More

    ಧಾರಾವಾಹಿ ನಾಯಕಿಯ ಸಮಾನತೆ ಹೋರಾಟ

    ಡಿಡಿ ಮಾತ್ರ ಟಿವಿಯಲ್ಲಿ ಬರುತ್ತಿದ್ದ ಕಾಲ ಅದು. ಅದರಲ್ಲೊಂದು ಧಾರಾವಾಹಿ ಉಡಾನ್. ಅದರಲ್ಲೊಂದು ದೃಶ್ಯ. ಅಪ್ಪ ದೃಢ ಮನಸ್ಸಿನಿಂದ ತನ್ನ ಹೊಲದಲ್ಲಿ ಉಳುಮೆಯ ಬಹುಪಾಲು ಜಾಗ ಆಕ್ರಮಿಸಿರುವ ಹೆಬ್ಬಂಡೆಗೆ ಕೈ ಕೊಟ್ಟು ಅದನ್ನು ತಳ್ಳತೊಡಗುತ್ತಾನೆ. ಮುಖ ಕೆಂಪೇರುತ್ತದೆ, ಬೆವರು ಧಾರಾಕಾರವಾಗಿ ಸುರಿಯುತ್ತದೆ. ಒತ್ತೆ ಕೊಟ್ಟ ಕಾಲುಗಳು ನಡುಗತೊಡಗಿ ಜಾರಲಾರಂಭಿಸುತ್ತವೆ. ಆಗ ಮತ್ತೆರಡು ಕೋಮಲ ಕೈಗಳು ಜತೆಗೂಡುತ್ತವೆ. ನೋಡಿದರೆ ಮಗಳು! ಅಪ್ಪ ಮತ್ತಷ್ಟು ಹುಮ್ಮಸ್ಸಿನಿಂದ ತಳ್ಳಲಾರಂಭಿಸುತ್ತಾನೆ. ಈ ಬಾರಿ ಅವನ ಜತೆಗೆ ಮಗಳಿದ್ದಾಳೆ ಎಂಬ ಭಾವ ಕೊಟ್ಟ ಶಕ್ತಿ ಮತ್ತು ಮಗಳ ಶಕ್ತಿ ಎರಡೂ ಸೇರಿ ಮೂರು ಪಟ್ಟಾಗಿ ಹೆಬ್ಬಂಡೆ ಉರುಳುತ್ತದೆ. ಈ ದೃಶ್ಯ ನನ್ನ ಮನಸ್ಸಿನಲ್ಲಿ ಹೇಗೆ ಅಚ್ಚೊತ್ತಿತು ಎಂದರೆ ಇಂದಿಗೂ ಬದುಕಿನ ಬೇರೆ ಬೇರೆ ಹಂತಗಳಲ್ಲಿ ನಾನು ಅದೆಷ್ಟೋ ಬಾರಿ ಆ ದೃಶ್ಯವನ್ನು ನೆನೆಯುತ್ತೇನೆ.

    ಹಾಗೆ ಅಪ್ಪನ ಶ್ರಮಕ್ಕೆ ತನ್ನ ಕೈಯಾಸರೆ ಕೊಟ್ಟ ಮಗಳು ಒಬ್ಬ ಉನ್ನತ ಪೊಲೀಸ್ ಅಧಿಕಾರಿಯಾಗಿ ಬೆಳೆಯುವ, ಆ ಹಾದಿಯಲ್ಲಿ ಎದುರಿಸುವ ಸವಾಲುಗಳ ಕಥೆಯೇ ಉಡಾನ್. ತನ್ನ ತಾಯಿಯ ಮೇಲೆ ಆದ ಬಲಾತ್ಕಾರಕ್ಕೆ ಪ್ರತೀಕಾರ ತೀರಿಸಿಕೊಳ್ಳಲೆಂದು ಮೂವರು ಸಾಮಾಜಿಕವಾಗಿ ಬಲಿಷ್ಠ ಮಂದಿಯ ಎದುರು ನಿಂತು ನ್ಯಾಯಕ್ಕಾಗಿ ಹೋರಾಡಿ, ನ್ಯಾಯ ದಕ್ಕಿಸಿಕೊಳ್ಳುವ ಶಾಂತಿ ಒಬ್ಬ ಅಮಾಯಕ ಮುಸ್ಲಿಂ ಹೆಣ್ಣು ಮಗಳಿಗೆ ಆಕೆಯ ಗಂಡ ಕೇವಲ ತನ್ನಿಚ್ಛೆಗೆ ವಿರುದ್ಧವಾಗಿ ಅವಳನ್ನು ತನಗೆ ಮದುವೆ ಮಾಡಿಸಿದರು ಎಂಬ ತಂದೆ ತಾಯಿಯ ಮೇಲಿನ ಸಿಟ್ಟಿಗೆ ಎರಡು ಬಾರಿ ತಲಾಖ್ ಹೇಳಿರುತ್ತಾನೆ. ಆತ ಮೂರನೆಯ ಬಾರಿ ತಲಾಖ್ ಹೇಳುವ ಮೊದಲು ಆಕೆ ತನ್ನನ್ನು ತಾನು ಹೇಗೆ ಸಬಲಗೊಳಿಸಿಕೊಳ್ಳುತ್ತಾಳೆ ಎಂದರೆ ಆ ಪತಿ ಮಹಾಶಯನಿಗೆ ತಾನು ತಲಾಖ್ ನೀಡಿದರೆ ಆಕೆ ತನ್ನನ್ನು ಬೇಡುತ್ತಾ ತನ್ನ ಹಿಂದೆ ಬರದೇ ಸದೃಢವಾದ ಜೀವನ ನಡೆಸಿಬಿಡುತ್ತಾಳೆ ಎಂಬ ಆತಂಕ ಶುರುವಾಗಿ ತಲಾಖ್ ನೀಡಲು ಹೆದರತೊಡಗುತ್ತಾನೆ. ಈ ಕಥೆಯ ಹಿನಾ ಬಹಳ ಚಿಕ್ಕ ವಯಸ್ಸಿಗೇ ಜಿಮ್ನಾಸ್ಟಿಕ್ಸ್​ಗೆ ಸೇರಿ ಅದನ್ನು ತಪಸ್ಸಿನಂತೆ ಕಲಿತು ಜಗದ್ವಿಖ್ಯಾತೆಯಾದ ನಾಡಿಯಾಳ ಕಥೆ.

    ಇವೆಲ್ಲಾ ಹಿಂದಿ ಧಾರಾವಾಹಿಗಳಾದರೆ, ‘ತಾಳಿ ಗಂಡ ಕಟ್ಟಿದ್ದು, ಅದನ್ನು ಬೇಕಿದ್ದರೆ ತೆಗೆಯುತ್ತೇನೆ. ಹೂವು, ಜಡೆ, ಕುಂಕುಮ ಎಲ್ಲವೂ ಈ ನೆಲ ಕೊಟ್ಟಿದ್ದು. ಅವು ನನ್ನ ಹುಟ್ಟಿನಿಂದ ಬಂದ ಅಧಿಕಾರ. ಅವನ್ನು ತೆಗೆಯಲಾರೆ’ ಎನ್ನುವ ಸೃಷ್ಟಿ ಧಾರಾವಾಹಿಯ ಬಾಲ ವಿಧವೆ.

    ಸಾಂಪ್ರದಾಯಿಕ ವಾತಾವರಣದಿಂದ ಬಂದು ತಮ್ಮನ್ನು ತಾವು ಹೊರಪ್ರಪಂಚದಲ್ಲಿ ಗುರುತಿಸಿಕೊಳ್ಳುವ ಮಾಯಾಮೃಗದ ಶಾಸ್ತ್ರಿಗಳ ಹೆಣ್ಣು ಮಕ್ಕಳು, ತನ್ನ ಆದರ್ಶಗಳಿಗೆ ಬದ್ಧಳಾಗಿರಲು ಗಂಡನನ್ನು ತೊರೆದು, ತನ್ನ ಏಳಿಗೆಗೆ ಕಾರಣ ತನ್ನ ಸೌಂದರ್ಯವಲ್ಲ ಬದಲಿಗೆ ತನ್ನ ಸಾಮರ್ಥ್ಯ ಎಂದು ಸಾಧಿಸುವ ಮಂಥನದ ಇನ್​ಕಮ್್ಯಾಕ್ಸ್ ಆಫೀಸರ್ ನಂದಿನಿ ಜಾಧವ್…

    ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇವೆಲ್ಲಾ ಪಾತ್ರಗಳೂ ಆತ್ಮಾಭಿಮಾನಕ್ಕಾಗಿ, ಸಮಾಜದಲ್ಲಿ ತಮ್ಮದೇ ಆದ ಗುರುತಿಗಾಗಿ ಎದುರಾಗುವ ಎಲ್ಲಾ ಸವಾಲುಗಳನ್ನೂ – ಬಡತನದಿಂದ ಹಿಡಿದು ಗಂಡಸಿನ ಇಗೋವರೆಗೆ ಎದುರಿಸಿ, ಹೋರಾಡಿ ತಮ್ಮ ಸದಾಕಾಂಕ್ಷೆಗಳನ್ನು ಸಾಧಿಸಿಕೊಳ್ಳಲು ಹೆಣಗುವ ನಮ್ಮ ನಿಮ್ಮೊಳಗೆ ಒಬ್ಬಳಾಗಿರಬಹುದಾದ ಹೆಣ್ಣು ಮಕ್ಕಳು. ಈ ಪಾತ್ರಗಳೆಲ್ಲಾ ತಮ್ಮಂಥಾ ಅನೇಕ ಹೆಣ್ಣು ಮಕ್ಕಳಿಗೆ ಸ್ಪೂರ್ತಿಯಾದಂಥವು. ಎಷ್ಟೋ ಹೆಣ್ಣು ಮಕ್ಕಳ ಆಲೋಚನಾ ಧಾಟಿಯನ್ನು ಬದಲಿಸಿದಂಥವು. ತಮ್ಮ ತಮ್ಮದೇ ಹೋರಾಟಕ್ಕೆ ಪ್ರೇರೇಪಿಸಿದಂಥವು. ಅವಳಾಗಬಹುದಾದರೆ ನಾನ್ಯಾಕಲ್ಲ? ಎಂಬ ಪ್ರಶ್ನೆಯನ್ನು ಮೂಡಿಸಿದಂಥವರು.

    ಆದರೆ ವಿಷಾದವೆಂದರೆ ಇವರೆಲ್ಲಾ ಈಗ್ಗೆ ಕನಿಷ್ಠ ಹದಿನೈದರಿಂದ ಮೂವತ್ತು ವರ್ಷ ಮುಂಚೆಯೇ ತೆರೆಯ ಮೇಲೆ ರಾರಾಜಿಸಿ ಹೊಸ ನೀರಿಗೆ ಅನುವು ಮಾಡಿಕೊಟ್ಟು ಮರೆಯಾದ ಪಾತ್ರಗಳು. ಅಂಥಾ ಪಾತ್ರಗಳು ಬಿಟ್ಟು ಹೋದ ಜಾಗವನ್ನು ಆಕ್ರಮಿಸಿರುವ ಇಂದಿನ ಧಾರಾವಾಹಿಗಳ ಹೆಣ್ಣು ಮಕ್ಕಳು ಏನು ಮಾಡುತ್ತಿದ್ದಾರೆ? ಛೀ ಎಂದು ತಿರಸ್ಕರಿಸಿದ ಗಂಡನ ಒಂದು ನೋಟಕ್ಕಾಗಿ ದೈನ್ಯದಿಂದ ಕಾಯುತ್ತಿದ್ದಾರೆ. ಹೆಂಡತಿ ಎಂಬ ಸ್ಥಾನವಿರಲಿ, ಮನುಷ್ಯಳು ಎಂಬ ಸ್ಥಾನವೂ ಇರದ ಜಾಗಗಳಲ್ಲಿ ಮನೆಗೆಲಸ ಮಾಡಿಕೊಂಡು, ಆತ್ಮಾಭಿಮಾನದ ಕೊರತೆಗೆ ತ್ಯಾಗ, ಶಾಂತಿ, ಸಹನೆಗಳ ಹೆಸರು ಕೊಟ್ಟುಕೊಂಡು ನೆಲೆಯಿಲ್ಲದೇ ನಿಂತಿದ್ದಾರೆ. ಅಥವಾ ಗಂಡನ ಪ್ರೇಮ ಸಿಕ್ಕ ಸೌಭಾಗ್ಯವತಿಯಾದರೆ, ಮನೆಯಲ್ಲಿ ಅತ್ತಿಗೆ ನಾದಿನಿ ಜಗಳಗಳನ್ನು ಬಿಡಿಸುತ್ತಾ, ಬೈಯುವ ಅತ್ತೆ ಮಾವಂದಿರನ್ನು ಸಂಭಾಳಿಸುತ್ತಾ, ದುಷ್ಟ ಅತ್ತಿಗೆಯ ಮೋಸಗಳಿಗೆ ಬಲಿಯಾಗುತ್ತಾ ನಿಂತಿರುತ್ತಾರೆ.

    ಎಲ್ಲಿಂದ ಎಲ್ಲಿಗೆ ಬಂದಿದ್ದೇವೆ? ನಿಜದಲ್ಲಿ ನಮ್ಮ ಸಮಾಜ ಹಾಗೆಯೇ ಇದೆಯೇ? ನಾವು ಹೆಣ್ಣು ಮಕ್ಕಳು ಕಳೆದ ಎರೆಡು ದಶಕದಲ್ಲಿ ಅಷ್ಟು ಸೋತು, ಹೋರಾಡುವ ಗುಣವನ್ನೇ ಕಳೆದುಕೊಂಡು, ಹೀನರಾಗುವುದನ್ನೇ ತ್ಯಾಗ ಎಂದು ಕರೆದುಕೊಂಡು, ಅವಮಾನವನ್ನು ಸಹನೆ ಎಂದು ಕರೆದು ಸಹಿಸಿಕೊಂಡು ಕ್ರಿಮಿಗಳಂತೆ ಬದುಕಲಾರಂಭಿಸಿದ್ದೇವೆಯೇ? ಇಲ್ಲ. ಹಾಗಿಲ್ಲ. ಇಪ್ಪತ್ತು ಮೂವತ್ತು ವರ್ಷಗಳ ಹಿಂದೆಯೇ ಅಸಮಾನತೆಯ ಹೆಬ್ಬಂಡೆಯನ್ನು ತಳ್ಳಲು ಹೆಣ್ಣು ಮಕ್ಕಳು ಕೈಕೊಟ್ಟು ನಿಂತಾಗಿದೆ.

    ಇಂಥಾ ಸಂದರ್ಭದಲ್ಲಿ, ಹೆಣ್ಣಿಗೆ ಬೆಂಬಲವಾಗಿ ನಿಂತು ಈಗಿರುವುದಕ್ಕಿಂತ ಹೆಚ್ಚು ಸಬಲವಾಗಿ ಹೆಣ್ಣನ್ನು ತೋರಿಸಿ, ಈಗಿರುವುದಕ್ಕಿಂತ ಹತ್ತು ಹೆಜ್ಜೆ ಮುಂದೆ ಹೋಗಲು ಪ್ರೇರೇಪಿಸಬೇಕಾದ ಜವಾಬ್ದಾರಿಯಿರುವ ಇಂದಿನ ಅತಿ ಪ್ರಬಲ ಮನರಂಜನಾ ಮಾಧ್ಯಮವೇ, ನೀನೇಕೆ ಆ ಹಳೆಯ ಸ್ಪೂರ್ತಿ ತುಂಬುವ ಸ್ತ್ರೀ ಪಾತ್ರಗಳನ್ನೆಲ್ಲಾ ಬದಿಗೆ ಸರಿಸಿ ಸದಾ ಸೋಲುತ್ತಾ ನೋಯುತ್ತಾ ಕಣ್ಣೀರ್ಗರೆಯುವ ಅಳುಮುಂಜಿಗಳನ್ನು ಮಾದರಿಯಾಗಿಸಹೊರಟಿದ್ದೀಯಾ? ಶಾಂತಿ, ನಾಡಿಯಾ, ನಂದಿನಿ ಜಾಧವ್​ರಂಥ ಹುಲಿಗಳ ಹೊಟ್ಟೆಯಲ್ಲಿ ಅಸಹಾಯಕ, ಅಬಲೆ, ಮನೆಯೊಳಗಿನ ಜಂಜಾಟಗಳನ್ನೇ ಬದುಕಾಗಿಸಿದ ಕೂಪ ಮಂಡೂಕಗಳನ್ನು ಹುಟ್ಟಿಸುತ್ತಿದ್ದೀಯಾ?

    ಈ ದಿನ ಹೆಣ್ಣು ಮಕ್ಕಳ ದಿನ. ಈ ವರ್ಷದ ಥೀಮ್ ‘ಐ ಆಮ್ ಜನರೇಷನ್ ಈಕ್ವಾಲಿಟಿ’. ಅಂದರೆ ನನ್ನ ಪೀಳಿಗೆಯಲ್ಲಿ ಸಮಾನತೆಯನ್ನು ಸಾಧಿಸುವವಳು ಎಂದು ಅರ್ಥೈಸಬಹುದು ಅಥವಾ ನಾನು ಮುಂದಿನ ಪೀಳಿಗೆಗೆ ಸಮಾನತೆಯ ಪ್ರಪಂಚವನ್ನು ಕೊಡುವವಳು ಎಂದೂ ಆದೀತು. ಸುಂದರ ಪ್ರಪಂಚವನ್ನು ಕಟ್ಟುವ ಕನಸು ಪ್ರಪಂಚದಲ್ಲಿ ಬದುಕುವ ಪ್ರತಿಯೊಬ್ಬರದೂ ಆಗಬೇಕು. ಮಕ್ಕಳ ತಂದೆ ತಾಯಂದಿರಾದ ನಮ್ಮಂಥವರಿಂದ ಹಿಡಿದು ಸಮಾಜವನ್ನು ನಡೆಸಬೇಕಾದ ಮಾಧ್ಯಮಗಳವರೆಗೆ ಪ್ರತಿಯೊಬ್ಬರದೂ.

    ಸಮಾನತೆಯ ನ್ಯಾಯಬದ್ಧ ಲೋಕವನ್ನು ಕನಸುವ ಪ್ರತಿಯೊಂದು ಜೀವಕ್ಕೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳು.

    ದೀಪಾ ರವಿಶಂಕರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts