More

    ಹೆಂಡತಿ-ಮಕ್ಕಳನ್ನು ನೋಡಿಕೊಳ್ಳುವುದು ಗಂಡನ ಕರ್ತವ್ಯ: ಕುರಾನ್ ಉಲ್ಲೇಖಿಸಿ ಪತಿಯ ಅರ್ಜಿ ವಜಾಗೊಳಿಸಿದ ಹೈಕೋರ್ಟ್

    ಬೆಂಗಳೂರು: ಪತ್ನಿ ಹಾಗೂ ಇಬ್ಬರು ಅನಾರೋಗ್ಯ ಪೀಡಿತ ಮಕ್ಕಳಿಗೆ ಮಾಸಿಕ 25 ಸಾವಿರ ರೂ. ಜೀವನಾಂಶ ಪಾವತಿಸುವಂತೆ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶ ರದ್ದುಕೋರಿ ಮುಸ್ಲಿಂ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿರುವ ಹೈಕೋರ್ಟ್, ಹೆಂಡತಿ ಹಾಗೂ ಮಕ್ಕಳ ಯೋಗಕ್ಷೇಮ ನೋಡಿಕೊಳ್ಳುವುದು ಗಂಡನ ಕರ್ತವ್ಯವೆಂದು ಕುರಾನ್ ಹಾಗೂ ಹದೀತ್​ನಲ್ಲಿ ಹೇಳಲಾಗಿದ್ದು, ಈ ಜವಾಬ್ದಾರಿ ಅರ್ಜಿದಾರ ಪತಿಯ ಹೆಗಲ ಮೇಲಿದೆ ಎಂದು ಹೇಳಿದೆ.

    ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಬಿಟಿಎಂ ಬಡಾವಣೆಯ 48 ವರ್ಷದ ವ್ಯಕ್ತಿ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಪೀಠ ಈ ಆದೇಶ ಮಾಡಿದೆ.

    ಪ್ರಕರಣವೇನು?: ಅರ್ಜಿದಾರ ಮತ್ತವರ ಪತ್ನಿ ಪರಸ್ಪರ ದೂರವಾಗಿ, ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ದಂಪ ತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಮೊದಲ ಮಗ ಅಂಗವಿಕಲನಾಗಿದ್ದರೆ ಮತ್ತೊಬ್ಬ ಮಗ ಮೂತ್ರಪಿಂಡ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದಾನೆ. 2019ರಲ್ಲಿ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಪತ್ನಿ, ತನ್ನ ಹಾಗೂ ಮಕ್ಕಳ ಜೀವನ ನಿರ್ವಹಣೆಗಾಗಿ ಮಾಸಿಕ 27 ಸಾವಿರ ರೂ. ಜೀವನಾಂಶ ಪಾವತಿಸಲು ಪತಿಗೆ ನಿರ್ದೇಶಿಸುವಂತೆ ಕೋರಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಕೌಟುಂಬಿಕ ನ್ಯಾಯಾಲಯ, ಪತ್ನಿಗೆ ಮಾಸಿಕ 25 ಸಾವಿರ ರೂ. ಜೀವನಾಂಶ ಪಾವತಿಸುವಂತೆ ಪತಿಗೆ ನಿರ್ದೇಶಿಸಿ 2019ರ ಡಿ.16ರಂದು ಆದೇಶಿಸಿತ್ತು. ಈ ಆದೇಶ ರದ್ದುಕೋರಿ ಪತಿ ಹೈಕೋರ್ಟ್ ಮೆಟ್ಟಿಲೇರಿದ್ದರು.

    ಗಂಡನ ಜವಾಬ್ದಾರಿ: ಪತಿಯ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಪ್ರತಿವಾದಿ ಮಹಿಳೆ ತನ್ನ ಪತ್ನಿ ಎಂಬ ಬಗ್ಗೆ ಅರ್ಜಿದಾರ ಪತಿ ಯಾವುದೇ ತಕರಾರು ತೆಗೆದಿಲ್ಲ. ಇಬ್ಬರು ಮಕ್ಕಳೂ ಸಹ ತನ್ನ ಪುತ್ರರೇ ಎನ್ನುವುದನ್ನೂ ಒಪ್ಪಿಕೊಂಡಿದ್ದಾರೆ. ಮಾಸಿಕ 25 ಸಾವಿರ ರೂ. ಜೀವನಾಂಶ ಪಾವತಿಸುವಷ್ಟು ಆದಾಯವಿಲ್ಲ ಎನ್ನುವುದು ಅರ್ಜಿದಾರರ ವಾದವಾಗಿದೆ. ಪತ್ನಿ ಹಾಗೂ ಮಕ್ಕಳ ಅದರಲ್ಲೂ ಮುಖ್ಯವಾಗಿ ಅವರು ಅಸಮರ್ಥರಾಗಿದ್ದ ಸಂದರ್ಭದಲ್ಲಿ ಅವರನ್ನು ನೋಡಿಕೊಳ್ಳುವುದು ಪತಿಯ ಕರ್ತವ್ಯವಾಗಿರುತ್ತದೆ ಎಂದು ಪವಿತ್ರ ಕುರಾನ್ ಹಾಗೂ ಹದೀತ್​ನಲ್ಲಿ ಹೇಳಲಾಗಿದೆ. ಪತ್ನಿ ಉದ್ಯೋಗ ಹೊಂದಿದ್ದಾಳೆ ಅಥವಾ ಆಕೆಗೆ ಯಾವುದೇ ಆದಾಯದ ಮೂಲ ಹೊಂದಿದ್ದಾಳೆ ಎಂಬುದನ್ನು ತೋರಿಸುವ ಯಾವ ದಾಖಲೆಗಳನ್ನೂ ಅರ್ಜಿದಾರ ಪತಿ ನ್ಯಾಯಾಲಯಕ್ಕೆ ಹಾಜರುಪಡಿಸಿಲ್ಲ. ಇದರ ಹೊರತಾಗಿಯೂ ಪತ್ನಿ-ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ ಪತಿಯ ಹೆಗಲ ಮೇಲೆಯೇ ಇರುತ್ತದೆ ಎಂದು ಅಭಿಪ್ರಾಯಪಟ್ಟಿದೆ.

    ಜೀವನಾಂಶ ಕೊಡಲೇಬೇಕು

    ಕೌಟುಂಬಿಕ ನ್ಯಾಯಾಲಯ ಪತ್ನಿಗೆ ಘೋಷಿಸಿರುವ ಮಾಸಿಕ 25 ಸಾವಿರ ರೂ. ಅತ್ಯಂತ ಹೆಚ್ಚಾಗಿದ್ದು, ಈ ಮೊತ್ತ ಪಾವತಿಸಲು ಕಷ್ಟವಾಗುತ್ತದೆ ಎಂಬ ಅರ್ಜಿದಾರರ ವಾದವನ್ನು ರಕ್ತಕ್ಕಿಂತ ರೊಟ್ಟಿ ದುಬಾರಿಯಾಗಿರುವ ಈ ದಿನಗಳಲ್ಲಿ ಒಪ್ಪಲಾಗದು. ಅರ್ಜಿದಾರರ ಮೊದಲ ಪುತ್ರನಿಗೆ 17 ವರ್ಷವಾಗಿದ್ದು ಆತ ಅಂಗವಿಕಲನಾಗಿದ್ದಾನೆ. 14 ವರ್ಷ ವಯಸ್ಸಿನ ಎರಡನೇ ಮಗ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾನೆ. ಮದುವೆಯ ವೈಫಲ್ಯದ ಕಾರಣದಿಂದ ಪತ್ನಿ ಶಿಕ್ಷೆ ಅನುಭವಿಸುವಂತಾಗಬಾರದು. ಆಕೆ ನಿರ್ಗತಿಕ ಸ್ಥಿತಿ ತಲುಪುವಂತೆ ಅಥವಾ ನೆಲೆ ಇಲ್ಲದೆ ಅಲೆಯುವಂತಾಗಬಾರದು ಎಂಬ ಉದ್ದೇಶದಿಂದ ಮಧ್ಯಂತರ ಅಥವಾ ಶಾಶ್ವತ ಜೀವನಾಂಶ ನೀಡಲಾಗುತ್ತದೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿದರೆ ಕೌಟುಂಬಿಕ ನ್ಯಾಯಾಲಯದ ಆದೇಶ ರದ್ದುಕೋರಿ ಪತಿ ಸಲ್ಲಿಸಿರುವ ಅರ್ಜಿ ತಿರಸ್ಕರಿಸಲು ಅರ್ಹವಾಗಿದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಅರ್ಜಿ ವಜಾಗೊಳಿಸಿ ಆದೇಶಿಸಿದೆ.

    ಇದು ನಾಯಿಯಲ್ಲ, ನಾಯಿಯಂತೆ ಕಾಣುವ ಮನುಷ್ಯ: 40 ದಿನಗಳೊಳಗೆ ಆಯ್ತು ರೂಪಾಂತರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts