ಥರ ಭೇಟಿಗೆ ಅವಕಾಶ ನೀಡದಿದ್ದರೆ ಅದೇ ವೇದನೆಯಲ್ಲಿ ಕೈದಿಗಳು ಮಾನಸಿಕ ಖಿನ್ನತೆಗೆ ಜಾರುವ ಸಾಧ್ಯತೆ ಇದೆ. ಇದಕ್ಕೆ ಸರ್ಕಾರವೇ ನೇರ ಹೊಣೆಯಾಗುತ್ತದೆ ಎಂದು ಎಚ್ಚರಿಸಿದ್ದಾರೆ.

    ಅಪರಾಧ ಪ್ರಕರಣದಲ್ಲಿ ಭಾಗಿಯಾದವರನ್ನು ಪೊಲೀಸರು ಬಂಧಿಸಿದ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸುತ್ತಾರೆ. ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದಾಗ ಪೊಲೀಸರು ಅವರನ್ನು ನೇರವಾಗಿ ಕಾರಾಗೃಹಕ್ಕೆ ಕರೆ ತಂದು ಬಿಡುತ್ತಾರೆ. ಈ ಸಂದರ್ಭ ಬಹುತೇಕ ಕೈದಿಗಳಲ್ಲಿ ಉಟ್ಟ ಬಟ್ಟೆ ಮಾತ್ರ ಇರುತ್ತದೆ. ಕರೊನಾ ನಿಯಮಾವಳಿ ಜಾರಿಗೆ ಬಂದ ಬಳಿಕದ ನಾಲ್ಕೈದು ತಿಂಗಳ ಅವಧಿಯಲ್ಲಿ ಬಂಧಿತ ವಿಚಾರಣಾಧೀನ ಕೈದಿಗಳ ಪೈಕಿ ಬಹುತೇಕ ಮಂದಿ ಧರಿಸಲು ಬಟ್ಟೆ ಇಲ್ಲದೆ ಪರದಾಡಿದ್ದಾರೆ.

    ಮನೆಯವರ ನೇರ ಭೇಟಿಗೆ ಈಗಲೂ ಅವಕಾಶ ಇಲ್ಲ, ಆದರೆ ಕಾರಾಗೃಹ ಸಿಬ್ಬಂದಿಯ ಮೂಲಕ ಬಟ್ಟೆ, ಮತ್ತಿತರ ಮೂಲ ಅವಶ್ಯ ಸಾಮಗ್ರಿ ತಲುಪಿಸಲು ವ್ಯವಸ್ಥೆಗೆ ಅವಕಾಶ ಕಲ್ಪಿಸಿದ್ದಾರೆ. ಮನೆಯವರು ತಂದು ಕೊಟ್ಟ ವಸ್ತುಗಳನ್ನು ದಾಖಲಿಸಿ, ಪರಿಶೀಲಿಸಿ, ಒಂದು ದಿನ ಕ್ವಾರಂಟೈನ್‌ಗೊಳಪಡಿಸಿ, ಕೈದಿಗಳಿಗೆ ತಲುಪಿಸುತ್ತೇವೆ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.

    ಸಾವಿರಾರು ಮಂದಿ ಕಂಬಿಯೊಳಗೆ: ಮನೆಯವರ ಭೇಟಿಗೆ ಅವಕಾಶ ಕಲ್ಪಿಸದ ಕಾರಣ ಗಂಭೀರ ಸ್ವರೂಪವಲ್ಲದ ಶೀಘ್ರ ಜಾಮೀನು ಮೂಲಕ ಬಿಡುಗಡೆಯಾಗುವ ಅಪರಾಧ ಪ್ರಕರಣಗಳಲ್ಲಿ ಬಂಧಿತರಾಗಿ ಕಾರಾಗೃಹ ಸೇರಿರುವ ವಿಚಾರಣಾಧೀನ ಕೈದಿಗಳಿಗೆ ವಕೀಲರನ್ನು ಗೊತ್ತು ಮಾಡಿ ನ್ಯಾಯಾಲಯದಲ್ಲಿ ವಾದಿಸಲು ವ್ಯವಸ್ಥೆ ಕಲ್ಪಿಸಲು ಅಸಾಧ್ಯವಾಗಿದೆ. ಮನೆಯವರ ಅಥವಾ ಸ್ನೇಹಿತರ ನೇರ ಭೇಟಿಗೆ ಅವಕಾಶ ಕಲ್ಪಿಸದ ಕಾರಣ ರಾಜ್ಯದ ಎಲ್ಲ ಜಿಲ್ಲೆಗಳ ಕಾರಾಗೃಹಗಳಲ್ಲಿ ಇಂತಹ ಸಾವಿರಾರು ಮಂದಿ ಕಂಬಿಯೊಳಗಿನ ಕೋಣೆಯಲ್ಲಿ ಬಂಧಿಯಾಗಿದ್ದಾರೆ.

    ಕಾರಾಗೃಹಗಳಲ್ಲಿರುವ ವಿಚಾರಣಾಧಿನ ಕೈದಿಗಳಿಗೆ ಬಟ್ಟೆ ತಲುಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಕಾರಾಗೃಹ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಈ ಪ್ರಕ್ರಿಯೆ ನಡೆಯುತ್ತಿದೆ. ಕರೊನಾ ಸೋಂಕು ಇಳಿಮುಖವಾದ ಬಳಿಕ ನಿಯಮಾವಳಿ ಪ್ರಕಾರ ಕೈದಿಗಳ ಮನೆಯವರಿಗೆ ನೇರ ಭೇಟಿಗೆ ಅವಕಾಶ ದೊರೆಯಲಿದೆ.
    – ಬಸವರಾಜ ಬೊಮ್ಮಾಯಿ, ಗೃಹ ಸಚಿವರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts