More

    ಪುಟಿದೇಳುವ ವಿಶ್ವಾಸದಲ್ಲಿ ಸನ್‌ರೈಸರ್ಸ್‌-ಸಿಎಸ್‌ಕೆ ; ಮಾಡು ಇಲ್ಲವೇ ಮಡಿ ಸ್ಥಿತಿಯಲ್ಲಿ ಹಾಲಿ ಚಾಂಪಿಯನ್ಸ್

    ಪುಣೆ: ಸತತ ಸೋಲುಗಳಿಂದ ಕಂಗೆಟ್ಟು ಪ್ಲೇಆ್ ಹಂತಕ್ಕೇರಲು ಕೂದಲೆಳೆ ಅವಕಾಶ ಉಳಿಸಿಕೊಂಡಿರುವ ಹಾಲಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಇದೀಗ ಮತ್ತೊಮ್ಮೆ ಎಂಎಸ್ ಧೋನಿ ಸಾರಥ್ಯದಲ್ಲೇ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದೆ. ಆಲ್ರೌಂಡರ್ ರವೀಂದ್ರ ಜಡೇಜಾ ಸತತವಾಗಿ ತಂಡ ವೈಫಲ್ಯ ಅನುಭವಿಸಿದ ಹಿನ್ನೆಲೆಯಲ್ಲಿ ನಾಯಕತ್ವ ತ್ಯಜಿಸಿದ್ದು, ವೈಯಕ್ತಿಕ ಆಟದತ್ತ ಹೆಚ್ಚಿನ ಗಮನಹರಿಸಲು ಬಯಸಿದ್ದಾರೆ. ಇದರಿಂದಾಗಿ ಎಂಸಿಎ ಸ್ಟೇಡಿಯಂನಲ್ಲಿ ಭಾನುವಾರ ನಡೆಯಲಿರುವ ಐಪಿಎಲ್-15ರ ಹಣಾಹಣಿಯಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ವಿರುದ್ಧ ಸಿಎಸ್‌ಕೆ ತಂಡವನ್ನು ಮರಳಿ ಗೆಲುವಿನ ಲಯಕ್ಕೆ ತರಲು ಧೋನಿ ಪ್ರಯತ್ನಿಸಲಿದ್ದಾರೆ.

    ಸತತ 5 ಗೆಲುವಿನ ಬಳಿಕ ಹಿಂದಿನ ಪಂದ್ಯದಲ್ಲಿ ಸೋಲಿನ ರುಚಿ ಕಂಡಿರುವ ಸನ್‌ರೈಸರ್ಸ್‌ ಗೆಲುವಿನ ಹಳಿಗೇರುವ ವಿಶ್ವಾಸದಲ್ಲಿದೆ. ಉಭಯ ತಂಡಗಳ ನಡುವಿನ ಮೊದಲ ಮುಖಾಮುಖಿಯಲ್ಲಿ ಸನ್‌ರೈಸರ್ಸ್‌ ತಂಡ ಗೆಲುವು ದಾಖಲಿಸಿತ್ತು. ಇದೀಗ ಸಿಎಸ್‌ಕೆ ತಂಡಕ್ಕೆ ಸೇಡು ತೀರಿಸಿಕೊಳ್ಳುವ ಅವಕಾಶ ಲಭಿಸಿದೆ. ಟೂರ್ನಿಯ ಇತಿಹಾಸದಲ್ಲಿ ಸಿಎಸ್‌ಕೆ ತಂಡವೇ ಪ್ರಭುತ್ವ ಹೊಂದಿದ್ದರೂ ಸದ್ಯದ ಸ್ಥಿತಿಯಲ್ಲಿ ಸನ್‌ರೈಸರ್ಸ್‌ ತಂಡವೇ ಉತ್ತಮ ಫಾರ್ಮ್‌ನಲ್ಲಿದೆ. ಸಿಎಸ್‌ಕೆ ತಂಡವನ್ನು ಪ್ಲೇಆಫ್ ಗೇರಿಸಲು ಧೋನಿ ಈಗ ಪವಾಡವನ್ನೇ ಸೃಷ್ಟಿಸಬೇಕಾಗಿದೆ. ಯಾಕೆಂದರೆ ಉಳಿದೆಲ್ಲ ಪಂದ್ಯ ಗೆಲ್ಲುವ ಜತೆಗೆ ರನ್‌ರೇಟ್ ಲೆಕ್ಕಾಚಾರವೂ ನಿರ್ಣಾಯಕ ಎನಿಸಲಿದೆ.

    * ಪುಟಿದೇಳುವ ವಿಶ್ವಾಸದಲ್ಲಿ ಸನ್‌ರೈಸರ್ಸ್‌
    ರಶೀದ್ ಖಾನ್ ಅಬ್ಬರಿಸಿದ ಫಲವಾಗಿ ಗುಜರಾತ್ ಟೈಟಾನ್ಸ್ ಎದುರು ಕಡೇ ಓವರ್‌ನಲ್ಲಿ ಗೆಲುವು ಚೆಲ್ಲಿದ್ದ ಸನ್‌ರೈಸರ್ಸ್‌ ಬಳಗ ಸತತ 6ನೇ ಗೆಲುವಿನ ಅವಕಾಶ ತಪ್ಪಿಸಿಕೊಂಡಿತು. ಬಲಿಷ್ಠ ಬೌಲಿಂಗ್ ಪಡೆ ಹೊಂದಿರುವ ತಂಡಕ್ಕೆ ಬ್ಯಾಟರ್‌ಗಳಿಂದ ಮತ್ತಷ್ಟು ಬೆಂಬಲದ ಅವಶ್ಯಕತೆಯಿದೆ. ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಮತ್ತಷ್ಟು ಚುರುಕಾಗಬೇಕಿದ್ದು, ಮಾರ್ಕೋ ಜಾನ್ಸೆನ್, ಉಮ್ರಾನ್ ಮಲಿಕ್, ಟಿ.ನಟರಾಜನ್ ತಂಡಕ್ಕೆ ಆಸರೆಯಾಗುತ್ತಿದ್ದಾರೆ. ಕಳೆದ ಪಂದ್ಯದಲ್ಲಿ 22 ರನ್ ಬಿಟ್ಟುಕೊಟ್ಟಿದ್ದ ಜಾನ್ಸೆನ್ ಮತ್ತೊಂದು ಅವಕಾಶದ ನಿರೀಕ್ಷೆಯಲ್ಲಿದ್ದಾರೆ. ನಾಯಕ ಕೇನ್ ವಿಲಿಯಮ್ಸನ್, ಅಭಿಷೇಕ್ ಶರ್ಮ, ಏಡನ್ ಮಾರ್ಕ್ರಮ್, ರಾಹುಲ್ ತ್ರಿಪಾಠಿ ಹಾಗೂ ನಿಕೋಲಸ್ ಪೂರನ್ ಮತ್ತಷ್ಟು ಜವಾಬ್ದಾರಿಯುತವಾಗಿ ಬ್ಯಾಟ್ ಬೀಸಬೇಕಿದೆ.

    * ಗೆಲುವಿನ ಒತ್ತಡದಲ್ಲಿ ಸಿಎಸ್‌ಕೆ
    ಇದುವರೆಗೂ ಆಡಿರುವ 8 ಪಂದ್ಯಗಳಲ್ಲಿ ಕೇವಲ 2 ಜಯ ದಾಖಲಿಸಿರುವ ಸಿಎಸ್‌ಕೆ ಮುಂದಿನ ಎಲ್ಲ ಪಂದ್ಯಗಳಲ್ಲೂ ಗೆದ್ದರಷ್ಟೇ ಪ್ಲೇಆಫ್ ಹಂತಕ್ಕೇರುವ ಅವಕಾಶ ಉಳಿಸಿಕೊಂಡಿದೆ. ಕಳೆದ ಪಂದ್ಯದಲ್ಲಿ ಪಂಜಾಬ್ ಎದುರು ಸೋಲು ಕಂಡಿರುವ ಸಿಎಸ್‌ಕೆ ಬಳಗ ಪುಟಿದೇಳುವ ವಿಶ್ವಾಸದಲ್ಲಿದೆ. ತಂಡಕ್ಕೆ ಗೆಲುವೊಂದೇ ಮಂತ್ರವಾಗಿದ್ದು, ಒಂದು ವೇಳೆ ಸೋತರೂ ಸಿಎಸ್‌ಕೆ ಪ್ಲೇಆಫ್ ಅವಕಾಶ ಮತ್ತಷ್ಟು ಕ್ಷೀಣಿಸಲಿದೆ. ಸ್ವತಃ ಆಲ್ರೌಂಡರ್ ಜಡೇಜಾ ವೈಫಲ್ಯವೇ ತಂಡಕ್ಕೆ ದುಬಾರಿಯಾಗುತ್ತಿದ್ದು, ಬ್ಯಾಟಿಂಗ್ ವಿಭಾಗದ ಅಸ್ಥಿರ ನಿರ್ವಹಣೆಯಿಂದ ಬಳಲುತ್ತಿದ್ದರೆ, ಬೌಲರ್‌ಗಳು ಇದುವರೆಗೂ ಗಮನಸೆಳೆದಿತ್ತು. ಶ್ರೀಲಂಕಾದ ಮಹೀಶ್ ತೀಕ್ಷಣ ಹಾಗೂ ಆಲ್ರೌಂಡರ್ ಡ್ವೇನ್ ಬ್ರಾವೊ ಜೋಡಿ ಪ್ರತಿಹೋರಾಟ ತೋರುತ್ತಿದೆ.

    ಟೀಮ್ ನ್ಯೂಸ್:
    ಸನ್‌ರೈಸರ್ಸ್‌: ಕಳೆದ ಪಂದ್ಯದಲ್ಲಿ ದುಬಾರಿಯಾಗಿ ಸೋಲಿಗೆ ಕಾರಣವಾಗಿದ್ದ ಮಾರ್ಕೋ ಜಾನ್ಸೆನ್ ಬದಲಿಗೆ ರೊಮಾರಿಯೊ ಶೆರ್ಡ್ ಕಣಕ್ಕಿಳಿಯುವ ಸಾಧ್ಯತೆಗಳಿವೆ.

    ಸಿಎಸ್‌ಕೆ: ಸಿಕ್ಕ ಅವಕಾಶಗಳನ್ನು ಸೂಕ್ತವಾಗಿ ಬಳಸಿಕೊಳ್ಳಲು ವಿಫಲವಾಗಿರುವ ಮಿಚೆಲ್ ಸ್ಯಾಂಟ್ನರ್ ಬದಲಿಗೆ ಮೊಯಿನ್ ಅಲಿ ತಂಡಕ್ಕೆ ವಾಪಸಾಗಬಹುದು.

    ಪಂದ್ಯ ಆರಂಭ: ರಾತ್ರಿ 7.30
    ಮುಖಾಮುಖಿ: 17, ಸಿಎಸ್‌ಕೆ: 12, ಸನ್‌ರೈಸರ್ಸ್‌: 5
    ಹಿಂದಿನ ಮುಖಾಮುಖಿ: ಸನ್‌ರೈಸರ್ಸ್‌ಗೆ 8 ವಿಕೆಟ್ ಜಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts