More

    ಇಂದ್ರಾಳಿ ರುದ್ರಭೂಮಿಗಿಲ್ಲ ಕಾಯಕಲ್ಪ

    ಉಡುಪಿ: ಇಂದ್ರಾಳಿಯಲ್ಲಿರುವ ರುದ್ರಭೂಮಿ ಕಾರ್ಯನಿರ್ವಹಿಸದೆ ವರ್ಷ ಕಳೆಯುತ್ತಿದ್ದು, ಸೂಕ್ತ ನಿರ್ವಹಣೆಗೆ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ನಗರದ ಮಧ್ಯೆ ಎರಡು ಹಿಂದು ರುದ್ರಭೂಮಿಗಳಿದ್ದು, ಬೀಡಿನಗುಡ್ಡೆಯಲ್ಲಿರುವ ರುದ್ರಭೂಮಿ ಮಾತ್ರ ಕಾರ್ಯನಿರ್ವಹಿಸುತ್ತಿದೆ.

    ಇಂದ್ರಾಳಿ ರುದ್ರಭೂಮಿ ಅವಲಂಬಿಸಿರುವ ಮಣಿಪಾಲ, ಪರ್ಕಳ, ಹೆರ್ಗ, ಆತ್ರಾಡಿ, ಬಡಗುಬೆಟ್ಟು ಇತ್ಯಾದಿ ಕಡೆಗಳಲ್ಲಿ ಮೃತಪಟ್ಟ ದೇಹಗಳನ್ನು ಬೀಡಿನಗುಡ್ಡೆಗೆ ತರಬೇಕಿದೆ. ನಗರಸಭೆ ವ್ಯಾಪ್ತಿ ಇಂದ್ರಾಳಿ ರುದ್ರಭೂಮಿಯನ್ನು 2016ರಲ್ಲಿ 19.35 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲಾಗಿತ್ತು. ಇದರಲ್ಲಿ ಏಕಕಾಲಕ್ಕೆ 2 ಶವಗಳ ದಹನದ ವ್ಯವಸ್ಥೆ ಮಾಡಲಾಗಿತ್ತು. ವ್ಯವಸ್ಥಿತ ನಿರ್ವಹಣೆ ಇಲ್ಲದೆ ನಗರಸಭೆ ನಿರ್ಲಕ್ಷ್ಯದಿಂದ ಪಾಳು ಬಿದ್ದಂತಾಗಿದೆ. ಚೇಂಬರ್ ಹಾಗೂ ಕಟ್ಟಿಗೆ ಇಡುವ ಪ್ರದೇಶವು ಹಾಳಾಗಿದೆ. ಕೋವಿಡ್ ಬಳಿಕ ಇಂದ್ರಾಳಿ ರುದ್ರಭೂಮಿ ನಿರ್ವಹಣೆ ಸಮಸ್ಯೆ ಎದುರಾಗಿದೆ ಎಂದು ನಾಗರಿಕರು ದೂರಿದ್ದಾರೆ.

    ಶವದಹನ ಚೇಂಬರ್ ಹೆಚ್ಚಿಸಬೇಕು
    ಇಂದ್ರಾಳಿ ರುದ್ರಭೂಮಿ ಕೆಲಸ ನಿರ್ವಹಿಸದ ಹಿನ್ನೆಲೆಯಲ್ಲಿ ನಿತ್ಯ ಬೀಡಿನಗುಡ್ಡೆ ರುದ್ರಭೂಮಿಗೆ 8ರಿಂದ 10 ಮೃತದ ದೇಹಗಳು ಬರುತ್ತಿವೆ. ಒತ್ತಡ ಹೆಚ್ಚಾದರೆ ದೇಹಗಳನ್ನು ಮಲ್ಪೆ ಹಾಗೂ ಸಮೀಪದ ಉದ್ಯಾವರ ಹಿಂದೂ ರುದ್ರಭೂಮಿಗೆ ಕಳುಹಿಸಿಕೊಡಬೇಕಿದೆ. ಇಂದ್ರಾಳಿ ರುದ್ರಭೂಮಿ ಸಾಕಷ್ಟು ವಿಶಾಲವಾಗಿದ್ದು, ಉಡುಪಿ-ಮಣಿಪಾಲ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿಯೇ ಇರುವುದರಿಂದ ಶವ, ಕಟ್ಟಿಗೆ ಇತ್ಯಾದಿ ಸಾಗಾಟಕ್ಕೂ ಅನುಕೂಲ ವ್ಯವಸ್ಥೆ ಹೊಂದಿದೆ. ಈ ರುದ್ರಭೂಮಿ ವ್ಯಾಪ್ತಿ ದೊಡ್ಡದಾಗಿರುವುದರಿಂದ ಇದನ್ನು ಪುನಶ್ಚೇತನಗೊಳಿಸುವುದರೊಂದಿಗೆ ಶವ ದಹನ ಚೆೇಂಬರ್‌ಗಳನ್ನು ಹೆಚ್ಚಿಸಬೇಕಾಗಿದೆ. ಇಲ್ಲಿಯೂ 6 ಚೇಂಬರ್ ನಿರ್ಮಿಸಿದರೆ ಸ್ಥಳೀಯರಿಗೆ ಅನುಕೂಲವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಗೊಂಡಿದೆ.

    ಅಭಿವೃದ್ಧಿಗೆ 1.23 ಕೋಟಿ ರೂ.
    ನಗರದಲ್ಲಿರುವ ರುದ್ರಭೂಮಿ ನಿರ್ವಹಣೆ ಹೊಣೆ ನಗರಸಭೆಯದಾಗಿದ್ದಾಗಿದ್ದು. ಪ್ರಸ್ತುತ ನಗರ ವ್ಯಾಪ್ತಿ ರುದ್ರಭೂಮಿಗಳ ಅಭಿವೃದ್ಧಿಗಾಗಿ 1.23 ಕೋಟಿ ರೂ. ಬಜೆಟ್‌ನಲ್ಲಿ ಕಾಯ್ದಿರಿಸಲಾಗಿದೆ. ಈ ಮೊತ್ತದ ಒಂದು ಭಾಗದಲ್ಲಿ ಇಂದ್ರಾಳಿ ರುದ್ರಭೂಮಿಯನ್ನು ಅಭಿವೃದ್ಧಿ ಪಡಿಸಬೇಕು. ಜತೆಗೆ ಸಿಬ್ಬಂದಿಯನ್ನು ನೇಮಿಸುವಂತೆ ಸಾರ್ವಜನಿಕರು ಮನವಿ ಮಾಡಿಕೊಂಡಿದ್ದಾರೆ.

    ಇಂದ್ರಾಳಿ ರುದ್ರಭೂಮಿಯನ್ನು ವ್ಯವಸ್ಥಿತವಾಗಿ ಅಭಿವೃದ್ಧಿ ಪಡಿಸುವ ಬಗ್ಗೆ ಯೋಜನೆ ರೂಪಿಸಲಾಗುವುದು. ಈಗಾಗಲೇ ತಾನು ಮತ್ತು ಅಧಿಕಾರಿಗಳ ತಂಡ ರುದ್ರಭೂಮಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ಏಪ್ರಿಲ್ 12ರಂದು ಸಭೆ ನಡೆಯಲಿದ್ದು, ಈ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು.
    – ಸುಮಿತ್ರಾ ನಾಯಕ್, ಅಧ್ಯಕ್ಷೆ. ಉಡುಪಿ ನಗರಸಭೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts