More

    ದಬಾಂಗ್ ಡೆಲ್ಲಿಗೆ ಪ್ರೊ ಕಬಡ್ಡಿ ಲೀಗ್ ಕಿರೀಟ; ಪಟನಾ ಪೈರೇಟ್ಸ್ ಎದುರು ರೋಚಕ ಜಯ

    ಬೆಂಗಳೂರು: ಅಂತಿಮ ಕ್ಷಣದವರೆಗೂ ರೋಚಕತೆ ಕಾಯ್ದುಕೊಂಡ ಹಣಾಹಣಿಯಲ್ಲಿ ಸ್ಟಾರ್ ರೈಡರ್ ನವೀನ್ ಕುಮಾರ್ (13 ಅಂಕ) ಹಾಗೂ ಆಲ್ರೌಂಡರ್ ವಿಜಯ್ (14 ಅಂಕ) ತೋರಿದ ಚಾಣಾಕ್ಷ ನಿರ್ವಹಣೆಯಿಂದ ದಬಾಂಗ್ ಡೆಲ್ಲಿ ತಂಡ 8ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿತು. ಶುಕ್ರವಾರ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ತಂಡ 37-36 ಅಂಕಗಳಿಂದ 3 ಬಾರಿಯ ಚಾಂಪಿಯನ್ ಕನ್ನಡಿಗ ಪ್ರಶಾಂತ್ ಕುಮಾರ್ ರೈ ಸಾರಥ್ಯದ ಪಟನಾ ಪೈರೇಟ್ಸ್ ತಂಡದ ಎದುರು ರೋಚಕ ಜಯ ದಾಖಲಿಸಿತು. ಕಳೆದ ಬಾರಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿದ ಡೆಲ್ಲಿ ಚೊಚ್ಚಲ ಬಾರಿಗೆ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಇದರೊಂದಿಗೆ ಕಳೆದ ಎರಡೂವರೆ ತಿಂಗಳಿಂದ ಉದ್ಯಾನನಗರಿಯ ಖಾಸಗಿ ಹೋಟೆಲ್‌ನ ಬಯೋಬಬಲ್ ವ್ಯಾಪ್ತಿಯಲ್ಲೇ ನಡೆದ ಪ್ರತಿಷ್ಠಿತ ಕಬಡ್ಡಿ ಲೀಗ್ ಮುಕ್ತಾಯ ಕಂಡಿತು.

    ಪಟನಾ 4ನೇ ಪ್ರಶಸ್ತಿ ಕನಸು ಭಗ್ನ
    ಪಂದ್ಯದ ಕಡೇ ಹಂತದಲ್ಲಿ ಹಿನ್ನಡೆ ಅನುಭವಿಸಿದರೂ ಪಟನಾ ಪೈರೇಟ್ಸ್ ತಂಡ ಗೆಲುವಿಗಾಗಿ ಕೊನೆಯ ಕ್ಷಣದವರೆಗೂ ಯತ್ನಿಸಿತು. ಉತ್ತಮ ಸ್ಥಿತಿಯಲ್ಲೇ ಸಾಗುತ್ತಿದ್ದ ಪಟನಾ ವಿಜಯ್-ನವೀನ್ ರೈಡಿಂಗ್‌ನಿಂದ ಹಿನ್ನಡೆ ಕಂಡಿತು. ಕೊನೇ ನಿಮಿಷದಲ್ಲಿ ಟೈಗೆ ಹೋರಾಟ ಮಾಡಿದರೂ ನವೀನ್ ಚಾಣಾಕ್ಷ ನಿರ್ವಹಣೆಯಿಂದ ಅಡ್ಡಿಯಾದರು. ಇದರಿಂದ ಪಟನಾ ತಂಡ 4ನೇ ಬಾರಿಗೆ ಪ್ರಶಸ್ತಿ ಗೆಲುವಿನ ಕನಸು ಭಗ್ನಗೊಂಡಿತು.

    ವಿಜಯ್ ಗೆಲುವಿನ ರೂವಾರಿ
    ಪಟನಾ ತಂಡ ಮೊದಲಾರ್ಧದಲ್ಲಿ 17-15 ರಿಂದ ಮುನ್ನಡೆ ಸಾಧಿಸಿತ್ತು. 29ನೇ ನಿಮಿಷದಲ್ಲಿ 19-23ರಿಂದ ಹಿನ್ನಡೆಯಲ್ಲಿದ್ದ ಡೆಲ್ಲಿ ತಂಡಕ್ಕೆ ವಿಜಯ್ ಆಸರೆಯಾದರು. ಈ ವೇಳೆ ರೈಡಿಂಗ್‌ಗೆ ತೆರಳಿದ ವಿಜಯ್ ಬೋನಸ್ ಸಹಿತ 3 ಅಂಕ ತಂದು ಪಂದ್ಯಕ್ಕೆ ತಿರುವು ನೀಡಿದರು. ಇದರ ಲವಾಗಿ ಮರು ನಿಮಿಷದಲ್ಲಿ 30-30 ರಿಂದ ಪಂದ್ಯ ಸಮಬಲ ಕಂಡಿತು. ಬಳಿಕ ವಿಜಯ್ ರೈಡಿಂಗ್ ಬಂದಾಗಲೆಲ್ಲಾ ಪಾಯಿಂಟ್ಸ್ ತರುವ ಮೂಲಕ ತಂಡಕ್ಕೆ ಮುನ್ನಡೆ ಕೊಡಿಸಿದರು, ವಿಜಯ್ ಆಕರ್ಷಕ ರೈಡಿಂಗ್ ಲವಾಗಿ ಡೆಲ್ಲಿ ತಂಡ 33ನೇ ನಿಮಿಷದಲ್ಲಿ ಪಟನಾ ತಂಡವನ್ನು ಆಲೌಟ್ ಬಲೆಗೆ ಬೀಳಿಸಿ ಪಂದ್ಯದಲ್ಲಿ 30-28ರಿಂದ ಮುನ್ನಡೆ ಕಂಡಿತು. ವಿಜಯ್ ಮ್ಯಾಜಿಕ್‌ನಿಂದ ಒಂದೇ ರೈಡಿಂಗ್‌ನಲ್ಲಿ 2 ಅಂಕ ತಂದು ಮುನ್ನಡೆಯನ್ನು 32-28ಕ್ಕೆ ಹಿಗ್ಗಿಸಿದರು, 38ನೇ ನಿಮಿಷದಲ್ಲಿ 35-30ರಿಂದ ಮುನ್ನಡೆ ಕಾಯ್ದುಕೊಂಡ ಡೆಲ್ಲಿ ತಂಡ ಗೆಲುವಿನ ನಗೆ ಬೀರಿತು. ಕಡೇ ನಿಮಿಷದವರೆಗೂ ಪಟನಾ ತಂಡ ತಿರುಗೇಟು ನೀಡಲು ಯತ್ನಿಸಿದರೂ ವೀರೋಚಿತ ಸೋಲನುಭವಿಸಿತು.

    ಪಟನಾ ತಂಡಕ್ಕೆ ಆರಂಭಿಕ ಮುನ್ನಡೆ
    ಡೆಲ್ಲಿ ತಂಡದ ಸ್ಟಾರ್ ರೈಡರ್ ನವೀನ್ ಮೊದಲ ರೈಡಿಂಗ್‌ನಲ್ಲೇ ಬೋನಸ್ ತರುವ ಮೂಲಕ ಆರಂಭದಲ್ಲೇ ಆಕ್ರಮಣಕಾರಿ ನಿರ್ವಹಣೆ ತೋರುವ ಸೂಚನೆ ನೀಡಿದರು. ಪ್ರತಿಯಾಗಿ ಪಟನಾ ನಾಯಕ, ಕನ್ನಡಿಗ ಪ್ರಶಾಂತ್ ಕುಮಾರ್ ಕೂಡ ಬೋನಸ್ ತಂದು ಪಂದ್ಯದಲ್ಲಿ ಸಮಬಲ ತಂದರು. 10ನೇ ನಿಮಿಷದಲ್ಲಿ ಡೆಲ್ಲಿ ತಂಡವನ್ನು ಆಲೌಟ್ ಮಾಡಿ 12-88 ರಿಂದ ಮುನ್ನಡೆ ಕಂಡು ಪಟನಾ ಪಂದ್ಯದಲ್ಲಿ ಹಿಡಿತ ಸಾಧಿಸಲು ಯತ್ನಿಸಿತು.

    ಸರಣಿಶ್ರೇಷ್ಠ: ನವೀನ್ ಕುಮಾರ್ (ಡೆಲ್ಲಿ), ಟೂರ್ನಿಯ ಪರ್ಫೆಕ್ಟ್​ ರೈಡರ್: ಪವನ್ ಶೆರಾವತ್ (ಬೆಂಗಳೂರು), ಟೂರ್ನಿಯ ಪರ್ಫೆಕ್ಟ್​ ಡಿಫೆಂಡರ್: ಮೊಹಮದ್ರೆಜಾ (ಪಟನಾ), ಟೂರ್ನಿಯ ಯುವ ಆಟಗಾರ: ಮೋಹಿತ್ ಗೋಯತ್ (ಪುಣೇರಿ).

    ಪ್ರೊ ಕಬಡ್ಡಿ ಚಾಂಪಿಯನ್ಸ್
    2014: ಜೈಪುರ ಪಿಂಕ್‌ಪ್ಯಾಂಥರ್ಸ್‌
    2015: ಯು ಮುಂಬಾ
    2016: ಪಟನಾ ಪೈರೇಟ್ಸ್
    2016: ಪಟನಾ ಪೈರೇಟ್ಸ್
    2017: ಪಟನಾ ಪೈರೇಟ್ಸ್
    2018: ಬೆಂಗಳೂರು ಬುಲ್ಸ್
    2019: ಬೆಂಗಾಲ್ ವಾರಿಯರ್ಸ್‌
    2022: ದಬಾಂಗ್ ಡೆಲ್ಲಿ

    ಐಪಿಎಲ್ 15ನೇ ಆವೃತ್ತಿಯ ದಿನಾಂಕ ನಿಗದಿ; ಪ್ರೇಕ್ಷಕರಿಗೂ ಸಿಹಿ ಸುದ್ದಿ ನೀಡಿದ ಬಿಸಿಸಿಐ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts