More

    ರಾಜಸ್ಥಾನದಲ್ಲಿ ಕಾಂಗ್ರೆಸ್​ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಕೇಂದ್ರದಲ್ಲಿ ಸರ್ಕಾರ ರಚಿಸಲಿದೆ: ಮಲ್ಲಿಕಾರ್ಜುನ ಖರ್ಗೆ

    ಜೈಪುರ: ರಾಜಸ್ಥಾನದಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ 2024ರಲ್ಲಿ ನಾವು ಕೇಂದ್ರದಲ್ಲಿ ಸರ್ಕಾರ ರಚಿಸಲಿದ್ದೇವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

    ಪೂರ್ವ ರಾಜಸ್ಥಾನದ ಬಾರನ್​ ಜಿಲ್ಲೆಯಲ್ಲಿ ERCP ಜಾಗೃತಿ ಅಭಿಯಾನ ಹಾಗೂ ಚುನಾವಣಾ ಪ್ರಚಾರ ಕಾರ್ಯವನ್ನು ಉದ್ಘಾಟಿಸಿ ಮಾತನಾಡಿದ ಖರ್ಗೆ, ಬಿಜೆಪಿಯವರು ಪದೇ ಪದೇ ಪ್ರಸ್ತಾಪಿಸುತ್ತಿರುವ ಕೆಂಪು ಡೈರಿಯಲ್ಲಿಯೂ ಸಹ ಕಾಂಗ್ರೆಸ್​ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ಬರೆಯಲಾಗಿದೆ. ಈ ವಿಚಾರ ಅವರಿಗೆ ಗೊತ್ತಿರುವುದರಿಂದ ಅವರು ಪದೇ ಪದೇ ಕೆಂಪು ಡೈರಿ ವಿಚಾರವನ್ನು ಪ್ರಸ್ತಾಪಿಸುತ್ತಿದ್ದಾರೆ ಎಂದು ಪರೋಕ್ಷವಾಗಿ ಚಾಟಿ ಬೀಸಿದ್ದಾರೆ.

    ರಾಜಸ್ಥಾನದಲ್ಲಿ ಕಾಂಗ್ರೆಸ್​ ಸರ್ಕಾರವು ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರೋಗ್ಯದಂತಹ ಕ್ಷೇತ್ರದಲ್ಲಿ ರಾಜ್ಯವನ್ನು ಮುಂದಕ್ಕೆ ಕೊಂಡೊಯ್ದಿದೆ. ರಾಜಸ್ಥಾನದಲ್ಲಿನ ಕಾಂಗ್ರೆಸ್​ ಸರ್ಕಾರವು ಇಲ್ಲಿನ ಬಡವರಿಗಾಗಿ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಇದೆಲ್ಲವನ್ನೂ ನಾವು ಸಾರ್ವಜನಿಕವಾಗಿಯೇ ಮಾಡಿದ್ದೇವೆ.

    ಇದನ್ನೂ ಓದಿ: ಎನ್​ಡಿಎ ಮೈತ್ರಿಕೂಟಕ್ಕೆ ಜೆಡಿಎಸ್​ ಸೇರುವುದಿಲ್ಲ; ಪಕ್ಷ ವಿಭಜನೆಯ ಸುಳಿವು ನೀಡಿದ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ

    ಚುನಾವಣೆಯ ಹೊಸ್ತಿಲಲ್ಲಿ ಬಿಜೆಪಿಯವರು ಕಾಂಗ್ರೆಸ್​ ಯೋಜನೆಗಳನ್ನು ನಕಲು ಮಾಡಲು ಯತ್ನಿಸುತ್ತಿದ್ದು, ಕರ್ನಾಟಕದಲ್ಲಿ ನಮ್ಮ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳನ್ನು ಅವರು ಇಲ್ಲಿ ಜಾರಿ ಮಾಡುವುದಾಗಿ ಹೇಳುತ್ತಿದ್ದಾರೆ. ರಾಜಸ್ಥಾನದಲ್ಲಿ ಅಶೋಕ್​ ಗೆಹ್ಲೋಟ್​ ಕಳೆದ ಚುನಾವಣೆ ಸಮಯದಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸಿದ್ದಾರೆ. ಆದರೆ, ಪ್ರಧಾನಿ ಮೋದಿಯವರು ನೀಡಿದ್ದ ಯಾವ ಭರವಸೆಗಳನ್ನು ಈಡೇರಿಸಿದ್ದಾರೆ ಎಂಬುದನ್ನು ಬಿಜೆಪಿಯವರು ತೋರಿಸಲಿ.

    ಪ್ರಧಾನಿ ಮೋದಿ ಇತ್ತೀಚಿನ ತಮ್ಮ ಭಾಷಣಗಳಲ್ಲಿ ಕೆಂಪು ಡೈರಿಯ ವಿಚಾರವನ್ನು ಉಲ್ಲೇಖಿಸುತ್ತಿದ್ದಾರೆ. ಅದು ಒಮ್ಮೆ ಬಹಿರಂಗವಾದರೆ ಬಹುಕೋಟಿ ಅಕ್ರಮ ಹಾಗೂ ಹಲವು ಭ್ರಷ್ಟಾಚಾರ ಪ್ರಕರಣಗಳು ಬಯಲಾಗುತ್ತವೆ ಎಂದು ಪ್ರಧಾನಿ ಮೋದಿ ಆರೋಪಿಸಿದ್ದಾರೆ. ಒಂದು ವೇಳೆ ಕೆಂಪು ಡೈರಿ ಬಹಿರಂಗಗೊಂಡರೆ ರಾಜ್ಯದಲ್ಲಿ ಕಾಂಗ್ರೆಸ್​ ಮತ್ತೊಮ್ಮೆ ಅಧಿಕಾರಕ್ಕೆ ಬರುವುದು ನಿಶ್ಚಿತ. ರಾಜಸ್ಥಾನದಲ್ಲಿ ಮತ್ತೊಮ್ಮೆ ಕಾಂಗ್ರೆಸ್​ ಸರ್ಕಾರ ರಚಿಸಲಿದೆ ಎಂದು ಆ ಡೈರಿಯಲ್ಲಿ ಬರೆಯಲಾಗಿದೆ ಎಂದು ಕುಟುಕಿದ್ದಾರೆ.

    ಜಾತಿ ಗಣತಿ ನಡೆಸಬೇಕು ಮತ್ತು ಹಿಂದುಳಿದವರಿಗೂ ಸಮಾಜದಲ್ಲಿ ಆದ್ಯತೆ ದೊರೆಯಬೇಕೆಂದು ನಾವು ಹೇಳಿದ್ದೆವು. ಆದರೆ, ಪ್ರಧಾನಿ ಮೋದಿ ನಾವು ಜಾತಿಗಣತಿ ಎಂಬ ಹೆಸರಿನಲ್ಲಿ ಸಮಾಜವನ್ನು ವಿಭಜಿಸುತ್ತಿದ್ದೇವೆ ಎಂದು ಆರೋಪಿಸಿದ್ದಾರೆ. ನಾವು ಪ್ರತಿಬಾರಿಯೂ ಜನರ ಪರವಾಗಿ ಧ್ವನಿ ಎತ್ತಿದಾಗಲೆಲ್ಲಾ ಇವರು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಹೀಗೆ ಆದಲ್ಲಿ ಜನರೇ ಮುಂದಿನ ದಿನಗಳಲ್ಲಿ ನಿಮಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts