More

    ಒಳಾಂಗಣ ಸ್ಟೇಡಿಯಂ ಕೆಲಸ ಶುರು

    ಮಂಗಳೂರು: ಸ್ಮಾರ್ಟ್ ಸಿಟಿ ವತಿಯಿಂದ ಕೈಗೊಳ್ಳಲು ಉದ್ದೇಶಿಸಿರುವ ಪ್ರಮುಖ ಕಾಮಗಾರಿಗಳಲ್ಲಿ ಒಂದಾಗಿರುವ ಸುಸಜ್ಜಿತ ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ ನಗರದ ಉರ್ವ ಮಾರುಕಟ್ಟೆ ಬಳಿ ಚಾಲನೆ ಸಿಕ್ಕಿದೆ. ಪ್ರಸ್ತುತ ಆರಂಭಿಕ ಹಂತದ ಕೆಲಸ ನಡೆಯುತ್ತಿದೆ.

    ಉರ್ವ ಮಾರಿಗುಡಿ ಬಳಿಯ 1.13 ಎಕರೆ ಪ್ರದೇಶದಲ್ಲಿ ಒಂದು ಬೇಸ್‌ಮೆಂಟ್‌ನೊಂದಿಗೆ ಜಿ+4 ಮಾದರಿಯಲ್ಲಿ ನಿರ್ಮಾಣವಾಗಲಿದೆ ಈ ಒಳಾಂಗಣ ಕ್ರೀಡಾಂಗಣ. ಮುಖ್ಯವಾಗಿ ಕಬಡ್ಡಿ ಮತ್ತು ಬ್ಯಾಡ್ಮಿಂಟನ್ ಆಟಗಳನ್ನು ಗಮನದಲ್ಲಿರಿಸಿ ಅತ್ಯಾಧುನಿಕ ರೀತಿಯಲ್ಲಿ ಸ್ಟೇಡಿಯಂ ಸಿದ್ಧವಾಗಲಿದೆ. ಕಾಮಗಾರಿಗಾಗಿ 20.54 ಕೋಟಿ ರೂ. ಅನುದಾನ ಮೀಸಲಿರಿಸಲಾಗಿದೆ. ಗುತ್ತಿಗೆದಾರರಿಗೆ 18 ತಿಂಗಳಲ್ಲಿ ಕಾಮಗಾರಿ ಮುಗಿಸಲು ಗಡುವು ನೀಡಲಾಗಿದ್ದು, ವ್ಯವಸ್ಥಿತವಾಗಿ ನಡೆದರೆ, 2023ರ ಅಂತ್ಯದ ವೇಳೆಗೆ ಕ್ರೀಡಾಂಗಣ ಸಿದ್ಧವಾಗುವ ನಿರೀಕ್ಷೆಯಿದೆ.

    ಹೀಗಿರಲಿದೆ ಕ್ರೀಡಾಂಗಣ: ನಾಲ್ಕು ಮಹಡಿಗಳು ವಿವಿಧ ರೀತಿಯ ವ್ಯವಸ್ಥೆಗಳನ್ನು ಒಳಗೊಳ್ಳಲಿವೆ. ಕಟ್ಟಡದ ನೆಲ ಅಂತಸ್ತಿನಲ್ಲಿ ಪ್ರವೇಶಾಂಗಣ, ಕಬಡ್ಡಿ ಅಂಕಣ, ಸ್ಟೋರ್‌ರೂಂ, ಆಡಳಿತ ಕಚೇರಿ, ವಾಣಿಜ್ಯ ಮಳಿಗೆಗಳು 2385.97 ಚ.ಮೀ. ವಿಸ್ತೀರ್ಣದಲ್ಲಿ ನಿರ್ಮಾಣವಾಗಲಿದೆ. ಮೊದಲ ಮಹಡಿಯಲ್ಲಿ ಪ್ರೇಕ್ಷಕರ ಗ್ಯಾಲರಿ, ವಿಐಪಿ ಲಾಂಜ್ ಇರಲಿದ್ದು, 1121 ಚ.ಮೀ. ವಿಸ್ತೀರ್ಣ ಹೊಂದಿದೆ. ಎರಡನೇ ಮಹಡಿ 820.12 ಚ.ಮೀ.ನಲ್ಲಿ ಒಳಾಂಗಣ ಆಟಗಳಿಗೆ ಸ್ಥಳ, ಜಿಮ್ನಾಶಿಯಂ, ಪ್ಯಾಸೇಜ್ ಒಳಗೊಂಡಿದೆ. ಮೂರನೇ ಮಹಡಿಯಲ್ಲಿ ಸ್ಟೇಡಿಯಂ ಪ್ರದೇಶ, ಮಡಿಕಲ್ ರೂಮ್, ಫಿಸಿಯೋಥೆರಪಿ, ಸ್ಟೋರ್ ರೂಮ್, ಬಟ್ಟೆ ಬದಲಾಯಿಸುವ ಸ್ಥಳ ಮೊದಲಾದವುಗಳು 1739.68 ಚ.ಮೀ. ವಿಸ್ತೀರ್ಣದಲ್ಲಿ ನಿರ್ಮಾಣವಾಗಲಿದೆ. ನಾಲ್ಕನೇ ಮಹಡಿಯಲ್ಲಿ ಪ್ರೇಕ್ಷಕರ ಗ್ಯಾಲರಿ, ಡಾರ್ಮಿಟರಿ, ಶೌಚಗೃಹಗಳು ಇರಲಿವೆ. ವಿಸ್ತೀರ್ಣ 1212.99 ಚ.ಮೀ. ಬೇಸ್‌ಮೆಂಟ್ 2308.25 ಚ.ಮೀ.ನಲ್ಲಿ ಪಾರ್ಕಿಂಗ್‌ಗೆ ಅವಕಾಶವಿದೆ. ಕಟ್ಟಡದ ಎತ್ತರ 20.85 ಮೀ.

    ಸ್ಟೇಡಿಯಂನಲ್ಲಿ ಏನೇನಿರಲಿವೆ?
    * ಕಬಡ್ಡಿ-ಬ್ಯಾಡ್ಮಿಂಟನ್ ಕೋರ್ಟ್
    * ಸಿಂಥಟಿಕ್ ಮ್ಯಾಟ್
    * ಕ್ರೀಡಾಪಟುಗಳಿಗೆ ಸಕಲ ವ್ಯವಸ್ಥೆ
    * ಪ್ರೇಕ್ಷಕರಿಗೆ ಕುಳಿತು ವೀಕ್ಷಿಸಲು ಗ್ಯಾಲರಿ
    * ಅಸೋಸಿಯೇಶನ್‌ಗಳಿಗೆ ಕಚೇರಿ
    * ಕೆಫೆಟೇರಿಯಾ
    * ವಾಣಿಜ್ಯ ವ್ಯವಹಾರ ಮಳಿಗೆಗಳು
    * 103 ಕಾರುಗಳ ಪಾರ್ಕಿಂಗ್ ವ್ಯವಸ್ಥೆ

    ರಾಷ್ಟ್ರೀಯ-ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳನ್ನು ಆಯೋಜಿಸಲು ಸಹಕಾರಿಯಾಗುವಂತೆ ಸ್ಮಾರ್ಟ್ ಸಿಟಿ ವತಿಯಿಂದ ಸುಸಜ್ಜಿತ ಒಳಾಂಗಣ ಕ್ರೀಡಾಂಗಣ ನಿರ್ಮಿಸಲಾಗುತ್ತಿದೆ. ಪ್ರಸ್ತುತ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಶೀಘ್ರವಾಗಿ ಮುಗಿಸಲು ಕ್ರಮ ಕೈಗೊಳ್ಳಲಾಗುವುದು. ಕಬಡ್ಡಿ ಹಾಗೂ ಬ್ಯಾಡ್ಮಿಂಟನ್ ಆಟಗಳಿಗೆ ಬೇಕಾದ ಎಲ್ಲ ಸೌಲಭ್ಯವನ್ನು ಕ್ರೀಡಾಂಗಣ ಒಳಗೊಳ್ಳಲಿದೆ.

    ಡಿ.ವೇದವ್ಯಾಸ ಕಾಮತ್
    ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts