More

    ಇಂದಿರಾ ಕ್ಯಾಂಟೀನ್ ಹೊಸ ಮೆನು ತುಸು ವಿಳಂಬ

    ಬೆಂಗಳೂರು: ನಗರದ ಬಡವರು ಹಾಗೂ ಶ್ರಮಿಕ ವರ್ಗದವರಿಗೆ ಕಡಿಮೆ ಮೊತ್ತದಲ್ಲಿ ಶುಚಿ-ರುಚಿ ಆಹಾರ ವಿತರಿಸುವ ಇಂದಿರಾ ಕ್ಯಾಂಟೀನ್‌ಗಳಲ್ಲಿ ಹೊಸ ಮೆನು ಜಾರಿ ಮಾಡುವ ಟೆಂಡರ್ ಇನ್ನೂ ಅಂತಿಮವಾಗದ ಕಾರಣ, ಫೆಬ್ರವರಿ ತಿಂಗಳಾಂತ್ಯದಲ್ಲಿ ಅನುಷ್ಠಾನಕ್ಕೆ ಬರಲಿದೆ.

    ಹಾಲಿ ಕ್ಯಾಂಟೀನ್‌ಗಳಲ್ಲಿ ವಿತರಿಸಲಾಗುತ್ತಿರುವ ಮೆನುವಿನ ಜತೆಗೆ ಹೊಸದಾಗಿ ರಾಗಿ ಮುದ್ದೆ ಸೊಪ್ಪಿನ ಸಾರು, ಮಂಗಳೂರು ಬನ್ಸ್, ಬ್ರೆಡ್ ಜಾಮ್ ಸಹಿತ ಇನ್ನೂ ಒಂದೆರಡು ಖಾದ್ಯಗಳು ಸೇರ್ಪಡೆಯಾಗಲಿವೆ. ಇದಕ್ಕೆ ಸರ್ಕಾರ ಒಪ್ಪಿಗೆ ಸೂಚಿಸಿದ ಬಳಿಕ ಬಿಬಿಎಂಪಿ ಆಹ್ವಾನಿಸಿರುವ ಟೆಂಡರ್ ಇಷ್ಟೊತ್ತಿಗಾಗಲೇ ಪೂರ್ಣಗೊಂಡು ಗಣರಾಜ್ಯೋತ್ಸವ ದಿನ (ಜ.26) ಗ್ರಾಹಕರು ಹೊಸ ತಿಂಡಿಯನ್ನು ಸವಿಯಬೇಕಿತ್ತು. ಆದರೆ, ಬಿಡ್ ತಾಂತ್ರಿಕ ಹಂತದಲ್ಲೇ ಇದ್ದು, ಇನ್ನಷ್ಟು ದಿನ ವಿಳಂಬವಾಗಲಿದೆ. ಇದರಿಂದಾಗಿ ಮುಂದಿನ ತಿಂಗಳ ಅಂತ್ಯಕ್ಕೆ ಹೊಸ ಗಡುವನ್ನು ವಿಧಿಸಲಾಗಿದೆ.

    ಈಗಾಗಲೇ ಪಾಲಿಕೆಯ ಎಂಟೂ ವಲಯಗಳನ್ನು 4 ಪ್ಯಾಕೇಜ್‌ಗಳಾಗಿ ವಿಂಗಡಿಸಿ ಡಿಸೆಂಬರ್ ತಿಂಗಳಿನಲ್ಲೇ ಟೆಂಡರ್ ಆಹ್ವಾನಿಸಲಾಗಿದೆ. ಎಲ್ಲ ಟೆಂಡರ್‌ಗಳಿಗೂ ಒಂದಕ್ಕಿಂತ ಹೆಚ್ಚು ಬಿಡ್‌ದಾರರು ಪಾಲ್ಗೊಂಡಿದ್ದು, ಮೌಲ್ಯಮಾಪನ ನಿಧಾನವಾಗಿ ನಡೆಯುತ್ತಿರುವುದು ವಿಳಂಬಕ್ಕೆ ಕಾರಣವಾಗಿದೆ.

    ಬಜೆಟ್‌ನಲ್ಲಿ ಹಣ ನಿಗದಿಗೆ ಮನವಿ:

    ಹಾಲಿ ಆಹ್ವಾನಿಸಿರುವ ಟೆಂಡರ್ ಎರಡು ವರ್ಷದ ಅವಧಿಯದ್ದಾಗಿದ್ದು, ಎಂಟೂ ವಲಯಗಳಿಗೆ ಒಟ್ಟು 132.76 ಕೋಟಿ ರೂ. ವೆಚ್ಚವಾಗುವ ಸಾಧ್ಯತೆ ಇದೆ. ಇಲ್ಲಿಯವರೆಗೆ ಆಹಾರ ಪೂರೈಕೆಗೆ ಬಿಬಿಎಂಪಿ ಹಾಗೂ ಸರ್ಕಾರ ಕ್ರಮವಾಗಿ ಶೇ.70 ಮತ್ತು ಶೇ.30 ಅನುದಾನ ಒದಗಿಸುತ್ತಿದ್ದವು. ಪಾಲಿಕೆಗೆ ಹೆಚ್ಚಿನ ಹೊರೆಯಾಗಲಿರುವ ಕಾರಣ ಈ ಬಾರಿಯಿಂದ ಶೇ.50 ಅನುಪಾತದಲ್ಲಿ ವೆಚ್ಚ ಭರಿಸಲು ನಿರ್ಧರಿಸಲಾಗಿದೆ. 2024-25ನೇ ಸಾಲಿನ ರಾಜ್ಯ ಬಜೆಟ್ ಫೆ.16ರಂದು ನಿಗದಿ ಆಗಿರುವುದರಿಂದ ಇಂದಿರಾ ಕ್ಯಾಂಟೀನ್ ಯೋಜನೆಗೆ ಅನುದಾನ ನಿಗದಿಯಾಗುವುದನ್ನು ಗಮನಿಸಿ ಪಾಲಿಕೆಯಿಂದಲೂ ಅಷ್ಟೇ ಮೊತ್ತವನ್ನು ಮೀಸಲಿಡುವ ಚಿಂತನೆ ನಡೆದಿದೆ. ಹೀಗಾಗಿ ತಿಂಗಳಾಂತ್ಯಕ್ಕೆ ಎಲ್ಲ ಲೆಕ್ಕಾಚಾರವನ್ನು ಪೂರ್ಣಗೊಳಿಸಿ ಹೊಸ ಮೆನುಗೆ ಚಾಲನೆ ನೀಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಏರ್‌ಪೋರ್ಟ್ ಕ್ಯಾಂಟೀನ್‌ಗೆ ಶೀಘ್ರ ಚಾಲನೆ?

    ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ (ಕೆಐಎ) ಟ್ಯಾಕ್ಸಿ ಸಹಿತ ವಾಹನ ಚಾಲಕರು ಹಾಗೂ ಶ್ರಮಿಕ ವರ್ಗದ ಹಸಿವು ನೀಗಿಸಲು ಶೀಘ್ರವೇ ಇಂದಿರಾ ಕ್ಯಾಂಟೀನ್‌ಗೆ ಚಾಲನೆ ಸಿಗಲಿದೆ. ಈಗಾಗಲೇ ಟರ್ಮಿನಲ್ -1 ಹಾಗೂ 2ರಲ್ಲಿ ಪ್ರತ್ಯೇಕ ಕ್ಯಾಂಟೀನ್‌ಗಳ ಆರಂಭಕ್ಕೆ ಸರ್ಕಾರ ಒಪ್ಪಿಗೆ ನೀಡಿದೆ. ಈ ಎರಡೂ ಟರ್ಮಿನಲ್‌ಗಳಲ್ಲಿ ಕ್ರಮವಾಗಿ 87 ಲಕ್ಷ ರೂ. ಮತ್ತು 48 ಲಕ್ಷ ರೂ. ವೆಚ್ಚದಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬರಲಿದೆ. ಆಹಾರವನ್ನು ಅಲ್ಲೇ ಸಿದ್ಧಪಡಿಸುವುದರಿಂದ ಅಡುಗೆಮನೆ ವೆಚ್ಚವೂ ಯೋಜನೆಯಲ್ಲಿ ಸೇರಿದೆ. ನಗರದಲ್ಲಿ ಗ್ರಾಹಕರಿಗೆ ವಿಧಿಸುತ್ತಿರುವ ಮೊತ್ತವನ್ನೇ ಕೆಐಎ ಕ್ಯಾಂಟೀನ್‌ಗೂ ಅನ್ವಯವಾಗಲಿದೆ.

    ವಲಯವಾರು ಟೆಂಡರ್ ಮೊತ್ತದ ವಿವರ:
    ಪೂರ್ವ ಹಾಗೂ ಯಲಹಂಕ – 35.92 ಕೋಟಿ ರೂ.
    ಪಶ್ಚಿಮ ಹಾಗೂ ದಾಸರಹಳ್ಳಿ – 36.48 ಕೋಟಿ ರೂ.
    ದಕ್ಷಿಣ – 29.23 ಕೋಟಿ ರೂ.
    ಆರ್.ಆರ್.ನಗರ, ಬೊಮ್ಮನಹಳ್ಳಿ ಹಾಗೂ ಮಹದೇವಪುರ – 35.92 ಕೋಟಿ ರೂ.

    ಸೇವಾ ಸಮಯ:
    * ಬೆಳಗ್ಗೆ 7.30ರಿಂದ 10ರವರೆಗೆ
    * ಮಧ್ಯಾಹ್ನ 12.30ರಿಂದ 3ರವರೆಗೆ
    * ರಾತ್ರಿ 7.30ರಿಂದ 9ರವರೆಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts