More

    ಕರೊನಾ ಸೋಂಕಿತರ ಚಿಕಿತ್ಸೆಗೆ ಉಡುಪಿಯಲ್ಲಿ ಸಕಲ ಸಿದ್ಧತೆ

    – ಗೋಪಾಲಕೃಷ್ಣ ಪಾದೂರು, ಉಡುಪಿ

    ಕರೊನಾದಿಂದ ಆರೋಗ್ಯ ರಕ್ಷಿಸಿಕೊಳ್ಳಲು ಸರ್ಕಾರ ಸೂಚಿಸಿರುವ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಜನರು ಪಾಲಿಸಬೇಕು. ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡಲು ಜಿಲ್ಲೆಯಲ್ಲಿ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದು ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸುಧೀರ್‌ಚಂದ್ರ ಸೂಡ ಅವರ ಮಾತು. ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಅವರು ‘ವಿಜಯವಾಣಿ’ಯೊಂದಿಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.

    ಸಾವಿರಕ್ಕೆ ಏರಿಕೆಯಾಗಿದ್ದ ಸೋಂಕಿತರ ಸಂಖ್ಯೆ ಇಳಿಮುಖವಾಗಿ, ಮತ್ತೆ ಏರುಗತಿಯಲ್ಲಿದೆ?
    ಪಾಸಿಟಿವ್ ಬಂದವರ ಪ್ರಾಥಮಿಕ ಸಂಪರ್ಕ ಹೊಂದಿದವರು ಮತ್ತು ಜನರ ಜೊತೆ ನಿರಂತರ ಸಂಪರ್ಕ ಇರುವವರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಐಎಲ್‌ಐ (ಇನ್‌ಫ್ಯುಯೆನ್ಜಾ ಲೈಕ್ ಇಲ್‌ನೆಸ್) ಇರುವವರು ಮತ್ತು ಗುಣಲಕ್ಷಣ ಇಲ್ಲದವರನ್ನೂ ತಪಾಸಣೆ ಮಾಡುತ್ತಿರುವುದರಿಂದ ಹೆಚ್ಚು ಪ್ರಕರಣ ಕಂಡುಬರುತ್ತಿದೆ. ಈ ಹಿಂದೆ ಪಾಸಿಟಿವ್ ವ್ಯಕ್ತಿಗಳ ಮನೆ ಮಾತ್ರ ಸೀಲ್‌ಡೌನ್ ಮಾಡಲಾಗುತ್ತಿತ್ತು. 2-3 ದಿನಗಳಿಂದ ಸುತ್ತಮುತ್ತಲಿನ 4-5 ಮನೆ ಸೀಲ್‌ಡೌನ್ ಮಾಡಿ ಗಂಟಲುದ್ರವ ಮಾದರಿ ಪರೀಕ್ಷೆ ನಡೆಯುತ್ತಿದೆ. ಹೊರ ರಾಜ್ಯದಿಂದ ಬಂದವರ ಪ್ರಾಥಮಿಕ ಸಂಪರ್ಕದ ರೋಗಲಕ್ಷಣ ಇಲ್ಲದ ವ್ಯಕ್ತಿಗಳಿಂದಲೇ ಜಿಲ್ಲೆಯಲ್ಲಿ ಕರೊನಾ ಸಮುದಾಯ ಹಂತಕ್ಕೆ ಹರಡಿದೆ. ಹೀಗಾಗಿ ಜನರೊಂದಿಗೆ ನಿಕಟ ಸಂಪರ್ಕ ಉಳ್ಳವರು ಎಚ್ಚರಿಕೆ ವಹಿಸಬೇಕು.

    ಹೋಂ ಐಸೋಲೇಶನ್ ಹೇಗೆ?
    ಜಿಲ್ಲೆಯಲ್ಲಿ ಕರೊನಾ ಸೊಂಕು ನಿಧಾನವಾಗಿ ಸಮುದಾಯ ಮಟ್ಟದಲ್ಲಿ ಹರಡುತ್ತಿದೆ. ಪಾಸಿಟಿವ್ ಬಂದವರಲ್ಲಿ 10 ವರ್ಷ ಕೆಳಗಿನ ಮಕ್ಕಳು ಮತ್ತು 50 ವರ್ಷ ಮೇಲ್ಪಟ್ಟವರು, ಗರ್ಭಿಣಿಯರು, ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರ ಬಗ್ಗೆ ಹೆಚ್ಚಿನ ನಿಗಾ ಅಗತ್ಯ. ಇವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತದೆ. ರೋಗಲಕ್ಷಣ ಇಲ್ಲದವರು ಮತ್ತು ಸಾಧಾರಣ ಲಕ್ಷಣ ಹೊಂದಿರುವವರಿಗೆ ಮನೆಯಲ್ಲೇ ವ್ಯವಸ್ಥೆ ಇದ್ದರೆ ಚಿಕಿತ್ಸೆ ನೀಡಲಾಗುತ್ತದೆ. ಹೋಂ ಐಸೋಲೇಶನ್‌ಗೆ ಪ್ರತ್ಯೇಕ ಕೊಠಡಿ, ಶೌಚಾಲಯ ಹೊಂದಿರಬೇಕು. ಹಿರಿಯರು ಮತ್ತು ಮಕ್ಕಳು ಇರಬಾರದು ಮುಂತಾದ ನಿಯಮ ಪಾಲಿಸಲಾಗುತ್ತದೆ.

    ಪ್ರಕರಣಗಳು ಹೆಚ್ಚುತ್ತಿರುವಾಗ ಚಿಕಿತ್ಸಾ ವ್ಯವಸ್ಥೆಯ ಬಗೆ?
    ಜಿಲ್ಲೆಯಲ್ಲಿ ರೋಗಲಕ್ಷಣ ಇಲ್ಲದ ಸೋಂಕಿತರಿಗಾಗಿ ಕೋವಿಡ್ ಕ್ಯಾರ್ ಸೆಂಟರ್ ತೆರೆದು, 500-600 ಬೆಡ್‌ಗಳ ವ್ಯವಸ್ಥೆ ಕಲ್ಪಿಸಲಾಗಿದೆ. ನಿಗದಿತ ಕೋವಿಡ್ ಆಸ್ಪತ್ರೆಯಲ್ಲಿ 160 ಬೆಡ್ ವ್ಯವಸ್ಥೆ ಇದ್ದು, ತೀವ್ರ ಉಸಿರಾಟ ತೊಂದರೆ ಉಳ್ಳವರು, ಅನಾರೋಗ್ಯ ಪೀಡಿತರು, ಗರ್ಭಿಣಿಯರು, ಸಣ್ಣ ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಡಿಸಿಎಚ್‌ಸಿ(ನಿಗದಿತ ಕೋವಿಡ್ ಆರೋಗ್ಯ ಕೇಂದ್ರ)ಯಲ್ಲಿ 600 ಬೆಡ್‌ಗಳಿದ್ದು, ಸಾಧಾರಣ ರೋಗಲಕ್ಷಣ ಇರುವವರಿಗೆ ಚಿಕಿತ್ಸೆ ನೀಡಲಾಗುತ್ತದೆ. ಕುಂದಾಪುರ ಸರ್ಕಾರಿ ಆಸ್ಪತ್ರೆ, ಆದರ್ಶ ಆಸ್ಪತ್ರೆ, ಕಾರ್ಕಳ ಸರ್ಕಾರಿ ಆಸ್ಪತ್ರೆ, ಭುವನೇಂದ್ರ ವಿದ್ಯಾರ್ಥಿನಿಲಯ, ಉಡುಪಿ ಜಿಲ್ಲಾಸ್ಪತ್ರೆ ಟ್ರೈನಿಂಗ್ ಸೆಂಟರ್, ಬನ್ನಂಜೆ ವಿದ್ಯಾರ್ಥಿ ನಿಲಯಗಳನ್ನು ಕಾಯ್ದಿರಿಸಲಾಗಿದೆ.

    ಜಿಲ್ಲೆಯಲ್ಲಿ ಕರೊನಾ ಸ್ಥಿತಿಗತಿ ಹೇಗಿದೆ?
    ಎಲ್ಲ ಪ್ರಾಥಮಿಕ ಕೇಂದ್ರ ವ್ಯಾಪ್ತಿಯಲ್ಲಿ ರ‌್ಯಾಂಡಮ್ ಚೆಕ್ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ಸಂಪರ್ಕವೇ ಇಲ್ಲದ ಪ್ರಕರಣಗಳು ಬೆಳಕಿಗೆ ಬಂದಿವೆ. ಸೋಂಕು ಸಮುದಾಯ ಹಂತಕ್ಕೆ ವ್ಯಾಪಿಸಿದೆ ಎಂಬುದೇ ಇದರ ಅರ್ಥ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಜಿಲ್ಲೆಯನ್ನು ಲಾಕ್‌ಡೌನ್ ಮಾಡುವ ಸಾಧ್ಯತೆಯೂ ಬರಬಹುದು. ಇದು ಕರೊನಾ ತಡೆಗೆ ಉತ್ತಮ ಮಾರ್ಗೋಪಾಯ.

    ಕೋವಿಡ್ ಪರೀಕ್ಷಾ ವರದಿ ನಿಗದಿತ ಸಮಯದಲ್ಲಿ ಸಿಕ್ಕಿದರೆ ಸಮಾಜವನ್ನು ರಕ್ಷಿಸಬಹುದು. ಪ್ರತಿದಿನ ಜಿಲ್ಲೆಯಲ್ಲಿ ಸರಾಸರಿ 600 ರಿಂದ 700 ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತದೆ. ಕೊಲವೊಮ್ಮೆ ಇದು ಸಾವಿರದ ಗಡಿ ದಾಟಿದೆ. ಹೊಸದಾಗಿ ಜಿಲ್ಲಾಸ್ಪತ್ರೆಯಲ್ಲಿ ಪ್ರಯೋಗಾಲಯ ಪ್ರಾರಂಭವಾಗಿದ್ದು, ದಿನಕ್ಕೆ 200 ಮಾದರಿ ಪರೀಕ್ಷೆ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ 600ಕ್ಕೆ ಏರಿಕೆಯಾಗಬಹುದು. ಮಣಿಪಾಲ ಖಾಸಗಿ ಆಸ್ಪತ್ರೆ ಪ್ರಯೋಗಾಲಯದಲ್ಲಿ 1000 ಮಾದರಿ ಪರೀಕ್ಷಿಸಲಾಗುತ್ತಿದೆ.
    – ಡಾ.ಸುಧೀರ್‌ಚಂದ್ರ ಸೂಡ, ಜಿಲ್ಲಾ ಆರೋಗ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts