More

    ಹಾಸ್ಯದ ಹೆಸರಿನಲ್ಲಿ ಅಸಮಾನತೆ: ಹಾಸ್ಯವೋ ಅಪಹಾಸ್ಯವೋ?

    ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಈ ತಿಂಗಳಲ್ಲಿ ಧಾರಾವಾಹಿಗಳಲ್ಲಿ ಹೆಣ್ಣಿನ ಚಿತ್ರಣದ ಮತ್ತೊಂದು ಮಗ್ಗುಲನ್ನು ನೋಡೋಣ.

    ಕಿರುತೆರೆಯ ಮನರಂಜನೆಯ ವ್ಯಾಖ್ಯಾನದಲ್ಲಿ ಅತ್ಯಂತ ಅಪಾರ್ಥ ಪಡೆದ ಶಬ್ದ ಎಂದರೆ ‘ಹಾಸ್ಯ’ ಪ್ರತೀ ವಾಹಿನಿಯೂ ತನ್ನಲ್ಲಿ ಒಂದಾದರೂ ಹಾಸ್ಯಪ್ರಧಾನವಾದ ರಿಯಾಲಿಟಿ ಶೋ ನಡೆಸುತ್ತದೆ. ಐದಾರು ತಂಡಗಳು ತಮಗೆ ಕೊಟ್ಟ ಹತ್ತೋ ಹದಿನೈದೋ ನಿಮಿಷಗಳಲ್ಲಿ ಒಂದು ಪುಟ್ಟ ನಗೆ ನಾಟಕವನ್ನು ಪ್ರಸ್ತುತ ಪಡಿಸಬೇಕು. ಇದಕ್ಕೆ ಸ್ಕಿ›ಪ್ಟ್ ತಯಾರು ಮಾಡುವವರು ಬೇರೆ ಇರುತ್ತಾರೆ, ನಿರ್ದೇಶಿಸುವವರು ಇರುತ್ತಾರೆ. ಈ ನಗೆ ನಾಟಕವನ್ನು ನೋಡಿ ತೀರ್ಪಗಾರರು ಅಂಕಗಳನ್ನು ಕೊಡುತ್ತಾರೆ. ಈ ಕಿರುನಾಟಕಗಳಲ್ಲಿ ಹೆಣ್ಣು ಗಂಡುಗಳನ್ನು ಚಿತ್ರಿಸುವ ರೀತಿಯನ್ನು ಗಮನಿಸೋಣ.

    ಹಾಸ್ಯದ ಹೆಸರಿನಲ್ಲಿ ಅಸಮಾನತೆ: ಹಾಸ್ಯವೋ ಅಪಹಾಸ್ಯವೋ?ಈ ಎಲ್ಲಾ ಕಿರು ನಾಟಕಗಳೂ ಹೆಚ್ಚೂ ಕಡಿಮೆ ಒಂದೇ ರೀತಿಯವಾಗಿರುತ್ತವೆ. ಪ್ರಮುಖವಾಗಿ ಎರಡು ಬಗೆ ಒಂದು ಮದುವೆಯ ನಂತರದ ಕಥೆ ಅಥವಾ ಮದುವೆಯ ಮುಂಚಿನ ಕಥೆ. ಮದುವೆಯ ಮುಂಚಿನ ಕಥೆಯಾದರೆ ಪ್ರೀತಿ ಪ್ರೇಮ ಮತ್ತು ಎರಡರ್ಥದ (ಕೆಲವೊಮ್ಮೆ ಆ ಮಾತುಗಳಲ್ಲಿ ದ್ವಂದ್ವವೂ ಇರದೇ ನೇರವಾದ ಅರ್ಥವೇ ಇದ್ದುಬಿಟ್ಟಿರುತ್ತದೆ) ಮಾತುಗಳು. ಈ ಕಥೆಗಳಲ್ಲಿ ಮತ್ತೆ ಎರಡು ಬಗೆ. ಗಂಡು ಹೆಣ್ಣನ್ನು ಒಲಿಸಿಕೊಳ್ಳಲು ಮಾಡುವ ಸರ್ಕಸ್ಸುಗಳು ಎರಡನೆಯದು ಹೆಣ್ಣು ಅಂಗಾಂಗ ಪ್ರದರ್ಶನದ ಮೂಲಕ ಗಂಡನ್ನು ಸೆಳೆಯುವ ಪ್ರಯತ್ನಗಳು (ಈ ವಿಧದ ಕಥೆಗಳಲ್ಲಿ ಗಂಡಸರು ಹೆಣ್ಣಿನ ವೇಷ ಧರಿಸಿ, ಅತಿಯಾಗಿ ಬಾಗುತ್ತಾ ಬಳುಕುತ್ತಾ, ವಿಚಿತ್ರವಾದ ಮತ್ತು ತೀರಾ ಅಸಹಜವಾದ ಬಗೆಯಲ್ಲಿ ನಾಚುತ್ತಾ ಮಾತನಾಡುತ್ತಾರೆ. ಹೆಣ್ಣು ಮಕ್ಕಳು ಈ ಬಗೆಯ ಪಾತ್ರ ಮಾಡುವುದಿಲ್ಲ)

    ಈ ಕಥೆಗಳಲ್ಲಿ ಯಾರು ಮತ್ತೊಬ್ಬರನ್ನು ಒಲಿಸಿಕೊಳ್ಳುವ ಪ್ರಯತ್ನ ಮಾಡುತ್ತಿರುತ್ತಾರೋ ಅವರು ಇನ್ನೊಬ್ಬರನ್ನು ಮುಟ್ಟುವ ಯತ್ನವನ್ನು ಮಾಡುತ್ತಾ ಇರುತ್ತಾರೆ. ಒಲಿಯಬೇಕಾದವರು ಅದರಿಂದ ತಪ್ಪಿಸಿಕೊಳ್ಳಲು ನೋಡುತ್ತಿರುತ್ತಾರೆ. ಹೆಣ್ಣೇ ಆಗಲಿ, ಗಂಡೇ ಆಗಲಿ ಅಷ್ಟಕ್ಕೇ ಮತ್ತೊಬ್ಬರಿಗೆ ಒಲಿದುಬಿಡುತ್ತಾರೆಯೇ? ತೊಡೆ, ತೋಳು, ಭುಜ ಮುಟ್ಟುತ್ತಾ ಹತ್ತಿರ ಹತ್ತಿರ ಬರುತ್ತಾ ಮಾತನಾಡುವ ಯಾವ ಗಂಡಸನ್ನು ಅಥವಾ ಹೆಂಗಸನ್ನು ಯಾರಾದರೂ ಹಾಸ್ಯ ಪ್ರವೃತ್ತಿಯವರೆಂದು ತಿಳಿದು ಒಲಿದಾರು? ಇದು ನೇರಾ ನೇರಾ ಅಶ್ಲೀಲವೇ ಹೊರತು ಇದರಲ್ಲಿ ಹಾಸ್ಯವೆಲ್ಲಿದೆ?

    ಇನ್ನು ಮದುವೆಯ ನಂತರದ ಕಥೆಗಳಾದರೆ ಹೆಚ್ಚು ಪಾಲು ಕಥೆಗಳಲ್ಲಿ ಹೆಂಡತಿ ಗಯ್ಯಾಳಿ, ಗಂಡನಿಗೆ ತಲೆಯ ಮೇಲೆ ಮೊಟಕುತ್ತಾ, ಅವನಿಂದ ಮನೆಗೆಲಸಗಳನ್ನು ಮಾಡಿಸುತ್ತಾ, ಬೈಯುತ್ತಾ ಇರುತ್ತಾಳೆ. ಅದೇ ಹಾಸ್ಯ. ಈ ಕಥೆಗಳಂತೂ ಒಂದು ಪ್ರಶ್ನೆಪತ್ರಿಕೆಯನ್ನೇ ಸೃಷ್ಟಿಸಬಹುದು. ಅಷ್ಟು ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ.

    • ಒಟ್ಟಿಗೆ ಬದುಕು ನಡೆಸಬೇಕಾದ ದಂಪತಿಗಳಲ್ಲಿ ಒಬ್ಬರು ಇನ್ನೊಬ್ಬರಿಗೆ ನಿರಂತರವಾಗಿ ಅಪಮಾನ ಮಾಡುತ್ತಿರುವುದು ಹಾಸ್ಯವೇ?
    • ಗಂಡನಾದವನು ಮನೆ ಕೆಲಸಗಳನ್ನು ಅಂದರೆ ಬಟ್ಟೆ ಒಗೆಯುವುದು, ಪಾತ್ರೆ ತೊಳೆಯುವುದು ಇತ್ಯಾದಿಗಳನ್ನು ಮಾಡುವುದು ಅವಮಾನವೇ?
    • ಅವುಗಳು ಕಡಿಮೆ ದರ್ಜೆಯ ಕೆಲಸಗಳೇ?
    • ಗಂಡಸು ಅವುಗಳನ್ನು ಮಾಡುವುದು ಹಾಸ್ಯವೆಂದಾದರೆ ಹೆಂಗಸು ಮಾಡುವುದು ಹಾಸ್ಯವಲ್ಲವೇ?
    • ಹಾಗಿದ್ದರೆ ಒಂದು ಮನೆಯಲ್ಲಿ ಆ ಕೆಲಸಗಳನ್ನು ಯಾರು ಮಾಡಬೇಕು? ಉತ್ತರ ಏನೇ ಆಗಿದ್ದರೂ ಯಾಕೆ?
    • ಒಬ್ಬರಿಗಾಗುತ್ತಿರುವ ಶೋಷಣೆ ಅಥವಾ ಅನ್ಯಾಯ ಹಾಸ್ಯದ ವಸ್ತು ಹೇಗಾಗುತ್ತದೆ?

    ಇವೆರೆಡೂ ಬಗೆಗಳಲ್ಲದೇ ಮೂರನೆಯ ಬಗೆಯ ಕಥೆಗಳ ಮೂಲಕ ನಗಿಸುವ ಪ್ರಯತ್ನ ಈ ರಿಯಾಲಿಟಿ ಶೋಗಳು ಮಾಡುತ್ತವೆ. ಅದೆಂದರೆ ಹೆಣ್ಣೋ ಅಥವಾ ಗಂಡೋ ತಂತಮ್ಮ ಪ್ರೇಯಸಿ/ಹೆಂಡತಿ ಅಥವಾ ಪ್ರಿಯಕರ/ಗಂಡ ಅಲ್ಲದೇ ಮತ್ತೊಬ್ಬಳ/ಮತ್ತೊಬ್ಬನ ಪ್ರೇಮ ಪಾಶದಲ್ಲಿರುವ ಕಥೆಗಳು. ಇಬ್ಬರ ನಡುವೆ ರಹಸ್ಯ ಕಾಪಾಡಿಕೊಂಡು ಗಂಡ/ಹೆಂಡತಿಗೆ ಗೊತ್ತಾಗದಂತೆ ಮತ್ತೊಬ್ಬರ ಜೊತೆ ಇರಲು ಪರದಾಡುವ ಕಥೆಗಳು. ಇದು ಕೀಳು ಅಭಿರುಚಿ.

    ಈ ಮತ್ತೊಬ್ಬರ ಜೊತೆ ಇರುವ ದೃಶ್ಯಗಳು ಮತ್ತೆ ಮೇಲೆ ಹೇಳಿದಂತೆ ಅನಗತ್ಯವಾಗಿ ಒಬ್ಬರನ್ನೊಬ್ಬರು ಮುಟ್ಟುತ್ತಾ, ತಬ್ಬುತ್ತಾ ಅಸಹಜವಾಗಿ ಪ್ರೇಮ ನಿವೇದನೆಯನ್ನು ಮಾಡಿಕೊಳ್ಳುತ್ತಾ ಇರುವ ದೃಶ್ಯಗಳು. ತನ್ನ ಒಡನಾಡಿಯ ಜೊತೆಗೆ ಪ್ರಾಮಾಣಿಕವಾಗಿಲ್ಲದಿರುವುದರಲ್ಲಿ ಹಾಸ್ಯವೇನಿದೆ? ಕಳ್ಳ ಕೆಲಸಗಳು ಹಾಸ್ಯವಾಗತೊಡಗಿದರೆ ಸಮಾಜ ಎತ್ತ ಸಾಗುತ್ತಿದೆ ಎಂದು ಭಯವಾಗತೊಡಗುತ್ತದೆ.

    ಹಾಸ್ಯದಲ್ಲಿ ಉತ್ಪ್ರೇಕ್ಷೆ ಸಹಜ. ಆರೋಗ್ಯಕರ ಹಾಸ್ಯಗಳಲ್ಲೂ ಈ ಉತ್ಪ್ರೇಕ್ಷೆ ಕಂಡುಬರುತ್ತದೆ. ಆದರೆ ಮೇಲೆ ಹೇಳಿದ ಯಾವುದೂ ಹಾಸ್ಯವಲ್ಲ. ಕೇವಲ ಹೆಣ್ಣನ್ನು ಕೀಳಾಗಿ ತೋರಿಸುವ, ವಸ್ತುವೆಂಬಂತೆ ತೋರಿಸುವ ಅಶ್ಲೀಲತೆ. ಆರೇಳು ವಾಹಿನಿಗಳಲ್ಲಿ ಬರುವ ಒಂದೊಂದು ಗಂಟೆಯ ಕಾರ್ಯಕ್ರಮದ ಆರೇಳು ಸ್ಕಿ›ಪ್ಟ್​ಗಳನ್ನು ಮುನ್ನೂರು ಪದಗಳಲ್ಲಿ ಬರೆದುಬಿಡಬಹುದೆಂದರೆ ಅದೆಂತಹ ಏಕತಾನವಾದ ದೃಶ್ಯಗಳಿರಬಹುದು?

    ಅದು ಕೇವಲ ತಮಾಷೆಗಾಗಿ ಮಾಡಿರುವುದು. ಅದನ್ನು ಹಗುರವಾಗಿ ತೆಗೆದುಕೊಂಡು ನಕ್ಕು ಮರೆತುಬಿಡಬೇಕಾದ್ದು. ಅದಕ್ಕೆ ಇಷ್ಟು ಗಂಭೀರ ಚರ್ಚೆಯ ಅಗತ್ಯವಿದೆಯೇ? ಇದೆ. ಈ ಹಾಸ್ಯಗಳನ್ನೆಲ್ಲಾ ಸೂಕ್ಷ್ಮವಾಗಿ ನೋಡಿದರೆ ಇವೆಲ್ಲಾ ಇಂದಿನ ಸಮಾಜದ ಗಂಭೀರ ಸಮಸ್ಯೆಗಳೇ. ಹೆಣ್ಣು ಮಕ್ಕಳು ಇಂದು ಎದುರಿಸುತ್ತಿರುವ ಸಮಸ್ಯೆಗಳು, ಹೆಚ್ಚುತ್ತಿರುವ ಡೈವೋರ್ಸ್ ಪ್ರಕರಣಗಳು ಇತ್ಯಾದಿಗಳು. ಇಂಥ ಗಂಭೀರ ಸಮಸ್ಯೆಗಳನ್ನು ಕಳಪೆ ಹಾಸ್ಯವಾಗಿ ತಿರುಗಿಸಿಬಿಟ್ಟರೆ, ಮಿಕ್ಕೆಲ್ಲಾ ಸಮಸ್ಯೆಗಳಿಗೆ ಕಿರುತೆರೆ ‘ಪರವಾಗಿಲ್ಲ’ ಎಂದಂತೆ ಈ ಸಮಸ್ಯೆಗಳಿಗೂ ‘ಪರವಾಗಿಲ್ಲ’ ಹೊದಿಕೆ ಹೊದಿಸಿಬಿಟ್ಟಂತಾಗುವುದು.

    ಜೊತೆಗೆ ಎಲ್ಲೋ ಆಗೊಮ್ಮೆ ಈಗೊಮ್ಮೆ ಇಂಥವು ಕಂಡರೆ ಹಾಸ್ಯ ಎಂದು ನಕ್ಕು ಮುಗಿಸಬಹುದು (ನಗು ಬಂದರೆ!) ಆದರೆ ಪ್ರತೀ ಕಂತಿನಲ್ಲೂ ಅವೇ! ವಾರದಲ್ಲಿ ಕನಿಷ್ಟ ಇಪ್ಪತ್ತು ಕಥೆಗಳು ಅಂಥವೇ ಕಾಣುತ್ತಿದ್ದರೆ? ಎಷ್ಟೆಂದು ನಗಬಹುದು? ನಾಳೆ ಹೆಣ್ಣು ಮಗಳೊಬ್ಬಳನ್ನು ಯರಾದರೂ ಹತ್ತಿರ ಹತ್ತಿರ ಹೋಗಿ ಮೈ ಮುಟ್ಟುತ್ತಾ ಮಾತಾಡಿಸುತ್ತಿದ್ದರೆ ನಮಗೆ ಇದ್ಯಾವುದೋ ಕಳಪೆ ಹಾಸ್ಯದ ದೃಶ್ಯವೆನಿಸಿಬಿಟ್ಟರೆ? ಇಂಥ ದೃಶ್ಯಗಳು ನಮ್ಮಲ್ಲಿ ಬೆಳೆಸುವ ಫೆಮಿಲಿಯಾರಿಟಿ ಅತ್ಯಂತ ಅಪಾಯಕಾರಿಯಾದುದು. ಸಮಾಜ ವಿರೋಧಿಯಾದುದು. ಹಾಸ್ಯಕ್ಕೆ ಒಂದು ಆರೋಗ್ಯಕರ ಮುಖವೂ ಇದೆ ಎಂಬುದನ್ನೇ ಅರಿಯದೇ ಹೋದರೆ? ಜನರ ಅಭಿರುಚಿಯನ್ನು ಹಾಳುಗೆಡವಿದ ಅಪವಾದವನ್ನೂ ಕಿರುತೆರೆ ಹೊರಬೇಕಾದೀತು.

    ಐ ಆಮ್ ಜೆನೆರೇಷನ್ ಈಕ್ವಾಲಿಟಿ – ಹೆಣ್ಣು ಗಂಡುಗಳಿಬ್ಬರೂ ಸಮಾನರು. ಇವೆರೆಡರಲ್ಲಿ ಯಾರು ಇನ್ನೊಬ್ಬರಿಗಿಂತ ಕಡಿಮೆ ಎಂದು ತೋರಿಸಿದರೂ ಅದು ತಪ್ಪು ಮತ್ತು ಅದನ್ನು ಪ್ರತಿಭಟಿಸಬೇಕು. ಯಾವುದೇ ಲಿಂಗವನ್ನು ಮತ್ತೊಂದಕ್ಕಿಂತ ಕಡಿಮೆ ಎಂದು ತೋರಿಸಿದರೂ ಅದು ಇಡೀ ಸಮಾಜದ ದೃಷ್ಟಿಕೋನದಿಂದ ತಪ್ಪು ಮತ್ತು ಅಕ್ಷಮ್ಯ.

    (ಲೇಖಕರು ಸಿನಿಮಾ, ಕಿರುತೆರೆ, ರಂಗಭೂಮಿ ಕಲಾವಿದೆ)

    (ಪ್ರತಿಕ್ರಿಯಿಸಿ: [email protected])

    ಧಾರಾವಾಹಿ ನಾಯಕಿಯ ಸಮಾನತೆ ಹೋರಾಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts