More

    ಬಂದಿಖಾನೆ ಪರಿಶೀಲಿಸಿದ ಕಮಿಷನರ್

    ಬೆಳಗಾವಿ: ಇಲ್ಲಿನ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಗುರುವಾರ ದಿಢೀರ್ ಭೇಟಿ ನೀಡಿದ ನಗರ ಪೊಲೀಸ್ ಆಯುಕ್ತ ಎಸ್.ಎನ್.ಸಿದ್ದರಾಮಪ್ಪ ಕಾರಾಗೃಹದ ಭದ್ರತೆ ಪರಿಶೀಲಿಸಿ, ಕೈದಿಗಳ ಅಕ್ರಮಕ್ಕೆ ಅವಕಾಶ ನೀಡದಂತೆ ತೀವ್ರ ನಿಗಾ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

    ಹಿಂಡಲಗಾ ಕಾರಾಗೃಹದಲ್ಲಿ ಕೈದಿಗಳು ಪರಸ್ಪರ ಹಲ್ಲೆ ಮಾಡುವುದು, ಮೊಬೈಲ್ ಬಳಸುವುದು ಸೇರಿ ಹಲವು ಅಕ್ರಮ ಜರುಗುತ್ತಿರುವ ಬಗ್ಗೆ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಜೈಲಿಗೆ ಭೇಟಿ ನೀಡಿದ ಅವರು, ಸ್ವತಃ ಅಲ್ಲಿನ ಭದ್ರತೆ ಪರಿಶೀಲಿಸಿದರು. ಕೈದಿಗಳಿಗೆ ಕಾನೂನು ಬಾಹಿರವಾಗಿ ಯಾವುದೇ ವ್ಯವಸ್ಥೆ ಒದಗಿಸದಂತೆ ತಾಕೀತು ಮಾಡಿದರು.

    ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕಾರಾಗೃಹ ಭೇಟಿಗೆ ವಿಶೇಷ ಅರ್ಥಕೊಡುವ ಅವಶ್ಯವಿಲ್ಲ. ಕಾಲಕಾಲಕ್ಕೆ ಕಾರಾಗೃಹದ ಭದ್ರತಾ ಸಭೆ ನಡೆಸಬೇಕಿದೆ. ಹೀಗಾಗಿ, ಇಂದು ಆಂತರಿಕ ಭದ್ರತಾ ವಿಭಾಗದ ಅಧಿಕಾರಿಗಳು ಹಾಗೂ ಕಾರಾಗೃಹದ ಅಧೀಕ್ಷಕರ ಜತೆಗೆ ಸಭೆ ನಡೆಸಿದ್ದೇವೆ. ಕೈದಿಗಳಿರುವ ಸೆಲ್‌ಗಳ ಭೇಟಿ ಮಾಡಿಲ್ಲ. ಜೈಲಿನಲ್ಲಿ ಮೊಬೈಲ್ ಬಳಕೆಗೆ ಕಡಿವಾಣ ಹಾಕಲು ಜಾಮರ್ ಅಳವಡಿಸಲು ಟೆಂಡರ್ ಕರೆಯಲಾಗಿದೆ. ಆದಷ್ಟು ಬೇಗ ಜಾಮರ್ ಅಳವಡಿಸಲಾಗುವುದು ಎಂದು ತಿಳಿಸಿದರು.

    ಮರಣದಂಡನೆ ಶಿಕ್ಷೆಗೆ ಗುರಿಯಾದವರು 30 ಜನ ಸೇರಿ ಜೈಲಿನಲ್ಲಿ 950 ಕೈದಿಗಳು ಇದ್ದಾರೆ. ಇತ್ತೀಚೆಗೆ ಜೈಲಲ್ಲಿ ಸಣ್ಣಪುಟ್ಟ ಗಲಾಟೆಗಳು ನಡೆದಿವೆ. ಕೈದಿಗಳ ವಿಚಾರಣೆ ಹಾಗೂ ಚಿಕಿತ್ಸೆ ಸೇರಿ ವಿವಿಧ ಕಾರಣಗಳಿಂದ ಹೊರಕಳುಹಿಸುವಾಗ ಅನುಸರಿಸಬೇಕಾದ ಕ್ರಮಗಳು ಕುರಿತು ಸಲಹೆ ನೀಡಲಾಗಿದೆ ಎಂದು ಪೊಲೀಸ್ ಆಯುಕ್ತ ಸಿದ್ದರಾಮಪ್ಪ ಹೇಳಿದರು.

    ಐಎಸ್‌ಡಿ ಎಸ್ಪಿ ಅರುಣ ರಂಗರಾಜನ್, ಕಾರಾಗೃಹದ ಮುಖ್ಯ ಅಧೀಕ್ಷಕ ಕೃಷ್ಣಕುಮಾರ್, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಎಸ್.ಟಿ.ಶೇಖರ ಇತರ ಅಧಿಕಾರಿಗಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts