More

    ಗರಿಗೆದರಿದ ಕೃಷಿ ಚಟುವಟಿಕೆ

    ಗುಂಡ್ಲುಪೇಟೆ: ಬುಧವಾರ ರಾತ್ರಿ ತಾಲೂಕಿನ ಕೆಲವು ಭಾಗಗಳಿಗೆ ಬಿದ್ದ ಮಳೆಯಿಂದ ಕೃಷಿ ಚಟುವಟಿಕೆಗಳು ಗರಿಗೆದರಿವೆ.

    ಯುಗಾದಿ ಹಬ್ಬದ ಸಂದರ್ಭದಲ್ಲಿ ಬೀಳುವ ಮಳೆಗೆ ತಾಲೂಕಿನಾದ್ಯಂತ ಬಿತ್ತನೆ ಕಾರ್ಯ ಆರಂಭವಾಗುತ್ತದೆ. ಹಬ್ಬಕ್ಕೂ ಮೊದಲೇ ಕೃಷಿ ಚಟುವಟಿಕೆಗಳು ಗರಿಗೆದರಿ ರೈತರು ತಮ್ಮ ಜಮೀನುಗಳಿಗೆ ಗೊಬ್ಬರ, ಕೆರೆಗಳ ಮೆಕ್ಕಲು ಮಣ್ಣು ಹೂಡಿ ಮೇಲಿಂದ ಮೇಲೆ ಉಳುಮೆ ಮಾಡಿ ಭೂಮಿಯನ್ನು ಹದಗೊಳಿಸಿ ಮೊದಲನೇ ಮಳೆ ಬೀಳುತ್ತಿದ್ದಂತೆ ಬಿತ್ತನೆ ಆರಂಭಿಸುವುದು ವಾಡಿಕೆ. ಆದರೆ ಈ ಬಾರಿ ಯುಗಾದಿ ಕಳೆದು 20 ದಿನ ಕಳೆದರೂ ಮಳೆ ಬೀಳದಿರುವುದು ರೈತರ ಆತಂಕಕ್ಕೆ ಕಾರಣವಾಗಿತ್ತು.

    ಕಳೆದ ಎರಡು ದಿನಗಳಿಂದ ಅಲ್ಲಲ್ಲಿ ಮಳೆ ಬೀಳುತ್ತಿದ್ದರೂ ಬಿತ್ತನೆ ಮಾಡಲು ಸಾಕಾಗುವಷ್ಟು ಪ್ರಮಾಣದಲ್ಲಿ ಬಿದ್ದಿಲ್ಲ. ಆದರೆ ಬುಧವಾರ ತಾಲೂಕಿನ ಹಂಗಳ ಹೋಬಳಿ ಹಾಗೂ ಪಟ್ಟಣ ಸೇರಿದಂತೆ ಕಸಬಾ ಹೋಬಳಿಯ ಕೆಲವು ಭಾಗಗಳಿಗೆ ಗಾಳಿ ಸಹಿತ ಮಳೆ ಬಿದ್ದಿದ್ದರೆ ಕೆಲವು ಗ್ರಾಮಗಳಿಗೆ ಸಾಧಾರಣ ಮಳೆ ಬಿದ್ದಿದೆ. ಇದರಿಂದ ಮತ್ತೆ ಮಳೆ ಬಿದ್ದರೆ ಬಿತ್ತನೆ ಮಾಡಿಕೊಳ್ಳಲು ರೈತರು ತಮ್ಮ ಜಮೀನುಗಳನ್ನು ಉಳುಮೆ ಮಾಡಿ ಹದಗೊಳಿಸಿಕೊಳ್ಳುತ್ತಿದ್ದಾರೆ.

    ಕೃಷಿ ಇಲಾಖೆಯು ಪಟ್ಟಣ ಸೇರಿದಂತೆ ತಾಲೂಕಿನ ತೆರಕಣಾಂಬಿ, ಬೇಗೂರು ಹಾಗೂ ಹಂಗಳ ಗ್ರಾಮಗಳ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರಗಳಲ್ಲಿ ಸಂಗ್ರಹಿಸಿರುವ ಬಿತ್ತನೆ ಬೀಜ ಮಾರಾಟ ಆರಂಭಿಸಿದೆ. ಸದ್ಯ ಹೆಚ್ಚಿನ ರೈತರು ಸೂರ್ಯಕಾಂತಿ ಬಿತ್ತನೆ ಮಾಡುವುದರಿಂದ ಅದನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಕೆಲವೇ ಭಾಗಗಳಿಗೆ ಮಾತ್ರ ಮಳೆ ಬಿದ್ದಿರುವುದರಿಂದ ಈ ಪ್ರದೇಶಗಳ ಜನರು ಬಿತ್ತನೆ ಬೀಜ ಖರೀದಿ ಮಾಡುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts