

ಮೈಸೂರು: ಚುನಾವಣಾ ಸಮಯ ಹತ್ತಿರವಾಗುತ್ತಿದ್ದು, ರಾಜ್ಯದಲ್ಲಿ ಬಿಜೆಪಿ ಪರ ಅಲೆ ಇದೆ. ರಾಜ್ಯ ಸರಕಾರದ ಮೇಲಿನ 40% ಆರೋಪ ಕಾಂಗ್ರೆಸ್ನ ಟೂಲ್ ಕೀಟ್ ಭಾಗವಷ್ಟೇ. ತಾನು ಮಾಡಿದ ಒಂದೇ ಒಂದು ಆರೋಪವನ್ನು ಕಾಂಗ್ರೆಸ್ ಸಾಬೀತು ಮಾಡಿಲ್ಲ ಎಂದು ರಾಜ್ಯಸಭಾ ಸದಸ್ಯ, ನಟ ಜಗ್ಗೇಶ್ ಕಿಡಿಕಾರಿದ್ದಾರೆ.
ವರುಣ ಕ್ಷೇತ್ರದ ಪ್ರಚಾರ ವೇಳೆ ಮಾತನಾಡುತ್ತಾ, ಪ್ರಧಾನಿ ಮೋದಿ ರಾಷ್ಟ್ರದ ನಾಯಕ ಅಲ್ಲ. ವಿಶ್ವ ನಾಯಕನಂತಿದ್ದು, ಈ ದೇಶಕ್ಕೆ ತಂದೆ ಇದ್ದಂತೆ. ಕೈಯಲ್ಲಿ ಆಗದವರು ಮೈ ಪರಚಿ ಕೊಂಡಂತೆ ಮೋದಿ ಅವರ ಬಗ್ಗೆ ಕಾಂಗ್ರೆಸ್ ಮೈ ಪರಚಿ ಕೊಳ್ಳುತ್ತಿದೆ ಎಂದು ಜಗ್ಗೇಶ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಒಂದು ದಿನವೂ ಸದನದಲ್ಲಿ ಕೂತು ರಾಜ್ಯದ ಬಗ್ಗೆ ಮಾತಾಡಿದ್ದು ನೋಡಿಲ್ಲ. ಕಾಂಗ್ರೆಸ್ ಕೇವಲ ಪ್ರಧಾನಿ ಬಗ್ಗೆ ಅಪಮಾನಕರಿಯಾಗಿ ಮಾತಾಡುವುದರಲ್ಲೆ ಕಾಲ ಕಳೆಯುತ್ತಿದೆ. ಮೋದಿ ಅವರನ್ನು ಕಾಂಗ್ರೆಸ್ನವರು ಎಷ್ಟು ಬೈತಾರೋ, ಮೋದಿ ಅವರು ಅಷ್ಟು ಮೇಲೆ ಹೋಗುತ್ತಾರೆ ಎಂದು ಹೇಳಿದರು.
ವರುಣದಲ್ಲಿ ಬಿಜೆಪಿ ಅಭ್ಯರ್ಥಿ ಪ್ರಚಾರಕ್ಕೆ ತಡೆ ವಿಚಾರವಾಗಿ ಜಗ್ಗೇಶ್ ಪ್ರತಿಕ್ರಿಯಿಸಿ, ಯಾವಾಗ ತಮ್ಮ ವಿರುದ್ದ ವಿರೋಧಿ ಅಲೆ ಬಂದಾಗ ಹತಾಶೆ ಮನೋಭಾವದಲ್ಲಿ ಗಲಾಟೆ ಮಾಡಿಸುತ್ತಾರೆ. ಯಾರನ್ನು ತಡೆಯುವ ಪ್ರಯತ್ನ ಮಾಡಬೇಡಿ ಎಂದು ನಾನು ಸಿದ್ದರಾಮಯ್ಯನವರಲ್ಲಿ ಮನವಿ ಮಾಡುತ್ತೇನೆ, ವಿ. ಸೋಮಣ್ಣ ನಿನ್ನೆ ಮೊನ್ನೆಯ ನಾಯಕರಲ್ಲ. ಗೋವಿಂದರಾಜ ನಗರ ಕ್ಷೇತ್ರದ ಅಭಿವೃದ್ಧಿ ನೋಡಿದಾಗ ಗೊತ್ತಾಗುತ್ತದೆ ಎಂದರು.
ಅಮುಲ್ ಉತ್ಪನ್ನಗಳನ್ನು ರಾಜ್ಯಕ್ಕೆ ಪರಿಚಯಸಿದವರು ಮಾಜಿ ಸಿಎಂ ಸಿದ್ದರಾಮಯ್ಯ. ವರುಣದಲ್ಲಿ ಗೆದ್ದರೆ ಸಿದ್ದರಾಮಯ್ಯ ಸಿಎಂ ಆಗುತ್ತೇನೆ ಎನ್ನುತ್ತಾರೆ. ನನಗೆ ಡಿ.ಕೆ ಶಿವಕುಮಾರ್ ಕ್ಲೋಸ್ ಫ್ರೆಂಡ್. ಅವರೇ ಸಿಎಂ ಆಗಬೇಕು ಎನ್ನುವ ಆಸೆ ಇದೆ. ಅಂತಿಮವಾಗಿ ವರುಣ ಕ್ಷೇತ್ರದಲ್ಲಿ ನೂರಕ್ಕೆ ನೂರು ಸೋಮಣ್ಣ ಗೆಲ್ಲುತ್ತಾರೆ ಎಂದು ಜಗ್ಗೇಶ್ ಹೇಳಿದರು.