More

    ಐಪಿಎಲ್ ಟೂರ್ನಿಗೆ ಹೊಸ ಸ್ವರೂಪ; ಒಂದೇ ಗುಂಪಿನಲ್ಲಿ ಆರ್‌ಸಿಬಿ, ಸಿಎಸ್‌ಕೆ!

    ನವದೆಹಲಿ: ಎರಡು ಹೊಸ ತಂಡಗಳ ಸೇರ್ಪಡೆಯೊಂದಿಗೆ ಒಟ್ಟು ತಂಡಗಳ ಸಂಖ್ಯೆ 10ಕ್ಕೆ ಏರಿಕೆ ಕಂಡಿರುವ ಐಪಿಎಲ್ 15ನೇ ಆವೃತ್ತಿಗೆ ಬಿಸಿಸಿಐ ಹೊಸ ಸ್ವರೂಪವನ್ನು ನೀಡಿದೆ. ಟೂರ್ನಿಯಲ್ಲಿ ಆಡುವ 10 ತಂಡಗಳನ್ನು ತಲಾ 5ರಂತೆ 2 ಗುಂಪುಗಳಲ್ಲಿ ವಿಂಗಡಿಸಲಾಗಿದ್ದು, ಹಾಲಿ ಚಾಂಪಿಯನ್ ಚೆನ್ನೈ ಸೂಪರ್‌ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡಗಳು ಒಂದೇ ಗುಂಪಿನಲ್ಲಿ ಸ್ಥಾನ ಪಡೆದಿವೆ. ಎಲ್ಲ 10 ತಂಡಗಳು ಲೀಗ್ ಹಂತದಲ್ಲಿ ತಲಾ 14 ಪಂದ್ಯಗಳನ್ನೇ ಆಡಲಿವೆ. ಮಾರ್ಚ್ 26ರಿಂದ ಮೇ 29ರವರೆಗೆ ಐಪಿಎಲ್ ಟೂರ್ನಿ ನಡೆಯಲಿದೆ ಎಂದು ಬಿಸಿಸಿಐ ಶುಕ್ರವಾರ ಅಧಿಕೃತವಾಗಿ ಪ್ರಕಟಿಸಿದೆ. ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿ ಮುಗಿದ ಹತ್ತೇ ದಿನಗಳಲ್ಲಿ ಐಪಿಎಲ್ ಶುರುವಾಗಲಿದೆ.

    ಎ ಗುಂಪಿನಲ್ಲಿ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್, ಕೋಲ್ಕತ ನೈಟ್‌ರೈಡರ್ಸ್‌, ರಾಜಸ್ಥಾನ ರಾಯಲ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಖನೌ ಸೂಪರ್‌ಜೈಂಟ್ಸ್ ತಂಡಗಳಿವೆ. ಬಿ ಗುಂಪಿನಲ್ಲಿ ಸಿಎಸ್‌ಕೆ, ಆರ್‌ಸಿಬಿ ಜತೆಗೆ ಸನ್‌ರೈಸರ್ಸ್‌ ಹೈದರಾಬಾದ್, ಪಂಜಾಬ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಸ್ಥಾನ ಪಡೆದಿವೆ.

    ಐಪಿಎಲ್‌ಗೆ ಇದೇ ತೀರಾ ಹೊಸ ಸ್ವರೂಪವೇನಲ್ಲ. 2011ರಲ್ಲೂ 10 ತಂಡಗಳು ಆಡಿದಾಗ (ಪುಣೆ ವಾರಿಯರ್ಸ್‌, ಕೊಚ್ಚಿ ಟಸ್ಕರ್ಸ್‌ ಕೇರಳ ಇದ್ದಾಗ) ಇದೇ ಸ್ವರೂಪ ಇತ್ತು. ಆದರೆ ಆಗ ನಿಖರವಾಗಿ ತಂಡಗಳನ್ನು 2 ಗುಂಪುಗಳಲ್ಲಿ ವಿಂಗಡಿಸಲಾಗಿರಲಿಲ್ಲ. ಮನಬಂದಂತೆ ಆರಿಸಿದ ಗುಂಪುಗಳು ಅದಾಗಿದ್ದವು.

    ತಲಾ 14 ಲೀಗ್ ಪಂದ್ಯ
    2 ಗುಂಪುಗಳಿದ್ದರೂ ಎಲ್ಲ 10 ತಂಡಗಳು ಹಿಂದಿನಂತೆ ಲೀಗ್ ಹಂತದಲ್ಲಿ ತಲಾ 14 ಪಂದ್ಯಗಳನ್ನೇ ಆಡಲಿವೆ. ತಂಡವೊಂದು ತನ್ನ ಗುಂಪಿನ ಎಲ್ಲ ತಂಡಗಳ ವಿರುದ್ಧ ತಲಾ 2 ಪಂದ್ಯ ಆಡಲಿದ್ದರೆ, ಮತ್ತೊಂದು ಗುಂಪಿನ ಒಂದು ತಂಡದ ವಿರುದ್ಧ ಮಾತ್ರ 2 ಪಂದ್ಯ ಆಡಲಿದ್ದು, ಉಳಿದ 4 ತಂಡಗಳನ್ನು ಒಮ್ಮೆ ಮಾತ್ರ ಎದುರಿಸಲಿದೆ. ಇದರನ್ವಯ ಒಟ್ಟು 14 (8+2+4) ಪಂದ್ಯ ಆಡಲಿದೆ. ಆದರೆ 2 ಗುಂಪುಗಳಿದ್ದರೂ ಅಂಕಪಟ್ಟಿ ಒಂದೇ ಇರಲಿದ್ದು, ಒಟ್ಟಾರೆ ಅಗ್ರ 4 ತಂಡಗಳಷ್ಟೇ ಪ್ಲೇಆ್ ಹಂತಕ್ಕೇರಲಿವೆ.

    ಗುಂಪುಗಳ ವಿಂಗಡನೆ ಹೇಗೆ?
    ಐಪಿಎಲ್‌ನ ಹಿಂದಿನ ಆವೃತ್ತಿಗಳಲ್ಲಿ ಆಡಿರುವ 8 ತಂಡಗಳು ಪ್ರಶಸ್ತಿ ಗೆದ್ದಿರುವ ಮತ್ತು ಫೈನಲ್‌ಗೇರಿರುವ ಲೆಕ್ಕಾಚಾರದ ‘ಐಪಿಎಲ್ ಚಾಂಪಿಯನ್‌ಷಿಪ್’ ಅನ್ವಯ ತಂಡಗಳಿಗೆ ಶ್ರೇಯಾಂಕವನ್ನು ನೀಡಿ 2 ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಇದರನ್ವಯ 6 ಬಾರಿ ಫೈನಲ್‌ಗೇರಿ 5 ಬಾರಿ ಪ್ರಶಸ್ತಿ ಗೆದ್ದಿರುವ ಮುಂಬೈ ಇಂಡಿಯನ್ಸ್ ಅಗ್ರ ಶ್ರೇಯಾಂಕ ಪಡೆದಿದ್ದರೆ, 9 ಬಾರಿ ಫೈನಲ್‌ಗೇರಿ 4 ಬಾರಿ ಪ್ರಶಸ್ತಿ ಗೆದ್ದಿರುವ ಸಿಎಸ್‌ಕೆ 2ನೇ ಶ್ರೇಯಾಂಕ ಪಡೆದಿದೆ. 3 ಬಾರಿ ಫೈನಲ್‌ಗೇರಿ 2 ಬಾರಿ ಪ್ರಶಸ್ತಿ ಗೆದ್ದಿರುವ ಕೆಕೆಆರ್ 3 ಮತ್ತು 2 ಬಾರಿ ಫೈನಲ್‌ಗೇರಿ ಒಮ್ಮೆ ಪ್ರಶಸ್ತಿ ಗೆದ್ದಿರುವ ಸನ್‌ರೈಸರ್ಸ್‌ 4ನೇ ಶ್ರೇಯಾಂಕ ಪಡೆದಿದೆ. 1 ಬಾರಿಯ ಚಾಂಪಿಯನ್ ರಾಜಸ್ಥಾನ 5 ಮತ್ತು 3 ಬಾರಿ ಫೈನಲ್‌ಗೇರಿ ಒಮ್ಮೆಯೂ ಪ್ರಶಸ್ತಿ ಗೆಲ್ಲದ ಆರ್‌ಸಿಬಿ 6ನೇ ಶ್ರೇಯಾಂಕ ಗಳಿಸಿದೆ. ತಲಾ ಒಮ್ಮೆ ಫೈನಲ್‌ಗೇರಿರುವ ಡೆಲ್ಲಿ ಮತ್ತು ಪಂಜಾಬ್ ಕ್ರಮವಾಗಿ 7 ಮತ್ತು 8ನೇ ಶ್ರೇಯಾಂಕ ಗಳಿಸಿವೆ. 1ನೇ ಶ್ರೇಯಾಂಕದ ತಂಡ ಒಂದು ಗುಂಪಿನಲ್ಲಿದ್ದರೆ, 2ನೇ ಶ್ರೇಯಾಂಕದ ತಂಡ ಮತ್ತೊಂದು ಗುಂಪಿನಲ್ಲಿದೆ. ಇದೇ ರೀತಿ 3ರಿಂದ 8ನೇ ಶ್ರೇಯಾಂಕದ ತಂಡಗಳನ್ನೂ ಅನುಕ್ರಮವಾಗಿ ಭಿನ್ನ ಗುಂಪಿನಲ್ಲಿ ಸೇರಿಸಲಾಗಿದೆ. 2 ಹೊಸ ತಂಡಗಳು ಉಭಯ ಗುಂಪುಗಳಿಗೂ ತಲಾ ಒಂದರಂತೆ ಸೇರಿಸಲಾಗಿದೆ.

    ಆರ್‌ಸಿಬಿಗೆ ಮುಂಬೈ ಎದುರು ಒಂದೇ ಪಂದ್ಯ
    ಆರ್‌ಸಿಬಿ ತಂಡ ತನ್ನ ಗುಂಪಿನ ಎಲ್ಲ ತಂಡಗಳ ವಿರುದ್ಧ ತಲಾ 2 ಬಾರಿ ಆಡುವ ಜತೆಗೆ ಎದುರಾಳಿ ಗುಂಪಿನಿಂದ ರಾಜಸ್ಥಾನ ವಿರುದ್ಧ ಮಾತ್ರ 2 ಪಂದ್ಯ ಆಡಲಿದೆ. ಉಳಿದಂತೆ ಮುಂಬೈ, ಕೆಕೆಆರ್, ಡೆಲ್ಲಿ, ಲಖನೌ ವಿರುದ್ಧ ತಲಾ 1 ಪಂದ್ಯವನ್ನಷ್ಟೇ ಆಡಲಿದೆ. ಇದೇ ರೀತಿ ಮುಂಬೈ, ಕೆಕೆಆರ್, ಡೆಲ್ಲಿ ಮತ್ತು ಲಖನೌ ತಂಡಗಳು ಮತ್ತೊಂದು ಗುಂಪಿನಲ್ಲಿ ಕ್ರಮವಾಗಿ ಸಿಎಸ್‌ಕೆ, ಸನ್‌ರೈಸರ್ಸ್‌, ಪಂಜಾಬ್ ಮತ್ತು ಗುಜರಾತ್ ತಂಡಗಳ ವಿರುದ್ಧ ಮಾತ್ರ 2 ಪಂದ್ಯಗಳನ್ನು ಆಡಲಿವೆ.

    ಗುಂಪುಗಳು (ರ‌್ಯಾಂಕ್):
    ಎ: ಮುಂಬೈ (1), ಕೆಕೆಆರ್ (3), ರಾಜಸ್ಥಾನ (5), ಡೆಲ್ಲಿ (7), ಲಖನೌ (9).
    ಬಿ: ಸಿಎಸ್‌ಕೆ (2), ಸನ್‌ರೈಸರ್ಸ್‌ (4), ಆರ್‌ಸಿಬಿ (6), ಪಂಜಾಬ್ (8), ಗುಜರಾತ್ (10).

    ಲೀಗ್‌ನಲ್ಲಿ ಒಟ್ಟು 70 ಪಂದ್ಯ
    ಲೀಗ್ ಹಂತದಲ್ಲಿ ಒಟ್ಟು 70 ಪಂದ್ಯಗಳು ನಡೆಯಲಿದ್ದು, ತವರು-ಎದುರಾಳಿ ನೆಲ ಲೆಕ್ಕಾಚಾರಕ್ಕೆ ಬದಲಾಗಿ ಎಲ್ಲವೂ ಮುಂಬೈ-ಪುಣೆಯಲ್ಲೇ ನಿಗದಿಯಾಗಿವೆ. ಮುಂಬೈನ ವಾಂಖೆಡೆಯಲ್ಲಿ 20, ಬ್ರಬೋರ್ನ್‌ನಲ್ಲಿ 15 ಮತ್ತು ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ 20 ಪಂದ್ಯಗಳು ನಡೆಯಲಿವೆ. ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ಉಳಿದ 15 ಪಂದ್ಯಗಳು ನಡೆಯಲಿವೆ. ಎಲ್ಲ ತಂಡಗಳು ವಾಂಖೆಡೆ-ಡಿವೈ ಪಾಟೀಲ್‌ನಲ್ಲಿ ತಲಾ 4 ಮತ್ತು ಬ್ರಬೋರ್ನ್-ಎಂಸಿಎಯಲ್ಲಿ ತಲಾ 3 ಲೀಗ್ ಪಂದ್ಯಗಳನ್ನಾಡಲಿವೆ. ಕರೊನಾ ಕಾಲದ ವಿಮಾನ ಪ್ರಯಾಣ ತಾಪತ್ರಯ ತಪ್ಪಿಸಲು ಎರಡೇ ನಗರಗಳಲ್ಲಿ ಸುರಕ್ಷಿತ ಬಯೋಬಬಲ್ ನಿರ್ಮಿಸಲಾಗುವುದು ಎಂದು ಬಿಸಿಸಿಐ ತಿಳಿಸಿದೆ.

    ದಬಾಂಗ್ ಡೆಲ್ಲಿಗೆ ಪ್ರೊ ಕಬಡ್ಡಿ ಲೀಗ್ ಕಿರೀಟ; ಪಟನಾ ಪೈರೇಟ್ಸ್ ಎದುರು ರೋಚಕ ಜಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts