More

  ಸಹನೀಯ ಗುಣಗಳೇ ಸಂತ ಸೇವಾಲಾಲ್ ಅವರನ್ನು ಮಹಾಗುರುವನ್ನಾಗಿಸಿತು

  ಶಿಕಾರಿಪುರ: ಜಗದ್ಗುರು ಸಂತ ಸೇವಾಲಾಲರು ಪಾದಯಾತ್ರೆಯ ಮೂಲಕವೇ ದೇಶ ಪರ್ಯಟನೆ ಮಾಡಿ, ಸಮುದಾಯದಲ್ಲಿ ಜಾಗೃತಿ ಮೂಡಿಸಿದ ಸಂತರು. ಅವರ ಸಹನೀಯ ಗುಣಗಳೇ ಅವರನ್ನು ಮಹಾಗುರುವನ್ನಾಗಿ ಮಾಡಿತು ಎಂದು ಇಒ ಪರಮೇಶ್ ಹೇಳಿದರು.

  ತಾಪಂ ಸಭಾಂಗಣದಲ್ಲಿ ಬಂಜಾರ ಸಮುದಾಯ ಮತ್ತು ತಾಲೂಕು ಆಡಳಿತ ಗುರುವಾರ ಆಯೋಜಿಸಿದ್ದ ಸಂತ ಸೇವಾಲಾಲ್ ಜಯಂತಿಯಲ್ಲಿ ಮಾತನಾಡಿ, ಧಾರ್ಮಿಕ ಚಿಂತನೆಗಳಿಂದ ಶ್ರೀಸಾಮಾನ್ಯರಾದ ಶ್ರೀ ಸಂತ ಸೇವಾಲಾಲರು ಆಧ್ಯಾತ್ಮ ಪ್ರಪಂಚದ ಶ್ರೇಷ್ಠ ವ್ಯಕ್ತಿಯಾಗಿ ಬಂಜಾರ ಸಮಾಜದ ಜಗದ್ಗುರುವಾದರು. ಬುಡಕಟ್ಟು ಜನಾಂಗಗಳಿರುವ ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಸಂಚರಿಸಿ ಸಮುದಾಯದ ಅಭಿವೃದ್ಧಿಗೆ ಪೂರಕವಾಗಿ ಶೈಕ್ಷಣಿಕ ಪ್ರಗತಿ ಸಾಧಿಸಲು ಶಕ್ತಿಮೀರಿ ಪ್ರಯತ್ನಿಸಿದರು ಎಂದರು.
  ಬಂಜಾರ ಸಮುದಾಯ ಒಂದು ವಿಶಿಷ್ಟ ವಾದ ಸಾಂಪ್ರದಾಯಿಕ ಶೈಲಿಯ ಬದುಕು ಕಟ್ಟಿಕೊಂಡಿರುವ ಸಮಾಜ. ವಿಭಿನ್ನವಾದ ಉಡುಪು ಮತ್ತು ಆಚರಣೆಗಳಿಂದ ಜನಮನ ಸೆಳೆದಂತಹ ಸಮಾಜ. ಈ ಮಣ್ಣಿನ ಸಂಸ್ಕೃತಿಯನ್ನು ತಮ್ಮ ಗಮನಾರ್ಹ ಶೈಲಿಗಳಿಂದ ತೆರೆದಿಡುತ್ತಿರುವ ಸಮಾಜ. ಅನೇಕತೆಯಲ್ಲಿ ಏಕತೆ ಕಂಡ ಈ ನಾಡಿನಲ್ಲಿ ವೈವಿಧ್ಯತೆಯ ಸಮುದಾಯವೆಂದರೆ ಅದು ಬಂಜಾರ ಸಮಾಜ ಎಂದು ಬಣ್ಣಿಸಿದರು.
  ಉಪನ್ಯಾಸಕ ಚಂದ್ರು ಎಸ್ ನಾಯ್ಕ ಮಾತನಾಡಿ, ಅತ್ಯಂತ ಪರಿಶ್ರಮಿ ಮತ್ತು ಸ್ವಾಭಿಮಾನಿ ಸಮುದಾಯ ಬಂಜಾರ ಸಮುದಾಯ. ಅವರ ಭಾಷೆಯ ಶೈಲಿ ಆಕರ್ಷಣೀಯ. ಅವರ ನಾಡಪ್ರೇಮ ಅದ್ಭುತವಾದದ್ದು. ಅವರು ಅತ್ಯಂತ ಪರಾಕ್ರಮಿಗಳೂ ಹೌದು. ನಿರಂತರವಾಗಿ ಅತ್ಯಂತ ಹಿಂದುಳಿದಂತಹ ಈ ಸಮುದಾಯ ಪ್ರಕೃತಿ ಮತ್ತು ಕೃಷಿ ಪ್ರಿಯರು. ಎಲ್ಲ ಸಮುದಾಯದ ಜತೆಗೆ ಅವಿನಾಭಾವ ಸಂಬಂಧ ಹೊಂದಿರುವ ಈ ಸಮುದಾಯವನ್ನು ಜಾಗೃತಿಗೊಳಿಸಿ, ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಸಂತ ಸೇವಾಲಾಲ್ ಗುರುಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದರು.
  ಈ ಸಮಾಜ ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಇನ್ನೂ ಮುಂದೆ ಬರಬೇಕು. ಅಕ್ಷರಸ್ಥರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಬೇಕು. ಇಂದು ಪ್ರತಿಯೊಂದು ಕ್ಷೇತ್ರದಲ್ಲಿಯೂ ಬಂಜಾರ ಸಮಾಜದ ಜನರು ಗಮನಾರ್ಹವಾಗಿ ಕೆಲಸ ಮಾಡುತ್ತಿದ್ದಾರೆ. ಈ ಸಮಾಜದ ಅಪೂರ್ವ ಸಂಸ್ಕೃತಿ ಮತ್ತು ಅವರ ಸಾಂಪ್ರದಾಯಿಕ ಶೈಲಿಯ ಬದುಕಿನ ಸೊಗಡನ್ನು ಉಳಿಸಿ ಬೆಳೆಸಬೇಕಾಗಿದೆ. ಅದು ಅಪೂರ್ವವಾದ ಸಂಪತ್ತು ಎಂದು ಹೇಳಿದರು.
  ಸಮಾಜದ ಪ್ರಮುಖರಾದ ಪರಮೇಶ್ವರ ನಾಯ್ಕ, ಪ್ರೇಮ್ಕುಮಾರ್ ನಾಯ್ಕ, ಬಂಗಾರಿ ನಾಯ್ಕ, ರಮೇಶ್ ನಾಯ್ಕ, ವಿಜಯ ನಾಯ್ಕ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕಿರಣ್ ಕುಮಾರ್ ಹರ್ತಿ, ಗ್ರೇಡ್-2 ತಹಸೀಲ್ದಾರ್ ರವಿಕುಮಾರ್ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts