More

    ಏ ಎಮ್ಮೆ ತಮ್ಮಣ್ಣ, ಎಲೆ ತಿನ್ನಬೇಕು ಬೆನ್ನ್ಮೇಲೆ ಹತ್ತಿಸ್ಕೋ ಅಣ್ಣಾ!

    ನವದೆಹಲಿ: ಬಾಹುಬಲಿ ಸಿನಿಮಾ ನೋಡಿದವರಿಗೆ ಸಿನಿಮಾದ ಹೀರೋ ಆನೆಯ ಸೊಂಡಿಲ ಮೇಲೆ ಕಾಲಿಡುತ್ತಿದ್ದಂತೆ, ಆನೆ ಲಿಫ್ಟ್​ ರೀತಿಯಲ್ಲಿ ಸೊಂಡಿಲನ್ನು ಮೇಲೆತ್ತಿ, ತನ್ನ ನೆತ್ತಿಯ ಮೇಲೆ ಕಾಲಿರಿಸಲು ಅವಕಾಶ ಮಾಡಿಕೊಡುವ ದೃಶ್ಯವನ್ನು ನಾವೆಲ್ಲರೂ ಆಸ್ವಾದಿಸಿದ್ದೇವೆ ಅಲ್ಲವೇ? ಸಾಮಾನ್ಯ ಜೀವನದಲ್ಲಿ ಇಂಥ ದೃಶ್ಯಗಳನ್ನು ನೋಡಲು ಸಾಧ್ಯವಿಲ್ಲ. ಆದರೆ, ಈ ದೃಶ್ಯದಿಂದ ಪ್ರೇರಿತವಾಗಿರುವಂತೆ ಮೇಕೆಯೊಂದು ಅಂಥದ್ದೇ ದೃಶ್ಯವನ್ನು ಪುನರಾವರ್ತಿಸಲು ಯತ್ನಿಸಿದೆ. ಅಷ್ಟೇ ಅಲ್ಲ, ಯಶಸ್ವಿಯೂ ಆಗಿ ಹಸಿರೆಲೆಗಳನ್ನು ಮೇಯ್ದು ಸಂತಸಪಟ್ಟಿದೆ.

    ಗೇಣು ಹೊಟ್ಟೆಗಾಗಿ ಮನುಷ್ಯನೇ ಇರಲಿ, ಪ್ರಾಣಿಗಳೇ ಆಗಲಿ ಏನೆಲ್ಲ ಮಾಡುತ್ತವೆ ಎಂಬುದಕ್ಕೂ ಈ ದೃಶ್ಯ ಸಾಕ್ಷಿ ಎಂದರೂ ತಪ್ಪಾಗುವುದಿಲ್ಲ. ಯಾವುದೋ ಒಂದು ಊರಿನಲ್ಲಿ ಮೇಕೆಯೊಂದು ಮೇಯುತ್ತಿತ್ತು. ಸುತ್ತ ಹಸಿರು ಖಾಲಿಯಾದರೂ ಅದಕ್ಕೆ ಹೊಟ್ಟೆ ತುಂಬಿರಲಿಲ್ಲ. ಸರಿ, ಏನು ಮಾಡುವುದು ಎಂದು ನೋಡಿದಾಗ ಮರದಲ್ಲಿ ಹಸಿರೆಲೆಗಳು ಕಾಣಿಸಿದ್ದವು.

    ಇದನ್ನೂ ಓದಿ: ಕೇಳ್ರೋಪ್ಪೋ, ಕೇಳ್ರಿ… ಪಾಕ್​ ಷೇರು ವಿನಿಮಯ ಕೇಂದ್ರದ ಮೇಲಿನ ಉಗ್ರರ ದಾಳಿ ಹಿಂದೆ ಭಾರತ ಇದೆಯಂತೆ!

    ಹಸಿರೆಲೆಗಳು ತುಂಬಾ ಎತ್ತರದಲ್ಲಿ ಇದ್ದುದರಿಂದ, ಅಷ್ಟು ಎತ್ತರಕ್ಕೆ ಎಗರಿ ತಿನ್ನಲು ಸಾಧ್ಯವಿಲ್ಲ ಅಂಥ ಪರಿತಪಿಸುವಾಗಲೇ ಅದೇ ಮರಕ್ಕೆ ಕಟ್ಟಿಹಾಕಿದ್ದ ಎಮ್ಮೆ ಕಾಣಿಸಿತು. ತಕ್ಷಣವೇ ಅದರ ಮುಖದ ಎದುರು ಹೋಗಿ ನಿಂತ ಮೇಕೆ, ಎಮ್ಮೆ ತಲೆತಗ್ಗಿಸುವವರೆಗೂ ಕಾಯುತ್ತಾ ನಿಂತಿತು.
    ಎಮ್ಮೆ ತಲೆತಗ್ಗಿಸಿದ್ದೇ ತಡ, ಛಂಗನೆ ಅದರ ನೆತ್ತಿಯ ಮೇಲೆ ಎಗರಿ, ಬೆನ್ನಮೇಲೆ ಹೋಗಿ ಎರಡೂ ಕಾಲೆತ್ತಿ ನಿಂತು ಎಟುಕಿದ ಹಸಿರೆಲೆಗಳನ್ನು ತಿನ್ನಲಾರಂಭಿಸಿತು.

    ಸಾರ್ವಜನಿಕರೊಬ್ಬರು ಮೊಬೈಲ್​ನಲ್ಲಿ ಚಿತ್ರೀಕರಿಸಿಕೊಂಡಿರುವ ಈ ದೃಶ್ಯವನ್ನು ಐಎಫ್​ಎಸ್​ ಅಧಿಕಾರಿ ಸುಧಾ ರಾಮೆನ್​ ಸಾಮಾಜಿಕ ಜಾಲತಾಣ ಟ್ವಿಟ್ಟರ್​ನಲ್ಲಿ ಈ ದೃಶ್ಯವನ್ನು ಹಂಚಿಕೊಂಡಿದ್ದಾರೆ. ಬಾಯಾರಿಕೆ ತೀರಿಸಿಕೊಳ್ಳಲು ಮಡಕೆಯ ತಳಭಾಗದಲ್ಲಿದ್ದ ನೀರು ಮೇಲೆ ಬರುವಂತೆ ಮಾಡಲು ಕಲ್ಲು ಹಾಕಿ ಜಾಣ್ಮೆ ತೋರಿದ ಕಾಗೆ ರೀತಿಯಲ್ಲೇ ಮೇಕೆ ಕೂಡ ಹಸಿರೆಲೆ ತಿನ್ನಲು ತಲೆ ಉಪಯೋಗಿಸಿದ್ದನ್ನು ಕಂಡು ಜನರು ದಿಗ್ಮೂಢರಾಗಿದ್ದಾರೆ. ಆ ದೃಶ್ಯವನ್ನು ನೀವೂ ನೋಡಿ ಆನಂದಿಸಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts