More

    ಅಂತಾರಾಜ್ಯ ತರಕಾರಿ ಸಾಗಣೆಗೆ ಕ್ರಮ ಕೈಗೊಳ್ಳಿ

    ಬೆಳಗಾವಿ: ಹೊರ ರಾಜ್ಯಗಳಿಗೆ ತರಕಾರಿ ಕಳುಹಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ತಕ್ಷಣ ತರಕಾರಿ ವ್ಯಾಪಾರಸ್ಥರ ಸಭೆ ಕರೆದು ಕ್ರಮ ವಹಿಸಬೇಕು ಎಂದು ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಸೂಚಿಸಿದ್ದಾರೆ.
    ಬೆಳಗಾವಿ ನಗರದ ತಾಪಂ ಕಚೇರಿ ಸಭಾಂಗಣದಲ್ಲಿ ಗುರುವಾರ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿವಿಧ ಭಾಗಗಳಿಂದ ಮಾರುಕಟ್ಟೆಗೆ ಬರುತ್ತಿರುವ ತರಕಾರಿಯನ್ನು ಹೊರ ರಾಜ್ಯಗಳಿಗೆ ಸಾಗಿಸುವ ಸಲುವಾಗಿ ಜಿಲ್ಲಾಧಿಕಾರಿಗಳು ವಿಶೇಷ ಕ್ರಮ ವಹಿಸಬೇಕು ಎಂದು ತಿಳಿಸಿದರು.

    ಬೆಳಗಾವಿ ತಾಲೂಕಿನ ವ್ಯಾಪ್ತಿಯ 1,700 ಹೆಕ್ಟೇರ್ ಪೈಕಿ 4,300 ಎಕರೆ ಪ್ರದೇಶದಲ್ಲಿ ಟೊಮ್ಯಾಟೊ, ಪೊಟ್ಯಾಟೋ, ಹಸಿರು ಮೆಣಸಿನಕಾಯಿ ಸೇರಿ ವಿವಿಧ ತರಕಾರಿ ಬೆಳೆಯಲಾಗುತ್ತಿದೆ. ಈಗಾಗಲೇ ತರಕಾರಿ ಬೆಳೆದಿರುವ ರೈತರಿಗೆ ಮಾರುಕಟ್ಟೆ ಕುರಿತು ಮಾಹಿತಿಯನ್ನು ಆಯಾ ಗ್ರಾಪಂ ಅಧಿಕಾರಿಗಳ ಮೂಲಕ ಒದಗಿಸಲಾಗಿದೆ. ಒಂದು ವಾರಕ್ಕೆ 4,800 ಟನ್‌ನಷ್ಟು ತರಕಾರಿ ಮಾರುಕಟ್ಟೆಗೆ ಬರುತ್ತಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದರು.

    ಅದಕ್ಕೆ ಪ್ರತಿಕ್ರಿಯಿಸಿದ ಕವಟಗಿಮಠ ಮಾತನಾಡಿ, ಒಂದು ನ್ಯಾಯಬೆಲೆ ಅಂಗಡಿ ವ್ಯಾಪ್ತಿಯಲ್ಲಿ 2 ರಿಂದ 3 ಹಳ್ಳಿಗಳು ಬರುತ್ತಿರುವ ಹಿನ್ನೆಲೆಯಲ್ಲಿ ಪಡಿತರ ವಿತರಣೆಗೆ ಸಾಕಷ್ಟು ಸಮಸ್ಯೆ ಉಂಟಾಗುತ್ತಿದೆ. ಹಾಗಾಗಿ ಒಂದೊಂದು ಹಳ್ಳಿಗೆ ಪಡಿತರ ವಿತರಣೆ ಕುರಿತು ಸಮಯ, ದಿನ ನಿಗದಿಪಡಿಸಬೇಕು. ಜತೆಗೆ ಕರೊನಾ ವೈರಸ್ ಹರಡದಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಜನರಿಗೆ ತಿಳಿಸಬೇಕು ಎಂದರು.ಕರೊನಾ ವೈರಸ್ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವ ಗ್ರಾಪಂ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರ ಜವಾಬ್ದಾರಿ ದೊಡ್ಡದಿದೆ. ಹಾಗಾಗಿ ಗ್ರಾಮ ಪಂಚಾಯಿತಿ ಹಂತದಲ್ಲಿ ಜನರಿಗೆ ಮತ್ತು ಕರೊನಾ ಸೇವಕರಿಗೆ ಸ್ವಚ್ಛತಾ ಪರಿಕರ ವಿತರಣೆ ಮಾಡುವುದು ಅವಶ್ಯ. ಸಕ್ಕರೆ ಕಾರ್ಖಾನೆಗಳಿಂದ ಇಥೆನಾಲ್ ಸಂಗ್ರಹಿಸಿ ಸ್ಯಾನಿಟೈಸರ್ ವಿತರಣೆ ಮಾಡುವುದು ಅಗತ್ಯ ಎಂದು ತಿಳಿಸಿದರು. ಕಾರ್ಮಿಕರಿಗೆ, ಬಡವರಿಗೆ, ರೈತರಿಗೆ ನರೇಗಾ ಯೋಜನೆಯಡಿ ಕೆಲಸ ನೀಡಬೇಕು. ಪಿಡಿಒಗಳ ಸಭೆ ಕರೆದು ತಕ್ಷಣ ಕ್ರಮ ಜರುಗಿಸಬೇಕು. ಅರಣ್ಯ ಇಲಾಖೆ, ತೋಟಗಾರಿಕೆ ಮತ್ತು ಕೃಷಿ ಇಲಾಖೆಗಳ ವ್ಯಾಪ್ತಿಯ ನರೇಗಾ ಕೆಲಸ ಆರಂಭಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ತಾಪಂ ಇಒ ಮಲ್ಲಿಕಾರ್ಜುನ ಕಲಾದಗಿ, ತಹಸೀಲ್ದಾರ್ ಆರ್.ಕೆ. ಕುಲಕರ್ಣಿ, ಅಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts