More

    ನಕಲಿ ಸಾಗುವಳಿ ಪತ್ರ ವಿತರಣೆ

    ಅರಕಲಗೂಡು: ತಹಸೀಲ್ದಾರ್ ಸಹಿ ಮತ್ತು ಸೀಲ್ ಬಳಸಿ ನಕಲಿ ಸಾಗುವಳಿ ಪತ್ರ ನೀಡಿರುವುದು ಬೆಳಕಿಗೆ ಬಂದಿದ್ದು, ಇದರ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಾಸಕ ಎ.ಮಂಜು ಜಿಲ್ಲಾಧಿಕಾರಿ ಅವರನ್ನು ಆಗ್ರಹಿಸಿದರು.

    ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕು ಕಚೇರಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು, ಈ ಬಗ್ಗೆ ಹಲವು ಬಾರಿ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಎಚ್ಚರಿಕೆ ನೀಡಿದರೂ ಪ್ರಯೋಜವಾಗಿಲ್ಲ ಎಂದರು.

    ಕೊಣನೂರು ಹೋಬಳಿ ತರಿಗಳಲೆ ಗ್ರಾಮದ ಸ.ನಂ.139ರಲ್ಲಿ ಸಾವಿತ್ರಮ್ಮ ಅವರಿಗೆ 8.04 ಎಕರೆ ಭೂಮಿ ಹಾಗೂ ಅದೇ ಗ್ರಾಮದ ಸ. ನಂ.142 ರಲ್ಲಿ 4.10 ಎಕರೆ ಭೂಮಿಯನ್ನು ಜಗದೀಶ್ ಎಂಬುವರ ಹೆಸರಿಗೆ ಸಾಗುವಳಿ ಚೀಟಿ ಮಾಡಿಕೊಡಲಾಗಿದೆ. ಇದಕ್ಕಾಗಿ 10 ಲಕ್ಷ ರೂ.ಗಳ ಒಪ್ಪಂದವಾಗಿ ಜಗದೀಶ್ ಅವರಿಂದ 5.20 ಲಕ್ಷ ರೂ. ಈಗಾಗಲೇ ಕಂದಾಯ ಇಲಾಖೆಯ ಮಧ್ಯವರ್ತಿಗಳ ಕೈಸೇರಿದೆ. ಅಲ್ಲದೆ, ಇವರಿಬ್ಬರು ಗ್ರಾಮದಲ್ಲಿ ವಾಸವಿಲ್ಲದೆ ಬೆಂಗಳೂರಿನಲ್ಲಿ ಪತಿ-ಪತ್ನಿ ನೆಲೆಸಿದ್ದಾರೆ. ಜತೆಗೆ, ಈ ವ್ಯಕ್ತಿಗಳು ಸರ್ಕಾರಿ ಭೂಮಿ ಮಂಜೂರಾತಿಗಾಗಿ ಅರ್ಜಿಗಳನ್ನು ಸಲ್ಲಿಸದಿದ್ದರೂ ಮತ್ತು ಬಗರ್‌ಹುಕುಂ ಸಮಿತಿ ಮುಂದೆ ಈ ಪ್ರಕರಣ ಬಾರದಿದ್ದರೂ ಯಾವುದೇ ದಾಖಲೆ ಇಲ್ಲದೆ ಸಾಗುವಳಿ ಚೀಟಿ ನೀಡಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ. ಮೇಲಾಗಿ ಇಂತಹ ಪ್ರಕರಣ ಸಾಕಷ್ಟಿರಬಹುದು ಎಂಬ ಶಂಕೆ ಮೂಡುತ್ತಿದೆ. ಜಿಲ್ಲಾಧಿಕಾರಿ ಈ ಪ್ರಕರಣದ ತನಿಖೆಯನ್ನು ನಿಸ್ಪಕ್ಷಪಾತವಾಗಿ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಎ.ಮಂಜು ಒತ್ತಾಯಿಸಿದರು.

    ಅನುಚಿತ ವರ್ತನೆಗೆ ಕಿಡಿ: ತಾಲೂಕಿನಲ್ಲಿ ಕೆಲವು ಪೊಲೀಸರು ಸಾರ್ವಜನಿಕರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾರೆ. ಕಳೆದ ವಾರ ಅನಕೃ ವೃತ್ತದಲ್ಲಿ ಬಸ್‌ಗಾಗಿ ಕಾಯುತ್ತಿದ್ದ ಇಬ್ಬರು ಯುವಕರ ಮೇಲೆ ಪೊಲೀಸರು ಹಲ್ಲೆ ನಡೆಸಿರುವುದು ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲು ನನ್ನ ಅಭ್ಯಂತರವಿಲ್ಲ. ಆದರೆ ಕಾರಣವಿಲ್ಲದೆ ದಬ್ಬಾಳಿಕೆ ನಡೆಸಿದರೆ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts