ರಿಪ್ಪನ್‌ಪೇಟೆ: ಪಟ್ಟಣದ ವಿವಿಧೆಡೆ ಕೆಲದಿನಗಳಿಂದ ಗುಣಮಟ್ಟದ ವಿದ್ಯುತ್ ಸರಬರಾಜು ಮಾಡುತ್ತಿಲ್ಲ ಎಂದು ಆರೋಪಿಸಿ ಗ್ರಾಮ ಪಂಚಾಯಿತಿ ಸದಸ್ಯರಾದ ಮಲ್ಲಿಕಾರ್ಜುನ, ಗಣಪತಿ ನೇತೃತ್ವದಲ್ಲಿ ಗವಟೂರು ಗ್ರಾಮಸ್ಥರು ಮೆಸ್ಕಾಂ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ಅನಿಯಮಿತ ವಿದ್ಯುತ್ ಕಡಿತದಿಂದ ನಾಗರಿಕರಿಗೆ ತೊಂದರೆಯಾಗುತ್ತಿದೆ. ವಿದ್ಯುತ್ ಪರಿವರ್ತಕಗಳು ಶಿಥಿಲಗೊಂಡಿವೆ. ಬೇರೆ ಪರಿವರ್ತಕಗಳನ್ನು ಅಳವಡಿಸಿದರೂ ಕಾರ್ಯಾರಂಭಿಸಿ ಕೆಲವೇ ತಾಸುಗಳಲ್ಲಿ ಕೆಟ್ಟುಹೋಗುತ್ತಿವೆ. ಕಳಪೆ ಪರಿವರ್ತಕ ಅಳವಡಿಸಿದ್ದರಿಂದಲೇ ವಿದ್ಯುತ್ ಸಮಸ್ಯೆಗೆ ಕಾರಣವಾಗಿದೆ. ಅಧಿಕಾರಿಗಳು ಜನರಿಗೆ ವಿದ್ಯುತ್ ನೀಡುವಲ್ಲಿ ನಿರ್ಲಕ್ಷೃ ತೋರಿದ್ದು, ಸಾರ್ವಜನಿಕರು ಪದೇಪದೆ ತೊಂದರೆ ಅನುಭವಿಸುವಂತಾಗಿದೆ. ಗ್ರಾಮಗಳಲ್ಲಿ ಕೆಟ್ಟು ಹೋದ ಪರಿವರ್ತಕವನ್ನು ಬದಲಾಯಿಸಿ ಗುಣಮಟ್ಟದ ಪರಿವರ್ತಕ ಅಳವಡಿಸಿ ವಿದ್ಯುತ್ ನೀಡುವವರೆಗೂ ಪ್ರತಿಭಟನೆ ಮುಂದುವರಿಸುತ್ತೇವೆ ಎಂದು ಪಟ್ಟುಹಿಡಿದರು. ಸ್ಥಳಕ್ಕಾಗಮಿಸಿದ ಮೆಸ್ಕಾಂ ಎಇಇ ಚಂದ್ರಶೇಖರ ಪರಿವರ್ತಕ ಅಳವಡಿಸಿಕೊಡುವ ಭರವಸೆ ನೀಡಿದ್ದರಿಂದ ಪ್ರತಿಭಟನೆ ಕೈಬಿಡಲಾಯಿತು.
ಗ್ರಾಮಸ್ಥರಾದ ಮಂಜಪ್ಪ, ಮುರುಗೇಂದ್ರ, ಮಣಿಕಂಠ, ಸತ್ಯನಾರಾಯಣ, ವೀರಭದ್ರಪ್ಪ, ರಾಮು ಇತರರಿದ್ದರು.