More

    ಚುನಾವಣೆ ಚರ್ಚೆಯಲ್ಲಿ ಗರಿಗೆದರಿದ ವಿಷಯಗಳು

    ಲೋಕಸಭೆ ಚುನಾವಣೆ ಹೊತ್ತಲ್ಲಿ ಜನರಿಗೆ ತಲುಪಿಸಬೇಕಾದ ವಿಷಯಗಳು ‘ದೆಹಲಿಯ ಅಧಿಕಾರ ಗದ್ದುಗೆ’ ಹತ್ತಿರ ಮಾಡುವಷ್ಟು ಶಕ್ತಿಶಾಲಿಯಾಗಿರುತ್ತವೆ. ಮತದಾರ ಅಳೆದೂ ತೂಗಿಯೇ, ಒಂದು ಸಮರ್ಪಕ ನಿರ್ಧಾರಕ್ಕೆ ಬರುತ್ತಾನೆ. ದೇಶದ ಬಹುತೇಕ ರಾಜ್ಯಗಳಲ್ಲಿ ಬರಗಾಲವಿದ್ದರೂ, ಈ ಬಾರಿಯ ಚುನಾವಣೆ ಹೊತ್ತಲ್ಲಿ ಪ್ರಮುಖ ವೈಚಾರಿಕ ವಿಷಯಗಳ ಸಣ್ಣ ಪ್ರವಾಹವೇ ಸೃಷ್ಟಿಯಾಗಿದೆ. ಈ ವಿಷಯಗಳನ್ನು ಮುಂದಿಟ್ಟುಕೊಂಡೇ ಎನ್​ಡಿಎ ಹಾಗೂ ಐಎನ್​ಡಿಐಎ ಒಕ್ಕೂಟ ಮತಬೇಟೆಗೆ ಸಜ್ಜಾಗಿವೆ. ಈ ವಿಷಯಗಳ ಸಂಕ್ಷಿಪ್ತ ಅವಲೋಕನ ಇಲ್ಲಿದೆ.

    ವಿಶೇಷ ಸ್ಥಾನಮಾನ ರದ್ದು: ಇದು ಕೂಡ ನರೇಂದ್ರ ಮೋದಿ ನೇತೃತ್ವ ಸರ್ಕಾರದ ಮಾಸ್ಟರ್ ಸ್ಟ್ರೋಕ್. ‘ಜಮ್ಮು-ಕಾಶ್ಮೀರದಿಂದ ಕಲಂ 370ನ್ನು (ವಿಶೇಷ ಸ್ಥಾನಮಾನ) ಹಿಂಪಡೆದರೆ ರಾಷ್ಟ್ರಾದ್ಯಂತ ರಕ್ತಪಾತವೇ ಸಂಭವಿಸುತ್ತದೆ’ ಎಂದು ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು. ಆದರೆ, ಪರಿಣಾಮಕಾರಿ ಯೋಜನೆ ರೂಪಿಸಿ, ಕಲಂ 370 ಹಿಂಪೆಯುವಲ್ಲಿ ಯಶಸ್ವಿಯಾದ ಸರ್ಕಾರ ಅಲ್ಲಿ ಅಭಿವೃದ್ಧಿ ಯೋಜನೆಗಳಿಗೂ ಚಾಲನೆ ನೀಡಿ, ಕಾಶ್ಮೀರದ ಚಿತ್ರಣವನ್ನೇ ಬದಲಿಸಿತು. 7 ದಶಕಗಳ ಈ ದೀರ್ಘಾವಧಿ ಸಮಸ್ಯೆಗೆ ಮುಕ್ತಿ ದೊರಕಿರುವುದು ಸಾಮಾನ್ಯ ಸಂಗತಿಯೇನಲ್ಲ. ಹೀಗಾಗಿ, ಈ ವಿಷಯ ಕೂಡ ಆಡಳಿತ ಪಕ್ಷಕ್ಕೆ ಪ್ಲಸ್ ಪಾಯಿಂಟ್.

    ಸಿಎಎ ಜಾರಿ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಗೊಳಿಸುವುದನ್ನು ವಿರೋಧಿಸಿ ರಾಷ್ಟ್ರದ ಹಲವು ರಾಜ್ಯಗಳಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆ ಒಂದಿಷ್ಟು ಆತಂಕ ಮತ್ತು ತಲ್ಲಣ ಮೂಡಿಸಿದ್ದು ಹೌದು. ಆದರೆ, ಲೋಕಸಭೆ ಚುನಾವಣೆ ವೇಳಾಪಟ್ಟಿ ಪ್ರಕಟಗೊಳ್ಳುವ ಕೆಲವೇ ದಿನಗಳ ಮುನ್ನ ಸರ್ಕಾರ ಸಿಎಎ ಜಾರಿಗೆ ಅಧಿಸೂಚನೆ ಹೊರಡಿಸಿತು. ಧಾರ್ವಿುಕ ಕಿರುಕುಳ ಅನುಭವಿಸಿ ಪಾಕಿಸ್ತಾನ, ಬಾಂಗ್ಲಾದೇಶ, ಅಪ್ಘಾನಿಸ್ತಾನದಿಂದ ಭಾರತಕ್ಕೆ ಶರಣಾರ್ಥಿಗಳಾಗಿ ಬಂದ ಮುಸ್ಲಿಮೇತರರಿಗೆ (ಹಿಂದೂ, ಸಿಖ್, ಬೌದ್ಧ, ಜೈನ, ಪಾರ್ಸಿಗಳು) ಇದರಿಂದ ಭಾರತೀಯ ಪೌರತ್ವ ಲಭಿಸಲಿದೆ. ಇದು ಯಾರ ನಾಗರಿಕತ್ವ ಕಸಿಯುವುದಿಲ್ಲವಾದರೂ, ಅಲ್ಪಸಂಖ್ಯಾತರಲ್ಲಿ ಭೀತಿ ಸೃಷ್ಟಿಸುವ ಯತ್ನ ಕೆಲ ಪಕ್ಷಗಳಿಂದ ನಡೆಯಿತು. ಶರಣಾರ್ಥಿಗಳ ಮತಬ್ಯಾಂಕ್ ದೊಡ್ಡ ಪ್ರಮಾಣದಲ್ಲಿ ಇರದಿದ್ದರೂ, ಸಿಎಎ ಜಾರಿ ವಿಷಯ ರಾಷ್ಟ್ರಾದ್ಯಂತ ಚರ್ಚೆಗೆ ಬಂದಿದ್ದರಿಂದ, ಪ್ರಾಮುಖ್ಯ ಪಡೆದುಕೊಂಡಿದೆ. ಆಡಳಿತ ಪಕ್ಷ ಇದನ್ನೂ ತನ್ನ ಸಾಧನೆಯ ಪಟ್ಟಿಯಲ್ಲಿ ಸೇರಿಸಿಕೊಂಡು, ಜನರ ಬಳಿ ಮತ ಯಾಚಿಸುತ್ತಿದೆ.

    ಬಲಿಷ್ಠ ವಿದೇಶಾಂಗ ನೀತಿ: ಹೊರದೇಶಗಳಲ್ಲಿ ಸಂಕಷ್ಟದಲ್ಲಿ ಸಿಲುಕಿದ ಭಾರತೀಯರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತಂದದ್ದು, ಜಗತ್ತಿನ ಅಭಿವೃಧಿ್ಧ ಹೊಂದಿದ ರಾಷ್ಟ್ರಗಳೊಂದಿಗೆ ಮೈತ್ರಿ ವೃದ್ಧಿಸಿದ್ದು. ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತದ ದನಿಗೆ ಮನ್ನಣೆ ಸಿಗತೊಡ ಗಿದ್ದು, ಪಾಕಿಸ್ತಾನಕ್ಕೆ ಎಲ್ಲ ಬಗೆಯ ನೆರವು ನೀಡಿ ಕೈಸುಟ್ಟುಕೊಂಡಿರುವ ಅಮೆರಿಕ ಭಾರತದ ಸ್ನೇಹಕ್ಕೆ ಹಂಬಲಿಸುತ್ತಿರುವುದು, ಅಲ್ಲದೆ ಅಮೆರಿಕದ ವಿರೋಧದ ನಡುವೆಯೂ ರಷ್ಯಾದಿಂದ ಕಚ್ಚಾ ತೈಲ ಆಮದನ್ನು ಭಾರತ ಅಬಾಧಿತವಾಗಿ ಇರಿಸಿದ್ದು, ಬಲಿಷ್ಠ ವಿದೇಶಾಂಗ ನೀತಿಗೆ ಕೆಲ ನಿದರ್ಶನಗಳು. ‘ಇದು ಬಲಿಷ್ಠ ಹಾಗೂ ಕುಶಲ ವಿದೇಶಾಂಗ ನೀತಿಗೆ ಸಾಕ್ಷಿ’ ಎಂದು ಕ್ಷೇತ್ರತಜ್ಞರೇ ಪ್ರಶಂಸಿಸಿರುವುದು ಗಮನಾರ್ಹ.

    ಅಯೋಧ್ಯೆ ಶ್ರೀರಾಮ ಮಂದಿರ: ‘ಸಾಂಸ್ಕೃತಿಕ ರಾಷ್ಟ್ರವಾದ’, ‘ಸಾಂಸ್ಕೃತಿಕ ಪುನರುಜ್ಜೀವನ’ ವಿಷಯ ಬಿಜೆಪಿ ಪಾಳಯಕ್ಕೆ ಹೊಸ ಬಲ ತಂದುಕೊಟ್ಟಿದೆ. ಹಲವು ಚುನಾವಣೆಗಳಲ್ಲಿ ಪ್ರಮುಖ ವಿಷಯವಾದ ಮತ್ತು ರಾಷ್ಟ್ರವ್ಯಾಪಿ ಆಂದೋಲನಕ್ಕೆ ಕಾರಣವಾಗಿದ್ದ ಅಯೋಧ್ಯೆ ಶ್ರೀರಾಮ ಮಂದಿರವು ನಿರ್ವಣಗೊಂಡು ಇದೇ ವರ್ಷದ ಜನವರಿ 22ರಂದು ಉದ್ಘಾಟನೆಗೊಂಡಿರುವುದರಿಂದ, ಹಳೆಯ ಪ್ರಕರಣ ಸುಖಾಂತ್ಯ ಕಂಡಿದೆ. ಮಂದಿರದ ಶಿಲಾನ್ಯಾಸ ಮತ್ತು ಉದ್ಘಾಟನೆ ಸಮಾರಂಭದಲ್ಲಿ ಖುದ್ದು ಭಾಗಿಯಾದ ಪ್ರಧಾನಿ ನರೇಂದ್ರ ಮೋದಿ ಈ ಮೂಲಕ ಹಿಂದುತ್ವದ ಸಂದೇಶವನ್ನು ಬಲವಾಗಿ ರವಾನಿಸಿದ್ದಾರೆ. ಅಷ್ಟೇ ಅಲ್ಲ, ಮಂದಿರ ಉದ್ಘಾಟನೆಯಿಂದ ಪ್ರಧಾನಿ ಮೋದಿಯವರ ವೈಯಕ್ತಿಕ ವರ್ಚಸ್ಸು ಕೂಡ ಗಣನೀಯವಾಗಿ ಏರಿಕೆ ಆಗಿದೆ. ಮತ್ತೊಂದೆಡೆ, ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಶ್ರೀರಾಮ ಮಂದಿರದ ಉದ್ಘಾಟನೆ ಆಹ್ವಾನವನ್ನು ತಿರಸ್ಕರಿಸಿದ್ದು, ಅದೇ ಪಕ್ಷದ ಹಲವು ನಾಯಕರಿಗೆ ಬೇಸರ ತಂದಿದೆ ಮತ್ತು ‘ಇದು ರಾಜಕೀಯವಾಗಿ ಕಾಂಗ್ರೆಸ್ ಇರಿಸಿದ ತಪ್ಪು ಹೆಜ್ಜೆ. ಇದರಿಂದ ಪಕ್ಷಕ್ಕೆ ಹಿನ್ನಡೆಯಾಗಿದೆ’ ಎಂಬುದನ್ನು ಕೆಲ ನಾಯಕರು ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದಾರೆ. ಭಾರತವಷ್ಟೇ ಅಲ್ಲದೆ, ಜಾಗತಿಕ ಮಟ್ಟದಲ್ಲಿ ಗಮನ ಸೆಳೆದ ಮಂದಿರ ಲೋಕಾರ್ಪಣೆಯ ವಿದ್ಯಮಾನ ಮತ್ತು ‘ಜೈಶ್ರೀರಾಮ’ನ ಅಲೆ ಕೇಸರಿ ಪಡೆ ಉತ್ಸಾಹವಂತೂ ಹೆಚ್ಚಿಸಿದೆ. ಅದರಲ್ಲೂ ದಕ್ಷಿಣದ ರಾಜ್ಯಗಳಿಗಿಂತ ಉತ್ತರದ ರಾಜ್ಯಗಳಲ್ಲಿ ಇದು ಹೆಚ್ಚಿನ ಪ್ರಭಾವ ಬೀರಿದೆ. ಏಕೆಂದರೆ, ಜನರಿಗೆ ಇದು ಶ್ರದ್ಧೆ ಮತ್ತು ಭಾವನಾತ್ಮಕ ಸಂಗತಿಯಾಗಿ ಮಾರ್ಪಟ್ಟಿತು.

    ಇಡಿ, ಸಿಬಿಐ: ‘ಜಾರಿ ನಿರ್ದೇಶನಾಲಯ (ಇಡಿ) ಮತ್ತು ಸಿಬಿಐನ್ನು ದುರುಪಯೋಗಪಡಿಸಿಕೊಂಡು ಪ್ರತಿಪಕ್ಷಗಳನ್ನು ಹಣಿಯಲು ಬಿಜೆಪಿ ಯತ್ನಿಸುತ್ತಿದೆ ಮತ್ತು ಈ ಬೆಳವಣಿಗೆ ಪ್ರಜಾಪ್ರಭುತ್ವಕ್ಕೆ ಮಾರಕ’ ಎಂಬ ಕಾಂಗ್ರೆಸ್ಸಿನ ದನಿಗೆ ಇತರ ಪ್ರಾದೇಶಿಕ ಪಕ್ಷಗಳು ದನಿಗೂಡಿಸಿವೆ. ಅಲ್ಲದೆ, ನಿರುದ್ಯೋಗ ಹೆಚ್ಚಳ, ಯುವಕರ ಆಶೋತ್ತರಗಳಿಗೆ ಸ್ಪಂದಿಸದಿರುವುದು ಹೀಗೆ ಹಲವು ವಿಷಯಗಳು ವಿರೋಧ ಪಕ್ಷಗಳ ಪ್ರಚಾರಕ್ಕೆ ಬಳಕೆಯಾಗುತ್ತಿವೆ. ಸರ್ಕಾರ ಯಾವೆಲ್ಲ ಕ್ಷೇತ್ರಗಳಲ್ಲಿ ವಿಫಲವಾಗಿದೆ ಎಂಬ ಬಗ್ಗೆಯೂ ಅವು ಪ್ರಸ್ತಾಪಿಸುತ್ತಿವೆ. ಇದಕ್ಕೆ ಪ್ರತ್ಯುತ್ತರವಾಗಿ ಬಿಜೆಪಿ ಸುಶಾಸನ, ಸ್ಥಿರ ಸರ್ಕಾರದ ಸಕಾರಾತ್ಮಕ ಅಂಶಗಳನ್ನು ಪಟ್ಟಿ ಮಾಡುತ್ತಿದೆ. ಜಿಡಿಪಿ ಏರಿಕೆ ಮತ್ತು ಜಾಗತಿಕವಾಗಿ ಭಾರತ ಐದನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿರುವುದು ಅದರ ಉತ್ಸಾಹ ಹೆಚ್ಚಿಸಿದೆ.

    ಸಾಮಾಜಿಕ ಕಲ್ಯಾಣ ಯೋಜನೆಗಳು: ಸಾಮಾಜಿಕ ಕಲ್ಯಾಣ ಯೋಜನೆಗಳ ಜಾರಿಯಲ್ಲಿ ತನ್ನ ರೀಪೋರ್ಟ್ ಕಾರ್ಡ್​ನ್ನು ಜನರ ಮುಂದೆ ಇರಿಸಿರುವ ಬಿಜೆಪಿ, ಈ ಹಿಂದಿನ ಸರ್ಕಾರಗಳ ವೇಗವನ್ನೂ ತಾಳೆ ಹಾಕುತ್ತಿದೆ. ಬಹುತೇಕ ರಾಜ್ಯಗಳಲ್ಲಿ ಮೋದಿ ಗ್ಯಾರಂಟಿ ವರ್ಸಸ್ ಸ್ಥಳೀಯ ಗ್ಯಾರಂಟಿಗಳ ನಡುವೆ ಚರ್ಚೆ, ವಾಕ್ಸಮರ ನಡೆಯುತ್ತಿದೆ. ಕೇವಲ ಸಾಮಾಜಿಕ ಕಲ್ಯಾಣ ಯೋಜನೆಗಳ ಯಶಸ್ಸನ್ನು ಅವಲಂಬಿಸಿ, ಗೆಲುವು ಸಾಧಿಸಿವುದು ಕಷ್ಟ ಎಂಬುದನ್ನು ಬಿಜೆಪಿ 2004ರ ಪಾಠದಿಂದ ಕಲಿತುಕೊಂಡಿದೆ. ಆಗಿನ ‘ಇಂಡಿಯಾ ಶೈನಿಂಗ್’ ಘೊಷಣೆಯನ್ನು ಮತದಾರರು ತಿರಸ್ಕರಿಸಿದ್ದರು. 2004ರಲ್ಲಿ ಎನ್​ಡಿಎ ಸರ್ಕಾರ ಪತನಗೊಂಡು. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರದ ಗದ್ದುಗೆಯೇರಿತ್ತು. ಅಲ್ಲದೆ, ಜಾತಿ ಸಮೀಕರಣವನ್ನೂ ಬಿಜೆಪಿ-ಕಾಂಗ್ರೆಸ್ ಎರಡೂ ಪಕ್ಷಗಳು ಪ್ರಯೋಗಿಸುತ್ತಿವೆ. ಕೆಲ ರಾಜ್ಯಗಳ ಮುಖ್ಯಮಂತ್ರಿಗಳನ್ನು ದಿಢೀರನೆ ಬದಲಿಸಿದ ಬಿಜೆಪಿಯ ನಿರ್ಧಾರದ ಹಿಂದೆ ಇರುವುದು ಇದೇ ಜಾತಿ ಸಮೀಕರಣ ಎಂಬುದು ರಹಸ್ಯವೇನಲ್ಲ.

    ಜಾತಿ ಜನಗಣತಿ: ‘ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ದೇಶಾದ್ಯಂತ ಜಾತಿಗಣತಿ ನಡೆಸಲಾಗುವುದು’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈಗಾಗಲೇ ಘೊಷಿಸಿದ್ದಾರೆ. ಆದರೆ, ಬಿಜೆಪಿ ಜಾತಿಗಣತಿಯ ವಿರುದ್ಧವಾಗಿದೆ. ಇದರ ಸಾಧಕಬಾಧಕಗಳು, ಬೆಂಬಲ-ವಿರೋಧದ ತರ್ಕಗಳನ್ನು ಅವಲೋಕಿಸುತ್ತಿರುವ ಮತದಾರರು, ಮತದಾನದ ವೇಳೆ ಒಂದು ನಿಷ್ಕರ್ಷಕ್ಕೆ ಬರಲಿದ್ದಾರೆ. ಕರ್ನಾಟಕ ರಾಜಕಾರಣದಲ್ಲೂ ಇದು, ವಿವಾದದ ಕೇಂದ್ರ ಬಿಂದು.

    ಮಹಿಳಾಶಕ್ತಿಗೆ ಮನ್ನಣೆ: ಸಂಸತ್​ನಲ್ಲಿ ಮಹಿಳಾ ಮಸೂಲಾತಿ ಮಸೂದೆ ಅಂಗೀಕಾರ ಗೊಂಡಿದೆಯಾದರೂ, ಅದು ಸದ್ಯದಲ್ಲೇ ಜಾರಿಗೆ ಬರುವುದಿಲ್ಲ. ಮತದಾರರ ಸಂಖ್ಯೆಯಲ್ಲಿ ಸರಾಸರಿ ಶೇಕಡ 50ರಷ್ಟಿರುವ ಮಹಿಳಾಶಕ್ತಿಗೆ ಈ ಬಾರಿ ರಾಜಕೀಯ ಪಕ್ಷಗಳು ಮನ್ನಣೆ ನೀಡುತ್ತಿದ್ದು, ಚುನಾವಣೆಗೆ ಅಭ್ಯರ್ಥಿಯನ್ನಾಗಿಸಿ ಸ್ಪರ್ಧೆಗೆ ಸಜ್ಜುಗೊಳಿಸುತ್ತಿವೆ. ಈ ಟ್ರೆಂಡ್ ಕೂಡ ಕುತೂಹಲ ಸೃಷ್ಟಿಸಿದೆ.

    ಒಕ್ಕೂಟ ವಿಸ್ತಾರ: ತನ್ನ ಬಲದ ಮೇಲೆ 370 ಸ್ಥಾನಗಳನ್ನು ಗೆಲ್ಲುವುದಾಗಿ ಹೇಳಿಕೊಳ್ಳುತ್ತಿರುವ ಬಿಜೆಪಿ, ಮತ್ತೊಂದೆಡೆ ಎನ್​ಡಿಎ ಒಕ್ಕೂಟಕ್ಕೆ ಹಳೆಯ ಮಿತ್ರರನ್ನು ಕರೆದು ತರುತ್ತಿದೆ. ನಿತೀಶ್ ಕುಮಾರ್, ಚಂದ್ರಬಾಬು ನಾಯ್ಡು ಈಗಾಗಲೇ ಎನ್​ಡಿಎಗೆ ಮರಳಿದ್ದರೆ, ಬಿಜು ಜನತಾದಳದ ನವೀನ್ ಪಟ್ನಾಯಕ್ ಅವರೊಂದಿಗೆ ಮಾತುಕತೆ ನಡೆಯು ತ್ತಿದೆ. ಅತ್ತ, ಐಎನ್​ಡಿಐಎ ಒಕ್ಕೂಟ ಮಿತ್ರಪಕ್ಷಗಳನ್ನು ಶೋಧಿಸುತ್ತಿದೆ.

    ಬೆಲೆಯೇರಿಕೆಯ ಸುತ್ತಮುತ್ತ: ಪ್ರತಿಪಕ್ಷಗಳ ಪಾಲಿಗೆ ನಿಸ್ಸಂದೇಹವಾಗಿ, ಇದು ಪ್ರಬಲ ಅಸ್ತ್ರವಾಗಿತ್ತು. ಆದರೆ, ಚುನಾವಣೆ ಘೊಷಣೆಯ ಕೆಲ ದಿನಗಳ ಮುನ್ನ ಎಲ್​ಪಿಜಿ ಸಿಲಿಂಡರ್, ಪೆಟ್ರೋಲ್, ಡೀಸೆಲ್ ಬೆಲೆಯನ್ನು ಸರ್ಕಾರ ಇಳಿಸಿತು. ‘ಬೆಲೆಯೇರಿಕೆ ಸೃಷ್ಟಿಸಿರುವ ಆಡಳಿತ ವಿರೋಧಿ ಅಲೆಗೆ ಬೆದರಿ ಸರ್ಕಾರ ಈ ತೀರ್ಮಾನ ಕೈಗೊಂಡಿತು, ಮುಂಚೆಯೇ ಈ ನಿರ್ಧಾರ ತೆಗೆದುಕೊಳ್ಳಬಹುದಿತ್ತಲ್ಲ…’ ಎಂದು ವಿರೋಧ ಪಕ್ಷಗಳು ಆಕ್ರಮಕವಾಗಿಯೇ ಪ್ರಶ್ನಿಸಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts