More

    ನಾಳೆ ಬೆಂಗಳೂರಿನಲ್ಲಿ 3ಡಿ ಮುದ್ರಿತ ಅಂಚೆ ಕಚೇರಿ ಕಟ್ಟಡ ಉದ್ಘಾಟನೆ

    ಬೆಂಗಳೂರು: ರಾಜಧಾನಿ ಬೆಂಗಳೂರಿನ ಕೇಂಬ್ರಿಡ್ಜ್ ಲೇಔಟ್ ನಿವೇಶನದಲ್ಲಿ ನೂತನವಾಗಿ ನಿರ್ಮಿಸಲಾದ ಭಾರತದ ಮೊದಲ 3ಡಿ ಮುದ್ರಿತ ಅಂಚೆ ಕಚೇರಿ ಕಟ್ಟಡ ಶುಕ್ರವಾರ ಲೋಕಾರ್ಪಣೆ ಆಗಲಿದೆ.

    ಭಾರತೀಯ ಅಂಚೆ ಇಲಾಖೆಯ ಕರ್ನಾಟಕ ವೃತ್ತ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಶುಕ್ರವಾರ ಬೆಳಿಗ್ಗೆ 8.30 ಗಂಟೆಗೆ ನಗರದ ಜಿಪಿಓ ಕಟ್ಟಡದ 5ನೇ ಮಹಡಿಯಲ್ಲಿರುವ ಮೇಘದೂತ ಸಭಾಂಗಣದಲ್ಲಿ ವರ್ಚುಯಲ್ ಮೂಲಕ ಕೇಂದ್ರ ರೈಲ್ವೇ, ಸಂವಹನ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ಉದ್ಘಾಟಿಸಲಿದ್ದಾರೆ.

    ಹೊಸ ಮಾದರಿಯ ಕಟ್ಟಡಕ್ಕೆ ಐಐಟಿ ಚೆನ್ನೈ ಅಂಚೆ ಇಲಾಖೆಗೆ ತಾಂತ್ರಿಕ ಮಾರ್ಗದರ್ಶನವನ್ನು ಒದಗಿಸಿದೆ. ಕಟ್ಟಡವನ್ನು ಮೆ. ಲಾರ್ಸನ್ ಮತ್ತು ಟೂಬ್ರೋ ಲಿ. (ಎಲ್ ಆ್ಯಂಡ್ ಟಿ) ಕಂಪನಿಯು ನಿರ್ಮಿಸಿದ್ದು, ಕಟ್ಟಡದ ಒಟ್ಟು ವಿಸ್ತೀರ್ಣ 1,021 ಚದರ ಅಡಿ ಇರುತ್ತದೆ. ಈ ಕಟ್ಟಡವನ್ನು ಅನುಮೋದಿತ ವಿನ್ಯಾಸದ ಪ್ರಕಾರ, 3ಡಿ ಕಾಂಕ್ರೀಟ್ ಮುದ್ರಣ ತಂತ್ರಜ್ಞಾನದ ಸಹಾಯದಿಂದ ನಿರ್ಮಿಸಿರುವುದು ವಿನ್ಯಾಸಕಾರರು ಹಾಗೂ ಗುತ್ತಿಗೆದಾರರಿಗೆ ಸವಾಲಾಗಿತ್ತು.

    45 ದಿನಗಳಲ್ಲಿ ಕಟ್ಟಡ ನಿರ್ಮಾಣ:

    ಸದರಿ ಪ್ರಕ್ರಿಯೆಯು ಪೂರ್ಣ ಸ್ವಯಂಚಾಲಿತ ಕಟ್ಟಡ ನಿರ್ಮಾಣ ತಂತ್ರಜ್ಞಾನವಾಗಿದ್ದು ಇದರಲ್ಲಿ ರೋಬೋಟಿಕ್ ಪ್ರಿಂಟರ್ ಮೂಲಕ ಕಾಂಕ್ರೀಟ್ ಪದರವನ್ನು ಹಂತ ಹಂತವಾಗಿ ನಿರ್ಮಿಸಲಾಗುತ್ತದೆ. ಜತೆಗೆ ತ್ವರಿತವಾಗಿ ಗಟ್ಟಿಯಾಗುವ ವಿಶೇಷ ದರ್ಜೆಯ ಕಾಂಕ್ರೀಟ್‌ನ್ನು ಪದರಗಳ ನಡುವೆ ಬಂಧವನ್ನು ಖಚಿತಪಡಿಸಿಕೊಳ್ಳಲು ಬಳಸಲಾಗುತ್ತದೆ. 45 ದಿನಗಳ ಅವಧಿಯಲ್ಲಿ ಕಟ್ಟಡದ ನಿರ್ಮಾಣವನ್ನು ಪೂರ್ಣಗೊಳಿಸಲಾಗಿದ್ದು, ಸಾಂಪ್ರದಾಯಿಕ ವಿಧಾನ ನಿರ್ಮಾಣಕ್ಕೆ ಅಂದಾಜು 6-8 ತಿಂಗಳ ಸಮಯ ತೆಗೆದುಕೊಳ್ಳುತ್ತದೆ. ಕಟ್ಟಡ ನಿರ್ಮಾಣ ವೆಚ್ಚ ಮತ್ತು ಸಮಯದ ಉಳಿತಾಯದಿಂದ 3ಡಿ ಕಾಂಕ್ರೀಟ್ ಮುದ್ರಣ ತಂತ್ರಜ್ಞಾನವನ್ನು ಸಾಂಪ್ರದಾಯಿಕ ಕಟ್ಟಡ ನಿರ್ಮಾಣ ಪದ್ಧತಿಗಳಿಗೆ ಸಶಕ್ತ ಪರ್ಯಾಯವಾಗಿ ಪರಿಗಣಿಸಬಹುದಾಗಿದೆ ಅಂಚೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts