More

    ಇಂದಿನಿಂದ ಐಪಿಎಲ್ ಸೆಕೆಂಡ್ ಇನಿಂಗ್ಸ್, 8 ತಂಡಗಳ ಪ್ಲೇಆಫ್​ ಲೆಕ್ಕಾಚಾರ ಹೇಗಿದೆ ಗೊತ್ತೇ?

    ದುಬೈ: ಭಾರತದಲ್ಲಿ ಕರೊನಾ 2ನೇ ಅಲೆಯ ಅಬ್ಬರದಿಂದಾಗಿ ಮೊಟಕುಗೊಂಡಿದ್ದ ಐಪಿಎಲ್ 14ನೇ ಆವೃತ್ತಿ ಅರಬ್ ನಾಡಿನಲ್ಲಿ ಪುನರಾರಂಭ ಕಾಣಲು ವೇದಿಕೆ ಸಜ್ಜಾಗಿದೆ. ದುಬೈನಲ್ಲಿ ಭಾನುವಾರ ನಡೆಯಲಿರುವ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್‌ಕಿಂಗ್ಸ್ ನಡುವಿನ ಪಂದ್ಯದೊಂದಿಗೆ ಟೂರ್ನಿಗೆ ಮರುಚಾಲನೆ ದೊರೆಯಲಿದೆ. ಮೇನಲ್ಲಿ ಟೂರ್ನಿಯ ಬಯೋಬಬಲ್‌ನಲ್ಲೇ ಕರೊನಾ ಪ್ರಕರಣ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸ್ಥಗಿತಗೊಂಡಾಗ 29 ಲೀಗ್ ಪಂದ್ಯ ಪೂರ್ಣಗೊಂಡಿದ್ದರೆ, ಯುಎಇಯಲ್ಲಿ ಈಗ ಬಾಕಿ ಉಳಿದ 31 ಪಂದ್ಯಗಳು ನಡೆಯಲಿವೆ. ಐಪಿಎಲ್ ಮುಗಿದ ಎರಡೇ ದಿನಗಳಲ್ಲಿ ಇಲ್ಲೇ ನಡೆಯಲಿರುವ ಟಿ20 ವಿಶ್ವಕಪ್‌ಗೆ ಸಿದ್ಧತೆ ನಡೆಸಲು ಕೂಡ ಎಲ್ಲ ಆಟಗಾರರಿಗೆ ಇದೊಂದು ಉತ್ತಮ ಅವಕಾಶವಾಗಿದೆ. ಟೂರ್ನಿಯ ಮೊದಲ ಭಾಗ ಹಲವಾರು ರೋಚಕ ಪಂದ್ಯಗಳಿಂದ ಕೂಡಿದ್ದರೆ, ಪ್ಲೇಆಫ್​ ಲೆಕ್ಕಾಚಾರಗಳಿಂದಾಗಿ 2ನೇ ಭಾಗ ಇನ್ನಷ್ಟು ರೋಚಕತೆ ಮೂಡಿಸಿದೆ. ಕೆಲ ವಿದೇಶಿ ಆಟಗಾರರು ಹಿಂದೆ ಸರಿದಿರುವುದು ಮತ್ತು ಕೆಲ ಹೊಸ ಆಟಗಾರರ ಸೇರ್ಪಡೆ ಟೂರ್ನಿಯ 2ನೇ ಭಾಗಕ್ಕೆ ತಂಡಗಳ ಬಲಾಬಲ ಬದಲಾಯಿಸಿದೆ. ದುಬೈ, ಶಾರ್ಜಾ, ಅಬುಧಾಬಿಯಲ್ಲಿ ಸೀಮಿತ ಸಂಖ್ಯೆಯ ಪ್ರೇಕ್ಷಕರೂ ಕ್ರೀಡಾಂಗಣಕ್ಕೆ ಪ್ರವೇಶ ಪಡೆಯಲಿದ್ದು, ಟೂರ್ನಿಯ 2ನೇ ಇನಿಂಗ್ಸ್ ನಿರ್ವಿಘ್ನವಾಗಿ ಸಾಗುವ ನಿರೀಕ್ಷೆ ಇದೆ.

    ಡೆಲ್ಲಿ ಕ್ಯಾಪಿಟಲ್ಸ್
    ಭಾರತದಲ್ಲಿ ನಡೆದ ಟೂರ್ನಿಯ ಮೊದಲ ಭಾಗದಲ್ಲಿ ಅಮೋಘ ನಿರ್ವಹಣೆ ತೋರಿದ ಡೆಲ್ಲಿ ತಂಡ ಸತತ 3ನೇ ಬಾರಿ ಪ್ಲೇಆಫ್​ಗೇರುವುದನ್ನು ಬಹುತೇಕ ಖಚಿತಪಡಿಸಿಕೊಂಡಿದೆ. ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ ನಾಯಕತ್ವದಲ್ಲಿ ಅನನುಭವಿಯಾಗಿದ್ದರೂ, ಕೆಲ ಉತ್ತಮ ನಿರ್ಧಾರಗಳಿಂದ ಗಮನಸೆಳೆದಿದ್ದರು. ಪೃಥ್ವಿ ಷಾ-ಶಿಖರ್ ಧವನ್ ಜೋಡಿ ಒಟ್ಟು 512 ರನ್ ಪೇರಿಸಿ ಡೆಲ್ಲಿ ತಂಡಕ್ಕೆ ಉತ್ತಮ ಆರಂಭ ಕೊಡಿಸುವ ಮೂಲಕ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಭುಜದ ಗಾಯದಿಂದಾಗಿ ಟೂರ್ನಿಯ ಮೊದಲ ಭಾಗಕ್ಕೆ ಅಲಭ್ಯರಾಗಿದ್ದ ಹಿಂದಿನ ನಾಯಕ ಶ್ರೇಯಸ್ ಅಯ್ಯರ್ ಫಿಟ್ ಆಗಿ ಮರಳಿರುವುದು ತಂಡದ ಬಲ ಹೆಚ್ಚಿಸಿದೆ.
    ಪ್ಲೇಆಫ್​ ಹಾದಿ: ಆಡಿದ ಮೊದಲ 8 ಪಂದ್ಯಗಳಲ್ಲಿ 6ರಲ್ಲಿ ಗೆದ್ದು 12 ಅಂಕದೊಂದಿಗೆ ಅಗ್ರಸ್ಥಾನದಲ್ಲಿರುವ ಡೆಲ್ಲಿ ಉಳಿದ 6 ಪಂದ್ಯಗಳಲ್ಲಿ 2ರಲ್ಲಿ ಗೆದ್ದರೂ ಪ್ಲೇಆಫ್​ ಸ್ಥಾನ ಖಚಿತವೆನಿಸಿದೆ. ಇದಕ್ಕೆ ಮಿಗಿಲಾಗಿ ತಂಡ ಅಗ್ರ 2 ತಂಡಗಳಲ್ಲಿ ಒಂದೆನಿಸುವ ಮೂಲಕ ಕ್ವಾಲಿಫೈಯರ್-1ಕ್ಕೆ ಅರ್ಹತೆ ಪಡೆಯಲು ಪ್ರಯತ್ನಿಸಲಿದೆ.
    ಟಾಪರ್ಸ್‌: ಶಿಖರ್ ಧವನ್ (380 ರನ್), ಆವೇಶ್ ಖಾನ್ (14 ವಿಕೆಟ್).
    ಇನ್: ಶ್ರೇಯಸ್ ಅಯ್ಯರ್, ಬೆನ್ ಡ್ವಾರ್‌ಶುಯಿಸ್, ಕುಲ್ವಂತ್ ಖೆಜ್ರೋಲಿಯ.
    ಔಟ್: ಅನಿರುದ್ಧ ಜೋಶಿ, ಕ್ರಿಸ್ ವೋಕ್ಸ್, ಎಂ. ಸಿದ್ದಾರ್ಥ್.

    ಚೆನ್ನೈ ಸೂಪರ್‌ಕಿಂಗ್ಸ್
    ಕಳೆದ ವರ್ಷ ಯುಎಇಯಲ್ಲೇ ನಡೆದ ಐಪಿಎಲ್‌ನಲ್ಲಿ ನೀರಸ ನಿರ್ವಹಣೆ ತೋರಿದ್ದ ಧೋನಿ ಬಳಗ, ಭಾರತದಲ್ಲಿ ನಡೆದ ಮೊದಲ ಭಾಗದಲ್ಲಿ ಮತ್ತೆ ಬಲಿಷ್ಠ ನಿರ್ವಹಣೆಯನ್ನೇ ತೋರಿತ್ತು. ಟೂರ್ನಿ ಸ್ಥಗಿತಕ್ಕೆ ಮುನ್ನ ಆಡಿದ ತನ್ನ ಕೊನೇ ಪಂದ್ಯದಲ್ಲಿ ಕೈರಾನ್ ಪೊಲ್ಲಾರ್ಡ್ (34 ಎಸೆತಗಳಲ್ಲಿ ಅಜೇಯ 87 ರನ್, 6 ಬೌಂಡರಿ, 8 ಸಿಕ್ಸರ್) ಆರ್ಭಟಕ್ಕೆ ತಲೆಬಾಗಿ 218 ರನ್ ರಕ್ಷಿಸಿಕೊಳ್ಳಲು ವಿಲವಾಗದೇ ಹೋಗಿದ್ದರೆ ಸಿಎಸ್‌ಕೆ ತಂಡ ಅಂಕಪಟ್ಟಿಯಲ್ಲಿ ಮೊದಲ ಸ್ಥಾನವನ್ನೂ ಅಲಂಕರಿಸುತ್ತಿತ್ತು. ಋತುರಾಜ್-ಪ್ಲೆಸಿಸ್ ಜೋಡಿ ಹಾಕಿಕೊಡುತ್ತಿದ್ದ ಉತ್ತಮ ಆರಂಭ ಮತ್ತು ಮೊಯಿನ್ ಅಲಿ-ರವೀಂದ್ರ ಜಡೇಜಾ ಅವರ ಆಲ್ರೌಂಡ್ ನಿರ್ವಹಣೆ ಸಿಎಸ್‌ಕೆ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಅರಬ್ ನಾಡಿನಲ್ಲೂ ಅದೇ ನಿರ್ವಹಣೆ ಮುಂದುವರಿಸಿದರೆ ದಾಖಲೆಯ 11ನೇ ಬಾರಿ ಪ್ಲೇಆಫ್​ಗೇರಲಿದೆ.
    ಪ್ಲೇಆಫ್​ ಹಾದಿ: ಇದುವರೆಗೆ ಆಡಿದ 7 ಪಂದ್ಯಗಳಲ್ಲಿ 5ರಲ್ಲಿ ಗೆದ್ದು ಉತ್ತಮ ರನ್‌ರೇಟ್‌ನೊಂದಿಗೆ 2ನೇ ಸ್ಥಾನದಲ್ಲಿರುವ ಸಿಎಸ್‌ಕೆ ಉಳಿದ 7 ಪಂದ್ಯಗಳಲ್ಲಿ 3ರಲ್ಲಿ ಜಯಿಸಿದರೆ ಪ್ಲೇಆಫ್​ ಖಚಿತವಾಗಲಿದೆ. ಇತರ ಫಲಿತಾಂಶ ಪೂರಕವಾಗಿ ಬಂದರೆ ಇನ್ನೆರಡು ಗೆಲುವು ಕಂಡರೂ ಪ್ಲೇಆಫ್​ಗೇರಬಹುದಾಗಿದೆ. ಆದರೆ ಅಗ್ರ 2 ತಂಡಗಳ ಪೈಕಿ ಒಂದಾಗುವತ್ತ ತಂಡದ ಗುರಿ ಇರಲಿದೆ.
    ಟಾಪರ್ಸ್‌: ಫಾಫ್​ ಡು ಪ್ಲೆಸಿಸ್ (320 ರನ್), ಸ್ಯಾಮ್ ಕರ‌್ರನ್ (9 ವಿಕೆಟ್).
    ಇನ್: ಜೋಶ್ ಹ್ಯಾಸಲ್‌ವುಡ್.
    ಔಟ್: ಜೇಸನ್ ಬೆಹ್ರೆನ್‌ಡಾರ್.

    ಆರ್‌ಸಿಬಿ
    ಹರ್ಷಲ್ ಪಟೇಲ್, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಕನ್ನಡಿಗ ದೇವದತ್ ಪಡಿಕಲ್ ತೋರಿದ ಅಮೋಘ ನಿರ್ವಹಣೆ, ಆರ್‌ಸಿಬಿ ತಂಡ ಈಗ ಕೇವಲ ಕೊಹ್ಲಿ-ಎಬಿಡಿ ಅವರನ್ನು ನೆಚ್ಚಿಕೊಂಡಿರುವ ತಂಡವಲ್ಲ ಎಂದು ತೋರಿಸಿತ್ತು. ಆದರೆ ಟೂರ್ನಿಯ 2ನೇ ಭಾಗಕ್ಕೆ ಆರ್‌ಸಿಬಿ ತಂಡ ಕೆಲ ಮಹತ್ವದ ಬದಲಾವಣೆಗಳನ್ನು ಕಂಡಿದೆ. 5 ಆಟಗಾರರು ಬದಲಾಗಿದ್ದು ಮಾತ್ರವಲ್ಲದೆ, ಕೋಚ್ ಸೈಮನ್ ಕಾಟಿಚ್ ಕೂಡ ತಂಡದಿಂದ ನಿರ್ಗಮಿಸಿದ್ದು, ಟೀಮ್ ಡೈರೆಕ್ಟರ್ ಮೈಕ್ ಹೆಸ್ಸನ್ ಅವರೇ ಈ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದಾರೆ. ಈ ಬದಲಾವಣೆಗಳು ತಂಡದ ಲಯವನ್ನು ತಪ್ಪಿಸದಿದ್ದರೆ ಆರ್‌ಸಿಬಿ ಕಪ್ ಗೆಲ್ಲುವ ಕನಸು ನನಸಾಗಬಹುದು.
    ಪ್ಲೇಆಫ್​ ಹಾದಿ: ಆರಂಭಿಕ ನಾಲ್ಕೂ ಪಂದ್ಯ ಜಯಿಸಿದ ಬಳಿಕ ಕೊನೇ 3ರಲ್ಲಿ 2 ಸೋಲು ಕಂಡರೂ, ವಿರಾಟ್ ಕೊಹ್ಲಿ ಬಳಗ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಉಳಿದ 7ರಲ್ಲಿ 3ರಲ್ಲಿ ಗೆದ್ದರೆ ಪ್ಲೇಆಫ್​ ಸ್ಥಾನ ಖಚಿತವಾಗಲಿದೆ. ಇನ್ನೆರಡಲ್ಲಿ ಮಾತ್ರ ಗೆದ್ದರೂ, ಇತರ ಫಲಿತಾಂಶಗಳು ಪೂರಕವಾಗಿ ಬಂದರೆ ಪ್ಲೇಆಫ್​ಗೇರುವ ಅವಕಾಶವಿದೆ. ಆದರೆ ಮೊದಲ ಭಾಗದ ನಿರ್ವಹಣೆಯನ್ನು ಗಮನಿಸಿದರೆ ಆರ್‌ಸಿಬಿಗೆ ಪ್ಲೇಆಫ್​ಗೇರುವುದು ಸುಲಭದ ಹಾದಿಯೇ ಆಗಿರಲಿದೆ.
    ಟಾಪರ್ಸ್‌: ಗ್ಲೆನ್ ಮ್ಯಾಕ್ಸ್‌ವೆಲ್ (223 ರನ್), ಹರ್ಷಲ್ ಪಟೇಲ್ (17 ವಿಕೆಟ್).
    ಇನ್: ಜಾರ್ಜ್ ಗಾರ್ಟನ್, ಆಕಾಶ್‌ದೀಪ್, ದುಶ್ಮಂತ ಚಮೀರ, ವಾನಿಂದು ಹಸರಂಗ, ಟಿಮ್ ಡೇವಿಡ್, ಸ್ಕಾಟ್ ಕಗ್ಗಿಲಿನ್.
    ಔಟ್: ಕೇನ್ ರಿಚರ್ಡ್‌ಸನ್, ವಾಷಿಂಗ್ಟನ್ ಸುಂದರ್, ಡೇನಿಯಲ್ ಸ್ಯಾಮ್ಸ್, ಆಡಂ ಜಂಪಾ, ಫಿನ್ ಅಲೆನ್,

    ಮುಂಬೈ ಇಂಡಿಯನ್ಸ್
    ಕಳೆದ ವರ್ಷ 5ನೇ ಹಾಗೂ ಸತತ 2ನೇ ಪ್ರಶಸ್ತಿ ಜಯಿಸಿದ ನೆಲದಲ್ಲೇ ಮುಂಬೈ ಈಗ 6ನೇ ಮತ್ತು ಹ್ಯಾಟ್ರಿಕ್ ಪ್ರಶಸ್ತಿ ಗೆಲುವಿನ ಮೇಲೆ ಕಣ್ಣಿಟ್ಟಿದೆ. ಟೂರ್ನಿಯ ಮೊದಲ ಭಾಗದಲ್ಲಿ ರೋಹಿತ್ ಶರ್ಮ ಬಳಗದ ನಿರ್ವಹಣೆ ಸಾಕಷ್ಟು ಏರುಪೇರಿನಿಂದ ಕೂಡಿತ್ತು. ಪ್ರಮುಖವಾಗಿ ಬ್ಯಾಟಿಂಗ್ ವಿಭಾಗ ಕೈಕೊಡುತ್ತಿತ್ತು. ಸ್ಲಾಗ್ ಓವರ್‌ಗಳಲ್ಲಿ ತೀವ್ರ ರನ್‌ಬರ ಎದುರಾಗಿತ್ತು. ಇದೀಗ ಅರಬ್ ನಾಡಿನಲ್ಲಿ ತಂಡಕ್ಕೆ ಕಳೆದ ವರ್ಷದ ಬಲಿಷ್ಠ ನಿರ್ವಹಣೆ ಸ್ಫೂರ್ತಿ ತುಂಬಲಿದೆ. ಟಿ20 ವಿಶ್ವಕಪ್‌ಗೆ ಮುನ್ನ ಹಾರ್ದಿಕ್ ಪಾಂಡ್ಯ ಬೌಲಿಂಗ್ ಕೂಡ ಆರಂಭಿಸಿದರೆ ತಂಡದ ಸಮತೋಲನ ಹೆಚ್ಚಲಿದೆ.
    ಪ್ಲೇಆಫ್​ ಹಾದಿ: ಆಡಿದ 7 ಪಂದ್ಯಗಳಲ್ಲಿ 4ರಲ್ಲಿ ಗೆದ್ದು, 3 ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿರುವ ಮುಂಬೈ ತಂಡ ಪ್ಲೇಆಫ್​ಗೇರಲು ಉಳಿದ 7ರಲ್ಲಿ ಮತ್ತೆ 4 ಗೆಲುವು ಕಾಣಬೇಕಾದ ಸವಾಲು ಹೊಂದಿದೆ. ಇನ್ನು 3ರಲ್ಲಷ್ಟೇ ಗೆದ್ದರೆ, ಭವಿಷ್ಯ ನಿರ್ಧಾರಕ್ಕಾಗಿ ಇತರ ಫಲಿತಾಂಶ ಅವಲಂಬಿಸಬೇಕಾಗುತ್ತದೆ.
    ಟಾಪರ್ಸ್‌: ರೋಹಿತ್ ಶರ್ಮ (250 ರನ್), ರಾಹುಲ್ ಚಹರ್ (11 ವಿಕೆಟ್).
    ಇನ್: ರೂಶ್ ಕಲಾರಿಯ.
    ಔಟ್: ಮೊಹ್ಸಿನ್ ಖಾನ್.

    ರಾಜಸ್ಥಾನ ರಾಯಲ್ಸ್
    ಪ್ರಮುಖ ವಿದೇಶಿ ಆಟಗಾರರ ಗೈರಿನ ನಡುವೆ ಮೊದಲ ಭಾಗದಲ್ಲಿ ಚೇತೋಹಾರಿ ನಿರ್ವಹಣೆಯನ್ನೇ ತೋರಿದ್ದ ರಾಜಸ್ಥಾನ ರಾಯಲ್ಸ್‌ಗೆ ಟೂರ್ನಿಯ 2ನೇ ಭಾಗಕ್ಕೆ ಮತ್ತಷ್ಟು ವಿದೇಶಿ ಸ್ಟಾರ್‌ಗಳು ಹಿಂದೆ ಸರಿದ ಆಘಾತ ಎದುರಾಗಿದೆ. ಬ್ಯಾಟಿಂಗ್‌ನಲ್ಲಿ ನಾಯಕ ಸಂಜು ಸ್ಯಾಮ್ಸನ್‌ಗೆ ಉತ್ತಮ ಸಾಥ್ ನೀಡಿದ್ದ ಜೋಸ್ ಬಟ್ಲರ್ ಈ ಬಾರಿ ಗೈರಾಗಿದ್ದರೆ, ಬೌಲಿಂಗ್‌ನಲ್ಲಿ ಕ್ರಿಸ್ ಮಾರಿಸ್‌ಗೆ ಚೇತನ್ ಸಕಾರಿಯ ಮತ್ತು ಜೈದೇವ್ ಉನಾದ್ಕತ್ ಉತ್ತಮ ಬೆಂಬಲ ಒದಗಿಸಿದ್ದರು. ಸ್ಪಿನ್ ವಿಭಾಗದಲ್ಲಿ ನಿರಾಸೆ ಕಂಡಿದ್ದ ರಾಯಲ್ಸ್‌ಗೆ ಈ ಬಾರಿ ತಬರೇಜ್ ಶಮ್ಸಿ ಬಲ ತುಂಬುವ ನಿರೀಕ್ಷೆ ಇದೆ.
    ಪ್ಲೇಆಫ್​ ಹಾದಿ: ಆಡಿದ 7 ಪಂದ್ಯಗಳಲ್ಲಿ ಗೆಲುವಿಗಿಂತ ಹೆಚ್ಚು ಸೋಲು (3-4) ಕಂಡಿರುವ ಸಂಜು ಸ್ಯಾಮ್ಸನ್ ಬಳಗಕ್ಕೆ ಪ್ಲೇಆಫ್​ಗೇರಲು ಉಳಿದ 7 ಪಂದ್ಯಗಳಲ್ಲಿ ಸೋಲಿಗಿಂತ ಹೆಚ್ಚಿನ ಗೆಲುವಿನ ಅಗತ್ಯವಿದೆ. ಪ್ಲೇಆಫ್​ ಖಚಿತಕ್ಕೆ 5 ಜಯ ಬೇಕಿದ್ದರೂ, 4 ಜಯ ಸಾಧಿಸಿದರೂ ಆಸೆ ಜೀವಂತವಿರಲಿದೆ. ಅಂಕಪಟ್ಟಿಯಲ್ಲಿ ಈಗಿರುವ 5ನೇ ಸ್ಥಾನದಿಂದ ಅಗ್ರ 4ರೊಳಗೆ ಏರುವ ಹಾದಿ ಸುಲಭವಾಗಿಲ್ಲ.
    ಟಾಪರ್ಸ್‌: ಸಂಜು ಸ್ಯಾಮ್ಸನ್ (277 ರನ್), ಕ್ರಿಸ್ ಮಾರಿಸ್ (14 ವಿಕೆಟ್).
    ಇನ್: ಗ್ಲೆನ್ ಫಿಲಿಪ್ಸ್, ಎವಿನ್ ಲೆವಿಸ್, ಒಶಾನೆ ಥಾಮಸ್, ತಬರೇಜ್ ಶಮ್ಸಿ.
    ಔಟ್: ಜೋಸ್ ಬಟ್ಲರ್, ಬೆನ್ ಸ್ಟೋಕ್ಸ್, ಜೋಫ್ರಾ ಆರ್ಚರ್, ಆಂಡ್ರೋ ಟೈ.

    ಪಂಜಾಬ್ ಕಿಂಗ್ಸ್
    ತಂಡದಲ್ಲಿ ಉತ್ತಮ ಆಟಗಾರರು ಮತ್ತು ಕನ್ನಡಿಗ ಅನಿಲ್ ಕುಂಬ್ಳೆ ಅವರ ಸಮರ್ಥ ಮಾರ್ಗದರ್ಶನವಿದ್ದರೂ, ಅದನ್ನು ಗೆಲುವಾಗಿ ಪರಿವರ್ತಿಸುವಲ್ಲಿ ಪಂಜಾಬ್ ಕಿಂಗ್ಸ್ ತಂಡ ಎಡವುತ್ತ ಬಂದಿದೆ. ಗಾಯದಿಂದಾಗಿ ಮೊದಲ ಭಾಗದ ನಡುವೆ ಹೊರಬಿದ್ದಿದ್ದ ನಾಯಕ ಕೆಎಲ್ ರಾಹುಲ್ ಫಿಟ್ ಆಗಿ ಮರಳಿದ್ದಾರೆ. ರಾಹುಲ್, ಮಯಾಂಕ್, ಗೇಲ್ ಜತೆಗೆ ದೀಪಕ್ ಹೂಡ ಮತ್ತು ಶಾರುಖ್ ಖಾನ್ ಕೂಡ ಬ್ಯಾಟಿಂಗ್‌ನಲ್ಲಿ ಮಿಂಚಿದ್ದರು. ಕೊನೇ ಹಂತದಲ್ಲಿ ಮುಗ್ಗರಿಸುವ ಚಾಳಿ ಬಿಟ್ಟರೆ ಪಂಜಾಬ್ ಪುಟಿದೇಳಬಹುದಾಗಿದೆ.
    ಪ್ಲೇಆಫ್​ ಹಾದಿ: ಪ್ಲೇಆಫ್​ ರೇಸ್‌ನಲ್ಲಿ ತನ್ನ ನಿಕಟ ಸ್ಪರ್ಧಿಗಳಿಗಿಂತ 1 ಪಂದ್ಯ ಅಧಿಕ ಆಡಿರುವ ಪಂಜಾಬ್ ಕಿಂಗ್ಸ್ ಹಾದಿ ಕಠಿಣವಾಗಿದೆ. ಇದುವರೆಗೆ ಆಡಿದ 8ರಲ್ಲಿ 3ರಲ್ಲಷ್ಟೇ ಗೆದ್ದು, 5ರಲ್ಲಿ ಸೋತಿರುವ ಪಂಜಾಬ್ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಬಲಿಷ್ಠ ಡೆಲ್ಲಿ ವಿರುದ್ಧ ಈಗಾಗಲೆ ಎರಡೂ ಲೀಗ್ ಪಂದ್ಯ ಆಡಿದ್ದು, ಎರಡರಲ್ಲೂ ಸೋತಿದೆ. ಪ್ಲೇಆಫ್​ ಖಚಿತಕ್ಕೆ ಉಳಿದ 6ರಲ್ಲಿ 5 ಗೆಲುವಿನ ಅನಿವಾರ‌್ಯತೆ ಇದೆ. ಕನಿಷ್ಠ 4ರಲ್ಲೂ ಗೆಲ್ಲದಿದ್ದರೆ ಪ್ಲೇಆಫ್​ ರೇಸ್‌ನಿಂದ ಹೊರಬೀಳಲಿದೆ.
    ಟಾಪರ್ಸ್‌: ಕೆಎಲ್ ರಾಹುಲ್ (331 ರನ್), ಮೊಹಮದ್ ಶಮಿ (8 ವಿಕೆಟ್).
    ಇನ್: ನಾಥನ್ ಎಲ್ಲಿಸ್, ಆದಿಲ್ ರಶೀದ್, ಐಡನ್ ಮಾರ್ಕ್ರಮ್,
    ಔಟ್: ರಿಲೀ ಮೆರಿಡಿತ್, ಜೇ ರಿಚರ್ಡ್‌ಸನ್, ಡೇವಿಡ್ ಮಲಾನ್.

    ಕೋಲ್ಕತ ನೈಟ್‌ರೈಡರ್ಸ್‌
    ಅಗ್ರ ಮತ್ತು ಮಧ್ಯಮ ಕ್ರಮಾಂಕದ ನೀರಸ ನಿರ್ವಹಣೆಯಿಂದ ಕೆಕೆಆರ್ ಟೂರ್ನಿಯ ಮೊದಲ ಭಾಗದಲ್ಲಿ ನಿರಾಸೆ ಅನುಭವಿಸಿತ್ತು. ಮಗುವಿನ ನಿರೀಕ್ಷೆಯಲ್ಲಿ ಪ್ಯಾಟ್ ಕಮ್ಮಿನ್ಸ್ 2ನೇ ಭಾಗಕ್ಕೆ ಅಲಭ್ಯರಾಗಿದ್ದರೂ, ನಾಯಕ ಇವೊಯಿನ್ ಮಾರ್ಗನ್ ಲಭ್ಯರಾಗಿರುವುದು ನೆಮ್ಮದಿಯ ವಿಚಾರ. ಆದರೂ ತಂಡಕ್ಕೆ ಆಂಡ್ರೆ ರಸೆಲ್, ಸುನೀಲ್ ನಾರಾಯಣ್ ನಿರ್ವಹಣೆಯೇ ನಿರ್ಣಾಯಕವಾಗಿದೆ. ಬೌಲಿಂಗ್‌ನಲ್ಲಿ ಕಮ್ಮಿನ್ಸ್ ಕೊರತೆ ಕಾಡದಂತೆ ನೋಡಿಕೊಳ್ಳಲು ನ್ಯೂಜಿಲೆಂಡ್‌ನ ಲಾಕಿ ರ್ಗುಸನ್, ಟಿಮ್ ಸೌಥಿ ಇದ್ದಾರೆ.
    ಪ್ಲೇಆಫ್​ ಹಾದಿ: ಮೊದಲ ಭಾಗದಲ್ಲಿ ಆಡಿದ 7 ಪಂದ್ಯಗಳಲ್ಲಿ 2ರಲ್ಲಷ್ಟೇ ಗೆದ್ದು, 5ರಲ್ಲಿ ಸೋತಿರುವ ಕೆಕೆಆರ್ ಪ್ಲೇಆಫ್​ ಹಾದಿ ಜಟಿಲವಾಗಿದೆ. ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿರುವ ಕೆಕೆಆರ್, ಉಳಿದ 7ರಲ್ಲಿ ಕನಿಷ್ಠ 5ರಲ್ಲಾದರೂ ಗೆದ್ದರಷ್ಟೇ ಪ್ಲೇಆಫ್​ ಆಸೆ ಜೀವಂತ ಉಳಿಸಿಕೊಳ್ಳಬಹುದಾಗಿದೆ.
    ಟಾಪರ್ಸ್‌: ನಿತೀಶ್ ರಾಣಾ (201 ರನ್), ಪ್ರಸಿದ್ಧಕೃಷ್ಣ (8 ವಿಕೆಟ್).
    ಇನ್: ಟಿಮ್ ಸೌಥಿ.
    ಔಟ್: ಪ್ಯಾಟ್ ಕಮ್ಮಿನ್ಸ್.

    ಸನ್‌ರೈಸರ್ಸ್‌ ಹೈದರಾಬಾದ್
    ಐಪಿಎಲ್ ಇತಿಹಾಸದಲ್ಲೇ ತನ್ನ ಅತ್ಯಂತ ಕಳಪೆ ನಿರ್ವಹಣೆ ತೋರಿರುವ ಸನ್‌ರೈಸರ್ಸ್‌, ಟೂರ್ನಿ ಮೊದಲ ಭಾಗದಲ್ಲಿ ಒಟ್ಟಾರೆ 21 ಆಟಗಾರರನ್ನು ಕಣಕ್ಕಿಳಿಸಿದರೂ ಗೆಲುವಿನ ಲಯ ಕಂಡುಕೊಳ್ಳಲು ಪರದಾಡಿತ್ತು. ಡೇವಿಡ್ ವಾರ್ನರ್‌ರನ್ನು ನಾಯಕತ್ವದಿಂದ ಕೈಬಿಟ್ಟಿದ್ದು ಮಾತ್ರವಲ್ಲದೆ ಆಡುವ ಬಳಗದಿಂದಲೂ ಹೊರಗಿಡಲಾಗಿತ್ತು. ಕೇನ್ ವಿಲಿಯಮ್ಸನ್ ಹೊಸ ನಾಯಕರಾಗಿದ್ದರೂ, ತಂಡವನ್ನು ಗೆಲುವಿನ ಹಾದಿಗೆ ತರುವುದು ಕಷ್ಟವಾಗಿತ್ತು. ಗಾಯದಿಂದಾಗಿ ಮೊದಲ ಭಾಗವನ್ನು ಅರ್ಧದಲ್ಲೇ ತೊರೆದಿದ್ದ ವೇಗಿ ಟಿ. ನಟರಾಜನ್ 2ನೇ ಭಾಗಕ್ಕೆ ಫಿಟ್ ಆಗಿದ್ದರೂ, ಬೇರ್‌ಸ್ಟೋ ಗೈರು ಹೊಡೆತ ನೀಡಿದೆ.
    ಪ್ಲೇಆಫ್​ ಹಾದಿ: ಆಡಿದ 7 ಪಂದ್ಯಗಳಲ್ಲಿ 1ರಲ್ಲಷ್ಟೇ ಗೆದ್ದು ಅಂಕಪಟ್ಟಿಯಲ್ಲಿ ಕೊನೇ ಸ್ಥಾನದಲ್ಲಿರುವ ಸನ್‌ರೈಸರ್ಸ್‌ ತಂಡದ ಪ್ಲೇಆಫ್​ ಹಾದಿ ದುಸ್ತರವಾಗಿದೆ. ಆಸೆ ಜೀವಂತವಿಡಲು ಕನಿಷ್ಠ 6 ಜಯದ ಅಗತ್ಯವಿದ್ದು, ಉಳಿದ 7 ಪಂದ್ಯದಲ್ಲೂ ಗೆದ್ದರಷ್ಟೇ ಪ್ಲೇಆಫ್​ ಖಚಿತಗೊಳ್ಳಲಿದೆ. ಇನ್ನೆರಡು ಪಂದ್ಯ ಸೋತರೆ ಪ್ಲೇಆಫ್​ ರೇಸ್‌ನಿಂದ ಹೊರಬೀಳಲಿದೆ.
    ಟಾಪರ್ಸ್‌: ಡೇವಿಡ್ ವಾರ್ನರ್, ಮನೀಷ್ ಪಾಂಡೆ (ತಲಾ 193 ರನ್), ರಶೀದ್ ಖಾನ್ (10 ವಿಕೆಟ್).
    ಇನ್: ಶೆರ್ಫಾನ್ ರುದರ್​ಫೋರ್ಡ್.
    ಔಟ್: ಜಾನಿ ಬೇರ್‌ಸ್ಟೋ.

    ಉಪನಾಯಕತ್ವದಿಂದ ರೋಹಿತ್ ಶರ್ಮ ಕೆಳಗಿಸಲು ಯತ್ನಿಸಿದ್ದರೇ ವಿರಾಟ್ ಕೊಹ್ಲಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts