More

    ಪಂಜಾಬ್​​ ಬೌಲಿಂಗ್​ ದಾಳಿಗೆ ತತ್ತರಿಸಿದ ಆರ್​ಸಿಬಿಯ ಡಗೌಟ್​ ಪರೇಡ್​: ಕೊಹ್ಲಿ ಪಡೆಗೆ ಹೀನಾಯ ಸೋಲು!

    ದುಬೈ: ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ ಟೂರ್ನಿಯ 6ನೇ ಪಂದ್ಯದಲ್ಲಿ ಬ್ಯಾಟಿಂಗ್​ ಹಾಗೂ ಬೌಲಿಂಗ್​ನಲ್ಲಿ ಮಿಂಚು ಹರಿಸಿದ ಪಂಜಾಬ್​ ತಂಡ ರಾಯಲ್​​​ ಚಾಲೆಂಜರ್ಸ್​ ಬೆಂಗಳೂರು ಎದುರು 97 ರನ್​ಗಳ ಭರ್ಜರಿ ಜಯ ಸಾಧಿಸಿತು.

    ಪಂಜಾಬ್​ ನೀಡಿದ್ದ 207 ರನ್​ಗಳ ಗುರಿ ಬೆನ್ನತ್ತಿದ ಆರ್​ಸಿಬಿ ಕೇವಲ 10 ಓವರ್​ಗಳಲ್ಲಿ ತನ್ನೆಲ್ಲಾ ವಿಕೆಟ್​ ಕಳೆದುಕೊಂಡು ಕೇವಲ 109 ರನ್​ ಕಲೆಹಾಕುವ ಮೂಲಕ ಪಂದ್ಯವನ್ನು ಕೈಚೆಲ್ಲಿತ್ತು.

    ಆರಂಭದಲ್ಲೇ ಕೇವಲ 4 ರನ್​ಗೆ ದೇವದತ್​ ಪಡಿಕ್ಕಲ್​ (1), ಜಾಸ್​ ಫಿಲಿಪ್​ (0) ಮತ್ತು ನಾಯಕ ವಿರಾಟ್​ ಕೊಹ್ಲಿ (1) ವಿಕೆಟ್​ ಕಳೆದುಕೊಂಡು ಆರ್​ಸಿಬಿ ತಂಡ ಸಂಕಷ್ಟಕ್ಕೆ ಸಿಲುಕಿತು. ಬಳಿಕ ಆ್ಯರನ್​ ಫಿಂಚ್​ (20) ಜತೆಗೂಡಿದ ಎಬಿ ಡಿವಿಲಿಯರ್ಸ್ (28)​ ಕೆಲವೊತ್ತು ಕ್ರಿಸ್​ನಲ್ಲಿ ನಿಂತು ಚೇತರಿಕೆ ನೀಡಿದಾದರೂ ಬ್ಯಾಕ್​ ಟು ಬ್ಯಾಕ್​ ವಿಕೆಟ್​ ಒಪ್ಪಿಸಿದರು. ಕೇವಲ 57 ರನ್​ಗೆ ಪ್ರಮುಖ 5 ವಿಕೆಟ್​ ಕಳೆದುಕೊಂಡ ಆರ್​ಸಿಬಿಗೆ ಬಹುತೇಕ ಸೋಲು ಖಚಿತವಾಯಿತು.

    ಶಿವಂ ದುಬೆ (12), ಉಮೇಶ್​ ಯಾದವ್​ (0) ಬಂದಷ್ಟೇ ವೇಗವಾಗಿ ಪೆವಿಲಿಯನ್​ ಸೇರಿದರು. ಇತ್ತ ವಾಷಿಂಗ್ಟನ್​ ಸುಂದರ್​ 30 ರನ್​ ಕಲೆಹಾಕುವ ಮೂಲಕ ತಂಡದ ವೈಯಕ್ತಿಕ ಗರಿಷ್ಠ ರನ್​ ದಾಖಲಿಸಿದರು. ಉಳಿದಂತೆ ನವದೀಪ್​ ಸೈನಿ (6) ಹಾಗೂ ಯಜುವೇಂದ್ರ ಚಹಾಲ್​ (1) ರನ್​ ಗಳಿಸಿ ಔಟಾದರೆ, ಡೇಲ್​ ಸ್ಟೇನ್​ (1) ಅಜೇಯರಾಗಿ ಉಳಿದರು.

    ಪಂಜಾಬ್​ ಪರ ಮಾರಕ ಬೌಲಿಂಗ್​ ದಾಳಿ ಮಾಡಿದ ರವಿ ಬಿಷ್ಣೋಯ್​ ಹಾಗೂ ಮುರುಗನ್​ ಅಶ್ವಿನ್​ ತಲಾ 3 ವಿಕೆಟ್​ ಕಬಳಿಸಿ ಮಿಂಚಿದರು. ಉಳಿದಂತೆ ಶೆಲ್ಡನ್​ ಕಾಟ್ರೆಲ್​ 2 ವಿಕೆಟ್​ ಪಡೆದರೆ, ಮಹಮ್ಮದ್​ ಶಮಿ ಮತ್ತು ಗ್ಲೇನ್​ ಮ್ಯಾಕ್ಸ್​ವೆಲ್​ ತಲಾ 1 ವಿಕೆಟ್​ಗೆ ತೃಪ್ತಿಪಟ್ಟರು.

    ಕನ್ನಡಿಗ ರಾಹುಲ್​ ಅಬ್ಬರದ ಶತಕ
    ಇದಕ್ಕೂ ಮುನ್ನ ಟಾಸ್​ ಸೋತು ಬ್ಯಾಟಿಂಗ್​ ಆರಂಭಿಸಿದ ಪಂಜಾಬ್​ ತಂಡ ನಿಗದಿತ 20 ಓವರ್​ಗಳಲ್ಲಿ 3 ವಿಕೆಟ್​ ನಷ್ಟಕ್ಕೆ 206 ರನ್​ ಕಲೆಹಾಕಿತು. ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಕನ್ನಡಿಗರಾದ ನಾಯಕ ಕೆ.ಎಲ್​. ರಾಹುಲ್​ ಮತ್ತು ಮಯಾಂಕ್​ ಅಗರ್ವಾಲ್​ 57 ರನ್​ಗಳ ಜತೆಯಾಟದ ಮೂಲಕ ಉತ್ತಮ ಆರಂಭ ಒದಗಿಸಿಕೊಟ್ಟರು. ಈ ವೇಳೆ 26 ರನ್​ ಗಳಿಸಿದ್ದ ಮಯಾಂಕ್​ ಬಿರುಸಿನ ಹೊಡೆತಕ್ಕೆ ಯತ್ನಿಸಿ ಕ್ಯಾಚಿತ್ತು ನಿರ್ಗಮಿಸಿದರು. ಇದಾದ ಕೆಲವೇ ಕ್ಷಣಗಳಲ್ಲಿ ನಿಕೋಲಸ್​ ಪೂರನ್ (17) ಔಟಾದರು. ಬಳಿಕ ಬಂದ ಸ್ಫೋಟಕ ಆಟಗಾರ ಗ್ಲೇನ್​ ಮ್ಯಾಕ್ಸ್​ವೆಲ್​ ಕೇವಲ 5 ರನ್​ಗೆ ವಿಕೆಟ್​ ಒಪ್ಪಿಸುವ ಮೂಲಕ ನಿರಾಶೆ ಮೂಡಿಸಿದರು. ಇತ್ತ ಕೊನೆಯವರೆಗೂ ಅಬ್ಬರಿಸಿದ ರಾಹುಲ್​ ಕೇವಲ 69 ಎಸೆತಗಳಲ್ಲಿ 7 ಸಿಕ್ಸರ್​, 14 ಬೌಂಡರಿ ನೆರವಿನಿಂದ ಅಜೇಯ 132 ರನ್​ ಗಳಿಸಿ ನಾಯಕನ ಜವಬ್ದಾರಿಯು ಆಟವಾಡಿದರು. ಉಳಿದಂತೆ ಕರುಣ್​ ನಾಯರ್​ 15 ರನ್ ಗಳಿಸಿ ಅಜೇಯರಾಗಿ ಉಳಿದರು.

    ಆರ್​ಸಿಬಿ ಪರ ಶಿವಂ ದುಬೆ ಎರಡು ವಿಕೆಟ್​ ಪಡೆದರೆ, ಯಜುವೇಂದ್ರ ಚಹಾಲ್​ 1 ವಿಕೆಟ್​ಗೆ ತೃಪ್ತಿಪಟ್ಟರು. ಉಳಿದ ಯಾವೊಬ್ಬ ಬೌಲರ್​ಗಳು ನಿರೀಕ್ಷಿತ ಪ್ರದರ್ಶನ ತೋರಲಿಲ್ಲ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts