More

    ಸ್ವಾಭಿಮಾನದ ಹೋರಾಟದಲ್ಲಿ ಸೆರೆಮನೆ ಕಂಡಿದ್ದೆ; ಸ್ವಾತಂತ್ರೃ ಸೇನಾನಿ ಚಂದ್ರಣ್ಣ ರೆಡ್ಡಿ ಮೆಲುಕು, ಜಗಳೂರು ತಾಲೂಕು ಆಡಳಿತದಿಂದ ಗೌರವ ಸಲ್ಲಿಕೆ

    ಜಗಳೂರು: ಬ್ರಿಟಿಷರ ವಿರುದ್ಧದ ಸ್ವಾತಂತ್ರೃ ಹೋರಾಟವನ್ನು 12ನೇ ವಯಸ್ಸಿನಲ್ಲೇ ಅತಿ ಹತ್ತಿರದಿಂದ ನೋಡಿದ್ದೆ. ಸ್ವಾಭಿಮಾನದ ಹೋರಾಟ ಕಂಡು ಪ್ರೇರೇಪಿತನಾಗಿ ನಾನೂ ಭಾಗವಹಿಸಿದ್ದೆ. 1942ರಲ್ಲಿ ಒಮ್ಮೆ ಮೊಳಕಾಲ್ಮೂರಿನಲ್ಲಿ ಬ್ರಿಟಿಷರ ವಿರುದ್ಧ ದಂಗೆ ಎದ್ದಾಗ ಆಂಗ್ಲ ಪೊಲೀಸರಿಂದ ಹೊಡೆತ ತಿಂದು ಸೆರೆಮನೆ ಸಹ ಸೇರಿದ್ದೆ.

    ಭಾರತ ಸ್ವಾತಂತ್ರೃ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ಸ್ವಾತಂತ್ರೃ ಹೋರಾಟದ ದಿನಗಳನ್ನು ಜಗಳೂರು ತಾಲೂಕು ಚಿಕ್ಕಮಲ್ಲನಹೊಳೆಯ ಸ್ವಾತಂತ್ರೃ ಸೇನಾನಿ ಚಂದ್ರಣ್ಣ ರೆಡ್ಡಿ ಹೀಗೆ ಮೆಲುಕು ಹಾಕಿದರು.

    ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ಚಂದ್ರಣ್ಣ ರೆಡ್ಡಿ ಅವರ ಮನೆಗೇ ತೆರಳಿ ನೀಡಿದ ಸನ್ಮಾನ, ಗೌರವ ಸ್ವೀಕರಿಸಿ ಸಂತಸ ಪಟ್ಟರು. ಭಾರತಕ್ಕೆ ಸ್ವಾತಂತ್ರೃ ಬಂದು 75 ವರ್ಷಗಳು ತುಂಬಿದ ಈ ಸುಸಂದರ್ಭದಲ್ಲಿ ದೇಶಾದ್ಯಂತ ಹಬ್ಬದಂತೆ ಆಚರಣೆ ಮಾಡುತ್ತಿರುವುದು ತುಂಬಾ ಖುಷಿಯಾಯಿತು ಎಂದು ಅಭಿಮಾನ ತೋರಿದರು.

    ತಹಸೀಲ್ದಾರ್ ಸಂತೋಷ್‌ಕುಮಾರ್ ಮಾತನಾಡಿ, ಬ್ರಿಟಿಷರ ಕಪಿಮುಷ್ಠಿಯಿಂದ ಬಿಡಿಸಿಕೊಳ್ಳಲು ಭಾರತೀಯರು ಅನೇಕ ಹೋರಾಟ ರೂಪಿಸಿದರು. ಸ್ವಾತಂತ್ರೃ ಕಿಚ್ಚಿನಲ್ಲಿ ಚಿಕ್ಕಹಳ್ಳಿಯಿಂದ ದೆಹಲಿವರೆಗೂ ಲಕ್ಷಾಂತರ ದೇಶಭಕ್ತರು ಪ್ರಾಣತ್ಯಾಗ ಮಾಡಿದ್ದಾರೆ. ಅಮೃತ ಮಹೋತ್ಸವದಲ್ಲಿ ಅವರನ್ನು ಸ್ಮರಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು.

    ಜಗಳೂರು ತಾಲೂಕಿನಲ್ಲಿ ಅನೇಕರು ಸ್ವಾತಂತ್ರೃಕ್ಕಾಗಿ ಹೋರಾಟ ನಡೆಸಿದ್ದಾರೆ. ಬಹುತೇಕರು ಇಹಲೋಕ ತ್ಯಜಿಸಿದ್ದಾರೆ. ಚಿಕ್ಕಮಲ್ಲನಹೊಳೆ ಚಂದ್ರಣ್ಣ ರೆಡ್ಡಿ ಅವರಿಗೆ ತುಂಬಾ ವಯಸ್ಸಾಗಿದ್ದು ವೇದಿಕೆಗೆ ಕರೆದು ಸನ್ಮಾನಿಸುವುದು ಕಷ್ಟಸಾಧ್ಯವಾದ್ದರಿಂದ ಅವರ ಮನೆಯಲ್ಲೇ ಗೌರವ ಸಲ್ಲಿಸಲಾಗಿದೆ ಎಂದರು.

    ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ ಮಾತನಾಡಿ, ಅನೇಕ ಹೋರಾಟಗಾರರ ಪ್ರಾಣ ತ್ಯಾಗದಿಂದ ದೇಶಕ್ಕೆ ಸ್ವಾತಂತ್ರೃ ಬಂದಿದೆ. ಅದರಲ್ಲಿ ಜಗಳೂರಿನವರು ಗುರುತಿಸಿಕೊಂಡಿರುವುದು ಹೆಮ್ಮೆಯ ಸಂಗತಿ ಎಂದರು.

    ಕಂದಾಯ ಇಲಾಖೆ ಆರ್‌ಐ ಕುಬೇಂದ್ರನಾಯ್ಕ, ಶ್ರೀನಿವಾಸ್, ಗ್ರಾಮ ಲೆಕ್ಕಾಧಿಕಾರಿಗಳಾದ ಶ್ವೇತಾ, ಲೋಲಾಕ್ಷಿ, ನಿವೃತ್ತ ಮುಖ್ಯಶಿಕ್ಷಕ ಜಿ.ಸಿ.ವಾಸುದೇವರೆಡ್ಡಿ ಮತ್ತಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts