More

    ಇಂದು ಮುಂಬೈ ಇಂಡಿಯನ್ಸ್‌ಗೆ ರಾಜಸ್ಥಾನ ಸವಾಲು

    ಮುಂಬೈ: ಸತತ 10ನೇ ಬಾರಿ ಮೊದಲ ಪಂದ್ಯದಲ್ಲೇ ಮುಗ್ಗರಿಸಿರುವ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್-15ರ ತನ್ನ ಎರಡನೇ ಪಂದ್ಯದಲ್ಲಿ ಭರ್ಜರಿ ಗೆಲುವಿನ ಆರಂಭ ಕಂಡಿರುವ ರಾಜಸ್ಥಾನ ರಾಯಲ್ಸ್ ತಂಡವನ್ನು ಶನಿವಾರ ಎದುರಿಸಲಿದೆ. ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದಲ್ಲಿ ಟಾಸ್ ಪ್ರಮುಖ ಪಾತ್ರವಹಿಸಲಿದೆ. ಇದುವರೆಗೂ ಮುಂಬೈನಲ್ಲಿ ನಡೆಯಲಿರುವ ಎಲ್ಲ ಪಂದ್ಯಗಳಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ತಂಡಗಳೇ ಗೆಲುವು ದಾಖಲಿಸಿವೆ. 5 ಬಾರಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ 4 ವಿಕೆಟ್‌ಗಳಿಂದ ಡೆಲ್ಲಿ ಕ್ಯಾಪಿಟಲ್ಸ್‌ಗೆ ಶರಣಾದರೆ, ರಾಜಸ್ಥಾನ ತಂಡ 61 ರನ್‌ಗಳಿಂದ ಸನ್‌ರೈಸರ್ಸ್‌ ಹೈದರಾಬಾದ್ ತಂಡವನ್ನು ಸೋಲಿಸಿ ಶುಭಾರಂಭ ಕಂಡಿತು.
    * ಮುಂಬೈಗೆ ಸೂರ್ಯ ಬಲ
    ಗಾಯದ ಸಮಸ್ಯೆಯಿಂದ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದ ಸೂರ್ಯಕುಮಾರ್ ಯಾದವ್ ಸೇರ್ಪಡೆಗೊಂಡಿರುವುದು ಮುಂಬೈ ತಂಡದ ಬಲ ಹೆಚ್ಚಿಸಿದೆ. ನಾಯಕ ರೋಹಿತ್ ಶರ್ಮ ಹಾಗೂ ಇಶಾನ್ ಕಿಶನ್ ಅತ್ಯುತ್ತಮ ಆರಂಭಿಕ ಜೋಡಿಯಾದರೆ, ಇವರಿಗೆ ಮಧ್ಯಮ ಕ್ರಮಾಂಕದಲ್ಲಿ ಸಾಥ್ ದಕ್ಕಬೇಕಿದೆ. ಬೆಂಗಳೂರಿನ ಎನ್‌ಸಿಎಯಲ್ಲಿ ಪುನಶ್ಚೇತನ ಶಿಬಿರದಲ್ಲಿದ್ದ ಸೂರ್ಯಕುಮಾರ್ ಇದೀಗ ತಂಡ ಕೂಡಿಕೊಂಡಿದ್ದಾರೆ. ವೇಗಿ ಬಸಿಲ್ ಥಂಪಿ ಮೊದಲ ಪಂದ್ಯದಲ್ಲಿ ಗಮನಸೆಳೆದಿದ್ದರೆ, ಜಸ್‌ಪ್ರೀತ್ ಬುಮ್ರಾಗೆ ಬೆಂಬಲವಾಗಿದ್ದರು.
    * ಆತ್ಮವಿಶ್ವಾಸದಲ್ಲಿ ರಾಯಲ್ಸ್
    ಮೊದಲ ಪಂದ್ಯದಲ್ಲಿ ನಿರೀಕ್ಷೆಗೂ ಮೀರಿ ಸುಲಭ ಗೆಲುವಿನ ನಗೆ ಬೀರಿರುವ ರಾಜಸ್ಥಾನ ರಾಯಲ್ಸ್ ತಂಡ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲೂ ಬಲಿಷ್ಠವಾಗಿದೆ. ಆದರೆ, ಸನ್‌ರೈಸರ್ಸ್‌ ಎದುರು ಸಂಘಟಿತ ನಿರ್ವಹಣೆ ನಡುವೆಯೂ ಫೀಲ್ಡಿಂಗ್‌ನಲ್ಲಿ ನಿರೀಕ್ಷಿತ ಮಟ್ಟದ ಪ್ರದರ್ಶನ ಬಂದಿರಲಿಲ್ಲ. ಕೈಗೆ ಸಿಕ್ಕ ಹಲವು ಕ್ಯಾಚ್‌ಗಳನ್ನು ಫೀಲ್ಡರ್‌ಗಳು ಕೈಚೆಲ್ಲಿದರು. ಆರಂಭಿಕರಾದ ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಕನ್ನಡಿಗ ದೇವದತ್ ಪಡಿಕಲ್, ಶಿಮ್ರೊನ್ ಹೆಟ್ಮೆಯೆರ್ ಒಳಗೊಂಡ ಬ್ಯಾಟಿಂಗ್ ಪಡೆ ಉತ್ತಮ ಲಯದಲ್ಲಿದೆ. ಕನ್ನಡಿಗ ಪ್ರಸಿದ್ಧ ಕೃಷ್ಣ ಸಾರಥ್ಯದ ಬೌಲಿಂಗ್ ಪಡೆಯಲ್ಲಿ ಅನುಭವಿಗಳಾದ ವೇಗಿ ಟ್ರೆಂಟ್ ಬೌಲ್ಟ್, ಆರ್.ಅಶ್ವಿನ್, ಯಜುವೇಂದ್ರ ಚಾಹಲ್ ಆಸರೆಯಾಗಿದ್ದಾರೆ.

    ಟೀಮ್ ನ್ಯೂಸ್:
    * ಮುಂಬೈ: ಸೂರ್ಯಕುಮಾರ್ ಯಾದವ್ ಆಗಮನದಿಂದಾಗಿ ಆನ್ಮೋಲ್ ಸಿಂಗ್ ಹೊರಗುಳಿಯಲಿದ್ದಾರೆ. ಡೇನಿಯಲ್ ಸ್ಯಾಮ್ಸ್ ಅಥವಾ ್ಯಾಬಿಯನ್ ಅಲೆನ್ ಇಬ್ಬರು ಒಬ್ಬರು ಕಣಕ್ಕಿಳಿಯಲಿದ್ದಾರೆ.

    * ರಾಜಸ್ಥಾನ ರಾಯಲ್ಸ್
    ಮೊದಲ ಪಂದ್ಯದಲ್ಲಿ ಗಾಯದ ಸಮಸ್ಯೆ ಎದುರಿಸಿದ್ದ ನಾಥನ್ ಕೌಲ್ಟರ್ ನಿಲ್ ಪೂರ್ಣ ಪ್ರಮಾಣದಲ್ಲಿ ಚೇತರಿಸಿಕೊಳ್ಳದಿದ್ದರೆ ಜೇಮ್ಸ್ ನೀಶಾಮ್ ಆಡಬಹುದು.

    * ಪಂದ್ಯ ಆರಂಭ: ಮಧ್ಯಾಹ್ನ 3.30ಕ್ಕೆ
    ಮುಖಾಮುಖಿ: 25, ಮುಂಬೈ: 13, ರಾಜಸ್ಥಾನ: 11, ರದ್ದು: 1
    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

    ಭಾನುವಾರದ ಪಂದ್ಯ:
    ಸಿಎಸ್‌ಕೆ-ಪಂಜಾಬ್ ಕಿಂಗ್ಸ್
    ಪಂದ್ಯ ಆರಂಭ: ರಾತ್ರಿ 7.30
    ಮುಖಾಮುಖಿ: 25, ಸಿಎಸ್‌ಕೆ: 15, ಪಂಜಾಬ್: 10

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts