More

    ರಾಜ್ಯಸಭೆಗೆ ಮೋದಿ ಎಂಟ್ರಿ ಕೊಡುತ್ತಿದ್ದಂತೆ ಮೊಳಗಿತು ಜೈಶ್ರೀರಾಮ್​ ಘೋಷಣೆ!

    ನವದೆಹಲಿ: ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಉತ್ತರಿಸಲು ಪ್ರಧಾನಿ ಮೋದಿ ಇಂದು ರಾಜ್ಯಸಭೆಗೆ ಆಗಮಿಸಿದ ವೇಳೆ ಸಂಸದರೆಲ್ಲರು ಎದ್ದು ನಿಂತು ಜೈಶ್ರೀರಾಮ್​ ಘೋಷಣೆ ಕೂಗಿದ್ದು ಎಲ್ಲರ ಗಮನ ಸೆಳೆಯಿತು.

    ಉತ್ತರ ಪ್ರದೇಶದ ಬಿಜೆಪಿ ರಾಜ್ಯಸಭಾ ಸದಸ್ಯ ಸುರೇಂದ್ರ ಸಿಂಗ್​ ನಗರ್​ ಅವರು ಮಾತನಾಡುತ್ತಿದ್ದ ಸಂದರ್ಭದಲ್ಲಿ ಪ್ರಧಾನಿ ಮೋದಿ ರಾಜ್ಯಸಭೆಗೆ ಎಂಟ್ರಿ ನೀಡಿದರು. ಈ ವೇಳೆ ಕೇಂದ್ರ ಸಚಿವರಾದ ಪ್ರಲ್ಹಾದ್​ ಜೋಶಿ ಮತ್ತು ಪಿಯೂಶ್​ ಗೋಯೆಲ್​ ಸಹ ಜತೆಗೆ ಆಗಮಿಸಿದರು. ಮೋದಿ ಬರುತ್ತಿದ್ದಂತೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಸೇರಿದಂತೆ ರಾಜ್ಯಸಭಾ ಸದಸ್ಯರು ಎದ್ದು ನಿಂತು ಜೈಶ್ರೀರಾಮ್​ ಘೋಷಣೆ ಮಾಡಿದರು.

    ರಾಜ್ಯಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಮಾಜಿ ಪ್ರಧಾನಿ ನೆಹರು ಅವರು ಅಂದಿನ ಮುಖ್ಯಮಂತ್ರಿಗಳಿಗೆ ಬರೆದ ಪತ್ರವನ್ನು ಓದುವ ಮೂಲಕ ಕಾಂಗ್ರೆಸ್ಸಿಗರಿಗೆ ಖಡಕ್​ ತಿರುಗೇಟು ನೀಡಿದರು. ನಾನು ಯಾವುದೇ ರೀತಿಯ ಮೀಸಲಾತಿಯನ್ನು ಇಷ್ಟಪಡುವುದಿಲ್ಲ, ವಿಶೇಷವಾಗಿ ಸರ್ಕಾರಿ ಸೇವೆಗಳಲ್ಲಿ. ಅಸಮರ್ಥತೆ ಮತ್ತು ಎರಡನೇ ದರ್ಜೆಯ ಮಾನದಂಡಗಳಿಗೆ ಕಾರಣವಾಗುವ ಯಾವುದನ್ನಾದರೂ ನಾನು ಬಲವಾಗಿ ವಿರೋಧಿಸುತ್ತೇನೆ ಎಂದು ನೆಹರು ಅವರು ಪತ್ರದಲ್ಲಿ ಬರೆದಿರುವುದನ್ನು ಮೋದಿ ಉಲ್ಲೇಖಿಸಿದರು.

    ಕಾಂಗ್ರೆಸ್ ಯಾವಾಗಲೂ ದಲಿತರು, ಹಿಂದುಳಿದವರು, ಬುಡಕಟ್ಟು ಜನಾಂಗದವರ ವಿರುದ್ಧವಾಗಿದೆ ಎಂದು ಆರೋಪಿಸಿರುವ ಪ್ರಧಾನಿ ನರೇಂದ್ರ ಮೋದಿ, ಜವಾಹರಲಾಲ್ ನೆಹರು ಅವರು ಉದ್ಯೋಗದಲ್ಲಿ ಯಾವುದೇ ರೀತಿಯ ಮೀಸಲಾತಿಗೆ ಒಲವು ತೋರಿರಲಿಲ್ಲ ಎಂದು ಹೇಳಿದ್ದಾರೆ. ಉದ್ಯೋಗಗಳಲ್ಲಿ ಎಸ್‌ಸಿ/ಎಸ್‌ಟಿ/ಒಬಿಸಿ ಸಮುದಾಯದವರು ಮೀಸಲಾತಿ ಪಡೆದರೆ, ಆಗ ಸರ್ಕಾರಿ ಕೆಲಸದ ಗುಣಮಟ್ಟ ಕುಸಿಯುತ್ತದೆ ಎಂದು ನೆಹರೂ ಹೇಳುತ್ತಿದ್ದುದನ್ನು ಮೋದಿ ಪ್ರಸ್ತಾಪಿಸಿದರು.

    ಇದೇ ಸಂದರ್ಭದಲ್ಲಿ ಸಿನಿಮಾ ಹಾಡಿನ ಮೂಲಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕಾಲೆಳೆದರು. ಹೈಸಾ ಮೋಖಾ ಫಿರ್ ಕಹಾ ಮಿಲೇಗಾ ಹಾಡು ಹೇಳಿದ ಪ್ರಧಾನಿ ಮೋದಿ, ನಾನು ಖರ್ಗೆ ಅವರಿಗೆ ವಿಶೇಷ ಧನ್ಯವಾದ ಸಲ್ಲಿಸುತ್ತೇನೆ. ಖರ್ಗೆ ಅವರು 400 ಸೀಟುಗಳ ಬಗ್ಗೆ ಮಾತನಾಡಿ ನಮ್ಮನ್ನು ಉತ್ತೇಜಿಸಿದ್ದಾರೆ. ಖರ್ಗೆಯವರಿಗೆ ಇಷ್ಟು ಮಾತನಾಡುವ ಸ್ವಾತಂತ್ರ್ಯ ಹೇಗೆ ಬಂತು ಎಂದು ನಾನು ಆಶ್ಚರ್ಯ ಪಡುತ್ತಿದ್ದೆ. ಆಗ ನನಗೆ ಅರ್ಥವಾಯಿತು ಸಾಮಾನ್ಯವಾಗಿ ಇಲ್ಲಿರುವ ಇಬ್ಬರು ಕಮಾಂಡೋಗಳು ಹಾಜರಿರಲಿಲ್ಲ. ಅಂಪೈರ್‌ಗಳು ಅಥವಾ ಕಮಾಂಡೋಗಳು ಇಲ್ಲ ಎಂದು ತಿಳಿದ ನಂತರ ಖರ್ಗೆ ಜೀ 4 ಮತ್ತು 6 ಬಾರಿ ಹೊಡೆಯುತ್ತಿದ್ದರು ಎಂದು ಪ್ರಧಾನಿ ಮೋದಿ ಹೇಳಿದರು.

    ಶುಕ್ರವಾರ ಲೋಕಸಭೆಯಲ್ಲಿ ಸರ್ಕಾರದ ಬಹುಮತವನ್ನು ಪ್ರಸ್ತಾಪಿಸಿದ ಖರ್ಗೆ, ನಿಮಗೆ 330, 334 ಸ್ಥಾನಗಳ ಬಹುಮತ ಇರಬಹುದು ಮತ್ತು ಇದೀಗ 400ರ ಗಡಿ ದಾಟಲಾಗುತ್ತಿದೆ ಎನ್ನುವ ಮೂಲಕ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವನ್ನು ಖರ್ಗೆ ವ್ಯಕ್ತಪಡಿಸಿದ್ದರು. ಅಲ್ಲದೆ, ಬಿಜೆಪಿ 100 ಸ್ಥಾನಗಳನ್ನು ದಾಟುವುದಿಲ್ಲ ಎಂದಿದ್ದರು.

    ಖರ್ಗೆ ಭಾಷಣವನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ಖರ್ಗೆ ಜಿ ಅವರು ಬಿಜೆಪಿಗೆ 400ರ ಆಶೀರ್ವಾದ’ ನೀಡಿದ್ದಾರೆ ಎಂದು ಕಾಲೆಳೆದರು. ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮುಂದುವರಿಸಿದ ಪ್ರಧಾನಿ ಮೋದಿ, ಕಾಂಗ್ರೆಸ್​ ಪಕ್ಷ ಮತ್ತು ಅದರ ಚಿಂತನೆ ಹಳೆಯದಾಗಿದೆ ಮತ್ತು ಅದರ ಕೆಲಸವನ್ನು “ಹೊರಗುತ್ತಿಗೆ” ನೀಡಿದೆ ಎಂದು ಟೀಕಿಸಿದರು. ಒಂದು ದೊಡ್ಡ ಪಕ್ಷದ ಇಂತಹ ಅವನತಿಯಿಂದ ನಾವು ಸಂತೋಷವಾಗಿಲ್ಲ ಮತ್ತು ನಾವು ನಮ್ಮ ಸಹಾನುಭೂತಿಯನ್ನು ವ್ಯಕ್ತಪಡಿಸುತ್ತೇವೆ ಎಂದು ಹೇಳಿದರು. (ಏಜೆನ್ಸೀಸ್​)

    ರಾಗಿ vs ಗೋಧಿ vs ಮಿಲ್ಲೆಟ್ : ಆರೋಗ್ಯಕ್ಕೆ ಯಾವುದು ಉತ್ತಮ?

    ಕೈಗಾರಿಕಾ ಉದ್ದೇಶಕ್ಕೆ ಸಂಸ್ಕರಿಸಿದ ನೀರು ಸರಬರಾಜು! ಕಾವೇರಿ ನೀರು ಪೂರೈಕೆ ಸ್ಥಗಿತಕ್ಕೆ ಜಲಮಂಡಳಿ ನಿರ್ಧಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts