More

  ಮೇವು ಕೇಂದ್ರ ಬಂದ್‌ಗೆ ನಿರ್ಧಾರ

  ಚಾಮರಾಜನಗರ: ಗುಂಡ್ಲುಪೇಟೆಯಲ್ಲಿ ಒಂದೆಡೆ ಕಾಡಂಚಿನ ಜಾನುವಾರುಗಳಿಗೆ ಮೇವು ದೊರಕದೆ ನೂರಾರು ರಾಸುಗಳು ಹಸಿವಿನಿಂದ ಸಾವಿಗೀಡಾಗುತ್ತಿದ್ದರೆ, ಪಶುಸಂಗೋಪನಾ ಇಲಾಖೆ ರಿಯಾಯಿತಿ ದರದಲ್ಲಿ ರೈತರಿಗೆ ಪೂರೈಸುತ್ತಿದ್ದ ಮೇವು ಕೇಂದ್ರವನ್ನು ಸದ್ಯದಲ್ಲಿಯೇ ಬಂದ್ ಮಾಡುತ್ತಿದೆ.


  ಈ ಬಾರಿ ಕಂಡು ಕೇಳರಿಯದ ಬರದಿಂದ ಜಾನುವಾರುಗಳು ಕುಡಿಯುವ ನೀರು ಹಾಗೂ ಮೇವಿಗೆ ತುಂಬಾ ತತ್ವಾರ ಉಂಟಾಗಿತ್ತು. ಸರ್ಕಾರ ತಾಲೂಕನ್ನು ಬರಪೀಡಿತ ಪಟ್ಟಿಗೆ ಸೇರಿಸಿ ಜನ-ಜಾನುವಾರುಗಳಿಗೆ ಕುಡಿಯುವ ನೀರು ಪೂರೈಕೆಗೆ ಮುಂದಾಗಿತ್ತು. ಕಳೆದ ವರ್ಷ ಯಾವುದೇ ಬೆಳೆಗಳನ್ನು ಬೆಳೆಯದ ಕಾರಣ ಜಾನುವಾರುಗಳ ಮೇವಿಗೆ ಕೊರತೆಯಾಗಿದ್ದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಪಟ್ಟಣದ ಎಪಿಎಂಸಿ ಆವರಣದಲ್ಲಿ ಮೇವು ಕೇಂದ್ರ ತೆರೆದು ಕಳೆದ 15 ದಿನಗಳಿಂದ ಜಾನುವಾರು ಮಾಲೀಕರಿಗೆ ಪ್ರತಿ ಕೆಜಿ ಮೇವಿಗೆ 2 ರೂ.ನಂತೆ ಮೇವು ವಿತರಣೆ ಮಾಡುತ್ತಿದೆ.


  ದೂರದ ಬಳ್ಳಾರಿ ಸೇರಿದಂತೆ ನಾನಾ ಜಿಲ್ಲೆಗಳಿಂದ ಮೇವು ಖರೀದಿಸಿ ಹುಲ್ಲಿನ ಪಿಂಡಿ, ಜೋಳದ ಕಡ್ಡಿ ಸೇರಿದಂತೆ 154 ಟನ್ ಮೇವು ವಿತರಣೆ ಮಾಡಲಾಗಿತ್ತು. ಬೇಡಿಕೆಯಿರುವ ಪ್ರದೇಶಗಳ ರೈತರಿಗೆ ಮಾತ್ರ ಮೇವು ಪೂರೈಕೆ ಮಾಡುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ. ಆದ್ದರಿಂದ ಸದ್ಯ ಕಂದಾಯ ಇಲಾಖೆಗೆ ಹಣಕಟ್ಟಿ ಟೋಕನ್ ಪಡೆದಿರುವ ರೈತರಿಗೆ ಮಾತ್ರ ಮೇವು ವಿತರಣೆ ಮಾಡಲಾಗುವುದು. ಕಳೆದ ವಾರದಿಂದ ಚೆನ್ನಾಗಿ ಮಳೆ ಬೀಳುತ್ತಿರುವುದರಿಂದ ಹಸಿರು ಹುಲ್ಲು ಚಿಗುರಿರುವುದರಿಂದ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಹೊಸದಾಗಿ ಮೇವು ವಿತರಣೆ ಸ್ಥಗಿತಗೊಳಿಸಲಾಗುತ್ತಿದೆ ಎಂದು ಪಶುಪಾಲನಾ ಇಲಾಖೆ. ಸಹಾಯಕ ನಿರ್ದೇಶಕ ಡಾ.ಮೋಹನ್ ಕುಮಾರ್ ವಿಜಯವಾಣಿಗೆ ತಿಳಿಸಿದ್ದಾರೆ.


  ಒತ್ತಾಯ: ಈಗಾಗಲೇ ಕಳೆದ ಕೆಲವು ದಿನಗಳಿಂದ ತಾಲೂಕಿಗೆ ಮಳೆ ಬೀಳಲಾರಂಭಿಸಿದ್ದರೂ ಎಲ್ಲ ಭಾಗಗಳಿಗೂ ಸಮರ್ಪಕವಾಗಿ ಬಿದ್ದಿಲ್ಲ. ಅಲ್ಲದೆ ಒಂದೆರಡು ಮಳೆಗೆ ಮೇವು ಚಿಗುರಲು ಸಾಧ್ಯವಿಲ್ಲ. ಆದ್ದರಿಂದ ಜಿಲ್ಲಾಡಳಿತ ಇನ್ನೂ ಸ್ವಲ್ಪ ದಿನಗಳ ಕಾಲ ಮೇವು ವಿತರಣೆ ಮುಂದುವರಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts