More

    ಠೇವಣಿ ಕಳೆದುಕೊಂಡವರಿಗೆ ಎಂಎಲ್‌ಸಿ ಟಿಕೆಟ್ ಕೊಟ್ಟಿದ್ದು ಸರಿಯಲ್ಲ

    ಶಿವಮೊಗ್ಗ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಶಿವಮೊಗ್ಗ ಕ್ಷೇತ್ರದಲ್ಲಿ ಸ್ಪರ್ಧಿಸಿ ಠೇವಣಿ ಕಳೆದುಕೊಂಡಿದ್ದ ಆಯನೂರು ಮಂಜುನಾಥ್‌ಗೆ ವಿಧಾನ ಪರಿಷತ್ ನೈಋತ್ಯ ಪದವೀಧರರ ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ ಟಿಕೆಟ್ ಕೊಟ್ಟಿದ್ದು ಸರಿಯಲ್ಲ ಎಂದು ಪದವೀಧರ ಕ್ಷೇತ್ರದ ಟಿಕೆಟ್ ವಂಚಿತ ಎಸ್.ಪಿ.ದಿನೇಶ್ ಆಕ್ಷೇಪ ವ್ಯಕ್ತಪಡಿಸಿದರು.

    ನೈಋತ್ಯ ಪದವೀಧರ ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ ಸ್ಪರ್ಧೆ ಬಯಸಿದ್ದ ರಂಗಸ್ವಾಮಿ ಗೌಡ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಿನೇಶ್, ಪದವೀಧರ ಕ್ಷೇತ್ರದ ಚುನಾವಣೆಗೆ ಕಾಂಗ್ರೆಸ್ ಪಕ್ಷ ಘೋಷಿಸಿರುವ ಅಭ್ಯರ್ಥಿ ಹೆಸರನ್ನು ಮರುಪರಿಶೀಲಿಸಬೇಕು. ಅಭ್ಯರ್ಥಿ ಬದಲಾವಣೆ ಆಗದಿದ್ದರೆ ನಮ್ಮ ಪಕ್ಷ-ನಮ್ಮ ಹಕ್ಕು ಹೋರಾಟ ಮಾಡುವುದು ಅನಿವಾರ್ಯವಾಗಲಿದೆ ಎಂದರು.
    ಅಧಿಕಾರಕ್ಕಾಗಿ ಪಕ್ಷದಿಂದ ಪಕ್ಷಕ್ಕೆ ಹಾರುವ ಆಯನೂರು ಮಂಜುನಾಥ್ ಅವರಿಗೆ ಟಿಕೆಟ್ ಕೊಟ್ಟಿದ್ದು ಸರಿಯಲ್ಲ. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ತಮ್ಮ ಗಮನಕ್ಕೆ ಬಾರದೆ ಟಿಕೆಟ್ ಘೋಷಣೆಯಾಗಿದೆ ಎಂದವರು ಹೇಳಿದ್ದಾರೆ. ಹಾಗಾಗಿ ನಮ್ಮಿಬ್ಬರಲ್ಲಿ ಒಬ್ಬರಿಗೆ ಟಿಕೆಟ್ ಕೊಡಬೇಕು. ಇಲ್ಲವಾದಲ್ಲಿ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ಕೊಟ್ಟರೂ ಅವರ ಪರ ಕೆಲಸ ಮಾಡುತ್ತೇವೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ಪದವೀಧರ ಕ್ಷೇತ್ರದ ಅಭ್ಯರ್ಥಿ ಘೋಷಣೆ ಆಗಿರುವುದು ಗೊತ್ತಿಲ್ಲ ಎಂದು ಕೆಪಿಸಿಯ ಕೆಲ ಮುಖಂಡರು ಹೇಳಿದ್ದಾರೆ. ಅದು ನಕಲಿಯೋ, ಅಸಲಿಯೋ ಎಂಬುದು ಕೂಡ ಅನುಮಾನವಿದೆ. ಹಾಗಾಗಿ ಸರಿಯಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಆಯನೂರು ಅವರಿಗೆ ಮತ ಹಾಕದಂತೆ ನಾವಿಬ್ಬರೂ ನೋಂದಣಿ ಮಾಡಿಸಿರುವ ಪದವೀಧರರಿಗೆ ತಿಳಿಸುವುದಾಗಿ ಎಚ್ಚರಿಸಿದರು.
    ಆಯನೂರು ಪರ ಕೆಲಸ ಮಾಡಲು ಕಾಂಗ್ರೆಸ್ ಕಾರ್ಯಕರ್ತರು ಮಾನಸಿಕವಾಗಿ ಸಿದ್ಧರಿಲ್ಲ. ಎರಡು ಬಾರಿ ನನಗೆ ಟಿಕೆಟ್ ಕೊಟ್ಟಿದ್ದಾರೆ. ಈ ಬಾರಿ ನನಗೆ ಕೊಡದಿದ್ದರೂ ಸರಿ. ಆಯನೂರು ಅವರನ್ನು ಹೊರತುಪಡಿಸಿ ಪಕ್ಷ ಯಾರಿಗೇ ಟಿಕೆಟ್ ಕೊಟ್ಟರೂ ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಹೇಳಿದರು. ಪ್ರಮುಖರಾದ ವಿಶ್ವನಾಥ್ ಕಾಶಿ, ಜ್ಯೋತಿ ಅರಳಪ್ಪ, ಮಹೇಶ್ ಉಪಸ್ಥಿತರಿದ್ದರು.

    ಅರ್ಜಿ ಹಾಕಿದ್ದು ನಾವಿಬ್ಬರು
    1992ರಿಂದ ಕಾಂಗ್ರೆಸ್‌ನಲ್ಲಿ ತೆರೆಮರೆಯಲ್ಲಿ ನಿಂತುಕೊಂಡೇ ಪಕ್ಷಕ್ಕಾಗಿ ಕೆಲಸ ಮಾಡಿಕೊಂಡು ಬಂದಿದ್ದೇವೆ. ಕಳೆದ ಐದು ವರ್ಷಗಳಿಂದ ಮುಂಚೂಣಿಯಲ್ಲಿದ್ದೇನೆ. ಈ ಬಾರಿ ನೈಋತ್ಯ ಪದವೀಧರರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದೆ ಎಂದು ರಂಗಸ್ವಾಮಿ ಗೌಡ ಹೇಳಿದರು. ಮೊದಲು ನಾನು ಮತ್ತು ದಿನೇಶ್ ಇಬ್ಬರೇ ಅರ್ಜಿ ಹಾಕಿದ್ದೇವು. ಅವಕಾಶಕ್ಕಾಗಿ ಪಕ್ಷದಿಂದ ಪಕ್ಷಕ್ಕೆ ಹಾರುವವರಿಗೆ ಟಿಕೆಟ್ ಕೊಟ್ಟರೆ 30 ವರ್ಷದಿಂದ ಕೆಲಸ ಮಾಡಿದ ನಾವು ಏನು ಮಾಡಬೇಕು ಎಂದು ಪ್ರಶ್ನಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts