More

    ಕ್ಯಾಪಿಟಲ್ ಹಿಲ್ ಮುತ್ತಿಗೆ, ಕೆಲವು ಪ್ರಶ್ನೆಗಳು| ಪ್ರೇಮಶೇಖರ ಅವರ ಜಗದಗಲ ಅಂಕಣ

    ಕ್ಯಾಪಿಟಲ್ ಹಿಲ್ ಮುತ್ತಿಗೆ, ಕೆಲವು ಪ್ರಶ್ನೆಗಳು| ಪ್ರೇಮಶೇಖರ ಅವರ ಜಗದಗಲ ಅಂಕಣಜನವರಿ 6ರಂದು ವಾಷಿಂಗ್​ಟನ್​ನಲ್ಲಿ ನಡೆದ ದೊಂಬಿ, ಕ್ಯಾಪಿಟಲ್ ಹಿಲ್​ನಲ್ಲಿರುವ ಶಾಸನಸಭೆ ‘ಕಾಂಗ್ರೆಸ್’ನ ಎರಡೂ ಸದನಗಳಿಗೆ ಉದ್ರಿಕ್ತ ಜನಜಂಗುಳಿ ನುಗ್ಗಿ ಎಬ್ಬಿಸಿದ ದಾಂಧಲೆ ಸಹಜವಾಗಿಯೇ ಜಾಗತಿಕ ಸುದ್ದಿಯಾಗಿದೆ. ಜಾಗತಿಕ ರಾಜಕಾರಣದ ಬಹುದೊಡ್ಡ ನಿರ್ದೇಶಕ ಅಮೆರಿಕಾದಲ್ಲಿ ಅಧಿಕಾರದ ಹಸ್ತಾಂತರಕ್ಕೆ ಸಂಬಂಧಿಸಿದ ಅರಾಜಕತೆ ಎಲ್ಲೆಡೆ ಆತಂಕವನ್ನೂ ಉಂಟುಮಾಡಿದೆ. ಹಾಗೆ ನೋಡಿದರೆ ಈ ಬಗೆಯ ಅಶಾಂತಿ ಅನಿರೀಕ್ಷಿತವೇನೂ ಆಗಿರಲಿಲ್ಲ, ಕಾರಣರಹಿತವೂ ಆಗಿರಲಿಲ್ಲ.

    ಅಮೆರಿಕಾದ ಅಧ್ಯಕ್ಷೀಯ ಚುನಾವಣೆಗಳಲ್ಲಿ ಅವ್ಯವಹಾರ ದೊಡ್ಡದಾಗಿ ಕೇಳಿಬಂದದ್ದು ಕಳೆದ ಬಾರಿ. ಫ್ಲಾರಿಡಾ ರಾಜ್ಯದಲ್ಲಿ ಡೆಮೋಕ್ರಾಟಿಕ್ ಅಭ್ಯರ್ಥಿಯಾದ ಹಿಲರಿ ಕ್ಲಿಂಟನ್​ರ ಪರವಾಗಿ ಚಲಾಯಿಸಲಾದ ಸುಮಾರು ಆರು ಲಕ್ಷ ಮತಪತ್ರಗಳು ಜೌಗುಪ್ರದೇಶವೊಂದರಲ್ಲಿ ಪತ್ತೆಯಾದದ್ದು ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿತ್ತು. ಅವ್ಯವಹಾರದ ವರದಿಗಳಂತೂ ಈ ಬಾರಿ ಎಲ್ಲೆ ಮೀರಿವೆ. ಇದಕ್ಕೆ ಮುಖ್ಯ ಕಾರಣ ಕರೊನಾ ಸಂಕ್ರಮಣದ ಕಾರಣದಿಂದಾಗಿ ಅಂಚೆಯ ಮೂಲಕ ಅಧಿಕ ಮತಗಳು ಚಲಾವಣೆಯಾದದ್ದು. ಇದು ಪ್ರಶ್ನೆಗಳನ್ನೆತ್ತಿದ್ದು ಮುಖ್ಯವಾಗಿ ಆರು ರಾಜ್ಯಗಳಲ್ಲಿ. ವಿಸ್ಕಾನ್ಸಿನ್, ಮಿಷಿಗನ್, ಪೆನ್ಸಿಲ್​ವೇನಿಯಾ, ಜಾರ್ಜಿಯಾ, ನೆವಾಡಾ ಮತ್ತು ಅರಿಝೋನಾ ರಾಜ್ಯಗಳ ಹಲವಾರು ಕೌಂಟಿಗಳು ಮತ್ತು ಡಿಸ್ಟ್ರಿಕ್ಟ್ ಗಳಲ್ಲಿ ಲಕ್ಷಾಂತರ ಮಾನ್ಯ ಮತಗಳು ಎಣಿಕೆಯಾಗದೇ, ಅಪಾರ ಸಂಖ್ಯೆಯ ‘ಕುಲಗೆಟ್ಟ’ ಮತಗಳು ಎಣಿಕೆಯಾಗಿರುವ ಬಗ್ಗೆ ರಿಪಬ್ಲಿಕನ್ ಪಕ್ಷ ಆಪಾದಿಸಿತ್ತು. ಅಂಚೆಮತಗಳಲ್ಲಿ ಮತದಾರರ ಅಂಚೆವಿಳಾಸ ಮತ್ತು ಸಹಿ ಇರಬೇಕಾದ್ದು ಕಡ್ಡಾಯ. ಆದರೆ ಡೆಮೋಕ್ರಾಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡೆನ್ ಪರವಾಗಿ ಚಲಾಯಿಸಲಾದ ಲಕ್ಷಾಂತರ ಅಂಚೆಮತಗಳಲ್ಲಿ ಈ ವಿವರಗಳು ಇರಲಿಲ್ಲವೆಂದೂ, ರಿಪಬ್ಲಿಕನ್ ಚುನಾವಣಾ ವೀಕ್ಷಕರು ಎತ್ತಿದ ಪ್ರಶ್ನೆಗಳನ್ನು ಚುನಾವಣಾ ಅಧಿಕಾರಿಗಳು ಪುರಸ್ಕರಿಸದೇ ಆ ‘ಕುಲಗೆಟ್ಟ’ ಮತಗಳನ್ನು ಎಣಿಕೆಯಲ್ಲಿ ಪರಿಗಣಿಸಿದ್ದಾಗಿಯೂ, ರಿಪಬ್ಲಿಕನ್ ವಕೀಲರು ಮಾಡಿದ ಸುಮಾರು ಅರವತ್ತು ಆರೋಪಗಳಲ್ಲಿ ಬಹುಪಾಲನ್ನು ನ್ಯಾಯಾಲಯಗಳು ಪುರಸ್ಕರಿಸಿ, ಮತಗಳ ಸರಿಯಾದ ಮರುಎಣಿಕೆಗೆ ಆದೇಶ ನೀಡಿದ್ದೇನೋ ನಿಜ. ಆದರೆ ನ್ಯಾಯಾಲಯಗಳ ಆದೇಶಗಳನ್ನು ಚುನಾವಣಾ ಅಧಿಕಾರಿಗಳು ಸೂಕ್ತವಾಗಿ ಪಾಲಿಸಿದ ಬಗ್ಗೆ ಸಂಶಯಗಳಿವೆ. ಪರಿಣಾಮವಾಗಿ ರಿಪಬ್ಲಿಕನ್ ವಕೀಲರು ನ್ಯಾಯಾಲಯಗಳ ಬಾಗಿಲನ್ನು ತಟ್ಟುವ ಪ್ರಯತ್ನವನ್ನು ಮುಂದುವರಿಸಿದರು. ಇದರಿಂದ, ರಿಪಬ್ಲಿಕನ್ನರ ಬೇಡಿಕೆಗಳನ್ನು ನ್ಯಾಯಾಲಯಗಳು ಮನ್ನಿಸುತ್ತಾ ಹೋದಲ್ಲಿ ಜನವರಿ 6ರವರೆಗೆ ಅಂದರೆ ನಿಯಮಗಳಿಗನುಸಾರವಾಗಿ ಶಾಸನಸಭೆ ‘ಕಾಂಗ್ರೆಸ್’ ತನ್ನ ಜಂಟಿ ಅಧಿವೇಶನದಲ್ಲಿ ಚುನಾವಣಾ ಫಲಿತಾಂಶವನ್ನು ಅಧಿಕೃತವಾಗಿ ಅಂಗೀಕರಿಸಲು ನಿಗದಿಯಾದ ದಿನದವರೆಗೆ, ಚುನಾವಣೆಯ ಅಂತಿಮ ಫಲಿತಾಂಶ ಹೊರಬರುವುದಿಲ್ಲ, ಇಬ್ಬರು ಅಭ್ಯರ್ಥಿಗಳಲ್ಲಿ ಯಾರೊಬ್ಬರೂ ಗೆಲ್ಲಲು ಅಗತ್ಯವಾದ 270ನ್ನು ದಾಟಲಾಗುವುದಿಲ್ಲ ಎಂಬಂತಾಯಿತು. ಆಗ ಅಧ್ಯಕ್ಷರ ಆಯ್ಕೆಯ ಜವಾಬ್ದಾರಿ ಕಾಂಗ್ರೆಸ್​ನ ಕೆಳಮನೆ ‘ಹೌಸ್ ಆಫ್ ರೆಪ್ರಸೆಂಟೇಟಿವ್ಸ್’ (ಪ್ರತಿನಿಧಿ ಸಭೆ) ಮೇಲೆ ಬೀಳುವಂತಾಗುತ್ತಿತ್ತು. ಆದರೆ ಇಲ್ಲಿ ಜರುಗುವ ವಿಚಿತ್ರ ಪರಿಸ್ಥಿತಿಯನ್ನು ಸಂವಿಧಾನಾತ್ಮಕ ಕಾನೂನುಗಳ ವಿಶೇಷಜ್ಞ ಪಾಲ್ ಏಂಗೆಲ್​ರ

    ಮಾತಿನಲ್ಲಿ ಹೇಳುವುದಾದರೆ, ಪ್ರತಿನಿಧಿ ಸಭೆಯಲ್ಲಿ ಈಗಿರುವ ಸದಸ್ಯರು ಅಧ್ಯಕ್ಷರನ್ನು ಆಯ್ಕೆ ಮಾಡುವಂತಿಲ್ಲ. ಅಂದರೆ ಪ್ರತಿನಿಧಿ ಸಭೆಯಲ್ಲಿ ತಾವು ಈಗ ಹೊಂದಿರುವ ಬಹುಮತ ಡೆಮೋಕ್ರಾಟಿಕರಿಗೆ ಯಾವ ಪ್ರಯೋಜನಕ್ಕೂ ಬರುತ್ತಿರಲಿಲ್ಲ! ಬದಲಾಗಿ, ಐವತ್ತು ರಾಜ್ಯಗಳೂ ಒಬ್ಬೊಬ್ಬ ಪ್ರತಿನಿಧಿಯನ್ನು ಇದಕ್ಕಾಗಿಯೆ ಕಳುಹಿಸಬೇಕಾಗುತ್ತಿತ್ತು. ರಿಪಬ್ಲಿಕನ್ನರ ಎಣಿಕೆ ಹೀಗಿತ್ತು- ಪ್ರಸಕ್ತ 24 ರಾಜ್ಯಗಳಲ್ಲಿ ರಿಪಬ್ಲಿಕನ್ ಗವರ್ನರ್​ಗಳಿರುವ ಜತೆ ರಾಜ್ಯ ಶಾಸನಸಭೆಗಳಲ್ಲೂ ಅವರದೇ ಬಹುಮತ ಇದೆ. ಡೆಮೋಕ್ರಾಟಿಗರಿಗೆ ಈ ಬಗೆಯ ಅನುಕೂಲ ಇರುವುದು ಕೇವಲ 15 ರಾಜ್ಯಗಳಲ್ಲಿ. ಉಳಿದ 11 ರಾಜ್ಯಗಳಲ್ಲಿ ಗವರ್ನರ್ ಒಂದು ಪಕ್ಷದವರಾದರೆ ಶಾಸನಸಭೆಗಳಲ್ಲಿ ಬಹುಮತವಿರುವುದು ಇನ್ನೊಂದು ಪಕ್ಷಕ್ಕೆ. ಹೀಗಾಗಿ ರಿಪಬ್ಲಿಕನ್ ಅಭ್ಯರ್ಥಿ ಟ್ರಂಪ್​ರಿಗೆ 24 ಮತಗಳು ನಿಶ್ಚಿತವೆನಿಸಿದ್ದವು. 11 ಮಿಶ್ರ ಆಡಳಿತದ ರಾಜ್ಯಗಳಲ್ಲಿ ಕನಿಷ್ಠ ಎರಡು ಮತಗಳು ಸಿಕ್ಕಿಬಿಟ್ಟರೆ ಅವರೇ ಮತ್ತೆ ಅಮೆರಿಕಾದ ಅಧ್ಯಕ್ಷರಾಗಲು ಸಾಧ್ಯವಿತ್ತು. ಇಂತಹದೊಂದು ಸನ್ನಿವೇಶವನ್ನು ಟ್ರಂಪ್ ಸೆಪ್ಟೆಂಬರ್​ನಲ್ಲೇ ಗುರುತಿಸಿದ್ದರು! ‘ಈ ಬಾರಿ ಅಧ್ಯಕ್ಷರನ್ನು ಆರಿಸುವುದು ಪ್ರತಿನಿಧಿ ಸಭೆಗೆ ಆ ಕಾರ್ಯನಿರ್ವಹಣೆಗಾಗಿಯೇ ವಿಶೇಷವಾಗಿ ಆರಿಸಿಬರುವ… ಸದಸ್ಯರು… ಅಲ್ಲಿ ನಾವು ಗೆಲ್ಲುತ್ತೇವೆ!’ ಎಂದು ಚುನಾವಣಾ ರ್ಯಾಲಿಯೊಂದರಲ್ಲಿ ಅವರು ಘೊಷಿಸಿದ್ದರು!

    ಆದರೆ ರಿಪಬ್ಲಿಕನ್ನರ ಎಲ್ಲ ಎಣಿಕೆಗಳು ತಲೆಕೆಳಕಾಗಿ, ಆ ಆರು ವಿವಾದಿತ ರಾಜ್ಯಗಳಲ್ಲಿ ಮತಮರುಎಣಿಕೆಯೂ ಪೂರ್ಣಗೊಂಡು, 2016ರಲ್ಲಿ ರಿಪಬ್ಲಿಕನ್ ಪರವಾಗಿದ್ದ ಅವೆಲ್ಲವೂ ಈಗ ಡೆಮೋಕ್ರಾಟಿಕರ ಪರವಾಗಿ ಮತ ಚಲಾಯಿಸಿದ್ದಾವೆಂದು ಘೊಷಣೆಯಾಗಿ, ಎಲೆಕ್ಟೊರಲ್ ಕಾಲೇಜ್​ನ 538 ಮತಗಳು ಮತಪೆಟ್ಟಿಗೆ ಸೇರಿ, ಅಂತಿಮ ಮತ ಎಣಿಕೆ ಕಾಂಗ್ರೆಸ್​ನ ಜಂಟಿ ಅಧಿವೇಶನದಲ್ಲಿ ವಿಧ್ಯುಕ್ತವಾಗಿ ಜರುಗಿ, ಹೊಸ ಅಧ್ಯಕ್ಷರ ಆಯ್ಕೆ ಅಧಿಕೃತವಾಗಿ ಘೊಷಣೆಯಾಗಬೇಕಾಗಿತ್ತು. ಅದಕ್ಕಾಗಿ ನಿಗದಿಯಾಗಿದ್ದ ದಿನ ಜನವರಿ 6.

    ತಮ್ಮೆಲ್ಲ ನ್ಯಾಯಿಕ ಪ್ರಯತ್ನಗಳು ವಿಫಲವಾಗಿ, ಜನವರಿ 6ರಂದು ಪ್ರತಿನಿಧಿ ಸಭೆಯಲ್ಲಿ ಟ್ರಂಪ್ ಮತ್ತೆ ಅಧ್ಯಕ್ಷರಾಗಿ ಆಯ್ಕೆಯಾಗುವ ಅವಕಾಶವೂ ಇಲ್ಲವಾಗಿ ರಿಪಬ್ಲಿಕನ್ನರು ರೊಚ್ಚಿಗೆದ್ದರು. ಹೀಗಾಗಿಯೇ ಅಧ್ಯಕ್ಷರ ಮಗ ಕಿರಿಯ ಡೊನಾಲ್ಡ್ ಟ್ರಂಪ್, ರಿಪಬ್ಲಿಕನ್ ವಕೀಲ ರೂಡಿ ಗಿಲಿಯಾನಿ ಸೇರಿದಂತೆ ಹಲವಾರು ರಿಪಬ್ಲಿಕನ್ ನಾಯಕರು ಚುನಾವಣಾ ಪ್ರಕ್ರಿಯೆ ಹಾಗೂ ಫಲಿತಾಂಶಗಳನ್ನು ಸಾರ್ವಜನಿಕವಾಗಿಯೇ ತಿರಸ್ಕರಿಸಿದರು ಮತ್ತು ತಮ್ಮ ‘ಹೋರಾಟ’ವನ್ನು ಜಾರಿಯಲ್ಲಿಡಲು ರಿಪಬ್ಲಿಕನ್ನರಿಗೆ ಕರೆನೀಡಿದರು. ಅಧ್ಯಕ್ಷ ಟ್ರಂಪ್ ಸಹ ಜನವರಿ 6ರ ‘ಅಮೆರಿಕಾವನ್ನು ರಕ್ಷಿಸಿ’ ರ್ಯಾಲಿಯಲ್ಲಿ, ತಮ್ಮದಾಗಿದ್ದ ವಿಜಯವನ್ನು ಡೆಮೋಕ್ರಾಟಿಗರು ‘ದೋಚಿದ್ದಾರೆ’ ಎಂದು ಆಪಾದಿಸಿ ಅನುಯಾಯಿಗಳ ಭಾವನೆಗಳನ್ನು ಉದ್ರೇಕಿಸಿದರು.

    ಇಲ್ಲಿ ಒಂದು ಪ್ರಶ್ನೆ ಎದುರಾಗುತ್ತದೆ. ನಮ್ಮಲ್ಲಿ ಸಾಮಾನ್ಯ ಜನರಿರಲಿ, ದೊಡ್ಡದೊಡ್ಡ ನಾಯಕರೇ ಪಕ್ಷ ಬದಲಾಯಿಸುತ್ತಾರೆ. ಆದರೆ ಅಮೆರಿಕನ್ನರು ಹಾಗಲ್ಲ. ಬಹುತೇಕರ ಪಕ್ಷನಿಷ್ಠೆ ತಲೆಮಾರುಗಳವರೆಗೆ ನಿರಂತರವಾಗಿ ಸಾಗುತ್ತದೆ. ಇಷ್ಟಾಗಿಯೂ, ಚುನಾವಣೆಗಳ ಸಮಯದಲ್ಲಿ ನಾಗರಿಕ ವಿಧಾನದಲ್ಲಿ ವ್ಯಕ್ತವಾಗುವ ಪಕ್ಷಭೇದ, ಚುನಾವಣೆಗಳು ಮುಗಿದು ಹೊಸ ಅಧ್ಯಕ್ಷ ಆಯ್ಕೆಯಾದೊಡನೇ ತಣ್ಣಗಾಗಿಹೋಗುತ್ತದೆ, ಮತದಾರರೂ ಎಲ್ಲ ಮರೆಯುತ್ತಾರೆ. ಸಾಮಾನ್ಯವಾಗಿ ಅಧ್ಯಕ್ಷರು ಯಾವ ಪಕ್ಷದವರೇ ಇರಲಿ, ಸರ್ಕಾರದ ಒಟ್ಟಾರೆ ನೀತಿಗಳಲ್ಲಿ ಹೇಳಿಕೊಳ್ಳುವಂತಹ ಮಾರ್ಪಾಡುಗಳೇನೂ ಇರುವುದಿಲ್ಲ; ಹೀಗಾಗಿ ಮತದಾರರು ಮತ್ತೆಮತ್ತೆ ತಮ್ಮ ಪಕ್ಷದ ಪರವಾಗಿ ಬೀದಿಗಿಳಿಯುವ ಸನ್ನಿವೇಶವೇ ಬರುವುದಿಲ್ಲ. ಆದರೆ ಈಗ ರಿಪಬ್ಲಿಕನ್ ಮತದಾರರು ಇಷ್ಟೇಕೆ ರೊಚ್ಚಿಗೆದ್ದರು? ಅಮಾಯಕರಾದ ಅವರನ್ನು ಟ್ರಂಪ್ ಮತ್ತಿತರ ರಿಪಬ್ಲಿಕನ್ ನಾಯಕರು ಉದ್ರೇಕಿಸಿದರು ಎಂದು ಹೇಳಿ ಕೈತೊಳೆದುಕೊಂಡುಬಿಡಬಹುದೇ? ಇಲ್ಲ, ಹಾಗೆ ಮಾಡುವುದು ಕಣ್ಣೆದುರಿಗಿನ ಎರಡು ಸತ್ಯಗಳಿಗೆ ಅಪಚಾರವೆಸಗಿದಂತೆ.

    ಅಮೆರಿಕನ್ನರಿಗೆ, ಜಗತ್ತಿಗೆ ಕಾಣುತ್ತಿದ್ದರೂ ಯಾರೂ ಗಂಭೀರವಾಗಿ ಪರಿಗಣಿಸಲು ನಿರಾಕರಿಸುತ್ತಿರುವ ಸೂಕ್ಷ್ಮ ವಿಷಯಗಳು ಎರಡು- 1. ಅಧ್ಯಕ್ಷೀಯ ಚುನಾವಣೆಗಳಲ್ಲಿ ನಿಜವಾಗಿಯೂ ನಡೆದಿರುವ ಅವ್ಯವಹಾರಗಳು, 2. ಚೀನಾ ಬಗ್ಗೆ ಬೈಡನ್ ನೀತಿ ದೇಶಕ್ಕೆ ಹಾನಿಕಾರಕವಾಗಬಹುದೆಂದು ರಿಪಬ್ಲಿಕನ್ನರು ಪಡುತ್ತಿರುವ ಆತಂಕ.

    ಅಮೆರಿಕನ್ನರು ತಮ್ಮ ಅಧ್ಯಕ್ಷನನ್ನು ನೇರವಾಗಿ ಆಯ್ಕೆ ಮಾಡುವುದಿಲ್ಲ. ಅವರು ಎಲೆಕ್ಟೊರಲ್ ಕಾಲೇಜ್​ಗೆ ಸದಸ್ಯರನ್ನು ಆಯ್ಕೆ ಮಾಡುತ್ತಾರೆ ಮತ್ತು ಆ ಎಲೆಕ್ಟೊರಲ್ ಕಾಲೇಜ್ ಅಧ್ಯಕ್ಷರನ್ನು ಆಯ್ಕೆ ಮಾಡುತ್ತದೆ. ಈ ಎಲೆಕ್ಟೊರಲ್ ಕಾಲೇಜ್ ಆಯ್ಕೆಗೆ ದೇಶಾದ್ಯಂತ ಒಂದೇ ನೀತಿನಿಯಮ ಇಲ್ಲ. ಕೆಲವು ರಾಜ್ಯಗಳಲ್ಲಿ ಮತಪತ್ರವನ್ನು ಮತದಾರ ತುಂಬಿಸಬೇಕಾಗುತ್ತದೆ ಮತ್ತು ನಂತರ ಆ ಮತಪತ್ರವನ್ನು ಸ್ಕಾ್ಯನ್ ಮಾಡಿ ಮತಯಂತ್ರದಲ್ಲಿ ಸೇರಿಸಲಾಗುತ್ತದೆ. ಹೀಗಾಗಿ ಅಲ್ಲಿ ಡಿಜಿಟಲ್ ಮತದ ಜತೆ ಪೇಪರ್ ಟ್ರೇಲ್ ಸಹ ಇದ್ದು ವಿವಾದವಾದಾಗ ತಾಳೆ ನೋಡಲು ಅವಕಾಶವಿರುತ್ತದೆ. ಇನ್ನು ಕೆಲವು ರಾಜ್ಯಗಳಲ್ಲಿ ಡಿಜಿಟಲ್ ಮತಯಂತ್ರಗಳು ಮಾತ್ರ ಬಳಕೆಯಾಗುತ್ತವೆ. ಈ ವ್ಯವಸ್ಥೆಯಿರುವ 29 ರಾಜ್ಯಗಳಲ್ಲಿ ಬಳಕೆಯಾದದ್ದು ‘ಡೊಮಿನಿಯನ್ ವೋಟಿಂಗ್ ಸಿಸ್ಟಂ ಕಾರ್ಪೆರೇಶನ್’ ತಯಾರಿಸಿದ ಮತಯಂತ್ರಗಳು. ಈ ಡೊಮಿನಿಯನ್ ಮತಯಂತ್ರಗಳ ವ್ಯವಸ್ಥೆ ಬಗ್ಗೆ ಒಂದು ಪ್ರಶ್ನೆಯೆದ್ದಿದೆ. ಮತಯಂತ್ರಗಳಲ್ಲಿ ದಾಖಲಾದ ಡಿಜಿಟಲ್ ಮತಗಳು ಜರ್ಮನಿಯಲ್ಲಿರುವ ಡಿಜಿಟಲ್ ಸಂಸ್ಕರಣಾ ಕೇಂದ್ರಕ್ಕೆ ಆನ್​ಲೈನ್ ಮೂಲಕ ರವಾನೆಯಾಗುತ್ತವಂತೆ. ಆ ಪ್ರಕ್ರಿಯೆಯಲ್ಲಿ ಯಾವುದೇ ಅಭ್ಯರ್ಥಿಯ ಪರ ಅಥವಾ ವಿರೋಧವಾದ ಮತಗಳನ್ನು ಡಿಲೀಟ್ ಮಾಡಲು ಸಾಧ್ಯವಿದೆ ಎಂಬ ಆಪಾದನೆ ಕೇಳಿಬರುತ್ತಿದೆ. ಡೊಮಿನಿಯನ್ ಕಾರ್ಪೆರೇಶನ್​ನ ಮಾತೃಸಂಸ್ಥೆ ವೆನಿಜ್ಯುಯೇಲಾದ ಸ್ಮಾರ್ಟ್​ಮ್ಯಾಟಿಕ್. ವೆನಿಜ್ಯುಯೇಲಾದ ಎಡಪಂಥೀಯ ಸರ್ಕಾರ ಅಮೆರಿಕಾ ಬಗ್ಗೆ ಹೊಂದಿರುವ ಅಸಹನೆಯ ಹಿನ್ನೆಲೆಯಲ್ಲಿ ಈ ಸುದ್ದಿ ಸಾಕಷ್ಟು ಅಮೆರಿಕನ್ನರನ್ನು ಕಂಗೆಡಿಸಿದೆ. ಈಗ ಸ್ಮಾರ್ಟ್​ಮ್ಯಾಟಿಕ್ ಜತೆ ಡೊಮಿನಿಯನ್​ಗೆ ಯಾವುದೇ ಸಂಪರ್ಕ ಇಲ್ಲವೆಂದೂ, ಜರ್ಮನಿಯ ಸಂಸ್ಕರಣಾ ಕೇಂದ್ರದಲ್ಲಿ ಯಾವುದೇ ಅವ್ಯವಹಾರ ಸಾಧ್ಯವಿಲ್ಲವೆಂದೂ ವರದಿಗಳು ಬರುತ್ತಿದ್ದರೂ ಬಹುತೇಕರ ಸಂಶಯಗಳು ಪೂರ್ಣವಾಗಿ ನಿವಾರಣೆಯಾಗಿಲ್ಲ. ತಮ್ಮ ರಾಜಕೀಯ ಭವಿಷ್ಯವನ್ನು ಆ ಮೂಲಕ ಅಮೆರಿಕಾದ ಭವಿಷ್ಯವನ್ನು ಹೊರಗಿನವರು ನಿರ್ದೇಶಿಸುತ್ತಿದ್ದಾರೆ ಎಂಬ ಆತಂಕ ಹಲವರಲ್ಲಿದೆ. ಮುಖ್ಯವಾಗಿ ಅಮೆರಿಕಾದ ಮಾಧ್ಯಮಗಳೇ ನಂಬಿಕೆ ಕಳೆದುಕೊಳ್ಳುತ್ತಿವೆ. ‘ನ್ಯೂಯಾರ್ಕ್ ಟೈಮ್್ಸ’ ಸೇರಿದಂತೆ ಪ್ರಮುಖ ಪತ್ರಿಕೆಗಳು ಎಡ-ಪ್ರಗತಿಪರ ಪ್ರಭಾವಕ್ಕೊಳಗಾಗಿರುವುದು ಸರ್ವವಿದಿತ. ನಮ್ಮಲ್ಲಿ ಅಸಹಿಷ್ಣುತೆ ತಾಂಡವವಾಡುತ್ತಿದೆ, ಹಿಂದೂಗಳು ಕೋಮುವಾದಿಗಳಾಗಿದ್ದಾರೆ ಎಂದು ಹಿಂದೆ ಬೊಬ್ಬಿಟ್ಟದ್ದು ಇವೇ ಪತ್ರಿಕೆಗಳು. ಇತ್ತೀಚಿನ ದಶಕಗಳಲ್ಲಿ ಡೆಮೋಕ್ರಾಟಿಕ್ ಪಕ್ಷ ಸಹ ಎಡ ವಿಚಾರಧಾರೆಗೆ ಹತ್ತಿರಾಗಿ ಬದಲಾಗುತ್ತಿರುವುದರಿಂದ ಸಂಪ್ರದಾಯವಾದಿ ಅಮೆರಿಕನ್ನರು ಇಡೀ ಚುನಾವಣಾ ಪ್ರಕ್ರಿಯೆಯಲ್ಲಿ ಡೆಮೋಕ್ರಾಟಿಕ್ ಪಕ್ಷ ಹಾಗೂ ಎಡ-ಪ್ರಗತಿಪರ ಮಾಧ್ಯಮಗಳ ನಡುವೆ ಅನೈತಿಕ ಸಂಬಂಧವಿದೆಯೆಂದು ಸಂಶಯಿಸುತ್ತಿದ್ದಾರೆ.

    ಅ ಭಾವನೆಗೆ ಇಂಬುಗೊಡುವ ಪ್ರಕರಣ ಜನವರಿ 5ರಂದೇ ಎಲ್ಲರೆದುರಿಗೆ ಘಟಿಸಿಹೋಯಿತು. ಅಂದು ಜಾರ್ಜಿಯಾ ರಾಜ್ಯದಲ್ಲಿ ನಡೆದ ಸೆನೆಟ್ ಚುನಾವಣೆಯ ಮತ ಎಣಿಕೆ ನಡೆಯುತ್ತಿತ್ತು. ಎಬಿಸಿ ವಾಹಿನಿ ಒಂದು ಹಂತದಲ್ಲಿ ಪ್ರಸಾರ ಮಾಡಿದ ವರದಿಯ ಪ್ರಕಾರ ಡೆಮೋಕ್ರಾಟಿಕ್ ಅಭ್ಯರ್ಥಿ ಜೋನ್ ಒಸಾಪ್ ಅವರಿಗೆ 9,45,050 ಮತಗಳೂ, ರಿಪಬ್ಲಿಕನ್ ಅಭ್ಯರ್ಥಿ ಡೇವಿಡ್ ಪೆರ್ದ್ಯೂ ಅವರಿಗೆ 7,74,723 ಮತಗಳೂ ಸಂದಿದ್ದವು. ಕೆಲವು ನಿಮಿಷಗಳ ನಂತರ ಕಾಣಿಸಿಕೊಂಡ ಅಂಕಿಅಂಶಗಳಲ್ಲಿ ಒಸಾಪ್ ಗಳಿಸಿದ್ದ ಮತಸಂಖ್ಯೆಯಲ್ಲಿ ಯಾವುದೇ ಬದಲಾವಣೆಯಾಗಿರಲಿಲ್ಲ. ಆದರೆ ಪೆರ್ದ್ಯೂ ಗಳಿಸಿದ ಮತಸಂಖ್ಯೆ 7,42,323 ಎಂದಿತ್ತು, ಅಂದರೆ ಬರೋಬ್ಬರಿ 32,400 ಮತಗಳು ಮಾಯವಾಗಿದ್ದವು! ಸಿಎನ್​ಎನ್ ತೋರಿಸಿದ ಎರಡು ವಿವಿಧ ಹಂತಗಳ ಅಂಕಿಅಂಶಗಳಲ್ಲೂ ಪೆರ್ದ್ಯೂ ಅವರ 5,000 ಮತಗಳು ಏಕಾಏಕಿ ಗಾಯಬ್ ಆದವು! ಇದು ವಾರ್ತಾವಾಹಿನಿಗಳ ತಾಂತ್ರಿಕ ದೋಷವಲ್ಲದೇ ಇದ್ದಲ್ಲಿ ರಿಪಬ್ಲಿಕನ್ ಅಭ್ಯರ್ಥಿಯ ವಿರುದ್ಧ ಚುನಾವಣಾಧಿಕಾರಿಗಳು ಕೆಲಸ ಮಾಡುತ್ತಿದ್ದರೆಂದೇ ಹೇಳಬೇಕಾಗುತ್ತದೆ. ನವೆಂಬರ್ 3ರಂದು ನಡೆದಿದ್ದ ಮೊದಲ ಮತದಾನದಲ್ಲಿ ಒಸಾಪ್​ಗಿಂತ ಪೆರ್ದ್ಯೂ 1.78% ಹೆಚ್ಚು ಮತಗಳನ್ನು ಗಳಿಸಿದ್ದರು. ಡೆಮೋಕ್ರಾಟಿಕ್ ಅಭ್ಯರ್ಥಿಯನ್ನು ಗೆಲ್ಲಿಸಲು ಜಾರ್ಜಿಯಾದ ಚುನಾವಣಾಧಿಕಾರಿಗಳು ಕಟಿಬದ್ಧರಾಗಿದ್ದರು ಅನಿಸುತ್ತದೆ. ಹೀಗಾಗಿ ಸೆನೆಟ್​ನಲ್ಲಿ ಈಗ ಎರಡೂ ಪಕ್ಷಗಳಿಗೂ ತಲಾ 50 ಸ್ಥಾನಗಳು ಸಿಕ್ಕಿದಂತಾಗಿವೆ. ಉಪಾಧ್ಯಕ್ಷೆಯಾಗಲಿರುವ ಕಮಲಾ ಹ್ಯಾರಿಸ್ ಸೆನೆಟ್​ನ ಅಧ್ಯಕ್ಷೆಯೂ ಆಗುವುದರಿಂದ ಮಸೂದೆಗೆ ಸಂಬಂಧಿಸಿದಂತೆ ಆಕೆಯ ಮತವೂ ಡೆಮೋಕ್ರಾಟಿಕ್ ಪಕ್ಷದ ಪರವಾಗಿರುತ್ತದೆ ಮತ್ತು ಆ ಕಾರಣದಿಂದಾಗಿ ಡೆಮೋಕ್ರಾಟಿಕರು ಸೂಚಿಸಿದ ಮಸೂದೆ 51:50 ಮತಗಳಿಂದ ಆಂಗೀಕೃತಗೊಳ್ಳುತ್ತದೆ, ರಿಪಬ್ಲಿಕನ್ನರು ಮಂಡಿಸಿದ ಮಸೂದೆ 51:50 ಅಂತರದಿಂದ ತಿರಸ್ಕೃತಗೊಳ್ಳುತ್ತದೆ. ಅಂದರೆ ಸೆನೆಟ್ ಈಗ ಡೆಮೋಕ್ರಾಟಿಗರ ಹಿಡಿತದಲ್ಲಿ! ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್​ನಲ್ಲಿ ಈಗಾಗಲೇ ಅವರು ಬಹುಮತ ಹೊಂದಿದ್ದಾರೆ, ರಾಷ್ಟ್ರಾಧ್ಯಕ್ಷ ಬೈಡನ್ ಸಹ ಡೆಮೋಕ್ರಾಟಿಕ್; ಇದೆಲ್ಲದರ ಅರ್ಥ ಕಾರ್ಯಾಂಗ, ಶಾಸಕಾಂಗ ಎಲ್ಲವೂ ಡೆಮೋಕ್ರಾಟಿಗರ ಹಿಡಿತದಲ್ಲಿ! ರಿಪಬ್ಲಿಕನ್ನರಿಗೆ ಯಾವುದೇ ಅಧಿಕಾರ ಇರುವುದಿಲ್ಲ. ಡೆಮೋಕ್ರಾಟಿಗರು ಈ ಬಗೆಯಲ್ಲಿ ಅಧಿಕಾರ ಕೇಂದ್ರೀಕರಿಸಿಕೊಳ್ಳಲು ಅಮೆರಿಕಾದ ರಾಜಕಾರಣಿಗಳು, ಮಾಧ್ಯಮ, ನ್ಯಾಯಾಂಗ ಒಟ್ಟಾರೆ ಇಡೀ ವ್ಯವಸ್ಥೆ ಅವಕಾಶ ಮಾಡಿಕೊಟ್ಟಿರುವುದು ಸಹಜವಾಗಿಯೇ ಆತಂಕಕಾರಿ ವಿಷಯ.

    ಇನ್ನು ಚೀನಾ ಕುರಿತಂತೆ ಹೇಳುವುದಾದರೆ, ಲೋಕಕಂಟಕವಾದ ಅಲ್ಲಿನ ಷಿ ಜಿನ್​ಪಿಂಗ್ ಸತ್ತೆಯ ವಿರುದ್ಧ ಟ್ರಂಪ್ ಇದುವರೆಗೆ ತೆಗೆದುಕೊಂಡಿರುವ ಆರ್ಥಿಕ, ರಾಜತಾಂತ್ರಿಕ ಹಾಗೂ ಸೇನಾ ಕ್ರಮಗಳನ್ನು ಬೈಡನ್ ಅದೇ ಮಟ್ಟದಲ್ಲಿ ಮುಂದುವರಿಸುವ ಬಗ್ಗೆ ಅನುಮಾನಗಳಿವೆ. ಹಾಗಾದ ಪಕ್ಷದಲ್ಲಿ ಏಟು ತಿಂದಿರುವ ಚೀನೀ ನಾಗರ ಮತ್ತೆ ಶಕ್ತಿಗೂಡಿಸಿಕೊಳ್ಳುತ್ತದೆ, ಸಮಯ ನೋಡಿ ಅಮೆರಿಕಾ ಮೇಲೆ ಎರಗುತ್ತದೆ ಎಂಬ ಆತಂಕವೂ ಅಮೆರಿಕನ್ನರನ್ನು ಕಾಡುತ್ತಿದೆ.

    ಜನವರಿ 6ರ ಅಹಿತಕರ ಘಟನೆಗಳು ನಡೆದದ್ದು ಈ ಹಿನ್ನೆಲೆಯಲ್ಲಿ. ಅಂದಿನ ಘಟನೆಗಳು ಅತ್ಯಂತ ವಿಷಾದಕರ ನಿಜ, ಆದರೆ ಅದಕ್ಕೆ ಕಾರಣವಾದ ಬೆಳವಣಿಗೆಗಳನ್ನು ನಿರ್ಲಕ್ಷಿಸಿದರೆ ನಾಳೆ ಒಂದು ರಾಷ್ಟ್ರವಾಗಿ ಅಮೆರಿಕಾ ದೊಡ್ಡ ಮಟ್ಟದಲ್ಲಿ ವಿಷಾದಪಡಬೇಕಾಗುತ್ತದೆ.

    (ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts