More

    ಚೀನಾವನ್ನು ಕಂಗೆಡಿಸಿರುವ ಕೊರೊನಾ ವೈರಸ್

    ಕೊರೊನಾವೈರಸ್​ಗೆ ಹೆದರಿದ ಹೊರಜಗತ್ತು ಚೀನಿಯರನ್ನು ದೂರವಿಡುತ್ತಿದೆ. ಇದು ಹೀಗೆಯೇ ಮುಂದುವರಿದರೆ ಚೀನೀ ಸಾಲಸಂಕೋಲನಾ ಯೋಜನೆಗಳ ಅನುಷ್ಠಾನ/ಮುಂದುವರಿಕೆಗಾಗಿ ಚೀನಿ ಅಧಿಕಾರಿಗಳು, ಕೆಲಸಗಾರರು ಇತರ ದೇಶಗಳಿಗೆ ಪ್ರವೇಶಿಸುವುದು ದುಸ್ತರವಾಗಬಹುದು. ಅಲ್ಲಿಗೆ ಜಿನ್​ಪಿಂಗ್​ರ ‘ಬೆಲ್ಟ್ ಆಂಡ್ ರೋಡ್’ ಯೋಜನೆಗೆ ಭಾರಿ ಹೊಡೆತ ಬೀಳುತ್ತದೆ.

    1950ರ ದಶಕದ ಆದಿಯಲ್ಲಿ ಕೊರಿಯಾ ಪರ್ಯಾಯದ್ವೀಪ ಮತ್ತು ಇಂಡೋಚೀನಾದಲ್ಲಿ ಅಮೆರಿಕದ ತಂತ್ರಗಳನ್ನೆಲ್ಲಾ ಕಮ್ಯೂನಿಸ್ಟ್ ಚೀನಾ ಹಾಳುಗೆಡವಿದ ಬಗ್ಗೆ ಅತೀವವಾಗಿ ಬೇಸರಗೊಂಡಿದ್ದ ಅಂದಿನ ವಿದೇಶಾಂಗ ಕಾರ್ಯದರ್ಶಿ ಜಾನ್ ಫಾಸ್ಟರ್ ಡಲೆಸ್ 1955ರಲ್ಲಿ ಜರುಗಿದ ಜಿನೀವಾ ಸಮ್ಮೇಳನದಲ್ಲಿ ಎದುರಾದ ಚೀನೀ ಪ್ರಧಾನಮಂತ್ರಿ ಚೌ ಎನ್ ಲೈರ ಕೈ ಕುಲುಕಲು ನಿರಾಕರಿಸಿದ್ದರು. ಇಂದು ನಾವೆಲ್ ಕರೊನಾವೈರಸ್ ಕಾರಣದಿಂದಾಗಿ ಇಡೀ ಜಗತ್ತೇ ಚೀನಾವನ್ನು ರ್ಸ³ಸಲು ಹಿಂದೆಗೆಯುತ್ತಿದೆ. ಈ ಎರಡು ಪ್ರಕರಣಗಳ ನಡುವಿನ ಆರೂವರೆ ದಶಕಗಳಲ್ಲಿ ಹ್ವಾಂಗ್​ಹೋ ನದಿಯಲ್ಲಿ ಅದೆಷ್ಟು ನೀರು ಹರಿದುಹೋಗಿದೆ!

    ಕೊರೊನಾವೈರಸ್ ಮೊದಲಿಗೆ ಕಾಣಿಸಿಕೊಂಡದ್ದು ಕಳೆದ ವರ್ಷದ ಡಿಸೆಂಬರ್ 12-27ರ ಆವಧಿಯಲ್ಲಿ, ಮಧ್ಯಚೀನಾದ ಸುಂದರ ಸರೋವರಗಳ ನಗರ ವೂಹಾನ್​ನಲ್ಲಿ. ‘2019-nCoV‘ ಎಂದು ಹೆಸರಿಸಲಾಗಿರುವ ಈ ವೈರಸ್ ನ್ಯೂಮೋನಿಯಾದ ಲಕ್ಷಣಗಳನ್ನು ಹೋಲುವ ರೋಗವನ್ನುಂಟುಮಾಡಿ ಮುಂದೆ ರೋಗಿಯನ್ನು ಉಸಿರಾಟದ ತೊಂದರೆಗೀಡುಮಾಡುತ್ತದೆ. ಸದ್ಯಕ್ಕೆ ಮದ್ದಿಲ್ಲದ ಈ ರೋಗ ಚೀನಾದಲ್ಲಿ 20,000ಕ್ಕೂ ಹೆಚ್ಚಿನ ಜನರಿಗೆ ಹರಡಿದ್ದು ಇಲ್ಲಿಯವರೆಗೆ 400ಕ್ಕೂ ಅಧಿಕ ಜನರನ್ನು ಬಲಿ ತೆಗೆದುಕೊಂಡಿದೆ. ಕರೊನಾವೈರಸ್​ನ ಮೂಲದ ಬಗ್ಗೆ ಸ್ಪಷ್ಟ ವಿವರಗಳಿಲ್ಲದಿದ್ದರೂ ಎರಡು ಸಂಶೋಧನಾ ಲೇಖನಗಳು ಈ ಮಾರಕ ರೋಗಾಣುವಿನ ಮೂಲ ವೂಹಾನ್ ನಗರದ ಮಾರುಕಟ್ಟೆಯಲ್ಲಿ ಆಹಾರಕ್ಕಾಗಿ ಮಾರಾಟವಾಗುತ್ತಿದ್ದ ಬಾವಲಿಗಳು ಮತ್ತು ಹಾವುಗಳಿರಬಹುದೆಂದು ಶಂಕಿಸುತ್ತವೆ. ವೂಹಾನ್ ನಗರದಿಂದ ಇತರ ಚೀನೀ ನಗರಗಳಿಗೆ ವೇಗವಾಗಿ ಹರಡಿದ ವೈರಸ್​ನಿಂದಾಗಿ ಕಂಗಾಲಾದ ಚೀನೀ ಸರ್ಕಾರ 18 ನಗರಗಳಿಗೆ ದೇಶದ ಇತರೆಡೆಯಿಂದ ಯಾರೂ ಹೋಗದಂತೆ ಪ್ರತಿಬಂಧಿಸಿದೆ. ಆ ನಗರಗಳ ಜನರೂ ಹೊರಹೋಗುವಂತಿಲ್ಲ. ಅಂದರೆ ಸುಮಾರು 5.60 ಕೋಟಿ ಚೀನೀಯರು ತಂತಮ್ಮ ನಗರಗಳಲ್ಲೇ ಬಂಧಿಗಳು! ಹೀಗೆ ಕರೊನಾವೈರಸ್​ಗೆ ಅಂಜಿ ಚೀನಾ ತನ್ನ ಗಡಿಯೊಳಗೇ ಅಷ್ಟು ಜನರನ್ನು ಬಂಧಿಗಳಾಗಿಸಿದರೆ ಹೊರಜಗತ್ತು ಎಲ್ಲ ಚೀನೀಯರನ್ನೂ ಚೀನಾದೊಳಗೇ ಬಂಧಿಗಳನ್ನಾಗಿಸಲು ಹೊರಟಿರುವಂತಿದೆ. ಈ ಬೆಳವಣಿಗೆ ವಿಶ್ವದ ಮಹಾಶಕ್ತಿಯಾಗಲು ದಾಪುಗಾಲಿಡುತ್ತಿದ್ದ ಚೀನಾದ ಮಹತ್ವಾಕಾಂಕ್ಷೆಗೆ ಯಾವ ಬಗೆಯ ಹೊಡೆತ ನೀಡಬಹುದೆಂಬ ವಿಶ್ಲೇಷಣೆ ಈ ಲೇಖನದ ವಸ್ತುವಿಷಯ. ಮಹಾಶಕ್ತಿಯಾಗಲು ಚೀನಾ ಕಳೆದ ಏಳು ದಶಕಗಳಿಂದಲೂ ಹೂಡುತ್ತಾ ಬಂದಿರುವ ತಂತ್ರಗಳು, ಹಾಕುತ್ತಾ ಬಂದಿರುವ ಲಾಗಗಳ ಪರಿಚಯದಿಂದಲೇ ವಿಶ್ಲೇಷಣೆಯನ್ನು ಆರಂಭಿಸೋಣ.

    ಒಂದಿಡೀ ಶತಮಾನದ ಯೂರೋಪಿಯನ್ ಮತ್ತು ಅರ್ಧ ಶತಮಾನದ ಜಪಾನೀ ಒತ್ತಡಗಳ ಜತೆಗೆ ಆಂತರಿಕ ಕ್ಷೋಭೆಗಳಿಂದ ಜಝುರಿತವಾಗಿದ್ದ ಚೀನಾ ಅಕ್ಟೋಬರ್ 1949ರಲ್ಲಿ ಯಶಸ್ವಿ ಕಮ್ಯೂನಿಸ್ಟ್ ಕ್ರಾಂತಿಯೊಡನೆ ಸದೃಢ ಸರ್ಕಾರವನ್ನು ಪಡೆದುಕೊಂಡ ಮರುಗಳಿಗೆಯೇ ತನ್ನ ಉದ್ದೇಶವೇನೆಂದು ಜಗತ್ತಿಗೆ ಸೂಚ್ಯವಾಗಿ ತಿಳಿಸಿತು. ಮಾವೋ ಝೆಡಾಂಗ್​ರ ಫೆಬ್ರವರಿ 1950ರ ಮಾಸ್ಕೋ ಭೇಟಿ, ಎರಡೂ ಕಮ್ಯೂನಿಸ್ಟ್ ದೈತ್ಯರ ನಡುವೆ ಏರ್ಪಟ್ಟ ಸೇನಾ ಒಪ್ಪಂದ ತತ್​ಕ್ಷಣದಲ್ಲಿ ಪರಿಣಾಮ ಬೀರಿದ್ದು ಕೊರಿಯಾ ಮತ್ತು ಇಂಡೋಚೀನಾ ಪರ್ಯಾಯದ್ವೀಪಗಳೆರಡರ ಮೇಲೆ ಹಾಗೂ ಅವುಗಳನ್ನು ನಿರ್ದೇಶಿಸುತ್ತಿದ್ದ ಬಾಹ್ಯಶಕ್ತಿಗಳ ತಂತ್ರಗಳ ಮೇಲೆ. ಅಮೆರಿಕದ ಅಗಾಧ ಹಾಗೂ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ವಿರುದ್ಧ ತನ್ನ ಜನಬಾಹುಳ್ಯವನ್ನೇ ಒಂದು ಪ್ರಬಲ ಅಸ್ತ್ರವಾಗಿ ಬಳಸಿ ಯಶಸ್ವಿಯಾಗಬಹುದೆಂದು 1950-53ರ ಕೊರಿಯಾ ಯುದ್ಧದಲ್ಲಿ ಚೀನಾ ಸಾಬೀತುಪಡಿಸಿದಾಗ ವಿಶ್ವನಾಯಕನ ಹಮ್ಮಿನಲ್ಲಿ ಬೀಗುತ್ತಿದ್ದ ಅಮೆರಿಕಾಗೆ ಆಘಾತವಾದದ್ದು ನಿಜ. ಒಬ್ಬ ಅಮೆರಿಕನ್ ಸೈನಿಕನಿಗೆ ಪ್ರತಿಯಾಗಿ ತನ್ನ ಏಳು ಸೈನಿಕರನ್ನು ಬಲಿಗೊಟ್ಟು ಅಮೆರಿಕನ್ ಸೇನೆಯನ್ನು ಉತ್ತರ ಕೊರಿಯಾದಿಂದ ಹೊರಗಟ್ಟಿದ ಚೀನಾ ತನ್ನ ಹಾಗೂ ತನ್ನ ಹಿಂಬಾಲಕರ ಹಿತಾಸಕ್ತಿಗಳನ್ನು ಕಾಪಾಡಲು ಯಾವ ಕ್ರಮಕ್ಕಾದರೂ ಸಿದ್ಧ ಎಂದು ಜಗತ್ತಿಗೆ ಮನಗಾಣಿಸಿತು. ಈ ನಿರ್ದಾಕ್ಷಿಣ್ಯ ನೀತಿಯ ಜತೆಗೇ, ಫ್ರೆಂಚ್ ವಸಾಹತುಶಾಹಿಯ ವಿರುದ್ಧ ಕಾದಾಡುತ್ತಿದ್ದ ವಿಯೆಟ್ನಾಮೀ ಕಮ್ಯೂನಿಸ್ಟ್ ಸ್ವಾತಂತ್ರಹೋರಾಟಗಾರರ ಬೆಂಬಲಕ್ಕೆ ಚೀನಾ ನಿಂತಾಗ ಆಗ್ನೇಯ ಏಷಿಯಾದ ರಾಜಕೀಯ-ಸೇನಾ ವಾಸ್ತವಗಳು ಸಂಪೂರ್ಣವಾಗಿ ಬದಲಾಗಿಹೋದವು. ಅಮೆರಿಕದ ಬೆಂಬಲ ಹಾಗೂ ಸಹಕಾರವಿದ್ದಾಗ್ಯೂ ವಸಾಹತುಶಾಹಿ ಫ್ರೆಂಚರು ವಿಯೆಟ್ನಾಮೀ ಕಮ್ಯೂನಿಸ್ಟರ ಮುಂದೆ ಶರಣಾಗತರಾಗಿ ಆ ನಾಡಿನ ಜತೆ ಕಾಂಬೋಡಿಯಾ ಮತ್ತು ಲಾವೋಸ್​ಗಳಿಂದಲೂ ಕಾಲ್ತೆಗೆಯವ ಸ್ಥಿತಿ ನಿರ್ವಣವಾಯಿತು. ಜಾನ್ ಫಾಸ್ಟರ್ ಡಲೆಸ್​ರಿಗೆ ತಿಕ್ಕಲು ಹತ್ತಿಸಿದ್ದು ಇದು. ವಿಯೆಟ್ನಾಮೀ ಕಮ್ಯೂನಿಸ್ಟರಿಗೆ ನಂತರವೂ ಮುಂದುವರಿದ ಚೀನೀ ಸಹಕಾರ ಅಂತಿಮವಾಗಿ ಅಮೆರಿಕವನ್ನು ವಿಯೆಟ್ನಾಂ ಕೆಸರಿನೊಳಕ್ಕೆ ಸೆಳೆದು, ವಿಶ್ವದ ದೊಡ್ಡಣ್ಣ ಅಲ್ಲಿಯವರೆಗಿನ ತನ್ನ ಇತಿಹಾಸದ ಅತ್ಯಂತ ದೀರ್ಘ ಯುದ್ಧದಲ್ಲಿ ನರಳುವಂತೆ ಮತ್ತು ಹೀನಾಯ ಸೋಲಿನಿಂದ ಕಂಗೆಡುವಂತೆ ಮಾಡಿತು.

    ಅದೇ ಸಮಯದಲ್ಲಿ, ತಮ್ಮ ದೇಶದ ಹಿತಾಸಕ್ತಿಗಳಿಗೆ ಅಮೆರಿಕಾಗಿಂತಲೂ ಸೋವಿಯೆತ್ ಯೂನಿಯನ್​ನಿಂದಲೇ ಹೆಚ್ಚು ಹಾನಿ, ಜತೆಗೆ, ಅಮೆರಿಕನ್ನರಿಗಿಂತ ರಷಿಯನ್ನರನ್ನು ಎದುರು ಹಾಕಿಕೊಳ್ಳುವುದು ಕಡಿಮೆ ಅಪಾಯಕರ ಮತ್ತು ಲಾಭದಾಯಕವೆಂದರಿತ ಚೀನೀ ನಾಯಕರು 1950ರ ದಶಕದ ಅಂತ್ಯದಲ್ಲಿ ಮಾಸ್ಕೋ ಜತೆ ಆರಂಭವಾಗಿದ್ದ ಸೈದ್ಧಾಂತಿಕ ಸಂಘರ್ಷವನ್ನು ಮುಂದಿನ ದಶಕದಲ್ಲಿ ಸೇನಾ ಸಂಘರ್ಷದ ಮಟ್ಟಕ್ಕೊಯ್ದರು. ಹಾಗೆ ಮಾಡುಮಾಡುತ್ತಲೇ ತಮ್ಮ ದೇಶದ ಅಗತ್ಯವನ್ನು ಅಮೆರಿಕಕ್ಕೆ ಮನವರಿಕೆ ಮಾಡಿಕೊಟ್ಟರು. ಚೀನಾಗೆ ವಿಶ್ವದಲ್ಲಿ ಎರಡನೆಯ ಸೂಪರ್ ಪವರ್ ಸ್ಥಾನ ದೊರಕಿಸಲು ಸೋವಿಯೆತ್ ಯೂನಿಯನ್ ಅನ್ನು ನಿರ್ವೀರ್ಯಗೊಳಿಸುವುದು ಅಗತ್ಯ ಮತ್ತು ಈ ಕ್ರಿಯೆ ಅಮೆರಿಕವನ್ನು ನಿರ್ವೀರ್ಯಗೊಳಿಸುವುದಕ್ಕಿಂತ ಸುಲಭ ಎಂಬ ಅರಿವು ಚೀನೀ ನಾಯಕರ ತಂತ್ರದ ಹಿಂದಿತ್ತು. ಪರಿಣಾಮವಾಗಿ ಎರಡೂ ಕಮ್ಯೂನಿಸ್ಟ್ ಸೇನೆಗಳು ಮಾರ್ಚ್ 1969ರಲ್ಲಿ ಸೈಬೀರಿಯಾ-ಮಂಚೂರಿಯಾ ಗಡಿಯಂತಿರುವ ಉಸ್ಸೂರಿ ನದಿತೀರದಲ್ಲಿ ಒಂದನ್ನೊಂದು ಎದುರಿಸಿದವು. ಆ ಸಂಘರ್ಷವನ್ನು ಆರಂಭಿಸಿದ್ದು ಚೀನಾ. ಆನಂತರ ಮೇ-ಸೆಪ್ಟೆಂಬರ್ ಆವಧಿಯಲ್ಲಿ ಸಾಮರಿಕವಾಗಿ ತಮಗೆ ಅನುಕೂಲಕರವಾಗಿದ್ದ ಕಝಾಕಸ್ತಾನ್-ಸಿಂಕಿಯಾಂಗ್ ಗಡಿಯಲ್ಲಿ ರಷಿಯನ್ನರು ಯುದ್ಧ ಆರಂಭಿಸಿದರೂ ಅದರಿಂದ ಅವರಿಗೇನೂ ಪ್ರಯೋಜನವಾಗಲಿಲ್ಲ.

    ನಂತರದ ದಿನಗಳಲ್ಲಿ ಅಮೆರಿಕ ತಾನಾಗಿಯೇ ಚೀನಾದ ಸ್ನೇಹವನ್ನು ಬಯಸುವ ಸ್ಥಿತಿ ನಿರ್ವಣವಾಯಿತು. ವಿಯೆಟ್ನಾಂ ಕೆಸರುಗುಂಡಿಯಿಂದ ಹೊರಬರಲು ಹತಾಶವಾಗಿ ದಾರಿ ಹುಡುಕಿದ ಅಮೆರಿಕನ್ನರು ವಿಯೆಟ್ನಾಮಿಗಳ ಜತೆ ಶಾಂತಿ ಬಯಸಿದಾಗ ಹನೋಯ್ನಿಂದ ಬಂದ ಉತ್ತರ: ‘ವಿಯೆಟ್ನಾಂಗೆ ಹಾದಿ ಬೀಜಿಂಗ್ ಮೂಲಕ ಸಾಗಿಬರುತ್ತದೆ.’ ತನ್ನ ಹಿತಾಸಕ್ತಿಗಳನ್ನು ಸಾಧಿಸಿಕೊಳ್ಳುವ ಅತ್ಯುತ್ತಮ ವಿಧಾನವೆಂದರೆ ಇತರರ ಮೇಲೆ ತನ್ನನ್ನು ಹೇರುವುದಕ್ಕಿಂತಲೂ ತನ್ನ ಸ್ನೇಹದ ಅಗತ್ಯ ಮನವರಿಕೆಯಾಗುವಂತಹ ಪರಿಸ್ಥಿತಿಯನ್ನು ನಿರ್ವಿುಸುವುದು ಎಂಬ ನೀತಿಯನ್ನು ಚೀನಾ ಅನುಸರಿಸಿಕೊಂಡು ಬಂದದ್ದು ಹೀಗೆ ನಿರೀಕ್ಷಿತ ಫಲ ನೀಡಿತು.

    ಮೂರು ದಶಕಗಳ ಹಿಂದೆ ಸೋವಿಯೆತ್ ಯೂನಿಯನ್ ಕುಸಿದಾಗ ತೆರವಾದ ಸೂಪರ್ ಪವರ್ ಸ್ಥಾನಕ್ಕೆ ಚೀನಾ ತಕ್ಷಣ ಹಕ್ಕು ಸ್ಥಾಪಿಸಲು ಹೋಗಲಿಲ್ಲ. ತಾಳ್ಮೆಯಿಂದ ಕಾಯುತ್ತಾ ತನ್ನ ಆರ್ಥಿಕ ಸಾಮರ್ಥ್ಯವನ್ನು ವಿಸ್ತರಿಸಿಕೊಳ್ಳುತ್ತಾ ಹೋಯಿತು. ಆರ್ಥಿಕ ಬಲಹೀನತೆಯೇ ಸೋವಿಯೆತ್ ಪತನಕ್ಕೆ ಪ್ರಮುಖ ಕಾರಣ ಎಂದು ಸಾಬೀತಾದ ಹಿನ್ನೆಲೆಯಲ್ಲಿ ಚೀನೀಯರ ಈ ನೀತಿ ಅರ್ಥಪೂರ್ಣ. ಮೊದಲಿಗೆ ಕಡಿಮೆ ವೇತನ, ಕಳಪೆ ಕಚ್ಚಾವಸ್ತುಗಳ ಉಪಯೋಗ, ಪರಿಸರ ನಾಶ ಮುಂತಾದ ದುರ್ವರ್ಗಗಳಿಂದ ವಿಶ್ವದ ಮೂರನೆಯ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆದ ನಂತರ ಚೀನಾ ಅವೆಲ್ಲಾ ಋಣಾತ್ಮಕ ವಿಧಾನಗಳನ್ನು ಒಂದೊಂದಾಗಿ ತೊರೆದು 2013ರಿಂದೀಚೆಗೆ ವಸ್ತುಗಳ ಗುಣಮಟ್ಟವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೇರಿಸುವ ಸರಿಯಾದ ಮಾರ್ಗಕ್ಕಿಳಿಯಿತು. ಹೀಗಾಗಿ ಅದರ ಉತ್ಪಾದನೆಗಳು ಅಮೆರಿಕಾದಲ್ಲೇ ಜನಪ್ರಿಯವಾಗಿ, ಆದಾಯ ಹೆಚ್ಚಿ, ಚೀನಾ ಮೂರು ಟ್ರಿಲಿಯನ್ ಡಾಲರ್ ವಿದೇಶೀ ವಿನಿಮಯದ ಅಗಾಧ ಭಂಡಾರವನ್ನು ಸಂಗ್ರಹಿಸಿತು. ಚೀನೀ ವಿದೇಶ ನೀತಿಯಲ್ಲಿ ಮಹತ್ವದ ಬದಲಾವಣೆಯನ್ನು ತಂದದ್ದು ಇದು.

    ಚೀನೀ ಅಧ್ಯಕ್ಷ ಷಿ ಜಿನ್​ಪಿಂಗ್​ರ ಜೂನ್ 7-8, 2013ರ ವಾಷಿಂಗ್​ಟನ್ ಭೇಟಿ, ಅದನ್ನು ಚೀನೀ ಮಾಧ್ಯಮಗಳು ಬಣ್ಣಿಸಿದ ಬಗೆ ವಿಶ್ವದ ಎರಡನೆಯ ಮಹಾಶಕ್ತಿಯ ಸ್ಥಾನಕ್ಕೆ ಆ ಕಮ್ಯೂನಿಸ್ಟ್ ದೈತ್ಯನ ಹಕ್ಕುದಾರಿಕೆಯನ್ನು ಜಗತ್ತಿಗೆ ಮನಗಾಣಿಸಲು ಬೀಜಿಂಗ್ ಕೊನೆಗೂ ಸ್ಪಷ್ಟ, ದೃಢಚಿತ್ತದ ನಿರ್ಧಾರ ಮಾಡಿದೆಯೆಂಬುದರ ಸೂಚನೆಯಾಗಿತ್ತು. ಮುಂದೆ ನಡೆದದ್ದು ಎರಡು ಅನಿರೀಕ್ಷಿತ ಅಷ್ಟೇ ಪರಸ್ಪರ ವಿರೋಧಾಭಾಸಪೂರಣ ಬೆಳವಣಿಗೆಗಳು.

    ಮೂರು ವರ್ಷಗಳ ಹಿಂದೆ ಅಮೆರಿಕ ಅಧ್ಯಕ್ಷ ಗದ್ದುಗೆಗೇರಿದಾಗ ಡೊನಾಲ್ಡ್ ಟ್ರಂಪ್ ಜಾಗತೀಕರಣದ ಕುರಿತಾದ ತಮ್ಮ ನಕಾರಾತ್ಮಕ ನಿಲುವುಗಳನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸಿ, ಜಾಗತೀಕರಣ ಪ್ರಕ್ರಿಯೆಯಿಂದ ಅಮೆರಿಕವನ್ನು ಹೊರಗೊಯ್ಯುವ ಮಾತಾಡಿದರಷ್ಟೇ. ತಕ್ಷಣ ಪ್ರತಿಕ್ರಿಯಿಸಿದ ಚೀನೀ ಅಧ್ಯಕ್ಷ ಜಿನ್​ಪಿಂಗ್, ಅಮೆರಿಕ ತೆರವು ಮಾಡುವ ಸ್ಥಾನವನ್ನು ತುಂಬಲು ಚೀನಾ ತಯಾರಾಗಿರುವುದೆಂದು ಘೊಷಿಸಿದರು. ಅವರ ಮಾತಿನ ಅರ್ಥ, ವಿಶ್ವ ಆರ್ಥ ವ್ಯವಸ್ಥೆಯ ನಾಯಕತ್ವವನ್ನು ಅಮೆರಿಕದಿಂದ ತನ್ನ ಕೈಗೆ ತೆಗೆದುಕೊಳ್ಳಲು ಚೀನಾ ಸಿದ್ಧವಾಗಿದೆ ಎಂದಾಗಿತ್ತು. ಅಗತ್ಯವಾದ ಪೂರ್ವಭಾವಿ ತಯಾರಿಗಳನ್ನೆಲ್ಲಾ ಮಾಡಿಕೊಂಡೇ ಜಿನ್​ಪಿಂಗ್ ಇಂತಹ ಯುಗಪರಿವರ್ತಕ ಹೆಜ್ಜೆಯಿಟ್ಟದ್ದು. ಚೀನಾ ವಿಶ್ವದ ಎರಡನೆಯ ದೊಡ್ಡ ಅರ್ಥವ್ಯವಸ್ಥೆ, ಅದರ ವಾರ್ಷಿಕ ನಿವ್ವಳ ರಾಷ್ಟ್ರೀಯ ಉತ್ಪಾದನೆ ಹನ್ನೊಂದು ಟ್ರಿಲಿಯನ್ ಡಾಲರ್​ಗಳಿಗೂ ಅಧಿಕ ಎಂಬ ಹೆಗ್ಗಳಿಕೆಗಳು ಜಿನ್​ಪಿಂಗ್​ರ ಮಹತ್ವಾಕಾಂಕ್ಷಿ ಘೊಷಣೆಯ ಹಿಂದಿದ್ದವು. ಈ ಅಗಾಧ ಆರ್ಥಿಕ ಸಾಮರ್ಥ್ಯನ್ನು ರಾಜಕೀಯ-ಸೇನಾ ಶಕ್ತಿಯನ್ನಾಗಿ ಬದಲಾಯಿಸಲು ಜಿನ್​ಪಿಂಗ್ ಹೊರಟದ್ದು ಸಹಜವೇ ಆಗಿತ್ತು. ಹದಿನೆಂಟನೆಯ ಶತಮಾನದಲ್ಲಿ ಬ್ರಿಟನ್, ಇಪ್ಪತ್ತನೆಯ ಶತಮಾನದಲ್ಲಿ ಅಮೆರಿಕ ಮಾಡಿದ್ದು ಅದನ್ನೇ.

    ಆದರೆ ತಮ್ಮೀ ಮಹತ್ವಾಕಾಂಕ್ಷೆಯ ಹಾದಿಯಲ್ಲಿ ಜಿನ್​ಪಿಂಗ್ ಒಂದು ದೊಡ್ಡ ತಪ್ಪನ್ನೆಸಗಿದ್ದರು. ಇತರರ ಮೇಲೆ ನಮ್ಮನ್ನು ಹೇರುವುದಕ್ಕಿಂತಲೂ ನಮ್ಮ ಅಗತ್ಯದ ಅರಿವು ಅವರಿಗಾಗುವಂತೆ ಮಾಡುವುದು ನಮ್ಮ ಹಿತಸಾಧನೆಗೆ ಉತ್ತಮ ಮಾರ್ಗ ಎಂದು 1960ರ ದಶಕದಲ್ಲಿ ಮಾವೋ ಆಚರಿಸಿ ತೋರಿಸಿದ್ದ ಸುವರ್ಣಸೂತ್ರವನ್ನು ಜಿನ್​ಪಿಂಗ್ ಗಾಳಿಗೆ ತೂರಿಬಿಟ್ಟರು. ಪಶ್ಚಿಮದಲ್ಲಿ ಮಾಂಟೆನೀಗ್ರೋದಿಂದ ಪೂರ್ವದಲ್ಲಿ ಫಿಲಿಪೀನ್ಸ್​ಗಳವರೆಗೆ ಡಜನ್​ಗಟ್ಟಲೆ ದೇಶಗಳಿಗೆ ಜಿನ್​ಪಿಂಗ್ ವ್ಯರ್ಥ ಯೋಜನೆಗಳಿಗಾಗಿ ಅಗಾಧ ಪ್ರಮಾಣದ ಸಾಲ ನೀಡಿದ್ದರು, ಸಾಲ ತೀರಿಸಲಾಗದ ಆ ದೇಶಗಳಿಂದ ಬಗೆಬಗೆಯ ಸವಲತ್ತುಗಳನ್ನೋ, ನೆಲವನ್ನೋ ಕಬಳಿಸಲು ಯೋಜನೆ ರೂಪಿಸಿದ್ದರು. ತಾವು ಚೀನೀ ಸಾಲಸಂಕೋಲೆಯೊಳಗೆ ಸಿಲುಕಿಹೋಗಿದ್ದೇವೆಂದು ಆ ದೇಶಗಳಿಗೆ ಹೊಳೆದದ್ದು ತಡವಾಗಿ.

    ಜಿನ್​ಪಿಂಗ್​ರ ಈ ನವವಸಾಹತುಶಾಹಿ ಹುನ್ನಾರಕ್ಕೆ ಮೊದಲ ಕೊಡಲಿಯೇಟು ನೀಡಿದ್ದು ಅಧ್ಯಕ್ಷ ಟ್ರಂಪ್. ಮುನ್ನೂರು ಬಿಲಿಯನ್ ಡಾಲರ್​ಗಳಷ್ಟು ಚೀನಿ ವಸ್ತುಗಳ ಮೇಲಿನ ಸುಂಕವನ್ನು ಹೆಚ್ಚಿಸಿ, ಅವು ಅಮೆರಿಕದ ಮಾರುಕಟ್ಟೆಯನ್ನು ತಲುಪದಂತೆ, ಅಷ್ಟರ ಮಟ್ಟಿಗೆ ಚೀನೀ ಆದಾಯ ಕುಸಿಯುವಂತೆ ಟ್ರಂಪ್ ಮಾಡಿದರು. ಇಂದು ಎರಡನೆಯ ಕೊಡಲಿಯೇಟನ್ನು ಕರೊನಾವೈರಸ್ ನೀಡಿದೆ. ವೈರಸ್​ಗೆ ಹೆದರಿದ ಹೊರಜಗತ್ತು ಚೀನಿಯರನ್ನು ದೂರವಿಡುತ್ತಿದೆ. ದಕ್ಷಿಣ ಕೊರಿಯಾ, ಜಪಾನ್, ವಿಯೆಟ್ನಾಂ ಮತ್ತು ಹಾಂಗ್​ಕಾಂಗ್​ಗಳ ಹೋಟೆಲ್​ಗಳು ಚೀನಿಯರಿಗೆ ಪ್ರವೇಶ ನಿರಾಕರಿಸಿವೆ. ಜಕರ್ತದಲ್ಲಿ ಚೀನೀಯರು ತಂಗಿದ್ದ ಹೋಟೆಲ್ ಮುಂದೆ ಜಮಾಯಿಸಿದ ಇಂಡೋನೇಶಿಯನ್ನರು ‘ಚೀನೀಯರೇ, ಹೊರಹೋಗಿ’ ಎಂದು ಘೊಷಣೆ ಕೂಗಿದ್ದಾರೆ. ರಷಿಯಾ, ಮಂಗೋಲಿಯಾ ಮತ್ತು ನೇಪಾಳಗಳು ಚೀನಾ ಜತೆಗಿನ ತಮ್ಮ ಗಡಿಯನ್ನು ಮುಚ್ಚಿಬಿಟ್ಟಿವೆ! ಇದು ಆರಂಭ.

    ಇದು ಹೀಗೆಯೇ ಮುಂದುವರಿದರೆ ಚೀನೀ ಸಾಲಸಂಕೋಲನಾ ಯೋಜನೆಗಳ ಅನುಷ್ಠಾನ/ಮುಂದುವರಿಕೆಗಾಗಿ ಚೀನಿ ಅಧಿಕಾರಿಗಳು, ತಂತ್ರಜ್ಞರು, ಕೆಲಸಗಾರರು ಇತರ ದೇಶಗಳಿಗೆ ಪ್ರವೇಶಿಸುವುದು ದುಸ್ತರವಾಗಬಹುದು. ಅಲ್ಲಿಗೆ ಜಿನ್​ಪಿಂಗ್​ರ ಬೆಲ್ಟ್ ಆಂಡ್ ರೋಡ್ ಹೆಸರಿನ ನವವಸಾಹತುಶಾಹಿ ಯೋಜನೆಗೆ ಭಾರಿ ಹೊಡೆತ ಬೀಳುತ್ತದೆ.

    ಈ ನಡುವೆ ಕರೊನಾವೈರಸ್ ಚೀನಾವನ್ನು ದಾಟಿ ಹೊರಗೆ ಬಂದೇಬಿಟ್ಟಿದೆ, ಫಿಲಿಪೀನ್ಸ್​ನಲ್ಲಿ ಮೊದಲ ಸಾವು ಸಂಭವಿಸಿದೆ. ಈಗ ಈ ಮಾರಕ ರೋಗಾಣು ಕೇರಳದ ಮೂಲಕ ಭಾರತಕ್ಕೂ ಪ್ರವೇಶಿಸಿದೆಯೆಂಬ ಸುದ್ದಿ.
    (ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts