More

    ಬೈಂದೂರಲ್ಲಿ ಐಟಿಐ ಕಾಲೇಜು, ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಮಾಹಿತಿ

    ಬೈಂದೂರು: ಶೈಕ್ಷಣಿಕ ಅಭಿವೃದ್ಧಿ ಉದ್ದೇಶದಿಂದ ಬೈಂದೂರಿನಲ್ಲಿ ಐಟಿಐ ಕಾಲೇಜು ಸ್ಥಾಪನೆಗೆ ಸರ್ಕಾರದ ಮಟ್ಟದಲ್ಲಿ ಕಡತಗಳನ್ನು ಶೀಘ್ರ ವಿಲೇವಾರಿ ಮಾಡಿ ಮೂರು ಎಕರೆ ಜಾಗ ಮಂಜೂರು ಮಾಡಲಾಗಿದೆ. ಇಲ್ಲಿಯ ತನಕ ಐಟಿಐ ಕಾಲೇಜು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈಗ ಅದರ ಸ್ವಂತ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿರುವುದಲ್ಲದೇ ಇಲ್ಲಿ ಹೆಚ್ಚುವರಿ ಕೋರ್ಸ್‌ಗಳನ್ನು ಆರಂಭಿಸಲು ಯೋಜನೆ ರೂಪಿಸಲಾಗಿದೆ ಎಂದು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

    ಮಂಗಳವಾರ ಇಲ್ಲಿನ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಸುಮಾರು ಎರಡು ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಐಟಿಐ ಕಾಲೇಜಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
    ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸೆಲ್ವಂ ಕುಮಾರ್ ಮಾತನಾಡಿ, ರಾಜ್ಯದಲ್ಲಿ ಸುಮಾರು 1111 ಖಾಸಗಿ, 190 ಅನುದಾನಿತ ಹಾಗೂ 270 ಸರ್ಕಾರಿ ಐಟಿಐ ಕಾಲೇಜುಗಳಿದ್ದು, ಟಾಟಾ ಸಂಸ್ಥೆಯ ಸಹಯೋಗದೊಂದಿಗೆ ಬೈಂದೂರು ಸೇರಿದಂತೆ 150 ಸರ್ಕಾರಿ ಐಟಿಐ ಕಾಲೇಜುಗಳನ್ನು ಮೇಲ್ದರ್ಜೆಗೇರಿಸಲು ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ಟಾಟಾ ಸಂಸ್ಥೆ 4500 ಕೋಟಿ ರೂ.ವಿನಿಯೋಗಿಸಲಿದ್ದು, ರಾಜ್ಯ ಸರ್ಕಾರವೂ 650 ಕೋಟಿ ರೂ.ಅನುದಾನ ಒದಗಿಸಿದ್ದು, ಅದು ಅನುಮೋದನೆಯ ಹಂತದಲ್ಲಿದೆ ಎಂದರು.

    ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ರಾಜಪ್ಪ, ಜಿಪಂ ಸದಸ್ಯರಾದ ಕೆ. ಬಾಬು ಶೆಟ್ಟಿ, ಶಂಕರ ಪೂಜಾರಿ, ಸುರೇಶ ಬಟವಾಡಿ, ತಾಪಂ ಉಪಾಧ್ಯಕ್ಷೆ ಮಾಲಿನಿ ಕೆ., ಸದಸ್ಯರಾದ ಪುಷ್ಪರಾಜ್ ಶೆಟ್ಟಿ, ಸುಜಾತ ದೇವಾಡಿಗ, ಗಿರಿಜಾ ಖಾರ್ವಿ, ಬೈಂದೂರು ಬಿಜೆಪಿ ಅಧ್ಯಕ್ಷ ದೀಪಕ್‌ಕುಮಾರ ಶೆಟ್ಟಿ, ಎಸಿ ರಾಜು ಕೆ., ಕಾಲೇಜಿನ ಪ್ರಾಂಶುಪಾಲ ಡಾ. ರಘು ನಾಯ್ಕ ಮತ್ತಿತರರು ಉಪಸ್ಥಿತರಿದ್ದರು. ಬೈಂದೂರು ಐಟಿಐ ಕಾಲೇಜು ಪ್ರಾಂಶುಪಾಲ ಜಗದೀಶ ಸ್ವಾಗತಿಸಿ, ಗಣಪತಿ ಹೋಬಳಿದಾರ್ ನಿರೂಪಿಸಿದರು.

    ಕಾರ್ಯಕ್ರಮಕ್ಕೂ ಮೊದಲು ನಿರ್ಮಾಣ ಹಂತದಲ್ಲಿರುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಕಾಮಗಾರಿ ಪರಿಶೀಲನೆ ಮತ್ತು ಟ್ರೀ ಪಾರ್ಕ್ ಹಾಗೂ ಶ್ರೀ ಮೂಕಾಂಬಿಕಾ ಇಕೋ ಕಾರಿಡಾರ್ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

    ಮುಖ್ಯಮಂತ್ರಿಗೆ ಬೈಂದೂರು ಕ್ಷೇತ್ರದ ಬಗ್ಗೆ ವಿಶೇಷ ಮಮತೆ ಇದ್ದು, ಅವರ ಪುತ್ರ ಇಲ್ಲಿನ ಸಂಸದರಾಗಿರುವುದು ಕ್ಷೇತ್ರದ ಅಭಿವೃದ್ಧಿಗೆ ಹೊಸ ಶಕ್ತಿ ದೊರೆತಂತಾಗಿದೆ. ಬೈಂದೂರು ಕ್ಷೇತ್ರದಲ್ಲಿ ಹಿಂದೆಂದೂ ಕಾಣದ ಅಭಿವೃದ್ಧಿ ಕಾರ್ಯಗಳು ಈ ಸಮಯದಲ್ಲಿ ಸಾಕಾರಗೊಂಡಿವೆ. ಒಂದು ಸಾವಿರ ಕೋಟಿ ರೂ.ಗೂ ಅಧಿಕ ಕಾಮಗಾರಿಗಳು ಪ್ರಗತಿಯ ಹಂತದಲ್ಲಿದೆ.
    – ಬಿ.ಎಂ. ಸುಕುಮಾರ ಶೆಟ್ಟಿ, ಬೈಂದೂರು ಶಾಸಕ

    ಪ್ರವಾಸೋದ್ಯಮ ಅಭಿವೃದ್ಧಿಗೆ ಚಿಂತನೆ: ಬೈಂದೂರು ಕ್ಷೇತ್ರದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಫುಲ ಅವಕಾಶಗಳಿವೆ ಎಂದು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. ಮಂಗಳವಾರ ವತ್ತಿನೆಣೆ ಕ್ಷಿತಿಜ ನೇಸರಧಾಮದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು 25 ಕೋಟಿ ಅನುದಾನದಲ್ಲಿ ಸೋಮೇಶ್ವರ ಬೀಚ್ ಅಭಿವೃದ್ಧಿ, ಥೀಮ್ ಪಾರ್ಕ್, ತಾರಾಪತಿಯಲ್ಲಿ ನದಿ ಮತ್ತು ಸಮುದ್ರದ ಮದ್ಯೆ ಸೇತುವೆ ನಿರ್ಮಾಣ, ಟ್ರೀ ಪಾರ್ಕ್, ಸೀವಾಕ್, ಬೋಟಿಂಗ್ ಮುಂತಾದ ಯೋಜನೆ ರೂಪಿಸಿ ಅಭಿವೃದ್ಧಿಪಡಿಸುವ ಚಿಂತನೆ ಹಾಗೂ ಏರ್‌ಲಿಫ್ಟ್ ಸೇರಿದಂತೆ ವಿವಿಧ ಯೋಜನೆ ಅನುಷ್ಠಾನದ ಕುರಿತು ನೀಲಿನಕ್ಷೆ ರೂಪಿಸಲಾಗುತ್ತದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts