More

  ಉಕ್ರೇನಿಯನ್​ ವಿಮಾನ ಪತನ ಪ್ರಕರಣಕ್ಕೆ ಟ್ವಿಸ್ಟ್​: ಪತನ ಸ್ಥಳದಲ್ಲಿ ಕ್ಷಿಪಣಿ ಅವಶೇಷ ಪತ್ತೆ, ನಿಜಕ್ಕೂ ಆಗಿದ್ದೇನು?

  ತೆಹ್ರಾನ್​: ಬುಧವಾರ ಬೆಳಗ್ಗೆ ಟೇಕಾಫ್​ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡ ಉ್ರಕೇನಿಯನ್​ ವಿಮಾನದಿಂದಾಗಿ 176 ಪ್ರಯಾಣಿಕರು ಮೃತಪಟ್ಟರು. ಇದೀಗ ವಿಮಾನ ಪತನಗೊಂಡ ಸ್ಥಳದ ಬಳಿ ಇರಾನ್​ ಕಾರ್ಯಕರ್ತರೊಬ್ಬರು ತೆಗೆದಿರುವ ಫೋಟೋಗಳು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

  ವಿಮಾನ ಪತನಗೊಂಡ ಸ್ಥಳದ ಬಳಿ ತೆಗೆಯಲಾಗಿರುವ ಫೊಟೋಗಳು ಎಂದು ಹೇಳಿ ಇರಾನಿಯನ್​ ಕಾರ್ಯಕರ್ತರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿರುವ ಫೋಟೋಗಳಲ್ಲಿ ಒಂದು ನಿಗೂಢವಾದ ಕ್ಷಿಪಣಿಯ ಅವಶೇಷವು ಕಂಡುಬಂದಿದೆ. ಅಲ್ಲದೆ ಈ ಬಗ್ಗೆ ಬರೆದುಕೊಂಡಿರುವ ಅವರು ಈ ಕ್ಷಿಪಣಿ ವಿಮಾನ ಪತನ ಸ್ಥಳದಲ್ಲಿ ಕಂಡುಬಂತು. ಇದೇ ಕ್ಷಿಪಣಿಯೇ ಉಕ್ರೇನ್​ ವಿಮಾನಕ್ಕೆ ಅಪ್ಪಳಿಸಿದ್ದು? ಅಥವಾ ಇದೊಂದು ವಂಚನೆಯೇ? ಎಂದು ಪ್ರಶ್ನಿಸಿದ್ದಾರೆ.

  ಬೋಯಿಂಗ್ 737 ಹೆಸರಿನ​ ಉಕ್ರೇನಿಯನ್​ ವಿಮಾನ ಬುಧವಾರ ಬೆಳಗ್ಗೆ ಇರಾನ್​ನ ತೆಹ್ರಾನ್​ ಇಮಾಮ್​ ಖೊಮೆನಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಬಿಟ್ಟು ಉಕ್ರೇನ್​ನ ಕೈವ್‌ ಬೋರಿಸ್‌ಪಿಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊರಟಿತ್ತು. ಆದರೆ ವಿಮಾನದಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷದಿಂದ ಟೇಕಾಫ್​ ಆದ ಕೆಲವೇ ಕ್ಷಣಗಳಲ್ಲಿ ಏರ್​ಪೋರ್ಟ್​ ಬಳಿ ಪತನಗೊಂಡಿದೆ. ಸ್ಫೋಟಗೊಂಡ ಪರಿಣಾಮ ವಿಮಾನದಲ್ಲಿದ್ದವರೆಲ್ಲಾ ಮೃತರಾಗಿರುವುದಾಗಿ ಉಕ್ರೇನ್​ ವಿದೇಶಾಂಗ ಸಚಿವಾಲಯದ ಅಧಿಕಾರಿ ಕೀವ್​ ತಿಳಿಸಿದ್ದರು.

  ಇರಾನ್​ ಕೂಡ ಇದನ್ನೇ ವಾದಿಸಿತ್ತು. ಟೇಕಾಫ್​ ಆದ ಬಳಿಕ ಇಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡು ಪೈಲಟ್​ ನಿಯಂತ್ರಣ ಕಳೆದುಕೊಂಡು ದುರಂತ ಸಂಭವಿಸಿದೆ ಎಂದು ಹೇಳಿದ್ದರು. ಆದರೆ, ಪಾಶ್ಚಿಮಾತ್ಯಗಳ ಗುಪ್ತಚರ ವರದಿಯನ್ನು ಉಲ್ಲೇಖಿಸಿ ವಿಮಾನ ಪತನವು ತಾಂತ್ರಿಕ ಸಮಸ್ಯೆಯಿಂದ ಆಗಿದೆ ಎಂಬುದು ಕೇವಲ ವಿವರಣೆಯಷ್ಟೇ ಎಂದು ಕೆನಡಿಯನ್​ ಸೆಕ್ಯುರಿಟಿ ಮೂಲಗಳು ಅನುಮಾನ ವ್ಯಕ್ತಪಡಿಸಿದ್ದವು.

  ಇದರ ಮಧ್ಯೆ ಹೊರಗಿನ ತನಿಖಾಧಿಕಾರಿಗಳಿಗೆ ವಿಮಾನದ ಕಪ್ಪು ಬಾಕ್ಸ್​ ದಾಖಲೆಯನ್ನು ಹಸ್ತಾಂತರಿಸುವಿರಾ ಎಂಬುದಕ್ಕೆ ಪ್ರತಿಕ್ರಿಯೆ ನೀಡಲು ತೆಹ್ರಾನ್​ ಅಧಿಕಾರಿಗಳು ನಿರಾಕರಿಸಿದ್ದರು. ಈ ಅಲ್ಲ ಅಂಶಗಳಿಂದ ವಿಮಾನ ಪತನದ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ.

  ಅದಕ್ಕೆ ಪುಷ್ಠಿ ನೀಡುವಂತೆ ಇರಾನಿಯನ್​ ಟ್ವಿಟರ್​ ಬಳಕೆದಾರನ ಖಾತೆಯಲ್ಲಿ ಅಪ್​ಲೋಡ್​ ಆಗಿರುವ ವಿಮಾನ ಪತನ ಸ್ಥಳದಲ್ಲಿ ತೆಗೆದದ್ದು ಎನ್ನಲಾದ ಫೋಟೋಗಳಲ್ಲಿ ಕಪ್ಪು ಬಣ್ಣ ಮೆತ್ತಿಕೊಂಡಿರುವ ರಾಕೆಟ್​ ಒಂದು ಕಾಣುತ್ತಿರುವುದು ವಿಮಾನ ಪತನಕ್ಕೆ ನಿರ್ಧಿಷ್ಟ ಕಾರಣ ಏನಿರಬಹುದೆಂಬ ಅನುಮಾನ ಹುಟ್ಟುಹಾಕಿದೆ.

  ವಿಮಾನ ಪತನಗೊಂಡ ಸ್ಥಳ ಮಾತ್ರವಲ್ಲದೇ ಸುತ್ತಮುತ್ತಾ ಪ್ರದೇಶಗಳಲ್ಲೂ ಕ್ಷಿಪಣಿಗಳ ಅವಶೇಷ ಬಿದ್ದಿವೆ ಎನ್ನಲಾಗಿದೆ. ಹತ್ತಿರದ ಸೇನಾ ನೆಲೆಯಿಂದ ಬಂದ ಭೀಕರ ಸ್ಫೋಟದಿಂದಲೂ ವಿಮಾನ ಪತನ ಸಂಭವಿಸಿರಬಹುದೆಂದು ವಿವರಿಸಲಾಗುತ್ತಿದೆ. ಅಲ್ಲದೆ, ವಿಮಾನ ಪತನಗೊಂದ ಸ್ಥಳ ಇಸ್ಲಾಮಿಕ್​ ರಿಪಬ್ಲಿಕ್​ ಆಫ್​ ಇರಾನ್​ ಆರ್ಮಿಯ 23ನೇ ವಿಭಾಗ ಪರಾಂಡಕ್​ ಗ್ಯಾರಿಸನ್​ ಹೋಮ್​ನಿಂದ 2 ಮೈಲಿ ದೂರದಲ್ಲಿದೆಯಷ್ಟೇ. ಅಲ್ಲದೆ, ರಾಕೆಟ್​ನಂತಹ ವಸ್ತು ವಿಮಾನದಲ್ಲಿರುತ್ತದೆಯೇ? ಇದು ರಾಕೆಟ್​ ಅಲ್ಲವೇ? ಎಂದು ಅನೇಕರು ಪ್ರಶ್ನಿಸಿದ್ದಾರೆ. ವಿಮಾನ ಪತನಗೊಂಡಾಗ ಸ್ಥಳದಲ್ಲಿ ಭೀಕರ ಶಬ್ದ ಕೇಳಿದ್ದಾಗಿ ಸ್ಥಳೀಯ ಪ್ರತ್ಯಕ್ಷದರ್ಶಿಯೊಬ್ಬರು ಹೇಳಿಕೆ ನೀಡಿದ್ದಾರೆ.

  ವಿಶೇಷವೆಂದರೆ ವಿಮಾನ ಪತನ ಘಟನೆ ಹಾಗೂ ಇರಾನ್​-ಅಮೆರಿಕ ತಿಕ್ಕಾಟದ ಬೆನ್ನಲ್ಲೇ ಭಾರತ ಸೇರಿದಂತೆ ಅನೇಕ ರಾಷ್ಟ್ರಗಳು ಇರಾನ್​ ಕಡೆ ಪ್ರಯಾಣ ಬೆಳೆಸುವ ವಿಮಾನವನ್ನು ಸ್ಥಗಿತಗೊಳಿಸುವಂತೆ ಹೇಳಿದೆ. ಹೀಗಾಗಿ ಈ ಎಲ್ಲಾ ಬೆಳವಣಿಗೆಯಿಂದ ಉಕ್ರೇನ್​ ವಿಮಾನ ಪತನದ ಮೇಲೆ ಅನುಮಾನದ ಹುತ್ತ ಬೆಳೆಯಲು ಶುರುವಾಗಿದೆ. (ಏಜೆನ್ಸೀಸ್​)

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts