More

    ಕರೊನಾ ಸೇನಾನಿಗಳೊಂದಿಗೆ ಕೈಜೋಡಿಸಿ

    ಕರೊನಾ ಸೇನಾನಿಗಳೊಂದಿಗೆ ಕೈಜೋಡಿಸಿ

    ಶೃಂಗೇರಿ: ದೇಶದಲ್ಲಿ ಲಾಕ್​ಡೌನ್ ಆದ ಬಳಿಕ ಕರೊನಾ ಸೋಂಕಿತರ ಸಾವಿನ ಸಂಖ್ಯೆ ನಿಯಂತ್ರಣದಲ್ಲಿದೆ. ಆದರೆ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿದೆ. ಇದರಿಂದ ಮುಕ್ತಿ ಪಡೆಯಲು ಕರೊನಾ ಸೇನಾನಿಗಳ ಜತೆ ನಾಗರಿಕರು ಕೈಜೋಡಿಸಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

    ಪಪಂ ಸಭಾಂಗಣದಲ್ಲಿ ಗುರುವಾರ ಕರೊನಾ ನಿಯಂತ್ರಣಕ್ಕೆ ಮುಂಜಾಗ್ರತೆ ಹಾಗೂ ವಿವಿಧ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

    ಕರೊನಾ ಜತೆ ನಾವು ಜೀವಿಸಲು ಕಲಿಯಬೇಕು. ಪರಸ್ಪರ ಅಂತರ ಕಾಯ್ದುಕೊಂಡು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಈ ಸೋಂಕು ಕ್ಷಣಕಣ ವಿಭಿನ್ನ ಸ್ವರೂಪ ಪಡೆದು ದೇಶಕ್ಕೆ ಸವಾಲು ಒಡ್ಡುತ್ತಿದೆ. ಸರ್ಕಾರ ಎಲ್ಲರಿಗೂ ಸರ್ವ ರೀತಿಯ ಸಹಕಾರ ನೀಡಲು ಸನ್ನದ್ಧವಾಗಿದೆ. ತಾಲೂಕಿನ ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದರು.

    ತಾಲೂಕು ವೈದ್ಯಾಧಿಕಾರಿ ಡಾ. ಮಂಜುನಾಥ್ ಮಾತನಾಡಿ, ಹೊರ ರಾಜ್ಯದಿಂದ ತಾಲೂಕಿಗೆ ಬಂದ 63 ಮಂದಿಯನ್ನು ಕಾರಂಟೈನ್ ಮಾಡಿ ಅವರ ಗಂಟಲು ದ್ರವವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇದರಲ್ಲಿ 61 ಮಂದಿಗೆ ನೆಗೆಟಿವ್ ಬಂದಿದ್ದರಿಂದ ಅವರನ್ನು ಬಿಡುಗಡೆಗೊಳಿಸಲಾಗಿದೆ. ಎರಡು ಮಂದಿ ಫಲಿತಾಂಶ ಬಾಕಿ ಇದೆ ಎಂದರು.

    ಪಿಎಸ್​ಐ ಸಿದ್ದರಾಮಯ್ಯ ಮಾತನಾಡಿ, ತಾಲೂಕಿನ ಬೇಗಾರು ಹಾಗೂ ಕೆರೆಕಟ್ಟೆಯಲ್ಲಿ ಚೆಕ್​ಪೋಸ್ಟ್ ಸ್ಥಾಪಿಸಲಾಗಿದೆ. ಕರೊನಾ ನಿಯಂತ್ರಣಕ್ಕಾಗಿ ಎನ್​ಸಿಸಿ ಹಾಗೂ ಎನ್​ಎಸ್​ಎಸ್ ವಿದ್ಯಾರ್ಥಿಗಳ ಸಹಕಾರ ಪಡೆದಿದ್ದೇವೆ. ಲಾಕ್​ಡೌನ್ ಉಲ್ಲಂಘಿಸಿದ ನಾಗರಿಕರ ವಿರುದ್ಧ ಈವರೆಗೆ 131 ಕೇಸ್ ಹಾಕಿದ್ದು, ತಲಾ 100 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಹೇಳಿದರು. ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

    ಆಂಬುಲೆನ್ಸ್​ಗೆ ಅನುದಾನ: ಆಸ್ಪತ್ರೆಗೆ ಹೆಚ್ಚುವರಿ ಆಂಬುಲೆನ್ಸ್ ಬೇಕಿದೆ. ತಾಲೂಕಿನ ಹರೂರು, ಬುಕುಡಿಬೈಲು, ಶೀರ್ಲು ಮುಂತಾದೆಡೆ ಆಂಬುಲೆನ್ಸ್ ಸಂಚರಿಸಿ ಗ್ರಾಮೀಣ ಜನರನ್ನು 15 ದಿನಕೊಮ್ಮೆ ಪರೀಕ್ಷೆ ಮಾಡುವ ವ್ಯವಸ್ಥೆಯಾಗಬೇಕಿದೆ ಎಂದು ಜಿಪಂ ಸದಸ್ಯ ಬಿ.ಶಿವಶಂಕರ್ ಸಭೆಗೆ ತಿಳಿಸಿದರು. ಗ್ರಾಮೀಣ ಪ್ರದೇಶದಲ್ಲಿ ಕಸ ವಿಲೇ ಆಗುತ್ತಿಲ್ಲ. ಕರೊನಾ ಭೀತಿ ಹಿನ್ನೆಲೆಯಲ್ಲಿ ಪರಿಸರದ ಸ್ವಚ್ಛತೆಗೆ ಗ್ರಾಪಂ ಆಡಳಿತ ಹೆಚ್ಚಿನ ಗಮನ ನೀಡಬೇಕು ಎಂದು ಜಿಪಂ ಸದಸ್ಯೆ ಶಿಲ್ಪಾ ರವಿ ಹೇಳಿದರು. ಇದಕ್ಕೆ ಸ್ಪಂದಿಸಿದ ಶೋಭಾ ಕರಂದ್ಲಾಜೆ, ಆಂಬುಲೆನ್ಸ್ ಖರೀದಿಗೆ ಶೀಘ್ರ ಅನುದಾನ ನೀಡುತ್ತೇನೆ ಎಂದು ಭರವಸೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts