More

    ಮಂಗಳೂರಲ್ಲಿ ಹೂಡಿಕೆದಾರರ ಸಮಾವೇಶ

    ವಿಜಯವಾಣಿ ಸುದ್ದಿಜಾಲ ಮಂಗಳೂರು
    ರಾಜ್ಯದ ದ್ವಿತೀಯ ಹಂತದ ನಗರಗಳಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡುತ್ತಿದೆ. ಈ ನಿಟ್ಟಿನಲ್ಲಿ ಏಪ್ರಿಲ್ ಅಂತ್ಯಕ್ಕೆ ಅಥವಾ ಮೇ ಮೊದಲ ವಾರದಲ್ಲಿ ಮಂಗಳೂರಿನಲ್ಲಿ ಹೂಡಿಕೆದಾರರ ಸಮಾವೇಶ ಮತ್ತು ಉದ್ಯೋಗ ಮೇಳ ನಡೆಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ತಿಳಿಸಿದರು.
    ಜಿಲ್ಲಾ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ವತಿಯಿಂದ ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಶನಿವಾರ ದ.ಕ. ಜಿಲ್ಲೆಯ ಕೈಗಾರಿಕಾಭಿವೃದ್ಧಿ ಸಭೆಯಲ್ಲಿ ಮಾತನಾಡಿದರು.

    ಬೆಂಗಳೂರಿನಲ್ಲಿ ಕೈಗಾರಿಕೆ ಸ್ಥಾಪಿಸಲು ಭೂಮಿಗೆ ಬೇಡಿಕೆ ಇದೆ. ಕೈಗಾರಿಕೆಗೆ ಬೆಂಗಳೂರು ಮಾತ್ರ ಸೂಕ್ತ ಎಂಬ ಉದ್ಯಮಿಗಳ ಮಾನಸಿಕತೆ ಬದಲಾಯಿಸಬೇಕಿದೆ. ಮಂಗಳೂರು, ಹುಬ್ಬಳ್ಳಿ, ಕಲಬುರಗಿ, ಬೆಳಗಾವಿ ಸಹಿತ ರಾಜ್ಯದ ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿ ಕೈಗಾರಿಕೆ ಅಭಿವೃದ್ಧಿಗೆ ಬೇಕಾದ ಮೂಲಸೌಲಭ್ಯ ಒದಗಿಸುವ ಮೂಲಕ ಹೂಡಿಕೆದಾರರನ್ನು ಆಕರ್ಷಿಸಲು ಸರ್ಕಾರ ಬದ್ಧವಾಗಿದೆ. ಈ ನಿಟ್ಟಿನಲ್ಲಿ ಎಲ್ಲ ಕಡೆ ಹೂಡಿಕೆದಾರರ ಸಮಾವೇಶ ನಡೆಸಲಾಗುತ್ತಿದೆ. ರಾಜ್ಯದಲ್ಲಿ ಕೈಗಾರಿಕೆಗಳಿಗೆ ನೀಡಲು ಭೂಮಿಯ ಕೊರತೆ ಇಲ್ಲ. ಮಂಗಳೂರಿನಲ್ಲಿ ಲ್ಯಾಂಡ್‌ಬ್ಯಾಂಕ್ ಆರಂಭಿಸಬೇಕು ಎಂಬ ಬೇಡಿಕೆಯಿದೆ. ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಮುಂದೆ ಬರುವವರಿಗೆ ಅಗತ್ಯ ಇರುವಷ್ಟು ಭೂಮಿ ನೀಡಲು ಸರ್ಕಾರ ಸಿದ್ಧ ಎಂದರು.

    ಮಂಗಳೂರು-ಹುಬ್ಬಳ್ಳಿ ವಿಮಾನ: ಉಡಾನ್ ಯೋಜನೆಯಡಿ ರಾಜ್ಯದಲ್ಲಿ ಕಲಬುರಗಿ, ಬೀದರ್ ಮುಂತಾದ ವಿಮಾನ ನಿಲ್ದಾಣಗಳು ಕಾರ್ಯಾರಂಭಿಸಿವೆ. ಮಾ.29ಕ್ಕೆ ಹುಬ್ಬಳ್ಳಿಯಿಂದ ಮಂಗಳೂರಿಗೆ ನೇರ ವಿಮಾನಯಾನ ಆರಂಭವಾಗಲಿದೆ ಎಂದು ಶೆಟ್ಟರ್ ತಿಳಿಸಿದರು. ಕರಾವಳಿಯಲ್ಲಿ ಧರ್ಮಸ್ಥಳ, ಸುಬ್ರಹ್ಮಣ್ಯ ಸಹಿತ ಧಾರ್ಮಿಕ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶವಿದೆ. ಕರಾವಳಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಸರ್ಕಾರ ಬದ್ಧವಿದೆ ಎಂದರು.

    ಸಿಐಐ ಮಂಗಳೂರು ಉಪಾಧ್ಯಕ್ಷ ಗೌರವ್ ಹೆಗ್ಡೆ ಮಾತನಾಡಿ, ಮಂಗಳೂರಿನಲ್ಲಿ ಪರಿಸರ ಸಹ್ಯ ಕೃಷಿ ಆಧಾರಿತ ಆಹಾರ ಸಂಸ್ಕರಣೆ ಸಹಿತ ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಗೆ ಸರ್ಕಾರ ಪ್ರೋತ್ಸಾಹ ನೀಡಬೇಕು, ಲ್ಯಾಂಡ್‌ಬ್ಯಾಂಕ್ ನಿರ್ಮಿಸಬೇಕು. ಬೈಕಂಪಾಡಿಯ ಜೆಸ್ಕೊ ಭೂಮಿಯನ್ನು ಇತರ ಕೈಗಾರಿಕೆಗಳಿಗೆ ನೀಡಬೇಕು, ಶಿರಾಡಿ ಘಾಟ್‌ನಲ್ಲಿ ಸುರಂಗ ಮಾರ್ಗ ನಿರ್ಮಿಸಿ ಹೆದ್ದಾರಿ ಜತೆ ಬೆಸೆಯಬೇಕು, ಮಂಗಳೂರು-ಬೆಂಗಳೂರು ರೈಲು ಸಂಪರ್ಕ ಅಭಿವೃದ್ಧಿಪಡಿಸಬೇಕು, ಮಂಗಳೂರಿನಲ್ಲಿ ಟ್ರಕ್ ಟರ್ಮಿನಲ್ ನಿರ್ಮಿಸಬೇಕು, ಕೈಗಾರಿಕಾ ಟೌನ್‌ಶಿಪ್ ಪ್ರಾಧಿಕಾರ ರಚಿಸಬೇಕು ಎಂದು ಮನವಿ ಮಾಡಿದರು.
    ಕೆಐಒಸಿಎಲ್‌ನ ಹೊಸ ಯೋಜನೆಗೆ ಅರಣ್ಯ ಇಲಾಖೆ ಅನುಮತಿ ದೊರಕಿಸಿಕೊಡಬೇಕು ಎಂದು ಕೆಐಒಸಿಎಲ್ ಅಧಿಕಾರಿ ಗಜಾನನ ಶೆಣೈ ವಿನಂತಿಸಿದರು.

    ಶಾಸಕರಾದ ಡಾ.ವೈ.ಭರತ್ ಶೆಟ್ಟಿ, ಯು.ಟಿ.ಖಾದರ್, ಹರೀಶ್ ಕುಮಾರ್, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಸಿಇಒ ಬಸವರಾಜು ಉಪಸ್ಥಿತರಿದ್ದರು. ಕೈಗಾರಿಕಾ ಇಲಾಖೆ ಅಧಿಕಾರಿ ಗೋಕುಲದಾಸ್ ನಾಯಕ್ ಸ್ವಾಗತಿಸಿದರು.

    ಟಿಸಿಎಸ್ ಕಾರ್ನಾಡ್‌ನಲ್ಲಿ ಘಟಕ: ಮೂಲ್ಕಿಯ ಕಾರ್ನಾಡ್‌ನಲ್ಲಿ ಟಿಸಿಎಸ್ ಕಂಪನಿ ಐಟಿ ಘಟಕ ಆರಂಭಿಸುವ ಬಗ್ಗೆ ಸರ್ಕಾರವನ್ನು ಸಂಪರ್ಕಿಸಿದ್ದು, ಅದಕ್ಕೆ ಅನುಮೋದನೆ ನೀಡಲಾಗುವುದು ಎಂದು ಶೆಟ್ಟರ್ ತಿಳಿಸಿದರು. ಸುಮಾರು 495 ಕೋಟಿ ರೂ. ವೆಚ್ಚದಲ್ಲಿ ಈ ಘಟಕ ನಿರ್ಮಾಣಗೊಳ್ಳಲಿದ್ದು, 4,010 ಮಂದಿಗೆ ಉದ್ಯೋಗ ಸಿಗಲಿದೆ ಎಂದರು.

    ತೆರಿಗೆ ಸಮಸ್ಯೆ ಇತ್ಯರ್ಥಪಡಿಸುವೆ: ಕೈಗಾರಿಕಾ ಸಂಸ್ಥೆಗಳಿಗೆ ಕೆಲವೆಡೆ ದುಪ್ಪಟ್ಟು ತೆರಿಗೆ ಸಮಸ್ಯೆಯಿದೆ. ನಗರಾಭಿವೃದ್ಧಿ ಇಲಾಖೆ ಸಹಕಾರದೊಂದಿಗೆ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು. ಈ ಬಗ್ಗೆ ಬಜೆಟ್‌ನಲ್ಲಿ ಘೋಷಣೆ ಸಾಧ್ಯತೆ ಇದೆ ಎಂದು ಸಚಿವ ಶೆಟ್ಟರ್ ತಿಳಿಸಿದರು. ಖಾಸಗಿ ಕೈಗಾರಿಕಾ ಸಂಸ್ಥೆಗಳಿಗೆ ಭೂಮಿ ನೀಡಿಕೆಯ ನಿಯಮ ಸರಳೀಕರಣ ಮಾಡಲಾಗುವುದು. ಅರ್ಜಿ ಸಲ್ಲಿಸಿದ 30 ದಿನದೊಳಗೆ ಭೂಪರಿವರ್ತನೆ ಆಗದಿದ್ದರೆ, ಡೀಮ್ಡ್ ಭೂಮಿ ಎಂದು ಪರಿಗಣಿಸಲಾಗುವುದು. ಕೈಗಾರಿಕಾ ಟೌನ್‌ಶಿಪ್ ಪ್ರಾಧಿಕಾರ ರಚನೆಗೆ ನಗರಾಭಿವೃದ್ಧಿ ಇಲಾಖೆ ನಿಯಮ ಅಡ್ಡಿಯಾಗಿದೆ. ಈ ಸಂಬಂಧ ಕೈಗಾರಿಕಾ ಟೌನ್‌ಶಿಪ್ ಪ್ರಾಧಿಕಾರದ ಶೇ.30ರಷ್ಟು ತೆರಿಗೆಯನ್ನು ನಗರ ಸ್ಥಳೀಯ ಸಂಸ್ಥೆ, ಗ್ರಾಮ ಪಂಚಾಯಿತಿ ನೀಡುವ ಸಂಬಂಧ ನಗರಾಭಿವೃದ್ಧಿ ಇಲಾಖೆ ಜತೆ ಚರ್ಚಿಸಲಾಗುವುದು ಎಂದರು.

    ಹೆದ್ದಾರಿ ಟೆಂಡರ್ ಶೀಘ್ರ: ಗಂಜಿಮಠದ ಕೈಗಾರಿಕಾ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಕುಲಶೇಖರ-ಕಾರ್ಕಳ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ 18 ಗ್ರಾಮಗಳಲ್ಲಿ ಭೂಸ್ವಾಧೀನ ಆಗಿದೆ. ಶೀಘ್ರದಲ್ಲಿ ಟೆಂಡರ್ ಆಗಲಿದೆ. ಗುರುಪುರ ಸೇತುವೆ ಮೇನಲ್ಲಿ ಪೂರ್ಣಗೊಳ್ಳಲಿದೆ ಎಂದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾಹಿತಿ ನೀಡಿದರು.

    ಎಚ್‌ಡಿಕೆ ಸದನದಲ್ಲಿ ಮಾತನಾಡಲಿ: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡುವುದನ್ನು ಮೊದಲು ನಿಲ್ಲಿಸಿ, ಬಜೆಟ್ ಕಲಾಪದ ವೇಳೆ ಚರ್ಚೆಯಲ್ಲಿ ಮಾತನಾಡಲಿ. ಮುಖ್ಯಮಂತ್ರಿಗಳಲ್ಲೇ ಹಣಕಾಸು ಖಾತೆ ಇದೆ. ಪ್ರಶ್ನೆ ಕೇಳಿದರೆ ಸರ್ಕಾರದಿಂದ ಉತ್ತರ ಸಿಗುತ್ತದೆ ಎಂದು ಸಚಿವ ಜಗದೀಶ ಶೆಟ್ಟರ್ ಹೇಳಿದ್ದಾರೆ. ರೈತರ ಸಾಲಮನ್ನಾ ಯೋಜನೆಗೆ ಮೀಸಲಿಟ್ಟ ಹಣವನ್ನು ಬಿಜೆಪಿ ಸರ್ಕಾರ ದುರುಪಯೋಗ ಮಾಡಿದೆ ಎಂಬ ಟ್ವೀಟ್ ಆರೋಪ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದರು.
    ಬಿಜೆಪಿಯ 10 ಶಾಸಕರು ರಾಜೀನಾಮೆ ನೀಡುತ್ತಾರೆ ಎಂಬ ಶ್ರೀಶೈಲ ಸ್ವಾಮೀಜಿ ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿ, ಇದನ್ನೆಲ್ಲ ಚರ್ಚೆ ಮಾಡಿದರೆ ಅರ್ಥ ಇರುವುದಿಲ್ಲ, ಸರ್ಕಾರಕ್ಕೆ ಯಾವ ತೊಂದರೆಯೂ ಇಲ್ಲ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts