More

    ಭೂಗತ ಕೇಬಲ್ ಅಳವಡಿಕೆಗೆ ವೇಗ

    ವಿಜಯವಾಣಿ ಸುದ್ದಿಜಾಲ ಸುಬ್ರಹ್ಮಣ್ಯ

    ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ನಿರಂತರ ವಿದ್ಯುತ್ ಪೂರೈಸಲು ಭೂಗತ ಮಾರ್ಗದ ಮೂಲಕ ವಿದ್ಯುತ್ ತಂತಿ ಅಳವಡಿಕಾ ಯೋಜನೆ ಅನುಷ್ಠಾನಗೊಂಡಿದೆ.

    ಕ್ಷೇತ್ರಕ್ಕೆ ತನ್ನದೇ ಆದ ವಿದ್ಯುತ್ ಸಬ್‌ಸ್ಟೇಷನ್ ಇದ್ದರೂ ಅರಣ್ಯದ ಮಧ್ಯೆ ವಿದ್ಯುತ್ ಹಾದು ಬರುವ ಕಾರಣ ಮಳೆ ಬಂದರೆ ವಿದ್ಯುತ್ ವ್ಯತ್ಯಯ ನಿಶ್ಚಿತ. ಪುಣ್ಯ ಕ್ಷೇತ್ರಕ್ಕೆ ನಿರಂತರ ವಿದ್ಯುತ್ ಪೂರೈಕೆ ಸಲುವಾಗಿ 8 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಕೈಗೆತ್ತಿಕೊಳ್ಳಲಾಗಿದ್ದು, ಗುತ್ತಿಗಾರಿನಿಂದ ಕುಕ್ಕೆಗೆ 17.5 ಕಿ.ಮೀ. ದೂರ ಕೇಬಲ್ ಅಳವಡಿಸಲಾಗುತ್ತದೆ. ಈಗಾಗಲೇ ಸುಬ್ರಹ್ಮಣ್ಯದ ಇಂಜಾಡಿ ತನಕ ಕೇಬಲ್ ಅಳವಡಿಸಲಾಗಿದ್ದು, ಉಳಿದ 2 ಕಿ.ಮೀ. ದೂರ ಕಾಮಗಾರಿ ಅಕ್ಟೋಬರ್ ಒಳಗೆ ಪೂರ್ಣಗೊಳ್ಳಲಿದೆ.

    ಗುತ್ತಿಗಾರಿನಿಂದ ಕುಕ್ಕೆಗೆ: ಗುತ್ತಿಗಾರಿನ ಬಳ್ಳಕ್ಕದಲ್ಲಿ 33/11 ಕೆ.ವಿ. ಸಬ್‌ಸ್ಟೇಷನ್ ಉದ್ಘಾಟನೆಗೊಂಡಿದೆ. ಇಲ್ಲಿಂದ ಭೂಗತ ಮಾರ್ಗದ ಮೂಲಕ ಕುಕ್ಕೆಗೆ ಲಿಂಕ್‌ಲೈನ್ ಮಾಡಲಾಗಿದೆ. ಗುತ್ತಿಗಾರಿಗೆ ಬೆಳ್ಳಾರೆ ಸಬ್‌ಸ್ಟೇಷನ್‌ನಿಂದ ವಿದ್ಯುತ್ ಸರಬರಾಜು ಆಗಲಿದೆ. ಮಾಡಾವಿನ 110 ಕೆ.ವಿ. ಸ್ಟೇಷನ್‌ನಿಂದ ಬೆಳ್ಳಾರೆ ಮೂಲಕ ನೇರವಾಗಿ ಗುತ್ತಿಗಾರಿಗೆ ಬರುತ್ತದೆ. ಬೆಳ್ಳಾರೆ ಮೂಲಕ ಬರುವ ಪಥದಲ್ಲಿ ಅರಣ್ಯ ಕಡಿಮೆ ಇರುವ ಕಾರಣ ಈ ಹಾದಿಯಲ್ಲಿ ವ್ಯತ್ಯಯ ಕಡಿಮೆ ಇರುತ್ತದೆ. ಸುಬ್ರಹ್ಮಣ್ಯಕ್ಕೆ ಕಡಬದಿಂದ ಬರುವ ವಿದ್ಯುತ್ ಸಂಪರ್ಕ ಕಡಿತಗೊಂಡಾಗ ಈ ವ್ಯವಸ್ಥೆ ಉಪಯೋಗಿಸಬಹುದು.

    ಯುಜಿ ಕೇಬಲ್: ವಿದ್ಯುತ್ ಸರಬರಾಜಿಗೆ ಬಲಿಷ್ಠ ಮತ್ತು ಗುಣಮಟ್ಟದ ಯುಜಿ ಕೇಬಲನ್ನು ಅಳವಡಿಸಲಾಗಿದೆ. ಆರು ಅಡಿ ಹೊಂಡ ತೆಗೆದು ಅದರ ಮೇಲೆ 1 ಅಡಿ ಮರಳನ್ನು ಹಾಕಿ ಅದರ ಮೇಲೆ ಯುಜಿ ಕೇಬಲ್ ಅಳವಡಿಸಿ ಮತ್ತೆ ಅದರ ಮೇಲೆ 1 ಅಡಿ ಮರಳು ಹಾಕಿ ಮರಳಿನ ಮೇಲೆ ಇಟ್ಟಿಗೆ ಇಟ್ಟು ಮತ್ತೆ ಮಣ್ಣಿನಿಂದ ಮುಚ್ಚಲಾಗುತ್ತದೆ. ಕೇಬಲ್ ಮುಚ್ಚಿದ ನಂತರ ಪ್ರತಿ 500 ಮೀ. ದೂರದಲ್ಲಿ ಕೇಬಲ್ ಹಾದು ಹೋಗಿರುವ ಬಗ್ಗೆ ಎಚ್ಚರಿಕಾ ಫಲಕ ಅಳವಡಿಸಲಾಗಿದೆ.

    6 ಜಿಒಎಸ್: 6 ಗ್ರೂಪ್ ಆಪರೇಟಿಂಗ್ ಸ್ವಿಚ್, ಗುತ್ತಿಗಾರು ಪೇಟೆ, ಹಾಲೆಮಜಲು, ನಡುಗಲ್ಲು, ಮರಕತ, ಕಲ್ಲಾಜೆ, ಇಂಜಾಡಿ ಪ್ರದೇಶಲ್ಲಿ ಅಳವಡಿಸಲಾಗಿದೆ. ಎಲ್ಲಿಯಾದರೂ ಸಮಸ್ಯೆಯಾದರೆ ಸರಿ ಮಾಡಲು ಇದನ್ನು ಅಳವಡಿಸಲಾಗಿದೆ. ಪ್ರತಿ 5 ಕಿ.ಮೀ.ಗೆ ಒಂದರಂತೆ ಒಟ್ಟು 6 ಜಿಒಎಸ್ ಅಳವಡಿಸಿದೆ. ಪ್ರತಿ 500 ಮೀ.ಗೆ ಒಮ್ಮೆ ಕೇಬಲ್‌ಗೆ ಜೋಡಣೆ ಇರುತ್ತದೆ. ಇದರ ಜಾಯಿಂಟರ್ 22 ಸಾವಿರ ರೂ. ಮೌಲ್ಯ ಹೊಂದಿದೆ.

    ಗುತ್ತಿಗಾರಿನ 33 ಕೆ.ವಿ. ಸಬ್‌ಸ್ಟೇಷನ್‌ನಿಂದ ಕುಕ್ಕೆಗೆ ಭೂಗತ ಕೇಬಲ್ ಮೂಲಕ ವಿದ್ಯುತ್ ಸರಬರಾಜಾಗಲಿದೆ. ಇದರಿಂದಾಗಿ ಸುಬ್ರಹ್ಮಣ್ಯ ಸೇರಿದಂತೆ ಗ್ರಾಮೀಣ ಭಾಗಕ್ಕೆ ಅಡಚಣೆ ರಹಿತವಾಗಿ ಗುಣಮಟ್ಟದ ನಿರಂತರ ವಿದ್ಯುತ್ ಒದಗಿಸಲು ಪೂರಕವಾಗಿದೆ. 8 ಕೋಟಿ ರೂ. ವೆಚ್ಚದ ಯೋಜನೆಯಲ್ಲಿ ಗುತ್ತಿಗಾರಿನಿಂದ ಸುಬ್ರಹ್ಮಣ್ಯದ ಇಂಜಾಡಿ ತನಕ ಭೂಗತ ಕೇಬಲ್ ಅಳವಡಿಕಾ ಕಾರ್ಯ ಸಂಪನ್ನವಾಗಿದೆ.
    -ಎಸ್.ಅಂಗಾರ, ದ.ಕ. ಜಿಲ್ಲಾ ಉಸ್ತುವಾರಿ ಸಚಿವ

    ಕುಕ್ಕೆ ಸೇರಿದಂತೆ ಸುಬ್ರಹ್ಮಣ್ಯ ಉಪವಿಭಾಗದಿಂದ ವಿದ್ಯುತ್ ಪ್ರಸರಣವಾಗುವ ಪ್ರದೇಶಗಳಿಗೆ ವ್ಯತ್ಯಯ ರಹಿತ ವಿದ್ಯುತ್ ನೀಡಲು ಈ ಯೋಜನೆ ಸಹಕಾರಿ. ಕುಕ್ಕೆಯ 33 ಕೆ.ವಿ. ಸಬ್ ಸ್ಟೇಷನ್‌ನಲ್ಲಿ ವಿದ್ಯುತ್ ವ್ಯತ್ಯಯವಾದರೆ ಮಾತ್ರ ಗುತ್ತಿಗಾರಿನಿಂದ ವಿದ್ಯುತ್ ಸರಬರಾಜಾಗುತ್ತದೆ. ಇಲ್ಲವಾದರೆ ಈ ಪಥದಲ್ಲಿ ವಿದ್ಯುತ್ ಇರುವುದಿಲ್ಲ. ಬಲಿಷ್ಠ ಮತ್ತು ಗುಣಮಟ್ಟದ ಯುಜಿ ಕೇಬಲ್ ಮೂಲಕ ಭೂಗತವಾಗಿ ವಿದ್ಯುತ್ ಪ್ರಸಾರವಾಗಲಿದೆ.
    -ಚಿದಾನಂದ ಕೆ.
    ಸಹಾಯಕ ಕಾರ್ಯನಿರ್ವಾಹಕ ಅಭಿಯಂತ, ಸುಬ್ರಹ್ಮಣ್ಯ ಉಪವಿಭಾಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts