More

    ಪೊಲೀಸರ ಮೇಲೆ ಇರಾನಿ ಗ್ಯಾಂಗ್ ಹಲ್ಲೆ

    ಧಾರವಾಡ: ಕಳ್ಳತನ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದರು ಎನ್ನಲಾಗಿರುವ ಇಲ್ಲಿಯ ಇರಾನಿ ಗ್ಯಾಂಗ್ ಸದಸ್ಯರು, ಇಲ್ಲಿಗೆ ಬಂದು ತಮ್ಮನ್ನು ಹಿಡಿದ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾದ ಘಟನೆ ನಗರದ ಸಂಗಮ ವೃತ್ತದ ಬಳಿ ಗುರುವಾರ ನಡೆದಿದೆ.

    ಬೆಂಗಳೂರು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಕಳ್ಳತನದಲ್ಲಿ ಇಲ್ಲಿಯ ನಾಲ್ವರು ಭಾಗಿಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು. ಆರೋಪಿಗಳ ಬಂಧನಕ್ಕಾಗಿ ಕಾಮಾಕ್ಷಿಪಾಳ್ಯ ಠಾಣೆಯ ಸಬ್ ಇನ್ಸ್​ಪೆಕ್ಟರ್ ಸೇರಿ ಒಟ್ಟು ಐವರು ಆಗಮಿಸಿದ್ದರು. ಗುರುವಾರ ಮಧ್ಯಾಹ್ನ ಇಲ್ಲಿಯ ಸಂಗಮ ವೃತ್ತದ ಬಳಿ ಮೂವರು ಆರೋಪಿಗಳನ್ನು ಹಿಡಿದಿದ್ದರು.

    ಅವರನ್ನು ಪೊಲೀಸರು ತಮ್ಮ ವಾಹನಕ್ಕೆ ಹತ್ತಿಸಲು ಮುಂದಾಗಿದ್ದರು. ಅಷ್ಟರಲ್ಲಿ ಆರೋಪಿಗಳು ಒಬ್ಬರಿಗೊಬ್ಬರು ನೂಕಾಡಿ, ಕೊಸರಾಡಿ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದರು. ಅದೇ ಸಂದರ್ಭದಲ್ಲಿ ಇನ್ನೊಬ್ಬ ಆರೋಪಿ ಓಡಿಬಂದು ತಲೆಯಿಂದ ಡಿಚ್ಚಿ ಹೊಡೆಯುವ ಮೂಲಕ ಪೊಲೀಸರ ಹಿಡಿತ ಸಡಿಲುಗೊಳಿಸಿದನು. ಒಡನೆಯೇ ಆರೋಪಿಗಳು ಪೊಲೀಸರ ಮೇಲೆ ದಾಳಿ ನಡೆಸಿದರು. ಬಿಯರ್ ಬಾಟಲಿಯಿಂದ ಪೊಲೀಸರಿಗೆ ಹೊಡೆದಿದ್ದಲ್ಲದೆ, ತಮ್ಮ ಕೈಗೆ ತಾವೇ ಬಾಟಲಿಯಿಂದ ಹೊಡೆದು ಗಾಯ ಮಾಡಿಕೊಂಡರು. ಮೂವರು ಆರೋಪಿಗಳು ತಪ್ಪಿಸಿಕೊಂಡು ಬೈಕ್ ಏರಿ ಪರಾರಿಯಾಗಿದ್ದಾರೆ. ಓರ್ವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಸ್ಥಳಕ್ಕೆ ಎಸಿಪಿ ಅನುಷಾ ಭೇಟಿ ನೀಡಿ ಘಟನೆ ಮಾಹಿತಿ ಪಡೆದು ತನಿಖೆ ನಡೆಸುತ್ತಿದ್ದಾರೆ. ಗಾಯಗೊಂಡ ಪೊಲೀಸರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ತಿಳಿಸಿರಲಿಲ್ಲ: ಬೆಂಗಳೂರಿನಿಂದ ಬಂದ ಪೊಲೀಸರು ಸ್ಥಳೀಯ ಪೊಲೀಸ್ ನೆರವು ಪಡೆದಿರಲಿಲ್ಲ. ಮೊಬೈಲ್ ಲೊಕೇಶನ್ ಆಧಾರದಲ್ಲಿ ಸಂಗಮ ವೃತ್ತದಲ್ಲಿ ಆರೋಪಿಗಳು ಇರುವುದನ್ನು ಪತ್ತೆಹಚ್ಚಿ ಬಂಧಿಸಲು ಮುಂದಾಗಿದ್ದರು. ಮೊದಲೇ ತಿಳಿಸಿದ್ದರೆ ಹೆಚ್ಚಿನ ಪೊಲೀಸರನ್ನು ಕಳುಹಿಸಿ ಎಲ್ಲ ಆರೋಪಿಗಳನ್ನು ವ್ಯವಸ್ಥಿತವಾಗಿ ಬಂಧಿಸಿ, ಅಹಿತಕರ ಘಟನೆಯಾಗುವುದನ್ನು ತಪ್ಪಿಸಬಹುದಿತ್ತು ಎಂದು ಸ್ಥಳೀಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts