More

    ಇನ್ಫೋಸಿಸ್-ಜೆಎಸ್‌ಎಸ್ ಮಹಾವಿದ್ಯಾಪೀಠ ಒಡಂಬಡಿಕೆ

    ಮೈಸೂರು: ನಗರದ ಜೆಎಸ್‌ಎಸ್ ಮಹಾವಿದ್ಯಾಪೀಠವು ಇನ್ಫೋಸಿಸ್ ಸಂಸ್ಥೆಯೊಂದಿಗೆ ಇನ್ಫೋಸಿಸ್ ಸ್ಪ್ರಿಂಗ್‌ಬೋರ್ಡ್ ಯೋಜನೆ ಕುರಿತು ಒಡಂಬಡಿಕೆ ಮಾಡಿಕೊಂಡಿದೆ.


    ಒಡಂಬಡಿಕೆಗೆ ಸಹಿ ಮಾಡಿದ ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ. ಸಿ.ಜಿ.ಬೆಟಸೂರಮಠ ಮಾತನಾಡಿ, ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಡಿಜಿಟಲ್ ಸಾಕ್ಷರತೆ ಪ್ರಮುಖ ಅಂಶವಾಗಿದ್ದು, ಇದನ್ನು ಸಾಧಿಸಲು ಇನ್ಫೋಸಿಸ್ ಸಂಸ್ಥೆ ಸ್ಪ್ರಿಂಗ್‌ಬೋರ್ಡ್ ಯೋಜನೆಯನ್ನು ಪ್ರಾರಂಭಿಸಿದೆ. ವಿದ್ಯಾರ್ಥಿಗಳು ಡಿಜಿಟಲ್ ಸಾಕ್ಷರರಾಗಲು ಮತ್ತು ಅವರ ಭವಿಷ್ಯವನ್ನು ಉಜ್ವಲಗೊಳಿಸಲು ಅನುವು ಮಾಡಿಕೊಡುವ ಕಲಿಕೆಯ ವ್ಯವಸ್ಥೆ ಇದಾಗಿದೆ ಎಂದರು.


    ವಿದ್ಯಾರ್ಥಿಗಳು ತಮ್ಮ ಕುಟುಂಬದ ಸದಸ್ಯರಿಗೂ ಈ ಜ್ಞಾನವನ್ನು ಯಾವುದೇ ವೆಚ್ಚವಿಲ್ಲದೆ ವಿಸ್ತರಿಸಬಹುದಾಗಿದೆ. ಈ ಯೋಜನೆಯು ನೂತನ ಶಿಕ್ಷಣ ನೀತಿ-2020 ಅಡಿಯಲ್ಲಿ ವಿನ್ಯಾಸಗೊಂಡಿದ್ದು, ಇದು ಸಮಾನ ಮತ್ತು ಅಂತರ್ಗತ ಶಿಕ್ಷಣವನ್ನು ಉದ್ದೇಶಿಸಿದೆ. ಜೆಎಸ್‌ಎಸ್ ಮಹಾವಿದ್ಯಾಪೀಠದ ಎಲ್ಲ ವಿಭಾಗಗಳ ಮುಖ್ಯಸ್ಥರು, ವಿಶ್ವವಿದ್ಯಾಲಯಗಳ ಕುಲಪತಿಗಳು ಈ ಯೋಜನೆಯ ಸದುಪಯೋಗ ಮಾಡಿಕೊಳ್ಳುವಂತೆ ತಿಳಿಸಿದರು.


    ಇನ್ಫೋಸಿಸ್ (ಶಿಕ್ಷಣ, ತರಬೇತಿ, ಅಸೆಸ್‌ಮೆಂಟ್) ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಸತೀಶ್ ನಂಜಪ್ಪ ಮಾತನಾಡಿ, ಇನ್ಫೋಸಿಸ್ ಡಿಜಿಟಲ್ ಲಿಟರಸಿ ಮಿಷನ್‌ನ ಅಡಿಯಲ್ಲಿ ಜಾರಿಗೊಳಿಸಿರುವ ಈ ಯೋಜನೆಯ ಮೂಲಕ ವಿದ್ಯಾರ್ಥಿಗಳಿಗೆ ಮೌಲ್ಯವರ್ಧಿತ ಶಿಕ್ಷಣದೊಂದಿಗೆ ಡಿಜಿಟಲ್ ಕೌಶಲ ಒದಗಿಸುತ್ತದೆ. ಈ ಯೋಜನೆ 3 ವರ್ಷಗಳ ಹಿಂದೆ ಪ್ರಾರಂಭವಾಗಿದ್ದು, ಪ್ರಸ್ತುತ 7.5 ಮಿಲಿಯನ್ ಬಳಕೆದಾರರು ಉಪಯೋಗಿಸುತ್ತಿದ್ದಾರೆ. ಇನ್ಫೋಸಿಸ್ ಸ್ಪ್ರಿಂಗ್‌ಬೋರ್ಡ್ ವೇದಿಕೆಯಲ್ಲಿ ವಿವಿಧ ಕೋರ್ಸ್‌ಗಳಿದ್ದು, ಇದು ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟರು.


    ಸ್ಪ್ರಿಂಗ್‌ಬೋರ್ಡ್ ಯೋಜನೆ ಕುರಿತು ಮಾತನಾಡಿದ ಇನ್ಫೋಸಿಸ್‌ನ ಹಿರಿಯ ವಾಣಿಜ್ಯ ವ್ಯವಸ್ಥಾಪಕಿ ಡಾ.ಎಸ್. ಮೀನಾಕ್ಷಿ, ಈ ವೇದಿಕೆಯು ಬಳಕೆದಾರರಿಗೆ ವೈವಿಧ್ಯಮಯ ವಿಷಯಗಳನ್ನು ನೀಡಲಿದ್ದು, ಕಲೆ, ವಾಣಿಜ್ಯ, ವಿಜ್ಞಾನ, ಇಂಜಿನಿಯರಿಂಗ್ ಮುಂತಾದ ಇತರ ವಿಷಯ ಒಳಗೊಂಡಿದೆ. ವೃತ್ತಿ ಆಧಾರಿತ ಶಿಕ್ಷಣವೂ ಸೇರಿದಂತೆ ಹೊಸ ಕ್ಷೇತ್ರಗಳಿಗೆ ಸಂಬಂಧಿಸಿದ 1,700 ಕೋರ್ಸ್‌ಗಳನ್ನು ಈ ವೇದಿಕೆಯು ಒದಗಿಸುತ್ತದೆ ಎಂದು ಮಾಹಿತಿ ನೀಡಿದರು.


    ಈ ಕಾರ್ಯಕ್ರಮವು ಕೌಶಲಾಭಿವೃದ್ಧಿಯನ್ನು ಸಾಧಿಸುವ ಉದ್ದೇಶ ಹೊಂದಿದೆ. ಉದ್ಯಮದ ಅಗತ್ಯಗಳಿಗೆ ಬೇಕಾದ ವಿಶೇಷ ಡಿಜಿಟಲ್ ಕೌಶಲ, ಡಿಜಿಟಲ್ ಸಾಕ್ಷರತೆಯನ್ನು ಬೆಂಬಲಿಸುತ್ತದೆ. ಕಾರ್ಯಾಗಾರಗಳು, ವಿಚಾರಗೋಷ್ಠಿಗಳು, ಇಂಟರ್ನ್‌ಶಿಪ್ ಮೊದಲಾದ ಅಭಿವೃದ್ಧಿ ಕಾರ್ಯಕ್ರಮ ಆಯೋಜಿಸುವ ಮೂಲಕ ಗ್ರಾಮೀಣ ವಿದ್ಯಾರ್ಥಿಗಳಿಗೆ ನೆರವು ನೀಡುತ್ತದೆ. ಕರ್ನಾಟಕವೂ ಸೇರಿದಂತೆ ಆರು ರಾಜ್ಯಗಳಲ್ಲಿ ಈ ಕಾರ್ಯಕ್ರಮ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಹೇಳಿದರು


    ಈ ಯೋಜನೆ ಕುರಿತು ಇನ್ಫೋಸಿಸ್ ಸಂಸ್ಥೆಯ ಸಂತೋಷ್ ಅನಂತಪುರ ಮಾತನಾಡಿದರು. ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಪ್ರೊ. ಎಸ್.ಪಿ. ಮಂಜುನಾಥ್, ಜೆಎಸ್‌ಎಸ್ ವಿಜ್ಞ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ ಮತ್ತು ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಕುಲಪತಿಗಳು ಮತ್ತು ಕುಲಸಚಿವರು, ಮೈಸೂರು ಜೆಎಸ್‌ಎಸ್ ಮಹಾವಿದ್ಯಾಪೀಠದ ಎಲ್ಲ ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts