More

    ಭಾರತ ತನ್ನ ಕ್ರಮದಿಂದ ಲಕ್ಷಾಂತರ ಮಂದಿಯ ಸಹಜ ಜೀವನವನ್ನು ಕಷ್ಟಕ್ಕೆ ದೂಡಿದೆ: ಕೆನಡಾ ಪ್ರಧಾನಿ ಹೇಳಿಕೆ

    ಒಟವಾ: ಕೆನಡಾದ ರಾಜತಾಂತ್ರಿಕರ ಮೇಲಿನ ಭಾರತದ ದಬ್ಬಾಳಿಕೆ ಉಭಯ ದೇಶಗಳ ಲಕ್ಷಾಂತರ ಮಂದಿಯ ಸಹಜ ಜೀವನವನ್ನು ಸಂಕಷ್ಟಕ್ಕೆ ದೂಡಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಹೇಳಿದರು.

    ರಾಜತಾಂತ್ರಿಕ ವಿನಾಯಿತಿಯನ್ನು ಹಿಂತೆಗೆದುಕೊಳ್ಳುವ ಭಾರತದ ಎಚ್ಚರಿಕೆಯ ಬೆನ್ನಲ್ಲೇ ಕೆನಡಾ ತನ್ನ 41 ರಾಜತಾಂತ್ರಿಕರನ್ನು ಭಾರತದಿಂದ ವಾಪಸ್​ ಕರೆಸಿಕೊಂಡ ದಿನದ ಬೆನ್ನಲ್ಲೇ ಜಸ್ಟಿನ್ ಟ್ರುಡೊ ಒಂಟಾರಿಯೋದ ಬ್ರಾಂಪ್ಟನ್​ನಲ್ಲಿ ಟೆಲಿವೈಸ್ಡ್​ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

    ಭಾರತ ಮತ್ತು ಕೆನಡಾದಲ್ಲಿ ಲಕ್ಷಾಂತರ ಜನರ ಜೀವನವು ಎಂದಿನಂತೆ ಮುಂದುವರಿಯಲು ಭಾರತ ಸರ್ಕಾರವು ಅಡ್ಡಿಯಾಗಿದೆ. ರಾಜತಾಂತ್ರಿಕತೆಯ ಮೂಲಭೂತ ತತ್ವವನ್ನು ಉಲ್ಲಂಘಿಸುವ ಮೂಲಕ ಈ ಪರಿಸ್ಥಿತಿಯನ್ನು ತಂದಿಟ್ಟಿದ್ದಾರೆ. ಭಾರತದಲ್ಲಿ ತಮ್ಮ ಮೂಲವನ್ನು ಗುರುತಿಸುವ ಲಕ್ಷಾಂತರ ಕೆನಡಿಯನ್ನರ ಯೋಗಕ್ಷೇಮ ಮತ್ತು ಸಂತೋಷದ ಬಗ್ಗೆ ನನಗೀಗ ತುಂಬಾ ಕಾಳಜಿ ಇದೆ. ಕೆನಡಾದ ಕೆಲವು ರಾಜತಾಂತ್ರಿಕರ ಉಚ್ಛಾಟನೆಯ ಕ್ರಮವು ಪ್ರಯಾಣ ಮತ್ತು ವ್ಯಾಪಾರಕ್ಕೆ ಅಡ್ಡಿಯಾಗುವುದಲ್ಲದೆ, ಕೆನಡಾದಲ್ಲಿ ಓದುತ್ತಿರುವ ಭಾರತೀಯರಿಗೂ ತುಂಬಾ ತೊಂದರೆಗಳನ್ನು ಉಂಟುಮಾಡುತ್ತದೆ ಎಂದು ಟ್ರೂಡೊ ಹೇಳಿದರು.

    ಕೆನಡಾ ಒಟ್ಟಾರೆ ಜನಸಂಖ್ಯೆಯಲ್ಲಿ ಶೇ.5ರಷ್ಟು ಮಂದಿ ಭಾರತದ ಪರಂಪರೆಯನ್ನು ಹೊಂದಿದ್ದಾರೆ. ಅಲ್ಲದೆ, ಭಾರತವೂ ಕೆನಡಾದ ಅತಿದೊಡ್ಡ ಜಾಗತಿಕ ವಿದ್ಯಾರ್ಥಿಗಳ ಮೂಲವಾಗಿದ್ದು, ಸುಮಾರು 40 ರಷ್ಟು ಮಂದಿ ಅಧ್ಯಯನ ನಡೆಸುತ್ತಿದ್ದಾರೆ. ಇದೀಗ ರಾಜತಾಂತ್ರಿಕ ಬಿರುಕು ಇವರೆಲ್ಲರ ಸಹಜ ಜೀವನವನ್ನು ಸಂಕಷ್ಟಕ್ಕೆ ದೂಡಲಿದೆ ಎಂದು ಟ್ರೂಡೊ ತಿಳಿಸಿದರು.

    ಕೆನಡಾದ ರಾಜತಾಂತ್ರಿಕರನ್ನು ವಾಪಸ್​ ಕಳುಹಿಸುವ ಮೂಲಕ ಭಾರತ, ರಾಜತಾಂತ್ರಿಕ ಸಂಬಂಧದ ಮೇಲಿನ ವಿಯೆನ್ನಾ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಕೆನಡಾ ಆರೋಪ ಮಾಡಿದೆ. ಆದರೆ, ಇದನ್ನು ನಿರಾಕರಿಸಿರುವ ಭಾರತ, ನಮ್ಮ ದ್ವಿಪಕ್ಷೀಯ ಸಂಬಂಧಗಳ ಸ್ಥಿತಿ, ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ಕೆನಡಾದ ರಾಜತಾಂತ್ರಿಕರು ಮತ್ತು ನಮ್ಮ ಆಂತರಿಕ ವ್ಯವಹಾರಗಳಲ್ಲಿ ಅವರ ನಿರಂತರ ಹಸ್ತಕ್ಷೇಪವು ನವದೆಹಲಿ ಮತ್ತು ಒಟ್ಟಾವಾದಲ್ಲಿ ಪರಸ್ಪರ ರಾಜತಾಂತ್ರಿಕ ಉಪಸ್ಥಿತಿಯಲ್ಲಿ ಸಮಾನತೆಯನ್ನು ನೀಡುತ್ತದೆ ಎಂದು ಸ್ಪಷ್ಟನೆ ನೀಡಿದೆ.

    ಪ್ರಸ್ತುತ ಭಾರತದಲ್ಲಿ ಕೆನಡಾದ 21 ರಾಜತಾಂತ್ರಿಕರು ಮಾತ್ರ ಉಳಿದುಕೊಂಡಿದ್ದಾರೆ.

    ನಿನ್ನೆ (ಅ.20) 41 ರಾಜತಾಂತ್ರಿಕರನ್ನು ವಾಪಸ್​ ಕರೆಸಿಕೊಳ್ಳುವ ಮೂಲಕ ಕೆನಡಾ, ಭಾರತದಲ್ಲಿನ ತನ್ನ ರಾಯಭಾರ ಕಚೇರಿಗಳನ್ನು ಮುಚ್ಚಿದೆ. ಬಹುತೇಕ ಉಭಯ ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಸಂಬಂಧ ಕಡಿತಗೊಂಡಿದ್ದು, ದೇಶದಾದ್ಯಂತ ಭಯೋತ್ಪಾದಕ ದಾಳಿಯ ಬೆದರಿಕೆಯಿಂದಾಗಿ ಭಾರತದಲ್ಲಿರುವ ತನ್ನ ಪ್ರಜೆಗಳಿಗೆ ತುಂಬಾ ಎಚ್ಚರಿಕೆಯಿಂದ ಇರುವಂತೆ ತಿಳಿಸಿದೆ.

    ಕೆನಡಾ ಪ್ರಧಾನಿ ಹೇಳಿಕೆ ಬಳಿಕ ಹಳಸಿದ ಸಂಬಂಧ
    ಜೂನ್‌ನಲ್ಲಿ ಕೆನಡಾದ ಬ್ರಿಟಿಷ್ ಕೊಲಂಬಿಯಾದಲ್ಲಿ ಸಿಖ್ ಸಮುದಾಯದ ಖಲಿಸ್ತಾನ ನಾಯಕ ಹರ್ದೀಪ್​ ಸಿಂಗ್​ ನಿಜ್ಜರ್​ ಹತ್ಯೆಯಾಗಿದ್ದ. ಕೆನಾಡದಲ್ಲಿ ಖಲಿಸ್ತಾನಿ ನಾಯಕನನ್ನು ಭಾರತ ಸರ್ಕಾರ ಹತ್ಯೆ ಮಾಡಿದೆ ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅಲ್ಲಿನ ಸಂಸತ್ತಿನಲ್ಲಿ ಹೇಳಿದ್ದರು. ಜಿ-20 ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಜತೆಗೂ ಈ ವಿಷಯವನ್ನು ಪ್ರಸ್ತಾಪಿಸಿದ್ದೇನೆ ಎಂದು ಟ್ರುಡೊ ಹೇಳಿದ್ದರು. ಭಾರತದ ಕೈವಾಡದ ಬಗ್ಗೆ ಕೆನಡಾ ಸರ್ಕಾರಕ್ಕೆ ಗುಪ್ತಚರ ಮಾಹಿತಿ ಸಿಕ್ಕಿದೆ ಎಂದು ಅವರು ಹೇಳಿದ್ದರು. ಅಲ್ಲದೆ, ಕೆನಾಡದಲ್ಲಿ ಭಾರತೀಯ ರಾಜತಾಂತ್ರಿಕ ಅಧಿಕಾರಿಗಳನ್ನು ಕೆನಡಾ ಗಡಿಪಾರು ಮಾಡಿತು. ಈ ಆರೋಪಗಳನ್ನು ಭಾರತ ಸ್ಪಷ್ಟವಾಗಿ ನಿರಾಕರಿಸಿದೆ. ಕೆನಡಾದಲ್ಲಿ ಯಾವುದೇ ಹಿಂಸಾಚಾರದಲ್ಲಿ ಭಾರತ ಸರ್ಕಾರದ ಭಾಗಿಯಾಗಿರುವ ಆರೋಪಗಳು ಅಸಂಬದ್ಧ ಮತ್ತು ಪ್ರೇರಿತವಾಗಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. ಅಲ್ಲದೆ, ಭಾರತದಲ್ಲಿರುವ ಕೆನಡಾದ ಹಿರಿಯ ರಾಜತಾಂತ್ರಿಕ ಅಧಿಕಾರಿಯನ್ನು ಗಡಿಪಾರು ಮಾಡುವ ಮೂಲಕ ತಿರುಗೇಟು ನೀಡಿತ್ತು.

    ಯಾರು ಈ ನಿಜ್ಜರ್​?
    ಹರ್ದೀಪ್ ಸಿಂಗ್​ ನಿಜ್ಜರ್​, ಪಂಜಾಬ್ ಮೂಲದ ಖಲಿಸ್ತಾನಿ ಉಗ್ರ. 1992ರಲ್ಲಿ ಕೆನಡಾಕ್ಕೆ ವಲಸೆ ಹೋಗಿ ನೆಲೆಸಿದ್ದ. ಖಲಿಸ್ತಾನ್ ಟೈಗರ್ ಪೋರ್ಸ್ (ಕೆಟಿಎಫ್) ಮುಖ್ಯಸ್ಥನಾಗಿ ಪ್ರತ್ಯೇಕ ಖಲಿಸ್ತಾನ ರಚನೆಗೆ ಆಗ್ರಹಿಸಿ ಭಾರತದ ವಿರುದ್ಧ ಕೆಲಸ ಮಾಡುತ್ತಿದ್ದ. ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕರ ಪಟ್ಟಿಯಲ್ಲಿ ಆತನ ಹೆಸರೂ ಇತ್ತು. ಬ್ರಾಂಪ್ಟನ್ ನಗರದಲ್ಲಿ ಖಲಿಸ್ತಾನ ಪರವಾಗಿ ಜನಾಭಿಪ್ರಾಯ ಸಂಗ್ರಹಣೆಯಲ್ಲಿ ಈತ ಪ್ರಮುಖ ಪಾತ್ರ ವಹಿಸಿದ್ದ. ನಿಜ್ಜರ್ ವಿರುದ್ಧ 2015ರಲ್ಲಿ ಭಾರತ ಲುಕ್‌ಔಟ್ ನೋಟಿಸ್, 2016ರಲ್ಲಿ ರೆಡ್ ಕಾರ್ನರ್ ನೋಟಿಸ್ ಹೊರಡಿಸಿತ್ತು. ಕೆನಡಾದಲ್ಲಿ ನಿಜ್ಜರ್ ವಿರುದ್ಧ 10 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು. ನಿಜ್ಜರ್‌ನನ್ನು ಭಾರತದ ಗುಪ್ತಚರ ಸಂಸ್ಥೆ ರಾ ಹತ್ಯೆ ಮಾಡಿದೆ ಎಂದು ಖಲಿಸ್ತಾನ್ ಪರ ಸಂಘಟನೆಗಳು ಆರೋಪ ಮಾಡಿವೆ. (ಏಜೆನ್ಸೀಸ್​)

    41 ರಾಜತಾಂತ್ರಿಕರನ್ನು ವಾಪಸ್​ ಕರೆಸಿಕೊಂಡ ಕೆನಡಾ: ಭಾರತದ ಈ ನಗರಗಳಲ್ಲಿ ಎಚ್ಚರಿಕೆಯಿಂದಿರಲು ಪ್ರಜೆಗಳಿಗೆ ಸಲಹೆ

    ಅಮೆರಿಕಕ್ಕೆ ವೀಸಾ ಇಲ್ಲದೆಯೇ ಹೋಗಲು ಅವಕಾಶ: ಎಲ್ಲಿ, ಯಾರಿಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts