More

    ಅಧಿಕಾರಿಗಳ ಬೇಜವಾಬ್ದಾರಿ ಸಹಿಸಲ್ಲ

    ಮುಧೋಳ: ಸಮರ್ಥವಾಗಿ ಬರ ಎದುರಿಸಲು ಅಧಿಕಾರಿಗಳು ಸನ್ನದ್ಧರಾಗಿರಬೇಕು. ಕುಡಿಯುವ ನೀರು, ಜಾನುವಾರುಗಳಿಗೆ ಮೇವಿನ ಕೊರತೆ ಆಗದಂತೆ ನೋಡಿಕೊಳ್ಳಬೇಕು. ಸರ್ಕಾರದ ಬಗ್ಗೆ ಜನತೆಯ ಭರವಸೆ ಹೆಚ್ಚಿಸಬೇಕು. ಅಧಿಕಾರಿಗಳ ಬೇಜವಾಬ್ದಾರಿ ಸಹಿಸಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಎಚ್ಚರಿಕೆ ನೀಡಿದರು.

    ನಗರದ ತಾಪಂ ಸಭಾಭವನದಲ್ಲಿ ಬುಧವಾರ ನಡೆದ ಪ್ರಗತಿ ಪರಿಶೀಲನೆ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಗರಕ್ಕೆ ಸರಬರಾಜಾಗುವ ಶುದ್ಧ ಕುಡಿಯುವ ನೀರನ್ನು ನಿಯಮಿತವಾಗಿ ಪರೀಕ್ಷೆಗೊಳಪಡಿಸಬೇಕು. ನೀರಿನಲ್ಲಿ ವ್ಯತ್ಯಾಸವುಂಟಾಗಿ ಸಾರ್ವಜನಿಕರ ಆರೋಗ್ಯಕ್ಕೆ ತೊಂದರೆಯಾದರೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳೇ ಹೊಣೆ ಎಂದರು.

    ನಗರದಲ್ಲಿ ಇತ್ತೀಚೆಗೆ ಅಕ್ರಮಗಳ ಬಗ್ಗೆ ಹೆಚ್ಚು ವರದಿಯಾಗುತ್ತಿದ್ದು, ಪೊಲೀಸ್ ಅಧಿಕಾರಿಗಳು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಗಮನಹರಿಸಬೇಕೆಂದು ತಿಳಿಸಿದರು.

    ಡಿಎಸ್‌ಪಿ ಶಾಂತವೀರ ಈ. ಅವರು ಸಿಸಿಟಿವಿ ಅಳವಡಿಕೆಗೆ ಮನವಿ ಮಾಡಿದಾಗ, ನಗರಸಭೆ ಅಧಿಕಾರಿಗಳಿಗೆ ಈ ವರ್ಷದ ಬಜೆಟ್‌ನಲ್ಲಿ ನಗರಕ್ಕೆ ಅಗತ್ಯವಿರುವ ಸಿಸಿಟಿವಿ ಕ್ಯಾಮರಾ ಅಳವಡಿಕೆಗೆ ಯೋಜನೆ ರೂಪಿಸುವಂತೆ ಸಚಿವರು ಸೂಚಿಸಿದರು. ತಾಲೂಕಿನ ಅಂಗವಿಕಲ ಮಕ್ಕಳ ಅಗತ್ಯ ಸಲಕರಣೆ ಕುರಿತು ಸಮರ್ಪಕ ಮಾಹಿತಿ ನೀಡದ ಅಧಿಕಾರಿ ಮೇಲೆ ಗರಂ ಆದರು.

    ತಾಲೂಕಿನ ಸಾರ್ವಜನಿಕರ ಓಡಾಟಕ್ಕೆ ಇನ್ನೂ 25 ಬಸ್ ಹಾಗೂ ಸಿಬ್ಬಂದಿ ಅವಶ್ಯಕತೆ ಇರುವುದನ್ನು ಅಧಿಕಾರಿಗಳು ಸಚಿವರ ಗಮನಕ್ಕೆ ತಂದರು. ನಗರದ ಹಳೇ ಸರ್ಕಾರಿ ಆಸ್ಪತ್ರೆ ಕಟ್ಟಡದಲ್ಲಿನ ಉಪನೋಂದಣಾಧಿಕಾರಿ ಕಚೇರಿಯನ್ನು ತಿಂಗಳಲ್ಲಿ ನೂತನ ತಹಸೀಲ್ದಾರ್ ಕಚೇರಿ ಕಟ್ಟಡಕ್ಕೆ ಸ್ಥಳಾಂತರಿಸುವುದಾಗಿ ಅಧಿಕಾರಿಗಳು ತಿಳಿಸಿದರು.

    ಪೌರಾಯುಕ್ತ ಕಾಸೆ ಮಾತನಾಡಿ, ಸರ್ಕಾರಿ ಇಲಾಖೆಗಳಿಂದ ಒಟ್ಟು 55 ಲಕ್ಷ ರೂ. ತೆರಿಗೆ ಬರಬೇಕಿದ್ದು, ಲೋಕೋಪಯೋಗಿ ಇಲಾಖೆಯಿಂದ 25 ಲಕ್ಷ ರೂ., ತಾಪಂದಿಂದ 11 ಲಕ್ಷ ರೂ. ಬರಬೇಕಿದೆ ಎಂದು ತಿಳಿಸಿದರು.

    ಸಮಾಜ ಕಲ್ಯಾಣ ಹಾಗೂ ಬಿಸಿಎಂ ಇಲಾಖೆ ವ್ಯಾಪ್ತಿಯ ವಸತಿ ನಿಲಯಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಮಕ್ಕಳಿಗೆ ಸಮರ್ಪಕ ನೀರಿನ ವ್ಯವಸ್ಥೆ, ಶುದ್ಧ, ಗುಣಮಟ್ಟದ ಆಹಾರ ನೀಡಬೇಕು. ವಿದ್ಯಾರ್ಥಿಗಳ ಪಾಲಕರಿಂದ ದೂರು ಬರದಂತೆ ನೋಡಿಕೊಳ್ಳಬೇಕು ಎಂದರು. ತಾಲೂಕು ವೈದ್ಯಾಧಿಕಾರಿ ಡಾ. ವೆಂಕಟೇಶ ಮಲಘಾಣ ಮಾತನಾಡಿ, ಸರ್ಕಾರಿ ಆಸ್ಪತ್ರೆಯಲ್ಲಿ ಶೇ. 74 ಸಹಜ ಹೆರಿಗೆ, ಶೇ. 26 ಸಿಜೇರಿಯನ್ ಆಗುತ್ತಿವೆ. ಖಾಸಗಿ ಆಸ್ಪತ್ರೆಯಲ್ಲಿ ಶೇ. 13 ಸಹಜ ಹೆರಿಗೆ ಹಾಗೂ ಶೇ. 87 ಸಿಜೇರಿಯನ್ ಹೆರಿಗೆಯಾಗುತ್ತಿದೆ ಎಂದು ತಿಳಿಸಿದರು.

    ತಹಸೀಲ್ದಾರ್ ವಿನೋದ ಹತ್ತಳ್ಳಿ, ತಾಪಂ ಆಡಳಿತಾಧಿಕಾರಿ ಎ.ಎಸ್. ಉಕ್ಕಲಿ, ಕಾರ್ಯನಿರ್ವಾಹಕ ಅಧಿಕಾರಿ ಸಂಜೀವ ಹಿಪ್ಪರಗಿ, ಸಿಪಿಐ ಮಹಾದೇವ ಶಿರಹಟ್ಟಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮೋಹನ್ ಕೋರಡ್ಡಿ, ಪಶು ಸಂಗೋಪನೆ ಇಲಾಖೆ ಅಧಿಕಾರಿ ಗೋವಿಂದ ರಾಠೋಡ, ಅರಣ್ಯ ಸಂರಕ್ಷಣಾಧಿಕಾರಿ ಶಿವಪುತ್ರ ತಳವಾರ ಇದ್ದರು.

    ಅತಿಕ್ರಮಣ ಜಾಗ ತೆರವುಗೊಳಿಸಿ

    ಅತಿಕ್ರಮಣ ಮಾಡಿಕೊಳ್ಳಲಾದ ನಗರ, ಗ್ರಾಮೀಣ ಪ್ರದೇಶದಲ್ಲಿನ ಸರ್ಕಾರಿ ಭೂಮಿ, ನಗರಸಭೆಯ ಜಾಗ, ಕೆರೆ, ರಸ್ತೆ ತೆರವುಗೊಳಿಸಲು ಸೂಕ್ತ ಕ್ರಮ ವಹಿಸಬೇಕು. ನಗರದಲ್ಲಿನ ಕೆರೆ ಜಾಗ ಅತಿಕ್ರಮಣವಾಗಿದ್ದು, ಅಲ್ಲಿನ ನಿವಾಸಿಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿ ಕೆರೆ ಜಾಗವನ್ನು ಮರಳಿ ವಶಕ್ಕೆ ಪಡೆಯುವ ಕೆಲಸವಾಗಬೇಕೆಂದು ಸಚಿವ ತಿಮ್ಮಾಪುರ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts