More

    ‘ಗ್ಯಾರಂಟಿ’ ದೂಷಣೆ ಮಾಡಿದ್ದು ದುರದೃಷ್ಟಕರ

    ಪಾಂಡವಪುರ : ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಂತಹ ರಾಜಕೀಯ ಮುತ್ಸದ್ದಿಗಳು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ದೂಷಣೆ ಮಾಡಿದ್ದು ದುರದೃಷ್ಟಕರ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.
    ಪಟ್ಟಣದ ಟಿಎಪಿಸಿಎಂಎಸ್ ರೈತ ಸಭಾಂಗಣದಲ್ಲಿ ತಾಲೂಕು ಆಡಳಿತ ಮತ್ತು ತಾಲೂಕು ಪಂಚಾಯಿತಿ ವತಿಯಿಂದ ಗುರುವಾರ ಆಯೋಜಿಸಿದ್ದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಮತ್ತು ಸರ್ಕಾರದ ವಿವಿಧ ಸೌಲಭ್ಯಗಳ ವಿತರಣೆ ಹಾಗೂ ಮಾಹಿತಿ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
    ಸರ್ಕಾರ ರಚನೆಯಾದ ದಿನದಿಂದಲೇ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಹಂತ ಹಂತವಾಗಿ ಅನುಷ್ಠಾನಗೊಳಿಸಿದೆ. ಬರಗಾಲ ಸಂದರ್ಭದಲ್ಲಿ ರಾಜ್ಯದ ಜನತೆಗೆ ಈ ಯೋಜನೆಗಳಿಂದ ಅನುಕೂಲವಾಗಿದೆ. ಬಿಜೆಪಿ ಮತ್ತು ಜೆಡಿಎಸ್‌ಗೆ ನಮ್ಮ ಗ್ಯಾರಂಟಿಗಳು ಇಷ್ಟವಾಗಿಲ್ಲ. ನಾವು ಯೋಜನೆ ಕೊಟ್ಟಿದ್ದೇ ಅಪರಾಧ ಎಂದು ಬಿಂಬಿಸಲಾಗುತ್ತಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಣ್ಣೀರು ಹಾಕುವವರೋ ಅಥವಾ ರೈತರ ಪರ ಎನ್ನುವವರು ಉತ್ತಮರ ಎಂದು ಯೋಚಿಸಿ ಮತದಾರರೇ ಉತ್ತರ ಕೊಡಬೇಕು ಎಂದು ಹೇಳಿದರು.
    ಕೃತಜ್ಞತೆ ಇದ್ದರೆ ತೆರಿಗೆ ಹಣ ನೀಡಿ : ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮೇಲೆ ರಾಜ್ಯದ ಜನತೆ ಋಣ ಇದ್ದರೆ ಈ ಕೂಡಲೇ ರಾಜ್ಯದ ಪಾಲಿನ ತೆರಿಗೆ ಹಣ ಬಿಡುಗಡೆ ಮಾಡಲಿ. ಇಲ್ಲಿನ ಜನರ ಆಶೀರ್ವಾದದಿಂದ ಅಧಿಕಾರ ಕಂಡಿದ್ದಾರೆ. ಕೇಂದ್ರದ ಬಿಜೆಪಿ ನಾಯಕರಿಗೆ ಕೃತಜ್ಞತೆ ಇದ್ದರೆ ನಮ್ಮ ತೆರಿಗೆ ಹಣ ಪಾವತಿಸಲಿ. ಆರು ತಿಂಗಳ ಹಿಂದೆಯೇ ಬರ ವರದಿ ನೀಡಿದ್ದರೂ, ಹಣ ಬಿಡುಗಡೆಗೆ ಬಗ್ಗೆ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿಲ್ಲ. ಜನರ ಕಷ್ಟ ನೋಡಲಾಗದೆ ನಾವೇ ಬರ ಹಣದ ಕಂತು ಬಿಡುಗಡೆ ಮಾಡಿದ್ದೇವೆ ಎಂದು ಕೇಂದ್ರದ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
    ಬಿಜೆಪಿ, ಜೆಡಿಎಸ್ ವಿರುದ್ಧ ವಾಗ್ದಾಳಿ : ಚುನಾವಣಾ ಪೂರ್ವದಲ್ಲಿ ಎಲ್ಲ ಪಕ್ಷಗಳು ಭರವಸೆ ಕೊಡುವುದು ಸಹಜ. 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಪಕ್ಷದ ನಾಯಕರು ನಮಗಿಂತ ಒಂದು ಹಜ್ಜೆ ಮುಂದೆ ಹೋಗಿ ಅನೇಕ ಭರವಸೆ ನೀಡಿದ್ದರು. ಸ್ತ್ರೀಶಕ್ತಿ ಸಾಲ, ರೈತರ ಸಾಲ ಹಾಗೂ ಮಹಿಳೆಯರು ಒಡವೆ ಇಟ್ಟು ಪಡೆದ ಸಾಲವೂ ಮನ್ನಾ ಎಂದು ಜೆಡಿಎಸ್‌ನವರು ಪ್ರಣಾಳಿಕೆ ಬಿಡುಗಡೆ ಮಾಡಿದ್ದರು. ಅಧಿಕಾರಕ್ಕೆ ಬಂದಾಗ ಏನೂ ಮಾಡಲಿಲ್ಲ. ಜಿಲ್ಲೆಯಲ್ಲಿ ಏಳಕ್ಕೆ ಏಳು ಶಾಸಕರಿದ್ದರು. ಮೇಲುಕೋಟೆ ಕ್ಷೇತ್ರದ ಮಾಜಿ ಶಾಸಕರು ಮೈತ್ರಿ ಸರ್ಕಾರದಲ್ಲಿ ಸಚಿವರಾಗಿದ್ದರೂ ಜಿಲ್ಲೆಗೆ ಏನೂ ಮಾಡಲಿಲ್ಲ. ಜಿಲ್ಲೆಗೆ 8 ಸಾವಿರ ಕೋಟಿ ರೂ. ವಿಶೇಷ ಅನುದಾನ ಕೊಟ್ಟಿದ್ದೇವೆ ಎನ್ನುತ್ತಾರೆ. ಅದಕ್ಕೆ ಯಾವುದೇ ದಾಖಲೆ ಇಲ್ಲ. ನಮ್ಮ ಪ್ರಣಾಳಿಕೆಯನ್ನು ಅನುಷ್ಠಾನಕ್ಕೆ 5 ವರ್ಷಗಳ ಕಾಲಾವಕಾಶವಿದ್ದು, ಸದ್ಯ ಶೇ.50 ರಿಂದ 60 ಜಾರಿಯಾಗಿದೆ. ಜೆಡಿಎಸ್ ಮತ್ತು ಬಿಜೆಪಿ ಅವರಿಂದ ಜನರಿಗಾದ ಪ್ರಯೋಜನೆ ಏನೂ ಎಂದು ಟೀಕಿಸಿದರು.
    ಗ್ಯಾರಂಟಿ ಯೋಜನೆಯನ್ನು ಜನ ಸ್ಮರಿಸಬೇಕು : ರಾಜ್ಯದಲ್ಲಿ ಈವರೆಗೂ 1.80 ಕೋಟಿ ಮಹಿಳೆಯರು ಶಕ್ತಿ ಯೋಜನೆ ಫಲಾನುಭವಿಗಳಾಗಿದ್ದಾರೆ. 4.36 ಲಕ್ಷ ಕುಟುಂಬಗಳಿಗೆ ಅನ್ನ ಭಾಗ್ಯ, 4.63 ಲಕ್ಷ ಮನೆಗಳಿಗೆ ಗೃಹಜ್ಯೋತಿ ಹಾಗೂ ಈಗ ಯುವನಿಧಿಗೆ ಚಾಲನೆ ನೀಡಲಾಗಿದೆ. ಗ್ಯಾರಂಟಿ ಯೋಜನೆಗಳಿಗೆ ಈ ವರ್ಷ 69 ಸಾವಿರ ಕೋಟಿ ಅನುದಾನ ಬೇಕಾಗಿದೆ. ಚುನಾವಣೆ ಸಂದರ್ಭದಲ್ಲಿ ಬಂದು ಸುಳ್ಳು ಹೇಳುವವರನ್ನು ದೂರವಿಟ್ಟು, ಗ್ಯಾರಂಟಿ ಯೋಜನೆಯ ಫಲಾನುಭವಿಗಳು ನಮ್ಮ ಯೋಜನೆಯನ್ನು ಸ್ಮರಿಸಬೇಕು ಎಂದರು.
    ಮಂಡ್ಯ, ಪಾಂಡವಪುರ, ಶ್ರೀರಂಗಪಟ್ಟಣಕ್ಕೆ ರೈತರಿಗೆ ಬಂಪರ್: ಈ ಮೂರು ತಾಲೂಕುಗಳ ರೈತರಿಗೆ ಸರ್ಕಾರ ಬರಗಾಲದಲ್ಲಿ ಬಂಪರ್ ನೀಡುತ್ತಿದ್ದು, ಈ ವ್ಯಾಪ್ತಿಗೆ ಬರುವ ರೈತರು ಯಾವುದೇ ಬಿತ್ತನೆ ಮಾಡದಿದ್ದರೂ ಎಕರೆಗೆ 566 ರೂ. ಕೊಟ್ಟು ವಿಮೆ ನೋಂದಣಿ ಮಾಡಿಸಿದರೆ ಎಕರೆಗೆ 9448 ರೂ. ಪಡೆಯಬಹುದಾಗಿದೆ. ಶಾಸಕ ದರ್ಶನ್ ಪುಟ್ಟಣ್ಣಯ್ಯ ಎಲ್ಲರಿಗಿಂತ ಹೆಚ್ಚು ಕೆಲಸ ಮಾಡುವ ಸಾಮರ್ಥ್ಯವುಳ್ಳವರಾಗಿದ್ದಾರೆ. ಈಗಾಗಲೇ ಮೇಲುಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಎಸ್‌ಎಡಿಪಿ, ಸಿಆರ್‌ಎಫ್ ಸೇರಿದಂತೆ ವಿವಿಧ ಯೋಜನಯಡಿ 150 ಕೋಟಿ ರೂ. ಹಣ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮಂಜೂರಾಗಿದ್ದು, ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಮಾಹಿತಿ ನೀಡಿದರು.
    ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಕ್ಷೇತ್ರದಲ್ಲಿ 45 ಸಾವಿರ ಫಲಾನುಭವಿಗಳಿದ್ದು, ಯಾವುದೇ ಲಂಚ ಇಲ್ಲದೆ ಸರ್ಕಾರದಿಂದ ಯೋಜನೆಯ ಫಲಾನುಭವಿಗಳಿಗೆ ನೇರ ಹಣ ಸಂದಾಯವಾಗುತ್ತಿದೆ. ಈ ಯೋಜನೆಗಳಿಂದ ಆರ್ಥಿಕತೆಯ ಜತೆಗೆ ಯಾವ್ಯಾವ ಪ್ರಯೋಜನ ಆಗುತ್ತದೆ ಎಂದು ಜನರಿಗೆ ನಿಧಾನವಾಗಿ ಅರ್ಥವಾಗುತ್ತದೆ ಎಂದು ತಿಳಿಸಿದರು.
    ಸಮಾವೇಶದಲ್ಲಿ ಉಚಿತ ಆರೋಗ್ಯ ಶಿಬಿರ, ತಾಲೂಕು ಆಡಳಿತದಿಂದ ಪೌತಿ ಖಾತೆ ಅದಾಲತ್, ಸಾಮಾಜಿಕ ಭದ್ರತಾ ಯೋಜನೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ತೋಟಗಾರಿಕೆ, ಕೃಷಿ, ಪಶು ಮತ್ತು ವೈದ್ಯಕೀಯ ಇಲಾಖೆ, ಸೆಸ್ಕ್ ಇಲಾಖೆಯಿಂದ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಸ್ತುಪ್ರದರ್ಶನ ಆಯೋಜಿಸಲಾಗಿತು.

    ಪಾಂಡವಪುರ ಪಟ್ಟಣದಲ್ಲಿ ಆಯೋಜಿಸಿದ್ದ ಗ್ಯಾರಂಟಿ ಯೋಜನೆ ಸಮಾವೇಶದಲ್ಲಿ ಕೃಷಿ ಇಲಾಖೆಯಿಂದ ಏರ್ಪಡಿಸಿದ್ದ ವಸ್ತುಪ್ರದರ್ಶದಲ್ಲಿ ಸಚಿವ ಚಲುವರಾಯಸ್ವಾಮಿ ಕೃಷಿ ಯಂತ್ರೋಪಕರಣಗಳನ್ನು ವೀಕ್ಷಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts