More

    ರೆಸ್ಟೋರೆಂಟ್, ಹೋಟೆಲ್, ಕಲ್ಯಾಣ ಮಂಟಪ, ಪಬ್‌ಗಳಲ್ಲಿ ಅಗ್ನಿ ಸುರಕ್ಷತ ಕ್ರಮಗಳ ಪರಿಶೀಲನೆ

    ಬೆಂಗಳೂರು: ಕೋರಮಂಗಲದ ಮಡ್ ಪೈಪ್ ಕೆಫೆ ಅಗ್ನಿ ದುರಂತ ಬೆನ್ನಲ್ಲೆ ನಗರ ಎಲ್ಲ ರೆಸ್ಟೋರೆಂಟ್, ಪಬ್ ಮತ್ತು ಹೋಟೆಲ್ಗಳಲ್ಲಿ ಅಗ್ನಿ ಸುರಕ್ಷತೆ ಬಗ್ಗೆ ಪರಿಶೀಲನೆ ನಡೆಸಲು ಅಧಿಕಾರಿಗಳಿಗೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಸೂಚಿಸಿದ್ದಾರೆ.

    ಕೋರಮಂಗಲದ ಫೋರಂ ಮಾಲ್ ಸಮೀಪ ಮಡ್ ಪೈಪ್ ಕೆಫೆ ಅಗ್ನಿ ದುರಂತ ಸ್ಥಳಕ್ಕೆ ಗುರುವಾರ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಜಿ. ಪರಮೇಶ್ವರ್, ಕೆಫೆಯಲ್ಲಿ ಯಾವ ರೀತಿ ಸಿಲಿಂಡರ್ ಸ್ಫೋಟವಾಗಿದೆ ಎಂಬುದು ಖಚಿತವಾಗಿಲ್ಲ. ಕೆಫೆಯಲ್ಲಿ ದಾಸ್ತಾನು ಮಾಡಿದ್ದ ಸಿಲಿಂಡರ್‌ಗಳು ಒಂದರ ನಂತರ ಒಂದು ಸಿಡಿದು ಭಾರಿ ಅಗ್ನಿ ಅವಘಡ ಸಂಭವಿಸಿದೆ.

    ಕಟ್ಟಡದ ಮೇಲೆ ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಲಾಗಿತ್ತು. ಬಿಬಿಎಂಪಿಯಿಂದ ಕ್ಯಾಟರಿಂಗ್ ನಡೆಸಲು 3 ವರ್ಷಕ್ಕೆ ಪರವಾನಗಿ ನೀಡಲಾಗಿತ್ತು. ಆದರೆ, ಇಲ್ಲಿ ಅಕ್ರಮವಾಗಿ ರೆಸ್ಟೋರೆಂಟ್ ಮತ್ತು ಹುಕ್ಕಾ ಬಾರ್ ನಡೆಸುತ್ತಿರುವುದು ಕಂಡುಬಂದಿದೆ. ಪರವಾನಗಿ ಕೊಟ್ಟ ಬಿಬಿಎಂಪಿ ಅಧಿಕಾರಿಗಳು ಒಮ್ಮೆಯೂ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿರುವ ಮಾಹಿತಿ ಇಲ್ಲ. ಆದರಿಂದ ಕಟ್ಟಡ ಮತ್ತು ಕೆೆ ಮಾಲೀಕರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಲಾಗಿದೆ.

    ಅತ್ತಿಬೆಲೆ ಪಟಾಕಿ ಗೋದಾಮು ಮತ್ತು ಕೋರಮಂಗಲದ ಕೆಫೆ ಅಗ್ನಿ ದುರಂತವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಈ ಹಿನ್ನಲೆಯಲ್ಲಿ ನಗರದ ಹೋಟೆಲ್, ಕೆಫೆ ಹಾಗೂ ರೆಸ್ಟೋರೆಂಟ್‌ಗಳಲ್ಲಿ ಅಗ್ನಿ ಸುರಕ್ಷತೆ ಸಂಬಂಧ ತಪಾಸಣೆ ನಡೆಸಲು ಸೂಚನೆ ನೀಡಲಾಗಿದೆ. ಅದರಂತೆ ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಿಂದ ಈಗಾಗಲೇ ತಪಾಸಣೆ ನಡೆಸಲಾಗುತ್ತಿದೆ.

    ಕೆಲವರು ಮಾಡುವ ತಪ್ಪಿನಿಂದ ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಾರೆ.ಈ ರೀತಿಯ ಘಟನೆಗಳು ಮರುಕಳಿಸದೆ ಎಚ್ಚರಿಕೆ ವಹಿಸಲಾಗುತ್ತದೆ. ಬೆಂಗಳೂರಿನಲ್ಲಿ ಪಟಾಕಿ ಮಾರಾಟ ಸಂಬಂಧ ಕೆಲ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಲಾಗಿದೆ ಎಂದು ಗೃಹ ಸಚಿವರು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts