More

    ಟೋಲ್ ರಸ್ತೆ ಅಲ್ಲ ಇದು ಪಾರ್ಕಿಂಗ್ ರಸ್ತೆ, ಸೇತುವೆ ಮೇಲೆಯೇ ದೊಡ್ಡ ದೊಡ್ಡ ಗುಂಡಿಗಳು, ಚತುಷ್ಪಥ ರಸ್ತೆಯಲ್ಲಿ ಸಂಚಾರ ಕಿರಿಕಿರಿ

    ವೆಂಕಟರಾಜು ಎಸ್. ದೊಡ್ಡಬಳ್ಳಾಪುರ
    ಇದು ಹೆಸರಿಗೆ ಮಾತ್ರ ನಾಲ್ಕು ಪಥದ ರಸ್ತೆ. ಆದರೆ ವಾಹನಗಳ ಓಡಾಟಕ್ಕಿಂತಲೂ ವಾಹನಗಳ ನಿಲುಗಡೆಗೇ ಹೆಚ್ಚು ಬಳಕೆಯಾಗುತ್ತಿದೆ. ಹೌದು, ದೊಡ್ಡಬಳ್ಳಾಪುರದ ಮೂಲಕ ಹಾದು ಹೋಗಿರುವ ಹಿಂದುಪುರ-ಯಲಹಂಕ ರಾಜ್ಯ ಹೆದ್ದಾರಿಯನ್ನು ಚತುಷ್ಪಥ ರಸ್ತೆಯಾಗಿ ಅಭಿವೃದ್ಧಿಪಡಿಸಲಾಗಿದೆ. ಹಾಗೆಯೇ ಇದು ಟೋಲ್ ಪಾವತಿ ರಸ್ತೆ ಸಹ ಆಗಿದೆ.

    ಆದರೆ ಟೋಲ್‌ನವರು ಶುಲ್ಕ ವಸೂಲಿ ಮಾಡಿಕೊಂಡಿದ್ದಾರೆಯೇ ವಿನಃ ರಸ್ತೆಯಲ್ಲಿ ವಾಹನಗಳ ಓಡಾಟಕ್ಕೆ ಅಡೆತಡೆ ಇದೆಯೇ ಎನ್ನುವ ಬಗ್ಗೆ ಮಾತ್ರ ಒಂದಿಷ್ಟೂ ತಲೆಕೆಡಿಸಿಕೊಳ್ಳುತ್ತಿಲ್ಲ. ಹೆದ್ದಾರಿಯಲ್ಲಿನ ಬಾಶೆಟ್ಟಿಹಳ್ಳಿಯಿಂದ ಆರಂಭವಾಗಿ ದೊಡ್ಡಬಳ್ಳಾಪುರ ನಗರ ವ್ಯಾಪ್ತಿ ಮುಕ್ತಾಯವಾಗುವ ಪಾಲನಜೋಗಳ್ಳಿವರೆಗೂ ರಸ್ತೆಯ ಎರಡೂ ಬದಿಯಲ್ಲಿ ರಾತ್ರಿ ವೇಳೆ ಸರಕು ಸಾಗಣೆ ಲಾರಿ, ಹಗಲಿನ ವೇಳೆಯಲ್ಲಿ ಕಾರು, ಬೈಕ್ ನಿಲುಗಡೆ ಮಾಡಲಾಗುತ್ತದೆ.

    ಅದರಲ್ಲೂ ನಗರಸಭೆ ವ್ಯಾಪ್ತಿಯ ರೈಲ್ವೆ ನಿಲ್ದಾಣ ವೃತ್ತ, ಡಿ.ಕ್ರಾಸ್, ಪ್ರವಾಸಿ ಮಂದಿರ ವೃತ್ತ, ಎಪಿಎಂಸಿ ಮಾರುಕಟ್ಟೆ ಸಮೀಪದ ರಸ್ತೆಯ ಇಕ್ಕೆಲಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿರುತ್ತವೆ. ಹೀಗಾಗಿ ಈ ಪ್ರದೇಶಗಳಲ್ಲಿ ನಾಲ್ಕು ಪಥದ ರಸ್ತೆ ಇರಲಿ, ಎರಡೂ ಪಥದಲ್ಲೂ ವಾಹನ ಓಡಾಡದಂತಹ ಸ್ಥಿತಿ ಇದೆ.

    ಬೆಳಗದ ವಿದ್ಯುತ್ ಕಂಬಗಳು!: ಟಿಬಿ ವೃತ್ತದಿಂದ ಡಿ.ಕ್ರಾಸ್ ಸರ್ಕಲ್ ವರೆಗಿನ ರಸ್ತೆಯಲ್ಲಿ ವಿದ್ಯುತ್ ದೀಪ ಅಳವಡಿಸಿ ತಿಂಗಳುಗಳೇ ಕಳೆದಿವೆ. ಆದರೆ ಈವರೆಗೆ ವಿದ್ಯುತ್ ಸಂಪರ್ಕ ನೀಡಿಲ್ಲ. ದೀಪಗಳು ಉರಿದಿಲ್ಲ. ಹೀಗಾಗಿ ರಾತ್ರಿ ಸಮಯದಲ್ಲಿ ವಾಹನ ಸವಾರರು ಓಡಾಡುವುದೇ ಕಷ್ಟವಾಗಿದೆ.

    ಅವೈಜ್ಞಾನಿಕ ಬಸ್ ನಿಲ್ದಾಣಗಳು: ನಗರದ ಪ್ರಮುಖ ವೃತ್ತಗಳಾದ ರೈಲ್ವೆ ನಿಲ್ದಾಣ ಸರ್ಕಲ್, ಡಿ.ಕ್ರಾಸ್ ವೃತ್ತ, ಪ್ರವಾಸಿ ಮಂದಿರದ ವೃತ್ತದಲ್ಲಿ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಖಾಸಗಿ ಬಸ್ ನಿಲುಗಡೆಗೆ ಯಾವುದೇ ಸೂಕ್ತ ಸ್ಥಳಗಳಿಲ್ಲ. ಬೇಕಾಬಿಟ್ಟಿ ಬಸ್‌ಗಳ ನಿಲುಗಡೆಯಿಂದ ಅಪಘಾತ ಪ್ರಕರಣ ಕೂಡ ಹೆಚ್ಚಾಗಿದೆ. ಹೆದ್ದಾರಿ ವೃತ್ತಗಳಲ್ಲಿ ಸಿಗ್ನಲ್ ಅತ್ಯವಶ್ಯಕವಾಗಿದೆ. ಅಪಘಾತ ತಡೆಗಟ್ಟುವ ದೃಷ್ಟಿಯಿಂದ ಸಿಗ್ನಲ್ ಅಳವಡಿಸಬೇಕೆಂದು ಮುಖಂಡ ಎಂ.ಮುನೇಗೌಡ ಒತ್ತಾಯಿಸಿದ್ದಾರೆ.

    ಬ್ರಿಜ್ಡ್ ಮೇಲೆ ಯಮಗುಂಡಿ!: ಹೆದ್ದಾರಿಯಲ್ಲಿ ನಿರ್ಮಿಸಿರುವ ಬಾಶೆಟ್ಟಿಹಳ್ಳಿಯ ಬ್ರಿಜ್ಡ್ ಹಾಗೂ ಡಿ.ಕ್ರಾಸ್ ಬಳಿಯ ಮೇಲ್ಸೇತುವೆಯ ರಸ್ತೆಗಳಲ್ಲಿ ಯಮಗುಂಡಿಗಳೇ ತುಂಬಿವೆ. ವಾಹನ ಸವಾರರು ಗುಂಡಿ ತಪ್ಪಿಸಲು ಹೋಗಿ ಬಿದ್ದು ಆಸ್ಪತ್ರೆಗೆ ದಾಖಲಾಗುವುದು ನಿತ್ಯ ನಡೆಯುತ್ತಲೇ ಇದೆೆ ಎಂದು ಸ್ಥಳೀಯ ನಿವಾಸಿ ರಾಜಘಟ್ಟ ರವಿ ತಿಳಿಸಿದ್ದಾರೆ.

    ರಸ್ತೆಗಳಲ್ಲಿ ಬೇಕಾಬಿಟ್ಟಿ ವಾಹನಗಳ ನಿಲುಗಡೆ ಮಾಡುವವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಪೊಲೀಸ್ ಇಲಾಖೆ ಗಮನಕ್ಕೆ ತಂದಿದ್ದೇವೆ. ಟೋಲ್ ಸಿಬ್ಬಂದಿ ನಿಗಾ ಇಟ್ಟಿದ್ದಾರೆ. ಸೇತುವೆ ಮೇಲಿನ ಗುಂಡಿಗಳನ್ನು ಮುಚ್ಚಿಸುತ್ತಿದ್ದೇವೆ.
    ಹೆಸರು ಹೇಳಲಿಚ್ಚಿಸದ ಕೆಆರ್‌ಡಿಸಿಎಲ್ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts