More

    ಹೊರ್ತಿ ರೇವಣಸಿದ್ಧೇಶ್ವರ ಏತ ನೀರಾವರಿಗೆ ಶಂಕು ಸ್ಥಾಪನೆ | ಇಂಡಿ ತಾಲೂಕಿನ 16 ಕೆರೆ ತುಂಬುವ ಯೋಜನೆಗೆ ಚಾಲನೆ

    ವಿಜಯಪುರ : ಹೊರ್ತಿ ರೇವಣಸಿದ್ಧೇಶ್ವರ ಏತ ನೀರಾವರಿ ಹಾಗೂ ಇಂಡಿ ತಾಲೂಕಿನ 16 ಕೆರೆಗಳಿಗೆ ನೀರು ತುಂಬುವ ಯೋಜನೆಯ ಅಡಿಗಲ್ಲು ಸ್ಥಾಪಿಸಿದ್ದು, ಮುಂದೆಯೂ ಕಾಮಗಾರಿ ಕೈಗೊಂಡು ಉದ್ಘಾಟನೆಯನ್ನೂ ನೆರವೇರಿಸುತ್ತೇವೆ. ಆ ಮೂಲಕ ಈ ಭಾಗದ ಸಮಗ್ರ ನೀರಾವರಿಗೆ ಆದ್ಯತೆ ನೀಡಲಾಗುತ್ತಿದ್ದು, ರೈತರ ಭಾಗ್ಯದ ಬಾಗಿಲು ತೆರೆಯಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

    ಇಂಡಿ ತಾಲೂಕಿನ ಹೊರ್ತಿ ಗ್ರಾಮದಲ್ಲಿ ಗುರುವಾರ ಕೃಷ್ಣಾ ಭಾಗ್ಯ ಜಲನಿಗಮದಿಂದ ಹಮ್ಮಿಕೊಂಡಿದ್ದ ರೇವಣಸಿದ್ಧೇಶ್ವರ ಏತ ನೀರಾವರಿ ಹಾಗೂ ಇಂಡಿ ತಾಲೂಕಿನ 16 ಕೆರೆಗಳಿಗೆ ನೀರು ತುಂಬುವ ಯೋಜನೆಯ ಶಂಕು ಸ್ಥಾಪನೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

    ಹೊರ್ತಿ ರೇವಣಸಿದ್ಧೇಶ್ವರ ಏತ ನೀರಾವರಿ ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆಯ ಸಂತ್ರಸ್ಥ ರೈತರಿಗೆ ಪರಿಹಾರ ಕೊಡುವ ಕಾರ್ಯ ಈ ಭಾಗದ ರೈತರಿಗೆ ದೊಡ್ಡ ಪುಷ್ಠಿ ನೀಡಲಿದೆ. ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳದಿಂದ ಈ ಭಾಗಕ್ಕೆ 80 ಟಿಎಂಸಿ ನೀರು ಸಿಗಲಿದೆ. ಆ ಕಾರ್ಯ ಕೈಗೂಡುವ ಪೂರ್ವ ಕೈಗೊಂಡ ಈ ಎರಡು ಯೋಜನೆಗಳು ದೊಡ್ಡಮಟ್ಟದಲ್ಲಿ ಸಹಕಾರಿಯಾಗಲಿವೆ ಎಂದರು.

    ನೀರಾವರಿ ಯೋಜನೆ ವಿವರ
    ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3 ಆರಂಭಿಸಿದ್ದು ಬಸವರಾಜ ಬೊಮ್ಮಾಯಿ. ಸಾಮಾನ್ಯವಾಗಿ ನನ್ನ ಹೆಸರು ನಾನೇ ಹೇಳಿಕೊಳ್ಳುವುದಿಲ್ಲವಾದರೂ ಅನಿವಾರ್ಯ ಎಂಬ ಕಾರಣಕ್ಕೆ ಪ್ರಸ್ತಾಪಿಸುತ್ತಿದ್ದೇನೆ ಎಂದ ಬೊಮ್ಮಾಯಿ, ಈ ಹಿಂದೆ ನೀರಾವರಿ ಮಂತ್ರಿ ಆಗಿದ್ದಾಗ ಈ ಭಾಗದ ಚಿಮ್ಮಲಗಿ, ಮುಳವಾಡ ಏತ ನೀರಾವರಿಗೆ ಅಡಿಗಲ್ಲು ಹಾಕಿದ್ದೆ. ನಸುಕಿನ ಐದು ಗಂಟೆಗೆ ಅಡಿಗಲ್ಲು ಹಾಕಿ ಬದ್ದತೆ ಮೆರೆದವನು ನಾನು. ಮಲ್ಲಾಬಾದ, ಕೊಪ್ಪಳ ಏತ ನೀರಾವರಿ ಮಾಡಿದ್ದು ನಾನು. ಅಣಚಿ ಕೆರೆ ತುಂಬುವ ಯೋಜನೆಗೆ ಬಾರಿಗೆ ಚಾಲನೆ ನೀಡಿದೆ. ಇದೀಗ ರೇವಣಸಿದ್ಧೇಶ್ವರ ಏತ ನೀರಾವರಿ ಯೋಜನೆಗೆ ಚಾಲನೆ ನೀಡಲಾಗುತ್ತಿದೆ ಎಂದರು.
    ಕೃಷ್ಣೆ ನೀರು ಹಾಗೂ ಮಣ್ಣು ದೇವರು ಕೊಟ್ಟ ವರ. ಕೃಷ್ಣಾ ನದಿ ಭಾಗದಲ್ಲಿ ಉತ್ಪಾದನೆಯಾಗುವ ಹಾಲು ಅತ್ಯಂತ ಉತ್ಕೃಷ್ಟ. ಕಬ್ಬಿನ ಇಳುವರಿ ಹೆಚ್ಚಾಗಿದೆ. ಇದಕ್ಕೆ ಇಲ್ಲಿನ ಮಣ್ಣಿನ ಗುಣ ಕಾರಣ. ಕೃಷ್ಣೆ ಮಣ್ಣಿಗೆ ನೀರಿನ ಜೊತೆ ಬೆವರು ಹರಿಸಿದರೆ ಈ ನೆಲ ಬಂಗಾರ ಬೆಳೆಯಲಿದೆ ಎಂದರು.
    ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ರೇವಣಸಿದ್ಧೇಶ್ವರ ಏತ ನೀರಾವರಿ ಯೋಜನೆ ಇತಿಹಾಸದಲ್ಲಿ ಬರೆದಿಡುವಂಥದ್ದು. ಕೇಂದ್ರದ ಮಂತ್ರಿಯಾಗಿ, ಲೋಕಸಭೆ ಸದಸ್ಯನಾಗಿ, ಶಾಸಕನಾಗಿ ಇಂಥ ಅವಕಾಶಕ್ಕಾಗಿ 20 ವರ್ಷ ಕಾದಿದ್ದೆ. ನನ್ನ ಸಹೋದರ ಗೋವಿಂದ ಕಾರಜೋಳ ಜಲಸಂಪನ್ಮೂಲ ಸಚಿವರಾದ ಬಳಿಕ, ನನ್ನ ರಾಜಕೀಯ ಗುರುಗಳಾದ ಎಸ್.ಆರ್. ಬೊಮ್ಮಾಯಿ ಪುತ್ರ ಬಸವರಾಜ ಸಿಎಂ ಆದ ಬಳಿಕ ಅಂಥದ್ದೊಂದು ಅವಕಾಶ ಸಿಕ್ಕಿತು. ಇದೀಗ ಮೊದಲ ಹಂತದ ಯೋಜನೆಗೆ ಚಾಲನೆ ನೀಡಿದ್ದು ಚುನಾವಣೆ ಪೂರ್ವದಲ್ಲಿಯೇ ಎರಡನೇ ಹಂತದ ಯೋಜನೆಗೆ ಅನುದಾನ ನೀಡಬೇಕೆಂದು ಆಗ್ರಹಿಸಿದರು.

    ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಬೇಡ : ಅಧ್ಯಕ್ಷತೆ ವಹಿಸಿದ್ದ ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿ, ಕರ್ನಾಟಕದ ಎರಡನೇ ರಾಜಸ್ಥಾನ ವಿಜಯಪುರ ಜಿಲ್ಲೆ. ನೀರಿಗಾಗಿ ತತ್ತರಿಸಿದವರು ನಾವು. ಕುಡಿಯುವ ನೀರಿಗಾಗಿ ಬಳಲಿದವರು ನಾವು. ಬ್ರಿಟಿಷರು ಸಹ ಬರಗಾಲ ನಿವಾರಣೆ ಕೇಂದ್ರ ಸ್ಥಾಪಿಸಿದ್ದರು. ಅಂಥ ಕಷ್ಟದ ದಿನ ಅನುಭವಿಸಿದೆವು ನಾವು. 1964 ರಲ್ಲಿ ಲಾಲ ಬಹಾದ್ದೂರ ಶಾಸ್ತ್ರೀ ಅವರು ಆಲಮಟ್ಟಿ ಜಲಾಶಯಕ್ಕೆ ಅಡಿಗಲ್ಲು ಸ್ಥಾಪಿಸಿದರು. ಕೃಷ್ಣಾ ಮೇಲ್ದಂಡೆ ಯೋಜನೆ ಮೂಲಕ ನೀರಾವರಿ ಕಲ್ಪಿಸಿದವರನ್ನು ನಾವಿಂದು ಸ್ಮರಿಸಬೇಕಿದೆ ಎಂದರು.
    ಅನೇಕ ಸರ್ಕಾರಗಳು ನೀರಾವರಿಗೆ ತಮ್ಮದೇ ಕೊಡುಗೆ ನೀಡಿವೆ. ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ ಅದು ಮುಖ್ಯ ಅಲ್ಲ. ಈ ಭಾಗದ ಬೇಡಿಕೆ ಈಡೇರಿಸುವುದು ಮುಖ್ಯ. ಆಲಮಟ್ಟಿ ಜಲಾಶಯ ಎತ್ತರಿಸಿ 130 ಟಿಎಂಸಿ ನೀರಿನ ಪೈಕಿ ಜಿಲ್ಲೆಗೆ ಸಿಗಬೇಕಾದ 80 ಟಿಎಂಸಿ ನೀರು ಬಳಸಿಕೊಳ್ಳುವ ಕಾರ್ಯವಾಗಬೇಕು. ಗುತ್ತಿ ಬಸವಣ್ಣ, ತುಬಚಿ ಬಬಲೇಶ್ವರ, ಮುಳವಾಡ ಹೀಗೆ ಅನೇಕ ಏತ ನೀರಾವರಿ ಯೋಜನೆಗಳು ಜಿಲ್ಲೆಯ ಜನರಿಗೆ ಸಮಾಧಾನ ತರಿಸಿವೆ. ಇನ್ನೂ ಹೆಚ್ಚಿನ ನೀರಾವರಿಯ ಅಗತ್ಯವಿದೆ. ಅದನ್ನು ಪಕ್ಷಾತೀತವಾಗಿ ಶ್ರಮಿಸಿ ಅನುಷ್ಟಾನಗೊಳಿಸಬೇಕು ಎಂದರು.
    ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆ ಪಕ್ಷಾತೀತವಾಗಿ, ಜಾತ್ಯತೀತವಾಗಿ ನಡೆದ ಹೋರಾಟದ ಫಲ. ಇದರಲ್ಲಿ ರಾಜಕೀಯ ಬೇಡ. ಈ ಯೋಜನೆ ಸಂಪೂರ್ಣ ಸಫಲತೆ ಹೊಂದಲಿ. 16 ಕೆರೆ ತುಂಬುವ ಯೋಜನೆ ಸಾಕಾರಗೊಳ್ಳಲಿ ಎಂದರು.

    ಅನೇಕರ ಹೋರಾಟದ ಫಲ : ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ನೀರಾವರಿ ಹೋರಾಟ ಎಂಬುದು ಬಾಬುರಾವ ಹುಜರೆ, ಮುರುಗೆಪ್ಪ ಸುಗಂದಿ ಹೀಗೆ ಅನೇಕರಿಂದ ಆರಂಭವಾಯಿತು. ಅಣ್ಣಪ್ಪ ಖೈನೂರ ಸಹ ಹೋರಾಟ ಮಾಡಿದ್ದು, ನಾನೂ ಹೋರಾಟ ಮಾಡಿದ್ದೇನೆ. ಯಾವುದೇ ಹೋರಾಟ ವ್ಯರ್ಥ ಆಗಲ್ಲ ಎಂಬುದಕ್ಕೆ ಇದೇ ಸಾಕ್ಷಿ ಎಂದರು.
    ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಪ್ರಾಸ್ತಾವಿಕವಾಗಿ ಮಾತನಾಡಿ, ಹೊರ್ತಿ ರೇವಣಸಿದ್ಧೇಶ್ವರ ಏತ ನೀರಾವರಿ ಯೋಜನೆಗಾಗಿ ಅನೇಕ ವರ್ಷಗಳ ಹೋರಾಟ ನಡೆದಿದೆ. ಶಾಸಕ ಯಶವಂತರಾಯಗೌಡ ಪಾಟೀಲ ಕೂಡ ಪ್ರಶ್ನೆ ಕೇಳಿದ್ದರು. ನಮ್ಮದೇ ಜಿಲ್ಲೆಯವರು ನೀರಾವರಿ ಮಂತ್ರಿಯಾಗಿದ್ದರೂ ರೇವಣಸಿದ್ಧೇಶ್ವರ ಏತ ನೀರಾವರಿ ಮಾಡಲಾಗಲಿಲ್ಲ. ಹೀಗಾಗಿ ನೀವಾದರೂ ಮಾಡಿಕೊಡಿ ಎಂದಿದ್ದರು. ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಹ ಒತ್ತಾಯಿಸಿದ್ದರು. ಸಂಸದ ರಮೇಶ ಜಿಗಜಿಣಗಿ ಸಾಕಷ್ಟು ಪತ್ರ ಬರೆದಿದ್ದರು. ಹೀಗಾಗಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸಲಾಗಿ ಅವರು ಸಮ್ಮತಿಸಿದ ಪರಿಣಾಮ ಇಂದು ಯೋಜನೆ ಅನುಷ್ಟಾನಗೊಳ್ಳುತ್ತಿದೆ ಎಂದರು.
    ಬಹುಶಃ ಐದು ವರ್ಷದ ಅಧಿಕಾರವಧಿ ಸಿಕ್ಕಿದ್ದೇ ಆದರೆ ಸಂಪೂರ್ಣ ನೀರು ಹರಿಸುತ್ತಿದ್ದೆ. ಆದರೆ ಇರುವ ಒಂದು ವರ್ಷದ ಅವಧಿಯಲ್ಲಿ ವಿಜಯಪುರ- ಬಾಗಲಕೋಟೆ ಅವಳಿ ಜಿಲ್ಲೆಗೆ ಹತ್ತು ಸಾವಿರ ಕೋಟಿ ರೂ. ಅನುದಾನ ನೀಡಿದ್ದು ದಾಖಲೆಯೇ ಸರಿ ಎಂದರು.
    ಸಚಿವ ಮುರುಗೇಶ ನಿರಾಣಿ, ಶಾಸಕರಾದ ರಮೇಶ ಭೂಸನೂರ, ಸೋಮನಗೌಡ ಪಾಟೀಲ ಸಾಸನೂರ, ವಿಪ ಸದಸ್ಯ ಹಣಮಂತ ನಿರಾಣಿ, ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಚಂದ್ರಶೇಖರ ಕವಟಗಿ, ಎಂ.ಎಸ್. ರುದ್ರಗೌಡರ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಮುಖಂಡ ದಯಾಸಾಗರ ಪಾಟೀಲ, ಹೊರ್ತಿ ಗ್ರಾಪಂ ಅಧ್ಯಕ್ಷ ರೇವಣಸಿದ್ದ ಸಾ.ತೇಲಿ ಮತ್ತಿತರರಿದ್ದರು. ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಕೃಷ್ಣಮೂರ್ತಿ ಡಿ. ಕುಲಕರ್ಣಿ ಸ್ವಾಗತಿಸಿದರು.

    ಪರಸ್ಪರ ಕಾಲೆಳೆದ ನಾಯಕರು
    ರೇವಣಸಿದ್ಧೇಶ್ವರ ಏತ ನೀರಾವರಿ ಯೋಜನೆ ಶಂಕು ಸ್ಥಾಪನೆ ಸರ್ಕಾರಿ ಕಾರ್ಯಕ್ರಮವಾದರೂ ಜನಪ್ರತಿನಿಧಿಗಳು ತಮ್ಮ ತಮ್ಮ ಹಿತಾಸಕ್ತಿಗೆ ಬಳಸಿಕೊಂಡಿದ್ದು ಕಂಡು ಬಂತಲ್ಲದೇ ಭಾಷಣದ ಮಧ್ಯೆ ಪರಸ್ಪರ ಕಾಲೆಳೆದಿದ್ದು ಮುಜುಗರಕ್ಕೆ ಕಾರಣವಾಯಿತು.
    ಸಂಸದ ರಮೇಶ ಜಿಗಜಿಣಗಿ ಭಾಷಣದ ಸಂದರ್ಭ ಶಾಸಕ ಯತ್ನಾಳ ಹೆಸರು ಪ್ರಸ್ತಾಪಿಸುತ್ತಿದ್ದಂತೆ ಜನ ಜೋರಾಗಿ ಕೂಗಿದರು. ಆಗ ಸಂಸದರು ಇನ್ನಷ್ಟು ಕೂಗಿ ಎಂದರು. ಬಳಿಕ ಯತ್ನಾಳರು ತಮ್ಮ ಭಾಷಣದಲ್ಲಿ ಕೆಲವರಿಗೆ ಯತ್ನಾಳ ಬಗ್ಗೆ ಕೂಗು ಹೊಡೆದರೆ ತ್ರಾಸ್ ಆಗುತ್ತದೆ. ಜನ ಅಭಿಮಾನದಿಂದ ಕೂಗು ಹಾಕುತ್ತಾರೆ. ಚಾಮರಾಜನಗರದಿಂದ ಬೀದರ್‌ವರೆಗೆ ಎಲ್ಲಿಯೇ ಹೋದರೂ ನನಗೆ ಕೂಗು ಹಾಕುತ್ತಾರೆ ಎಂದರು.
    ಯತ್ನಾಳರ ಫೋಟೋ ಹಾಕಲೂ ಹಿಂದೆ ಮುಂದೆ ನೋಡುವವರಿದ್ದಾರೆ. ಆದರೆ, ಅವರಿಗೆ ಗೊತ್ತಿಲ್ಲ, ನನ್ನ ಫೋಟೊ ಹಾಕಿದರೆ 5-6 ಸಾವಿರ ಮತ ಸಿಗುತ್ತವೆ ಎಂದ ಯತ್ನಾಳ, ನಾನೂ ಪಕ್ಷಕ್ಕಾಗಿ ದುಡಿದಿದ್ದೇನ್ರೋ ತಮ್ಮಗೋಳಾ ಎಂದರು.
    ಶಾಸಕ ಯಶವಂತರಾಯಗೌಡ ಪಾಟೀಲರು ತಮ್ಮ ಅಧ್ಯಕ್ಷೀಯ ಭಾಷಣದ ವೇಳೆ ಇದೊಂದು ಸರ್ಕಾರಿ ಕಾರ್ಯಕ್ರಮ ಎಂಬ ಪರಿಜ್ಞಾನದೊಂದಿಗೆ ನಾನು ಮಾತನಾಡುತ್ತೇನೆ ಎನ್ನುವ ಮೂಲಕ ಆ ಪರಿಜ್ಞಾನ ಇನ್ನುಳಿದವರಿಗೂ ಅನ್ವಯಿಸುವಂತೆ ಮಾಡಿದ್ದು ಜನರ ಗಮನ ಸೆಳೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts