More

    ದೋಸ್ತಿಗಳು ದೂರ! ಈ ಸಲ ಬೇರ್ಪಟ್ಟಿವೆ ಐಪಿಎಲ್‌ನ ಜನಪ್ರಿಯ ಜೋಡಿಗಳು…

    ಬೆಂಗಳೂರು: ಜಗಳವಾಡಿದ್ದವರನ್ನು ಸಹ-ಆಟಗಾರರನ್ನಾಗಿ ಮಾಡುತ್ತಿರುವುದು ಈ ಸಲದ ಐಪಿಎಲ್ ಟೂರ್ನಿಯ ವಿಶೇಷತೆ. ಮಂಕಡಿಂಗ್ ವಿಷಯದಲ್ಲಿ ವಾಗ್ವಾದ ನಡೆಸಿದ್ದ ಆರ್. ಅಶ್ವಿನ್-ಜೋಸ್ ಬಟ್ಲರ್ ರಾಜಸ್ಥಾನ ರಾಯಲ್ಸ್‌ನಲ್ಲಿ ಜತೆಯಾಗಿ ಆಡಲಿದ್ದರೆ, ದೇಶೀಯ ಕ್ರಿಕೆಟ್‌ನಲ್ಲಿ ಕಿತ್ತಾಡಿಕೊಂಡಿದ್ದ ಕೃನಾಲ್ ಪಾಂಡ್ಯ-ದೀಪಕ್ ಹೂಡಾ ಲಖನೌ ಸೂಪರ್‌ಜೈಂಟ್ಸ್‌ನಲ್ಲಿ ಒಂದಾಗಿದ್ದಾರೆ. ಇದರ ಜತೆಯಲ್ಲೇ, ಕಳೆದ ಹಲವು ಆವೃತ್ತಿಗಳಿಂದ ಜತೆಯಾಗಿದ್ದ ಆಟಗಾರರು ಈ ಬಾರಿ ಐಪಿಎಲ್‌ನಲ್ಲಿ ದೂರವಾಗಿದ್ದಾರೆ. ಅವರ ಸಂಕ್ಷಿಪ್ತ ಮೆಲುಕು ಇಲ್ಲಿದೆ.

    ಧೋನಿ-ರೈನಾ
    ಚೆನ್ನೈ ಸೂಪರ್‌ಕಿಂಗ್ಸ್‌ನಲ್ಲಿ ಆರಂಭದಿಂದಲೂ ‘ಥಲಾ-ಚಿನ್ನ ಥಲಾ’ ಜೋಡಿಯಾಗಿ ಅಭಿಮಾನಿಗಳ ಪ್ರೀತಿಗೆ ಪಾತ್ರರಾಗಿದ್ದವರು ನಾಯಕ ಎಂಎಸ್ ಧೋನಿ ಮತ್ತು ಮಾಜಿ ಉಪನಾಯಕ ಸುರೇಶ್ ರೈನಾ. ಆದರೆ ಈ ಬಾರಿ ರೈನಾರನ್ನು ಸಿಎಸ್‌ಕೆ ರಿಟೇನ್ ಮಾಡಿಕೊಂಡಿಲ್ಲ. ನಂತರ ಹರಾಜಿನಲ್ಲಿ ಇತರ ತಂಡಗಳೂ ಖರೀದಿಸಿಲ್ಲ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಒಂದೇ ದಿನ ವಿದಾಯ ಹೇಳಿದ್ದ ಧೋನಿ-ರೈನಾ, ಐಪಿಎಲ್‌ನಿಂದಲೂ ಜತೆಯಾಗಿಯೇ ನಿರ್ಗಮಿಸುವ ಅವಕಾಶ ಪಡೆದಿಲ್ಲ.

    ಕೊಹ್ಲಿ-ಎಬಿಡಿ
    ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್‌ 2011ರಲ್ಲಿ ಆರ್‌ಸಿಬಿ ತಂಡ ಕೂಡಿಕೊಂಡ ಸಮಯದಿಂದಲೂ ವಿರಾಟ್ ಕೊಹ್ಲಿ ಜತೆಗೆ ಅತ್ಯುತ್ತಮ ಬಾಂಧವ್ಯ ಬೆಸೆದುಕೊಂಡಿದ್ದರು. ಮೈದಾನದ ಒಳಗೆ-ಹೊರಗೆ ಇಬ್ಬರೂ ಆಪ್ತರಾಗಿದ್ದರು ಮತ್ತು ಪರಸ್ಪರ ಗೌರವಿಸುತ್ತಿದ್ದರು. ಐಪಿಎಲ್ ಇತಿಹಾಸದ ಅಗ್ರ 2 ಜತೆಯಾಟಗಳು ಇವರಿಬ್ಬರ ಹೆಸರಿನಲ್ಲೇ ಇವೆ. ಆದರೆ ಎಬಿಡಿ ಕಳೆದ ವರ್ಷ ನಿವೃತ್ತಿಯಾಗಿದ್ದು, ಆರ್‌ಸಿಬಿಯನ್ನೂ ತೊರೆದಿದ್ದಾರೆ.

    ರಾಹುಲ್-ಮಯಾಂಕ್
    ಕರ್ನಾಟಕ ತಂಡದ ಸಹ-ಆಟಗಾರರಾದ ಕೆಎಲ್ ರಾಹುಲ್-ಮಯಾಂಕ್ ಅಗರ್ವಾಲ್ ಕಳೆದ 4 ವರ್ಷಗಳಿಂದ ಪಂಜಾಬ್ ಕಿಂಗ್ಸ್ ತಂಡದಲ್ಲೂ ಜತೆಯಾಗಿದ್ದರು. ಆರಂಭಿಕ ಜೋಡಿಯಾಗಿ ತಂಡಕ್ಕೆ ಭದ್ರ ಬುನಾದಿ ಹಾಕಿಕೊಡುತ್ತಿದ್ದರು. ಆದರೆ ರಾಹುಲ್ ಈ ಬಾರಿ ಲಖನೌ ಸೂಪರ್‌ಜೈಂಟ್ಸ್ ಸೇರಿದ್ದರೆ, ಮಯಾಂಕ್ ಪಂಜಾಬ್‌ನಲ್ಲೇ ನಾಯಕರಾಗಿ ಬಡ್ತಿ ಪಡೆದಿದ್ದಾರೆ. ಹೀಗಾಗಿ ಈ ಬಾರಿ ಇವರಿಬ್ಬರು ಎದುರಾಳಿ ನಾಯಕರಾಗಿ ಮುಖಾಮುಖಿ ಆಗಲಿದ್ದಾರೆ.

    ಹಾರ್ದಿಕ್-ಪೊಲ್ಲಾರ್ಡ್
    ಮುಂಬೈ ಇಂಡಿಯನ್ಸ್ ಯಶಸ್ಸಿಗೆ ಆಲ್ರೌಂಡ್ ಬಲ ಒದಗಿಸುತ್ತಿದ್ದ ಹಾರ್ದಿಕ್ ಪಾಂಡ್ಯ ಮತ್ತು ವೆಸ್ಟ್ ಇಂಡೀಸ್‌ನ ಕೈರಾನ್ ಪೊಲ್ಲಾರ್ಡ್ ಉತ್ತಮ ಸ್ನೇಹಿತರೂ ಆಗಿದ್ದಾರೆ. 2015ರಲ್ಲಿ ಹಾರ್ದಿಕ್ ಮುಂಬೈ ಸೇರಿದ ಬಳಿಕ ಪೊಲ್ಲಾರ್ಡ್ ಜತೆಗೂಡಿ ತಂಡಕ್ಕೆ ಹಲವು ಸ್ಮರಣೀಯ ಗೆಲುವುಗಳನ್ನು ತಂದುಕೊಟ್ಟಿದ್ದರು. ‘ಬ್ಲ್ಯಾಕ್ ಲೈವ್ಸ್ ಮ್ಯಾಟರ್’ ಅಭಿಯಾನದಲ್ಲಿ ಪೊಲ್ಲಾರ್ಡ್‌ಗೆ ಬೆಂಬಲ ಸೂಚಿಸುವ ಸಲುವಾಗಿ ಹಾರ್ದಿಕ್, ಮೈದಾನದಲ್ಲಿ ಮೊಣಕಾಲೂರಿದ್ದರು. ಆದರೆ ಈ ಬಾರಿ ಹಾರ್ದಿಕ್ ಮುಂಬೈನಿಂದ ಹೊರಹೋಗಿದ್ದು, ತವರಿನ ಗುಜರಾತ್ ಟೈಟಾನ್ಸ್ ತಂಡಕ್ಕೆ ನಾಯಕರಾಗಿದ್ದಾರೆ.

    ವಾರ್ನರ್-ವಿಲಿಯಮ್ಸನ್
    ಆಸ್ಟ್ರೇಲಿಯಾದ ಸ್ಫೋಟಕ ಆರಂಭಿಕ ಡೇವಿಡ್ ವಾರ್ನರ್ ಮತ್ತು ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್, ಟ್ರಾನ್ಸ್-ಟಾಸ್ಮೆನ್ ಎದುರಾಳಿಗಳಾಗಿದ್ದರೂ ಐಪಿಎಲ್‌ನಲ್ಲಿ ಸನ್‌ರೈಸರ್ಸ್‌ ಮೂಲಕ ಒಂದಾಗಿದ್ದರು. 2015ರಲ್ಲಿ ಜತೆಗೂಡಿದ್ದ ಈ ಜೋಡಿ, 2016ರಲ್ಲಿ ಸನ್‌ರೈಸರ್ಸ್‌ ತಂಡ ಪ್ರಶಸ್ತಿ ಜಯಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿತ್ತು. ಈ 7 ವರ್ಷಗಳಲ್ಲಿ ಇವರಿಬ್ಬರ ನಡುವೆಯೇ ಸನ್‌ರೈಸರ್ಸ್‌ ನಾಯಕತ್ವ ಹಂಚಿಕೆಯಾಗಿತ್ತು. ಟೀಮ್ ಮ್ಯಾನೇಜ್‌ಮೆಂಟ್ ಜತೆಗೆ ಕಳೆದ ವರ್ಷ ಉಂಟಾದ ಭಿನ್ನಾಭಿಪ್ರಾಯದಿಂದಾಗಿ ವಾರ್ನರ್ ಈ ಬಾರಿ ಸನ್‌ರೈಸರ್ಸ್‌ ತ್ಯಜಿಸಿದ್ದು, ಐಪಿಎಲ್‌ನ ತಮ್ಮ ಮೂಲ ತಂಡವಾದ ಡೆಲ್ಲಿ ಪರ ಆಡಲಿದ್ದಾರೆ.

    ಗ್ಲಾಮರ್ ಪ್ರಿಯರಿಗೆ ಈ ಸಲವೂ ನಿರಾಸೆ ತರಲಿದೆ ಐಪಿಎಲ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts