More

    ಗಾಜಾದಲ್ಲಿ ಲಕ್ಷಾಂತರ ಮಂದಿ ಸ್ಥಳಾಂತರಕ್ಕೆ ಇಸ್ರೇಲ್​ ಆದೇಶ: ವಿಶ್ವಸಂಸ್ಥೆ ವಿರೋಧ, ಭೀಕರತೆ ಬಗ್ಗೆ ಎಚ್ಚರಿಕೆ

    ಜೆರುಸಲೇಂ: ಕೇವಲ 24 ಗಂಟೆಯೊಳಗೆ ಗಾಜಾ ಪ್ರದೇಶವನ್ನು ತೊರೆದು ದಕ್ಷಿಣ ಪ್ರದೇಶದ ಕಡೆಗೆ ತೆರಳುವಂತೆ ಲಕ್ಷಾಂತರ ಗಾಜಾ ನಿವಾಸಿಗಳಿಗೆ ಇಸ್ರೇಲ್​ ಸೇನೆ ಆದೇಶ ಹೊರಡಿಸಿದ್ದು, ಶೀಘ್ರದಲ್ಲೇ ಗಾಜಾ ಮೇಲೆ ಇಸ್ರೇಲ್​ ಭೀಕರ ದಾಳಿ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದರ ಬೆನ್ನಲ್ಲೇ ವಿಶ್ವಸಂಸ್ಥೆ ವಿನಾಶಕಾರಿ ಪರಿಣಾಮಗಳ ಬಗ್ಗೆ ಇಸ್ರೇಲ್​ಗೆ ಎಚ್ಚರಿಕೆಯನ್ನು ನೀಡಿದೆ.

    ಇಸ್ರೇಲ್​ ಮತ್ತು ಹಮಾಸ್​ ಉಗ್ರರ ನಡುವಿನ ಯುದ್ಧ ಇಂದಿಗೆ ಒಂದು ವಾರ ಪೂರ್ಣಗೊಳ್ಳಲಿದೆ. ಆದರೆ, ಮಧ್ಯಪೂರ್ವ ರಾಷ್ಟ್ರದಲ್ಲಿ ಮಾತ್ರ ಯಾವುದೇ ಜಾಗದಲ್ಲಿ ಶಾಂತಿ ಮಾತ್ರ ಕಾಣಿಸುತ್ತಿಲ್ಲ. ಇಸ್ರೇಲ್​ ಮತ್ತು ಗಾಜಾ ಎರಡೂ ಕಡೆಗಳಲ್ಲಿ 3 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಇದೀಗ ಗಾಜಾ ಮಂದಿಗಳನ್ನು ಸ್ಥಳಾಂತರ ಮಾಡುವಂತೆ ಇಸ್ರೇಲ್​ ಆದೇಶ ಮಾಡಿದೆ. ಇದರ ಬೆನ್ನಲ್ಲೇ ವಿಶ್ವಸಂಸ್ಥೆ ಎಚ್ಚರಿಸಿದ್ದು, ಪ್ರಸ್ತುತ ದುರಂತವು ವಿಪತ್ತಿನ ಪರಿಸ್ಥಿತಿಯಾಗಿ ಬದಲಾಗುವುದನ್ನು ತಪ್ಪಿಸಲು, ಸಾಮೂಹಿಕ ಸ್ಥಳಾಂತರ ಆದೇಶವನ್ನು ಈ ಕೂಡಲೇ ಹಿಂಪಡೆದುಕೊಳ್ಳಿ. ಯಾವುದೇ ಕಾರಣಕ್ಕೂ ಸಾಮೂಹಿಕ ಸ್ಥಳಾಂತರ ಸಾಧ್ಯವಿಲ್ಲ, ಒಂದು ವೇಳೆ ಇದು ನಡೆದರೆ ಪರಿಸ್ಥಿತಿ ಇನ್ನು ಭೀಕರವಾಗಿರುತ್ತದೆ ಎಂದು ಇಸ್ರೇಲ್​ಗೆ ತಿಳಿಸಿದೆ.

    ಇಷ್ಟೇ ಅಲ್ಲದೆ, ಇರಾನ್​ನಲ್ಲಿರುವ ವಿಶ್ವಸಂಸ್ಥೆ ಆಯೋಗ ಸಹ ಇಸ್ರೇಲ್​ಗೆ ಎಚ್ಚರಿಕೆ ನೀಡಿದೆ. ಇಸ್ರೇಲ್​ ಕೂಡಲೇ ಬಾಂಬ್ ದಾಳಿಯನ್ನು ನಿಲ್ಲಿಸದಿದ್ದರೆ, ಈ ಯುದ್ಧವು ‘ಇತರ ರಂಗಗಳಲ್ಲಿ’ಯೂ ತೆರೆಯಬಹುದು ಎಂದು ಎಚ್ಚರಿಸಿದೆ. ಗಾಜಾದಲ್ಲಿ ಹಮಾಸ್​ ಆಡಳಿತ ಇರುವ ಪ್ರದೇಶವನ್ನು ಇಸ್ರೇಲ್​ ಆಕ್ರಮಿಸಿಕೊಳ್ಳಲಿದೆ ಎಂಬ ಮಾತುಗಳು ಕೇಳಿಬರುತ್ತಿರುವುದರ ನಡುವೆಯೇ 24 ಗಂಟೆಯೊಳಗೆ ಉತ್ತರ ಗಾಜಾದಲ್ಲಿರುವ 1.1 ಮಿಲಿಯನ್​ ನಿವಾಸಿಗಳು ದಕ್ಷಿಣ ಪ್ರದೇಶಕ್ಕೆ ಸ್ಥಳಾಂತರ ಮಾಡಲು ಆದೇಶ ಮಾಡಿರುವುದಾಗಿ ವಿಶ್ವಸಂಸ್ಥೆಗೆ ಇಸ್ರೇಲ್​ ತಿಳಿಸಿದೆ. ಆದರೆ, ಇದರ ಭೀಕರ ಸ್ಥಿತಿಗೆ ಕಾರಣವಾಗುತ್ತದೆ. ಹೀಗಾಗಿ ಆದೇಶವನ್ನು ಹಿಂಪಡೆಯುವಂತೆ ವಿಶ್ವಸಂಸ್ಥೆ ಆಗ್ರಹಿಸಿದೆ.

    ಇದನ್ನೂ ಓದಿ: ಮುಂದಿನ 4 ದಿನಗಳಲ್ಲಿ ಈ ರಾಜ್ಯಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ; ಕೇರಳದಲ್ಲಿ ಯೆಲ್ಲೋ ಅಲರ್ಟ್‌

    ಗಾಜಾಕ್ಕೆ ನುಗ್ಗಲಿದೆ ಇಸ್ರೇಲ್ ಸೇನೆ?
    ಹಮಾಸ್ ಮೇಲೆ ಇಸ್ರೇಲಿ ಸೇನೆ ಪ್ರಮುಖ ಕಾರ್ಯಾಚರಣೆಗೆ ತಯಾರಿ ನಡೆಸುತ್ತಿದೆ ಎನ್ನಲಾಗಿದೆ. ಈವರೆಗೆ ವೈಮಾನಿಕ ದಾಳಿ, ಆರ್ಟಿಲರಿ, ಕ್ಷಿಪಣಿ ಮೂಲಕ ದಾಳಿ ನಡೆಸುತ್ತಿದ್ದ ಇಸ್ರೇಲ್ ಸೇನೆಯು ಇನ್ನು ಗಾಜಾ ಪ್ರದೇಶದೊಳಗೆ ನುಗ್ಗಿ ಹಮಾಸ್ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಲಿದೆ. ಆದರೆ ಇಸ್ರೇಲ್ ಸರ್ಕಾರ ಈ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಪ್ರಕಟಿಸಿಲ್ಲ. ಇಸ್ರೇಲ್ ಸೇನೆಯು ಸರ್ಕಾರದ ಆದೇಶಕ್ಕಾಗಿ ಕಾಯುತ್ತಿದೆ ಎಂದು ಸೇನಾಪಡೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಇಸ್ರೇಲ್ ಈಗಾಗಲೇ ತನ್ನ ಸುಮಾರು 3.6 ಲಕ್ಷ ಮೀಸಲು ಸೈನಿಕರಿಗೆ ಬುಲಾವ್ ನೀಡಿದೆ. ವಿದೇಶದಲ್ಲಿ ನೆಲೆಸಿರುವ ವ್ಯಕ್ತಿಗಳು ಕೂಡ ತಾಯಿನಾಡಿನ ರಕ್ಷಣೆಗೆ ಸೇನೆ ಸೇರಲು ಇಸ್ರೇಲ್​ಗೆ ವಾಪಸಾಗುತ್ತಿದ್ದಾರೆ.

    ಶನಿವಾರ (ಅ.7) ಯುದ್ಧ ಪ್ರಾರಂಭವಾದಾಗಿನಿಂದ ಇಸ್ರೇಲ್‌ನಲ್ಲಿ ಕನಿಷ್ಠ 1,200 ಮತ್ತು ಗಾಜಾ ಪಟ್ಟಿಯಲ್ಲಿ 1,400 ಮಂದಿ ಮೃತಪಟ್ಟಿದ್ದಾರೆ. ಇದಲ್ಲದೆ, 1,500 ಹಮಾಸ್ ಉಗ್ರರ ಶವಗಳು ಇಸ್ರೇಲ್ ಪ್ರದೇಶದಲ್ಲಿ ಪತ್ತೆಯಾಗಿವೆ ಎಂದು ಸರ್ಕಾರ ಹೇಳಿಕೊಂಡಿದೆ. ಇತ್ತ ಇಸ್ರೇಲಿ ಕಡೆಯಿಂದ ವಶಕ್ಕೆ ಪಡೆಯಲಾದ ಸುಮಾರು 150 ಮಂದಿಯನ್ನು ಹಮಾಸ್ ಒತ್ತೆಯಾಳಾಗಿ ಇರಿಸಿಕೊಂಡಿದೆ.

    ಒತ್ತೆಯಾಳು ಬಿಡುಗಡೆಗೆ ಆಗ್ರಹ
    ಹಮಾಸ್ ತನ್ನ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ವರೆಗೆ ಗಾಜಾಕ್ಕೆ ಮೂಲ ಸೌಲಭ್ಯ, ಮಾನವೀಯ ನೆರವನ್ನು ನೀಡಲು ಅವಕಾಶ ಕೊಡುವುದಿಲ್ಲ ಎಂದು ಇಸ್ರೇಲಿ ಇಂಧನ ಸಚಿವರು ಹೇಳಿದ್ದಾರೆ. ಗಾಜಾಕ್ಕೆ ವಿದ್ಯುತ್, ನೀರು ಸಂಪೂರ್ಣ ಸ್ಥಗಿತವಾಗಲಿದೆ. ಅಪಹರಣಕ್ಕೊಳಗಾದ ಇಸ್ರೇಲಿಗರು ಮನೆಗೆ ಹಿಂದಿರುಗುವವರೆಗೆ ಯಾವುದೇ ಆಹಾರ ಮತ್ತು ಇಂಧನ ಟ್ರಕ್ ಗಾಜಾಕ್ಕೆ ಪ್ರವೇಶ ಮಾಡುವುದಿಲ್ಲ ಎಂದಿದ್ದಾರೆ.

    ಹಮಾಸ್ ಸರ್ವನಾಶ, ನೆತನ್ಯಾಹು ಶಪಥ
    ಹಮಾಸ್ ಉಗ್ರ ಸಂಘಟನೆಯನ್ನು ಸಂಪೂರ್ಣವಾಗಿ ನಾಶಪಡಿಸುವುದಾಗಿ ಇಸ್ರೇಲ್ ಅಧ್ಯಕ್ಷ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ಹಮಾಸ್​ನ ಪ್ರತಿಯೊಬ್ಬ ಸದಸ್ಯನ ಸಾವು ಖಚಿತ. ಈ ಭಯೋತ್ಪಾದಕ ಸಂಘಟನೆಯನ್ನು ನಾವು ಹತ್ತಿಕ್ಕುತ್ತೇವೆ ಎಂದಿದ್ದಾರೆ.

    ಇಸ್ರೇಲ್- ಪ್ಯಾಲೆಸ್ತೀನ್ ವಿವಾದವೇನು?
    ಇಸ್ರೇಲ್- ಪ್ಯಾಲೆಸ್ತೀನ್ ನಡುವಿನ ಸಂಘರ್ಷ ಸುಮಾರು ನೂರು ವರ್ಷಗಳಿಂದ ನಡೆಯುತ್ತಿದೆ. ವೆಸ್ಟ್ ಬ್ಯಾಂಕ್, ಗಾಜಾ ಪಟ್ಟಿ ಮತ್ತು ಗೋಲನ್ ಹೈಟ್ಸ್ ಇನ್ನಿತರ ಪ್ರದೇಶಗಳ ಮೇಲಿನ ಹಕ್ಕಿನ ಬಗ್ಗೆ ಎರಡೂ ದೇಶಗಳ ನಡುವೆ ವಿವಾದ ಇದೆ. ಪೂರ್ವ ಜೆರುಸಲೆಮ್ ಸೇರಿ ಈ ಪ್ರದೇಶಗಳನ್ನು ಪ್ಯಾಲೆಸ್ತೀನ್ ತನ್ನದು ಎಂದು ಹೇಳಿಕೊಳ್ಳುತ್ತಿದೆ. ಆದರೆ ಇಸ್ರೇಲ್ ಜೆರುಸಲೆಮ್ ಮೇಲಿನ ಹಕ್ಕನ್ನು ಸಾಧಿಸುತ್ತಿದೆ.

    ಗಾಜಾ ಪಟ್ಟಿ ಎಂದರೇನು? : ಗಾಜಾ ಪಟ್ಟಿ ಇಸ್ರೇಲ್ ಮತ್ತು ಈಜಿಪ್ಟ್ ನಡುವೆ ಇದೆ. ಈ ಸ್ಥಳವು ಪ್ರಸ್ತುತ ಹಮಾಸ್ ಉಗ್ರರ ನಿಯಂತ್ರಣದಲ್ಲಿದೆ. ಹಮಾಸ್ ಎಂಬುದು ಇದು ಇಸ್ರೇಲ್ ವಿರೋಧಿ ಗುಂಪು. ಸೆಪ್ಟೆಂಬರ್ 2005 ರಲ್ಲಿ ಇಸ್ರೇಲ್, ಗಾಜಾ ಪಟ್ಟಿಯಿಂದ ತನ್ನ ಪಡೆಗಳನ್ನು ಹಿಂತೆಗೆದುಕೊಂಡಿತು. ನಂತರ ಈ ಪ್ರದೇಶದ ಮೇಲೆ ಹಲವಾರು ನಿರ್ಬಂಧಗಳನ್ನು ವಿಧಿಸಿತು. ವೆಸ್ಟ್ ಬ್ಯಾಂಕ್ ಮತ್ತು ಗಾಜಾ ಪಟ್ಟಿಯಲ್ಲಿ ಸ್ವತಂತ್ರ ಪ್ಯಾಲೆಸ್ಟೈನ್ ರಾಜ್ಯವನ್ನು ಸ್ಥಾಪಿಸಬೇಕು ಎಂದು ಪ್ಯಾಲೆಸ್ತೀನ್ ಹೋರಾಟ ನಡೆಸುತ್ತಿದೆ. (ಏಜೆನ್ಸೀಸ್​)

    ಪ್ರಚೋದನಾಕಾರಿ ಭಾಷಣ ಆರೋಪ: ಕೆ.ಎಸ್​. ಈಶ್ವರಪ್ಪ ವಿರುದ್ಧ ಸುಮೋಟೋ ಪ್ರಕರಣ ದಾಖಲು

    ದೇವಭೂಮಿಯಲ್ಲಿ ಅಭಿವೃದ್ಧಿ ಮಂತ್ರ, ಆದಿಕೈಲಾಸದಲ್ಲಿ ಧ್ಯಾನ: 4,200 ಕೋಟಿ ರೂ. ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಚಾಲನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts