

ಬೆಂಗಳೂರು: ಶಕ್ತಿ ಯೋಜನೆ ದುರ್ಬಳಕೆ ಆಗದಂತೆ ತಡೆಯಲು ಮುಂದಾಗಿರುವ ಸಾರಿಗೆ ಇಲಾಖೆ, ಯಾವ ಯಾವ ಅಪರಾಧಗಳಿಗೆ ಯಾವ್ಯಾವ ಕ್ರಮಗಳನ್ನು ಕೈಗೊಳ್ಳಲಾಗುವುದು ಎನ್ನುವುದನ್ನು ವಿವರಿಸಿ ಸುತ್ತೋಲೆ ಹೊರಡಿಸಿದೆ.
ಸಾರಿಗೆ ಸಿಬ್ಬಂದಿಗಳು ಪ್ರಯಾಣಿಕರ ಸಂಖ್ಯೆಯಲ್ಲಿ ಗೋಲ್ಮಾಲ್ ಮಾಡುತ್ತಿರುವ ಆರೋಪ ಕೇಳಿಬಂದಿದ್ದು ಕಠಿಣ ಕ್ರಮದ ಎಚ್ಚರಿಕೆಯನ್ನು ನಿಗಮದ ಅಧಿಕಾರಿಗಳು ಕೊಟ್ಟಿದ್ದಾರೆ.
ಯೋಜನೆ ಜಾರಿಯಾದಾಗಿನಿಂದಲೂ ನಿರೀಕ್ಷೆಗೂ ಮೀರಿ ಮಹಿಳಾ ಪ್ರಯಾಣಿಕರ ಓಡಾಟ ಮಾಡುತ್ತಿದ್ದು 18 ದಿನದಲ್ಲೇ 339 ಕೋಟಿ ಮೊತ್ತದ ಟಿಕೆಟ್ ಮಹಿಳಾ ಪ್ರಯಾಣಿಕರಿಗೆ ನೀಡಲಾಗಿದೆ. ಎರಡು ದಿನದ ಹಿಂದೆ ಈ ಸುತ್ತೋಲೆಯನ್ನು ಹೊರಡಿಸಿರುವುದು ಶಕ್ತಿ ಯೋಜನೆ ಹೆಸರಲ್ಲಿ ಪ್ರಯಾಣಿಕರಿಗಿಂತ ಹೆಚ್ಚಿನ ಟಿಕೆಟ್ ನೀಡಲಾಗುತ್ತಿದೆಯಾ ಎನ್ನುವ ಅನುಮಾನ ಮೂಡುವಂತೆ ಮಾಡಿದೆ.
ಬಸ್ಸಿನಲ್ಲಿ ವಾಸ್ತವ ಮಹಿಳಾ ಪ್ರಯಾಣಿಕರ ಸಂಖ್ಯೆಗಿಂತ ಹೆಚ್ಚಿನ ಟಿಕೆಟ್ ಇರಬಾರದು. ನಿರ್ವಾಹಕರು ಹೆಚ್ಚಿನ ಟಿಕೆಟ್ ನೀಡಿರುವುದು ಕಂಡು ಬಂದರೆ ಗಂಭೀರ ಪ್ರಕರಣವೆಂದು ಪರಿಗಣನೆ ಮಾಡಲಾಗುವುದು ಎನ್ನುವ ಎಚ್ಚರಿಕೆ ನೀಡಲಾಗಿದ್ದು ವಾಸ್ತವ ಪ್ರಯಾಣಿಕರ ಸಂಖ್ಯೆಗಿಂತ ಹೆಚ್ಚಿನ ಟಿಕೆಟ್ ನೀಡಿದ್ದರೆ ನಿರ್ವಾಹಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ.