More

    Web Exclusive| ಕಾಡಾನೆ ಹಿಂಡುಗಳಿಂದ ಬೆಳೆ ಹಾನಿ ತಡೆಗೆ ವಿನೂತನ ತಂತ್ರ!

    | ಶಶಿಧರ ಕುಲಕರ್ಣಿ ಮುಂಡಗೋಡ

    ಹೊಲಗಳಿಗೆ ದಾಳಿ ಇಟ್ಟು ಬೆಳೆ ಹಾನಿ ಮಾಡುವ ಆನೆಗಳ ಹಿಂಡನ್ನು ನಿಯಂತ್ರಿಸಲು ಅರಣ್ಯ ಇಲಾಖೆ ಮುಂದಾಗಿದೆ. ಯಲ್ಲಾಪುರದ ವನ್ಯಜೀವಿ ಸಂಶೋಧನೆ ಮತ್ತು ಸಂರಕ್ಷಣಾ ಸೊಸೈಟಿಯವರು ಈ ನಿಟ್ಟಿನಲ್ಲಿ ಸಹಕಾರ ನೀಡಿದ್ದಾರೆ.

    ಮುಂಡಗೋಡ ತಾಲೂಕಿಗೆ ಪ್ರತಿ ವರ್ಷ ಅಕ್ಟೋಬರ್-ನವೆಂಬರ್ ತಿಂಗಳಿಗೆ ವರ್ಷದ ಅತಿಥಿಗಳಂತೆ ಆನೆಗಳು ದಂಡು-ದಂಡಾಗಿ ಬಂದು ಬೆಳೆದು ನಿಂತ ರೈತರ ಪೈರನ್ನು ತಿಂದು-ತುಳಿದು ಹಾನಿ ಮಾಡುತ್ತವೆ. ಇವುಗಳ ನಿಯಂತ್ರಣಕ್ಕೆ ರೈತರ ಹೊಲಗಳಲ್ಲಿ ಅಲಾರಾಂ ಮತ್ತು ಫ್ಲಾಶ್ ಲೈಟ್ ಅಳವಡಿಕೆಗೆ ಮಾಡಿಸುತ್ತಾ ಇವೆ.

    2010ರಿಂದ ಜಿಲ್ಲೆಯ ಕೆನರಾ ವೃತ್ತದ ಯಲ್ಲಾಪುರ, ಹಳಿಯಾಳ ಮತ್ತು ಕಾಳಿ ಹುಲಿ ಸಂರಕ್ಷಿತ ಪ್ರದೇಶ (ಕೆಟಿಆರ್) ವ್ಯಾಪ್ತಿಯಲ್ಲಿ ಬರುವ ಎಲ್ಲ 13 ವಲಯಗಳಲ್ಲಿ ರೈತರಿಗೆ ಅತಿ ಕಡಿಮೆ 400-450 ರೂ. ಖರ್ಚಿನಲ್ಲಿ ಹೊಲದ ಅಂಚಿನಲ್ಲಿ 5 ವರ್ಷ ಬಾಳಿಕೆ ಬರುವ ಟ್ರಿಪ್ ಅಲಾರಾಂ ಅಳವಡಿಸಲಾಗುತ್ತಿದೆ. ರೈತನ ಹೊಲದಿಂದ ಸುಮಾರು 200 ಮೀ. ಅಂತರದವರೆಗೆ ಇದರ ಸೈರನ್ ಶಬ್ದ ಕೇಳುತ್ತದೆ. ಸ್ವತಃ ರೈತನೇ ಬಂದು ಬಂದ್ ಮಾಡುವವರೆಗೆ ಸೈರನ್ ಬಂದ್ ಆಗುವುದಿಲ್ಲ. ಕಳೆದ 5-6 ವರ್ಷಗಳಿಂದ ಟ್ರಿಪ್ ಅಲಾರಾಂ ಅಳವಡಿಕೆಯಿಂದ ಹಳಿಯಾಳ ಮತ್ತು ಯಲ್ಲಾಪುರ ಭಾಗಗಳಲ್ಲಿ ಕಾಡಾನೆ ಹಾವಳಿ ಕಡಿಮೆ ಆಗಿದೆ.

    ಮೂರು ವರ್ಷದ ಹಿಂದೆ ಪ್ರಾಯೋಗಿಕವಾಗಿ ತಾಲೂಕಿನ ಗುಂಜಾವತಿ ಗ್ರಾಮದ ಹೊಲಗಳಲ್ಲಿ ಟ್ರಿಪ್ ಅಲಾರಾಂ ಅಳವಡಿಸಿದ ನಂತರ ಆನೆ ಬಂದರೂ ಒಂದೇ ದಿವಸಕ್ಕೆ ವಾಪಸಾಗುತ್ತಿದ್ದು ಸಂಪೂರ್ಣವಾಗಿ ಬೆಳೆ ಹಾನಿ ಹತೋಟಿಗೆ ಬಂದಿದೆ. ಮುಂಡಗೋಡ ವಲಯದ ಕ್ಯಾತನಳ್ಳಿ, ಕವಲಗಿ ಮತ್ತು ಕಾತೂರ ವಲಯದ ಸುಳ್ಳಳ್ಳಿ, ಬಸವನಕೊಪ್ಪ ಗ್ರಾಮಗಳಲ್ಲಿ ಸಂಪೂರ್ಣವಾಗಿ ಟ್ರಿಪ್ ಅಲಾರಾಂ ಅಳವಡಿಸಲಾಗಿದೆ.

    ಸೋಲಾರ್ ಚಾರ್ಜ್​ನಲ್ಲಿ ನಡೆಯುವ ಫ್ಲಾ್ಯಶ್ ಲೈಟ್ ಕೂಡ ಅಳವಡಿಸಲಾಗುತ್ತಿದ್ದು ಇದಕ್ಕೆ ಸುಮಾರು 3500 ಸಾವಿರ ರೂ. ಖರ್ಚು ತಗಲುತ್ತದೆ. ಹಗಲು ಬಂದ್ ಇದ್ದು ರಾತ್ರಿ ವೇಳೆ ಮಿನುಗುತ್ತದೆ. ಒರಿಸ್ಸಾ ಮತ್ತು ಮಹಾರಾಷ್ಟ್ರಗಳಲ್ಲಿ ಒಳ್ಳೆಯ ಫಲಿತಾಂಶ ಸಿಕ್ಕಿದೆ. ಮೊದಲ ಬಾರಿ ಪ್ರಾಯೋಗಿಕವಾಗಿ ಬ್ಯಾನಳ್ಳಿ ಮತ್ತು ಮಲವಳ್ಳಿ ಗ್ರಾಮಗಳ ಹೊಲಗಳಲ್ಲಿ ಅಳವಡಿಸಲಾಗಿದೆ.

    ಆನೆ ದಾರಿ
    ದಾಂಡೇಲಿಯ ಕಾಳಿ ಹುಲಿ ಸಂರಕ್ಷಿತ ಪ್ರದೇಶ (ಕೆಟಿಆರ್)ದಲ್ಲಿ 70-90 ಕಾಡಾನೆಗಳಿವೆ. ಇಲ್ಲಿಂದ ಹೊರಡುವ ಆನೆಗಳು ಮೂರು ಭಾಗಗಳಾಗಿ ಬೇರ್ಪಡುತ್ತವೆ. ಹಳಿಯಾಳ, ಖಾನಾಪುರ, ಲೋಂಡಾ, ಮೂಲಕ ಬೆಳಗಾವಿ ಕಡೆಗೆ ಒಂದು ಕಾಡಾನೆ ಹಿಂಡು ಚಲಿಸುತ್ತದೆ. ಸಾಂಬ್ರಾಣಿ, ಹಳಿಯಾಳ ಮೂಲಕ ಸುತ್ತಮುತ್ತ ಇನ್ನೊಂದು ಹಾಗೂ ಮತ್ತೊಂದು ಗುಂಪು ಭಗವತಿ ವಲಯದಿಂದ ಕಿರವತ್ತಿ, ಮುಂಡಗೋಡ, ಕಾತೂರ, ಹಾನಗಲ್ಲ ಮೂಲಕ ದಾವಣಗೆರೆ ಮತ್ತು ಚನ್ನಗಿರಿವರೆಗೂ ಚಲಿಸುತ್ತವೆ. ಫೆಬ್ರವರಿ-ಮಾರ್ಚ್ ತಿಂಗಳಿಗೆ ದಾಂಡೇಲಿಯತ್ತ ವಾಪಸ್ ಮುಖ ಮಾಡುತ್ತವೆ.

    ಬೆಳೆಗಳ ಮೇಲೆ ಕಾಡಾನೆಗಳ ದಾಳಿ ಬಹಳ ವರ್ಷಗಳಿಂದ ನಡೆಯುತ್ತಿದೆ. ಯಾವ ರೈತರೂ ಹೊಲ ಕಾಯುವುದಿಲ್ಲ. ಬೆಳೆ ಹಾನಿಗೆ ಅರಣ್ಯ ಇಲಾಖೆಯೇ ಹೊಣೆ ಎಂದು ಭಾವಿಸದೇ ರೈತರು ಅತಿ ಕಡಿಮೆ ಖರ್ಚಿನ ಪರಿಕರಗಳನ್ನು ಅಳವಡಿಸಿಕೊಳ್ಳುವ ಮುನ್ನೆಚ್ಚರಿಕೆ ಕ್ರಮದಿಂದ ಶೇ. 80ರಷ್ಟು ಬೆಳೆ ಹಾನಿ ತಪ್ಪಿಸಿಕೊಳ್ಳಬಹುದು. ಅತಿಕ್ರಮಣ ಮಾಡಿದ ರೈತರು ತಮ್ಮ ಬೆಳೆಗಳನ್ನು ಕಡ್ಡಾಯವಾಗಿ ತಾವೇ ರಕ್ಷಿಸಿಕೊಳ್ಳಬೇಕು.
    
    | ರವಿ ಯಲ್ಲಾಪುರ ವನ್ಯಜೀವಿ ಸಂಶೋಧನೆ ಮತ್ತು ಸಂರಕ್ಷಣಾ ಸೊಸೈಟಿ ಯೋಜನಾಧಿಕಾರಿ
    ಇದೊಂದು ಹೊಸ ಪ್ರಯೋಗವಾಗಿದ್ದು ತುಂಬಾ ಪ್ರಯೋಜನಕಾರಿಯಾಗಿದೆ. ಕಾಡಾನೆಗಳು ಬರುವುದು ಕಡಿಮೆಯಾಗಿದೆ. ಕಿರವತ್ತಿಯಲ್ಲಿ ಮೊದಲು ಪರಿಚಯಿಸಿ ಈಗ ಮುಂಡಗೋಡ ತಾಲೂಕಿನಲ್ಲಿ ಜಾರಿ ಮಾಡುತ್ತಿದ್ದೇವೆ. ಕ್ಯಾಮರಾ ಟ್ರ್ಯಾಕ್ ಕೂಡ ಅಳವಡಿಸುತ್ತಿದ್ದೇವೆ. ರೈತರು ಇವುಗಳಿಗೆ ಹಾನಿಯಾಗದಂತೆ ನಿರ್ವಹಣೆ ಮಾಡಿಕೊಂಡು ಹೋದರೆ ಅವರಿಗೇ ಅನುಕೂಲ.
    
    | ಗೋಪಾಲಕೃಷ್ಣ ಹೆಗಡೆ ಡಿಎಫ್​ಒ ಯಲ್ಲಾಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts